ಮದ್ಯದಂಗಡಿ ಮುಚ್ಚಿಸದಿದ್ದರೆ ಪ್ರಾಣ ತ್ಯಾಗ
ಕನ್ನಡಪ್ರಭ ವಾರ್ತೆ, ಲಕ್ಷ್ಮೇಶ್ವರ, ಮೇ 4
ನಮ್ಮ ಕೊರಳಿನ ಮಾಂಗಲ್ಯ ಮಾರಾಟ ಮಾಡಿ ಗಂಡಂದಿರು ಹಾಗೂ ಮಕ್ಕಳು ಕುಡಿತದ ದಾಸರಾಗಿದ್ದು, ಮನೆಯಲ್ಲಿನ ಕೊಡ, ಹಂಡೆ ಹಾಗೂ ಇತರೆ ಆವಶ್ಯಕ ವಸ್ತುಗಳನ್ನು ಮಾರಿ ಸಾರಾಯಿ ಕುಡಿದು ದನಕ್ಕೆ ಬಡಿದ ಹಾಗೆ ನಮ್ಮನ್ನು ಬಡಿಯುತ್ತಾರೆ. ಪಟ್ಟಣದಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿರುವ ಅಂಗಡಿಗಳನ್ನು ಬಂದ್ ಮಾಡಿಸಬೇಕು. ಇಲ್ಲವಾದಲ್ಲಿ ವಿಷ ಸೇವಿಸಿ ಪ್ರಾಣ ಬಿಡುತ್ತೇವೆ ಎಂದು ಫಕ್ಕೀರಮ್ಮ ಸೆರಸೂರಿ, ಗುತ್ತೆಮ್ಮ ಗಾಳಿ ಕುಡಿತದ ವಿರುದ್ಧ ತಮ್ಮ ಆಕ್ರೋಶ ಹೊರ ಹಾಕಿದರು.
ಕುಡಿತದ ಚಟಕ್ಕೆ ಅಂಟಿಕೊಂಡಿರುವ ಮಗನು ಮನೆಯಿಂದ ನನ್ನನ್ನು ಹೊರ ಹಾಕಿದ್ದು, ಬಾಡಿಗೆ ಮನೆಯಲ್ಲಿ ವಾಸವಾಗಿ ಜೀವನ ಸಾಗಿಸುತ್ತಿದ್ದೇನೆ. ಕೂಲಿ ನಾಲಿ ಮಾಡಿ ಬದುಕುತ್ತಿದ್ದೇನೆ. ನೀವೇ ಏನಾರ ಮಾಡಿ ನನ್ನ ಮಗನ ಕುಡಿತದ ಚಟ ಬಿಡಿಸಿ ಎಂದು 65ರ ಅಜ್ಜಿ ಶಾಂತವ್ವ ಸೆರಸೂರಿ ನೊಂದು ನುಡಿಯುತ್ತಾಳೆ. ಪಟ್ಟಣದಲ್ಲಿ ಈಚೆಗೆ ಕುಡುಕರ ಹಾವಳಿ ಹೆಚ್ಚಾಗಿದ್ದರಿಂದ ಭಾನುವಾರ ಬೆಳಗ್ಗೆ ಮಹಿಳೆಯರು ಅಕ್ರಮವಾಗಿ ಮದ್ಯ ಮಾರಾಟ ಮಾಡುವವರ ವಿರುದ್ಧ ಘೋಷಣೆಗಳನ್ನು ಕೂಗಿ ಪ್ರತಿಭಟನೆ ನಡೆಸಿದರು. ಮೊದಲು ಪುರಸಭೆ ಎದುರು ಧರಣಿ ನಡೆಸಿದ ಮಹಿಳೆಯರು ನಂತರ ಪೊಲೀಸ್ ಠಾಣೆಗೆ ತೆರಳಿ ಅಲ್ಲಿ ಕೆಲಹೊತ್ತು ಪ್ರತಿಭಟನೆ ನಡೆಸಿದರು. ಅಲ್ಲಿಂದ ನೇರ ಪಟ್ಟಣದ ಹೊಸ ಬಸ್ ನಿಲ್ದಾಣದ ಹತ್ತಿರ ಅನಧಿಕೃತವಾಗಿ ಮಾರಾಟ ಮಾಡುತ್ತಿದ್ದ ಅಂಗಡಿಗಳ ಮೇಲೆ ಅಬಕಾರಿ ಪೊಲೀಸರೊಂದಿಗೆ ದಾಳಿ ನಡೆಸಿ ಅಂಗಡಿಗಳ ಬೀಗ ಮುರಿದ ಮಹಿಳೆಯರು, ಅಲ್ಲಿ ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಮದ್ಯದ ಬಾಟಲಿಗಳು ಹಾಗೂ ಟೆಟ್ರಾ ಪ್ಯಾಕೆಟ್ಗಳನ್ನು ಅಬಕಾರಿ ಪೊಲೀಸರ ವಶಕ್ಕೆ ನೀಡಲಾಯಿತು. ನಂತರ ಮಹಿಳೆಯರು ಸವಣೂರು ರಸ್ತೆಯ ಮಾನ್ವಿ ಪೆಟ್ರೋಲ್ ಬಂಕ್ ಹತ್ತಿರ ಧರಣಿ ನಡೆಸಿದರು.
ಪಟ್ಟಣದಲ್ಲಿ ಅಕ್ರಮವಾಗಿ ಮಾರಾಟವಾಗುತ್ತಿರುವ ಮದ್ಯ ಮಾರಾಟ ನಿಲ್ಲಿಸಬೇಕು, ಡಬ್ಬಾ ಅಂಗಡಿಗಳಲ್ಲಿ, ಮಾಂಸಾಹಾರಿ ಹೋಟೆಲ್ಗಳಲ್ಲಿ ಮಾರಾಟವಾಗುತ್ತಿರುವ ಅಕ್ರಮ ಮದ್ಯ ಬಂದ್ ಮಾಡಬೇಕು. ಅನಧಿಕೃತ ಮದ್ಯದ ಅಂಗಡಿಗಳನ್ನು ಬಂದ್ ಮಾಡಿಸಬೇಕು, ಹಲವಾರು ವರ್ಷಗಳಿಂದ ಬೀಡು ಬಿಟ್ಟಿರುವ ಇಲ್ಲಿನ ಅಬಕಾರಿ ನಿರೀಕ್ಷಕರನ್ನು ತಕ್ಷಣ ಬೇರೆಡೆ ವರ್ಗಾಯಿಸಬೇಕು ಎಂದು ಆಗ್ರಹಿಸಿ ದಿಢೀರ್ ಪ್ರತಿಭಟನೆ ನಡೆಸಿದರು.
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ್ ಆರ್.ಬಿ. ನಿಂಗನಗೌಡರ ಮಹಿಳೆಯರ ಮನವೊಲಿಸುವಲ್ಲಿ ಯಶಸ್ವಿಯಾದರು. ನಂತರ ಮಹಿಳೆಯರಿಂದ ಮನವಿ ಸ್ವೀಕರಿಸಿ ಮಾತನಾಡಿ, ಅನಧಿಕೃತ ಮದ್ಯ ಮಾರಾಟ ಮಾಡುತ್ತಿರುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವಂತೆ ತಕ್ಷಣ ಸ್ಥಳೀಯ ಅಧಿಕಾರಿಗಳಿಗೆ ಸೂಚನೆ ನೀಡುತ್ತೇನೆ. ಅಧಿಕೃತ ಮದ್ಯ ಮಾರಾಟ ಮಾಡುವ ಅಂಗಡಿಗಳ ಮೇಲೆ ಯಾವ ರೀತಿ ಕ್ರಮ ಕೈಗೊಳ್ಳಲು ಸಾಧ್ಯ ಎಂಬುದನ್ನು ಜಿಲ್ಲಾಧಿಕಾರಿಗಳಿಂದ ಮಾಹಿತಿ ಪಡೆದು ನಂತರ ಕ್ರಮಕ್ಕೆ ಮುಂದಾಗುವುದಾಗಿ ತಿಳಿಸಿದರು.
ಪ್ರತಿಭಟನೆಯಲ್ಲಿ ಪುರಸಭೆ ಸದಸ್ಯ ಲಂಕೆಪ್ಪ ಸೆರಸೂರಿ, ನೀಲಪ್ಪ ಸೆರಸೂರಿ, ಯಲ್ಲವ್ವ ಪೂಜಾರ, ಲಕ್ಷ್ಮವ್ವ ಬಾಲೆಹೊಸೂರ, ಉಡಚವ್ವ ಸೆರಸೂರಿ, ನೀಲವ್ವ ಕಪ್ಪಣ್ಣವರ, ಹಾಲವ್ವ ಮುಳ್ಳಳ್ಳಿ, ಕಸ್ತೂರೆವ್ವ ಸೆರಸೂರಿ, ಕಮಲವ್ವ ಸೆರಸೂರಿ, ಸಿದ್ದವ್ವ ಸೆರಸೂರಿ, ಕರಿಯವ್ವ ಕಪ್ಪಣ್ಣವರ, ಅನಸವ್ವ ಸೆರಸೂರಿ, ಸಿದ್ದವ್ವ ಪೂಜಾರ, ರೇಣವ್ವ ಕೆರೂರ, ಸೋಮವ್ವ ಗದ್ದಿ, ಸಾವಕ್ಕ ಸೆರಸೂರಿ, ಗಂಗಮ್ಮ ಕಪ್ಪಣ್ಣವರ, ನೀಲವ್ವ ಸೆರಸೂರಿ ನೂರಾರು ಮಹಿಳೆಯರು ಪಾಲ್ಗೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

