ಜಾತ್ಯತೀತ ಸಮಾಜದ ಹರಿಕಾರ ಬಸವಣ್ಣ
ಗದಗ: 12ನೇ ಶತಮಾನದಲ್ಲಿಯೇ ಜಾತ್ಯತೀತ ಸಮಾಜದ ಕನಸು ಕಂಡು ತಮ್ಮ ಪ್ರಯತ್ನ ಮೂಲಕವಾಗಿ ಜಾತಿವಾದದ ವಿರುದ್ಧ ಧ್ವನಿ ಎತ್ತಿದ ಸಮೃದ್ಧ ಸಮಾಜ ನಿರ್ಮಿಸಿದ ಹರಿಕಾರ ಬಸವಣ್ಣನವರು ಎಂದು ಶಿರಹಟ್ಟಿ ತಾಲೂಕು ಕಸಾಪ ಅಧ್ಯಕ್ಷ ಕೆ.ಎ. ಬಳಿಗೇರ ಹೇಳಿದರು.
ಗದಗ ಜಿಲ್ಲಾ ಕಸಾಪದಲ್ಲಿ ಇತ್ತೀಚೆಗೆ ಆಯೋಜಿಸಿದ್ದ 73ನೇ ಶನಿವಾರ ಸಾಹಿತ್ಯ ಸಂಜೆ ಕಾರ್ಯಕ್ರಮದಲ್ಲಿ ಬಸವಣ್ಣವರ ವಚನಗಳಲ್ಲಿ ಸಮಾನತೆ ಸಂದೇಶ ಕುರಿತು ಅವರು ಉಪನ್ಯಾಸ ನೀಡಿದರು.
ಕನ್ನಡ ಸಾಹಿತ್ಯದಲ್ಲಿ ತಮ್ಮ ವಚನಗಳ ಮೂಲಕ ವಿಶೇಷ ಸಾಹಿತ್ಯ ಹುಟ್ಟು ಹಾಕುವ ಮೂಲಕ ಅಂದಿನ ಸಮಾಜದಲ್ಲಿಯ ಅಂಧಾನುಕರಣ, ಮೂಢನಂಬಿಕೆ, ಜಾತಿ ಪದ್ಧತಿಯಂಥ ಕೆಟ್ಟ ಸಂಪ್ರದಾಯಗಳನ್ನು ಸಮಾಜದಿಂದ ದೂರ ಮಾಡಲು ಪ್ರಯತ್ನಿಸಿದ ದಾರ್ಶನಿಕರು. ಬಸವಣ್ಣನವರು ತಮ್ಮ ಆದರ್ಶ ವ್ಯಕ್ತಿತ್ವ ಮೂಲಕ ಸ್ವಚ್ಛ ಸಮಾಜ ಕಟ್ಟಬೇಕೆಂಬ ಅಧಮ್ಯವಾದ ಇಚ್ಛೆ ಹೊಂದುವುದಲ್ಲದೇ ಅಂತಹ ಸಮಾಜ ಕಟ್ಟಲು ಪ್ರಯತ್ನಿಸಿದರು ಎಂದರು.
ಅಧ್ಯಕ್ಷತೆ ವಹಿಸಿದ್ದ ಗದಗ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕಿಶೋರಬಾಬು ನಾಗರಕಟ್ಟಿ ಮಾತನಾಡಿ, 12ನೇ ಶತಮಾನದದಲ್ಲಿದ್ದ ಜಾತಿ ವ್ಯವಸ್ಥೆ ಪ್ರಸಕ್ತ 21ನೇ ಶತಮಾನದಲ್ಲೂ ಮುಂದುವರಿದುಕೊಂಡು ಬಂದಿರುವುದು ಖೇದಕರ. ಈ ಸಂಗತಿ ಜಾತ್ಯತೀತ ದೇಶವೆಂದು ನಮ್ಮ ಸಂವಿಧಾನದಲ್ಲಿ ಉಲ್ಲೇಖಿತವಾಗಿದೆ. ಆ ತತ್ವ ನಮ್ಮ ಸಂವಿಧಾನಕ್ಕೆ ಮಾತ್ರ ಸೀಮಿತವಾಗಿದೆ. ಪ್ರಜಾಪ್ರಭುತ್ತವದ ಹೆಸರಿನಲ್ಲಿ ರಾಜಕೀಯ ಪಕ್ಷಗಳು ಜಾತಿ ಆಧಾರದ ಮೇಲೆ ರಾಜಕೀಯ ಮಾಡುತ್ತಿವೆ. ಜಾತಿ ವ್ಯವಸ್ಥೆ ಬೇರುಗಳು ಮೊದಲಿಗಿಂತಲೂ ಈಗ ಆಳವಾಗಿ ಬೇರು ಬಿಟ್ಟಿವೆ. ಇಂಥ ಸಮಾಜ ಸ್ವಚ್ಛಗೊಳಿಸಲು ಮತ್ತೊಬ್ಬ ಬಸವಣ್ಣ ಹುಟ್ಟಿ ಬರುವುದು ಅವಶ್ಯವಾಗಿದೆ ಎಂದರು. ಹೇಮಾ ಪಿಡ್ಡಿ ಸ್ವ-ರಚಿತ ಕವನ ವಾಚಿಸಿದರು. ಪ್ರಾ. ಕೆ.ಎಚ್. ಬೇಲೂರ, ಸಿ.ಜಿ. ಹುಡೇದಗಡ್ಡಿ, ಜಿ.ಎಸ್. ಯತ್ನಟ್ಟಿ, ಬಿ.ಜಿ. ಹಿರೇಮಠ, ಜೆ.ಎ. ಪಾಟೀಲ, ಶಂಕರ ಶಿರೂರ, ಎಸ್.ಎಸ್. ನರೇಗಲ್ಲ, ಷಡಕ್ಷರಿ ಮೆಣಸಿನಕಾಯಿ, ಎಚ್.ಟಿ. ಸಂಜೀವಸ್ವಾಮಿ, ಎಸ್.ಎಸ್. ತಳ್ಳಿಹಾಳ, ಅ.ದ. ಕಟ್ಟಿಮನಿ, ಗುಲಾಬಸಿಂಗ್ ದಡೇಕರ. ಬಿ.ಎನ್. ತಾರಾ ಇತರರಿದ್ದರು.
ವಾಸು ಟಿಕಾನದಾರ ಪ್ರಾರ್ಥಿಸಿದರು. ಮರುಳಸಿದ್ದಪ್ಪ ದೊಡ್ಡಮನಿ ಸ್ವಾಗತಿಸಿದರು. ಗದಗ ತಾಲೂಕು ಕಸಾಪ ಗೌರವ ಕಾರ್ಯದರ್ಶಿ ಶಶಿಕಾಂತ ಕೊರ್ಲಹಳ್ಳಿ ನಿರೂಪಿಸಿದರು. ಡಿ.ಎಸ್. ತಳವಾರ ವಂದಿಸಿದರು.
ವಸತಿ ನಿಲಯಕ್ಕೆ ಪ್ರವೇಶ
ಗದಗ: ರಾಜೀವಗಾಂಧಿ ನಗರದ ಎಚ್.ಟಿ. ಕುಲಕರ್ಣಿ ಶಿಕ್ಷಕರ ಬಡಾವಣೆಯಲ್ಲಿರುವ ಮಹರ್ಷಿ ವಾಲ್ಮೀಕಿ ರಿಜನಲ್ ಎಜ್ಯುಕೇಶನಲ್ ಆಂಡ ಚಾರಿಟೇಬಲ್ ಟ್ರಸ್ಟ್ ಆಶ್ರಯದಲ್ಲಿ ನಡೆಯುತ್ತಿರುವ ಮಹರ್ಷಿ ವಾಲ್ಮೀಕಿ ಮೆಟ್ರಿಕ್ಪೂರ್ವ ಪರಿಶಿಷ್ಟ ಪಂಗಡಗಳ ಅನುದಾನ ರಹಿತ ಬಾಲಕರ ವಸತಿ ನಿಲಯದ 2014-15ನೇ ಸಾಲಿಗೆ 5ರಿಂದ 10ನೇ ತರಗತಿಯೊಳಗಿನವರ ಉಚಿತ ವಸತಿ ನಿಲಯಕ್ಕೆ ಅರ್ಹ ಪರಿಶಿಷ್ಟ ಜಾತಿ ಪಂಗಡದ ವಿದ್ಯಾರ್ಥಿಗಳಿಂದ ಪ್ರವೇಶಕ್ಕೆ ಅರ್ಜಿ ಕರೆಯಲಾಗಿದೆ. ಅರ್ಹ ವಿದ್ಯಾರ್ಥಿಗಳು ಕೂಡಲೇ ಅರ್ಹ ಶೈಕ್ಷಣಿಕ ದಾಖಲಾತಿಗಳೊಂದಿಗೆ ಅರ್ಜಿ ಸಲ್ಲಿಸಿ ಅಥವಾ ಖುದ್ದಾಗಿ ಆಗಮಿಸಿ ಪ್ರವೇಶ ಪಡೆದುಕೊಳ್ಳಲು ವಸತಿ ನಿಲಯದ ಸಂಸ್ಥಾಪಕ ಅಧ್ಯಕ್ಷ ಅಯ್ಯಪ್ಪ ನಾಯ್ಕರ ಕೋರಿದ್ದಾರೆ.
ಬೇಸಿಗೆ ಶಿಬಿರಕ್ಕೆ ಆಹ್ವಾನ
ಗದಗ: 6 ವರ್ಷದಿಂದ 16 ವರ್ಷದೊಳಗಿನ ಗಂಡು ಮಕ್ಕಳಿಗೆ ಗದಗ ಬಾಲಕರ ಬಾಲಮಂದಿರದಲ್ಲಿ ಮೇ 7ರಿಂದ 17ರ ವರೆಗೆ ಬೆಳಗ್ಗೆ 10ರಿಂದ ಮಧ್ಯಾಹ್ನ 2ರ ವರೆಗೆ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಉಚಿತ ಬೇಸಿಗೆ ಶಿಬಿರ ಹಮ್ಮಿಕೊಂಡಿದೆ. 25 ಗಂಡು ಮಕ್ಕಳಿಗೆ ಅವಕಾಶವಿದ್ದು ಮೇ 7ರೊಳಗಾಗಿ ಬಾಲಕರ ಬಾಲಮಂದಿರ ಬೆಟಗೇರಿ-ಗದಗದಲ್ಲಿ ಹೆಸರು ನೋಂದಾಯಿಸಬೇಕು. ಹೆಚ್ಚಿನ ಮಾಹಿತಿಗಾಗಿ 08372-246344, 08372-238823 ಇಲ್ಲಿಗೆ ಸಂಪರ್ಕಿಸುವಂತೆ ಗದಗ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
6ನೇ ತರಗತಿ ಪ್ರವೇಶಕ್ಕೆ ಆಯ್ಕೆ
ಗದಗ: ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರ ಹತ್ತಿರವಿರುವ ಅಳಕೆಯ ಸತ್ಯಸಾಯಿ ಲೋಕಸೇವಾ ಟ್ರಸ್ಟ್ ವತಿಯಿಂದ ಈಚೆಗೆ 6ನೇ ತರಗತಿ ಪ್ರವೇಶಕ್ಕಾಗಿ ನಡೆಸಿದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ನಗರದ ಹವಾಮಾನ ಇಲಾಖೆಯ ಸಹಾಯಕ ತಜ್ಞ ಡಾ. ರಾಜೀವ ರೋಖಡೆ ಪುತ್ರ ಪ್ರೇಮಸಾಯಿ ರೋಖಡೆ ಆಯ್ಕೆಯಾಗಿದ್ದಾನೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

