ಜಿಪಂ: ಮತ್ತೆ ಮಹಿಳೆಯರಿಗೆ ಮಣೆ
ಶಿವಕುಮಾರ ಕುಷ್ಟಗಿ
ಕನ್ನಡಪ್ರಭ ವಾರ್ತೆ, ಗದಗ, ಮೇ 5
ಜಿಪಂ ಅಧ್ಯಕ್ಷ-ಉಪಾಧ್ಯಕ್ಷರ ಗದ್ದುಗೆ ಏರಲು ಕಾಯುತ್ತಿದ್ದ ಹಲವು ಪುರುಷ ಸದಸ್ಯರಿಗೆ ಸರ್ಕಾರ ಪ್ರಕಟಿಸಿದ ಮೀಸಲಾತಿ ಪಟ್ಟಿ ತಣ್ಣೀರೆರಚಿದೆ.
ಗದಗ ಜಿಪಂನಲ್ಲಿ ಮತ್ತೊಂದು ಬಾರಿಗೆ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳಿಗೆ ಮೀಸಲಾತಿ ಪ್ರಕಾರ ಮಹಿಳೆಯರಿಗೆ ಮಣೆ ಹಾಕಲಾಗಿದೆ.
ಕಳೆದ ತಿಂಗಳು ಸರ್ಕಾರ ಹೊರಡಿಸಿದ್ದ ಮೀಸಲಾತಿಯಲ್ಲಿ ಬದಲಾವಣೆಗಳಾಗಿವೆ. ಸದ್ಯ ಬಿಡುಗಡೆಗೊಂಡ ಮೀಸಲಾತಿ ಆಧಾರದಲ್ಲಿ ಅಧ್ಯಕ್ಷ- ಉಪಾಧ್ಯಕ್ಷ ಸ್ಥಾನಗಳು ಮಹಿಳೆಯರ ಪಾಲಾಗಿವೆ. ಇವೆರಡೂ ಸ್ಥಾನಗಳ ಮೇಲೆ ಕಣ್ಣಿಟ್ಟಿದ್ದ ಪುರುಷ ಸದಸ್ಯರಿಗೆ ನುಂಗಲಾರದ ತುತ್ತಾಗಿದೆ.
ಸರ್ಕಾರ ಹೊರಡಿಸಿದ ನೂತನ ಮೀಸಲಾತಿ ಅನ್ವಯ ಅಧ್ಯಕ್ಷ ಸ್ಥಾನ ಹಿಂದುಳಿದ ವರ್ಗ (ಅ) ಮಹಿಳೆ, ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿದೆ. ಕನಿಷ್ಠ ಉಪಾಧ್ಯಕ್ಷ ಸ್ಥಾನವೂ ಪುರುಷರಿಗೆ ದೊರೆಯದಿರುವುದು ಆಕಾಂಕ್ಷಿಗಳಲ್ಲಿ ತೀವ್ರ ಬೇಸರ ಮೂಡಿಸಿದೆ. ಈಗಾಗಲೇ ಅಧಿಕಾರ ಅನುಭವಿಸಿದ ಮಹಿಳೆಯರಿಗೆ ಮತ್ತೆ ಅವೆರಡೂ ಹುದ್ದೆ ಸಿಗುವ ಸಾಧ್ಯತೆ ನಿಚ್ಚಳವಾಗಿದೆ.
ಬಿಜೆಪಿಗೆ ಬಹುಮತ: 18 ಸದಸ್ಯರ ಬಲವುಳ್ಳ ಗದಗ ಜಿಪಂನಲ್ಲಿ 12 ಸದಸ್ಯರುಳ್ಳ ಬಿಜೆಪಿಯದ್ದೇ ಮೇಲುಗೈ. ಈ ಹಿಂದಿನ ಅವಧಿಯಲ್ಲಿ ಪಕ್ಷದ ಆಂತರಿಕ ಒಪ್ಪಂದ ಪ್ರಕಾರ ಅಧಿಕಾರಕ್ಕೇರಿದ ವ್ಯಕ್ತಿಗಳು ಸರಿಯಾದ ಸಮಯಕ್ಕೆ ಪಕ್ಷದ ಅಧ್ಯಕ್ಷರಿಗೆ ರಾಜಿನಾಮೆ ಪತ್ರ ಸಲ್ಲಿಸುವುದಿಲ್ಲ ಎನ್ನುವ ಕಾರಣಕ್ಕಾಗಿ ಅವರ ವಿರುದ್ಧ ವಿಪ್ ಜಾರಿ ಮಾಡಲಾಗಿತ್ತು. ಅದನ್ನು ಅವರು ಉಲ್ಲಂಘಿಸಿದಾಗ ಪಕ್ಷದವರು ಅವರ ಸದಸ್ಯತ್ವ ರದ್ದತಿಗೆ ಆಯೋಗಕ್ಕೆ ಪತ್ರ ಬರೆಯಲಾಗಿತ್ತು. ಅದ್ಯಾಕೋ ಕೊನೆ ಕ್ಷಣದಲ್ಲಿ ಅದನ್ನು ಹಿಂಪಡೆದಿದ್ದರು. ಹಾಗಾಗಿ ಬಿಜೆಪಿ ಸ್ಪಷ್ಟ ಬಹುಮತವಿದ್ದರೂ ಗೊಂದಲದಲ್ಲೇ ಅಧಿಕಾರ ನಡೆಸಿದೆ.
ಸ್ಪರ್ಧೆಯಲ್ಲಿದ್ದವರು: ಅಧ್ಯಕ್ಷ ಸ್ಥಾನ ಹಿಂದುಳಿದ ಅ ವರ್ಗಕ್ಕೆ ಮೀಸಲಾಗಿದ್ದರಿಂದ ಈ ಹಿಂದೆ ಉಪಾಧ್ಯಕ್ಷರಾಗಿದ್ದ ಶಾಂತವ್ವ ದಂಡಿನ, ಹಾಲಿ ಅಧ್ಯಕ್ಷೆ ಕಮಲವ್ವ ಸಜ್ಜನ, ಮೊದಲ ಅವಧಿಯಲ್ಲಿ ಅಧ್ಯಕ್ಷರಾಗಿದ್ದ ಚಂಬವ್ವ ಪಾಟೀಲ ಸ್ಪರ್ಧೆಯಲ್ಲಿದ್ದಾರೆ. ಉಪಾಧ್ಯಕ್ಷ ಸ್ಥಾನಕ್ಕೆ ಶಾರದಾ ಹಿರೇಗೌಡ್ರ, ಬಸವರಾಜೇಶ್ವರಿ ಪಾಟೀಲ್, ಸುನೀತಾ ಹಳ್ಳೆಪ್ಪನವರ, ನಿರ್ಮಲಾ ಬದರೂರ ಸ್ಪರ್ಧೆಯಲ್ಲಿದ್ದಾರೆ (ಎಲ್ಲರೂ ಅರ್ಹತೆ ಹೊಂದಿದ್ದಾರೆ). ಹೀಗಾಗಿ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕಾಗಿ ಪೈಪೋಟಿ ನಡೆಯಲಿದೆ.
ಗಂಭೀರ ಚಿಂತನೆ: ಜಿಪಂ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ಮಾಡುವ ನಿಟ್ಟಿನಲ್ಲಿ ಮೀಸಲಾತಿ ಪ್ರಕಟಗೊಂಡ ದಿನದಿಂದಲೇ ಗಂಭೀರ ಚಿಂತನೆ ನಡೆದಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ನೆಲಕಚ್ಚಿದ ಬಳಿಕ ಜಿಲ್ಲೆಯಲ್ಲಿ ಪಕ್ಷ ಅಧಿಕಾರ ಉಳಿಸಿಕೊಂಡಿದ್ದು ಜಿಪಂನಲ್ಲಿ ಮಾತ್ರ. ಜಾತಿ ಲೆಕ್ಕಾಚಾರ, ಮುಂದಿನ ಚುನಾವಣೆಗಳ ಎಲ್ಲ ಪರಿಣಾಮಗಳನ್ನು ಗಮನದಲ್ಲಿಟ್ಟುಕೊಂಡು ಅಭ್ಯರ್ಥಿಗಳನ್ನು ಅಂತಿಮಗೊಳಿಸಲು ಮುಖಂಡರು ಗಂಭೀರ ಪ್ರಯತ್ನ ನಡೆಸಿದ್ದಾರೆ
ಎಂದು ಪಕ್ಷದ ಮೂಲಗಳು ತಿಳಿಸಿವೆ.
ಪುರುಷರಿಗೆ ನಿರಾಸೆ
ಅಧ್ಯಕ್ಷ-ಉಪಾಧ್ಯಕ್ಷರ ಮೀಸಲಾತಿ ಮರು ಪ್ರಕಟವಾಗುವ ತನಕ ನಮಗೂ ಅಧ್ಯಕ್ಷ ಅಥವಾ ಉಪಾಧ್ಯಕ್ಷ ಸ್ಥಾನ ಸಿಗಲಿದೆ ಎನ್ನುವ ಲೆಕ್ಕಾಚಾರದಲ್ಲಿ ಪುರುಷ ಸದಸ್ಯರಿದ್ದರು. ಆದರೆ, ಎರಡೂ ಸ್ಥಾನಗಳು ಮಹಿಳೆಯರಿಗೆ ಮೀಸಲಾಗಿದ್ದರಿಂದ ಸಹಜವಾಗಿ ಅವರಲ್ಲಿ ನಿರಾಸೆ ಮೂಡಿದೆ. ಮೊದಲೆರಡು ಅವಧಿಯಲ್ಲಿ ಬಿಜೆಪಿ ಆಂತರಿಕವಾಗಿ ಮಾಡಿಕೊಂಡ ಒಪ್ಪಂದದ ಅನ್ವಯ 5 ವರ್ಷದಲ್ಲಿ ಒಬ್ಬರು ಅಧ್ಯಕ್ಷರಾಗಿ ಇಬ್ಬರು ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುವ ಅವಕಾಶ ಪುರುಷರಿಗೆ ಸಿಕ್ಕಿತ್ತು. ಇನ್ನುಳಿದ ಎಲ್ಲ ಅವಕಾಶ ಮಹಿಳೆಯರಿಗೆ ಲಭ್ಯವಾಗಿರುವುದು ಗದಗ ಜಿಪಂನ ವಿಶೇಷತೆಗಳಲ್ಲಿ ಒಂದಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

