ಗದಗ

ಕಸಾಪದಿಂದ ಕನ್ನಡ ಭಾಷೆಗೆ ಗರಿ ಮೂಡಿದೆ

Published On :

ಮುಂಡರಗಿ: ಕನ್ನಡ ನಾಡಿನ ರಕ್ಷಣೆ, ಬೆಳವಣಿಗೆ, ಕನ್ನಡ ನೆಲ-ಜಲ ಹಾಗೂ ಭಾಷೆಯ ಕುರಿತು ಅಭಿಮಾನ ಹುಟ್ಟಿಸುವಲ್ಲಿ ಕಸಾಪ ಸಾಕಷ್ಟು ಕೆಲಸ ಮಾಡುತ್ತಾ ಬಂದಿದೆ. ಪರಿಷತ್ತಿನಿಂದ ಕನ್ನಡ ಭಾಷೆಗೆ ಗರಿ ಮೂಡಿದೆ ಎಂದು ಉಪನ್ಯಾಸಕ ಆರ್.ಎಲ್. ಪೊಲೀಸ್‌ಪಾಟೀಲ ಹೇಳಿದರು.
ಅವರು ಮಂಗಳವಾರ ಮುಂಡರಗಿ ಪಟ್ಟಣದ ಕೆ.ಆರ್. ಬೆಲ್ಲದ ಕಲಾ ಹಾಗೂ ವಾಣಿಜ್ಯ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಕಸಾಪ ಶತಮಾನೋತ್ಸವದ ಅಂಗವಾಗಿ ಪರಿಷತ್ತಿನ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಪರಿಷತ್ತಿಗೆ ನೂರು ವರ್ಷದ ಇತಿಹಾಸ ಇದೆ. ಈ ನಾಡಿನಲ್ಲಿ ಎಲೆಮರೆಯ ಕಾಯಂತಿದ್ದ ಅನೇಕ ಹಿರಿಯ ಸಾಹಿತಿಗಳನ್ನು ಗುರುತಿಸಿ ಗೌರವಿಸಿದ ಕೀರ್ತಿ ಪರಿಷತ್ತಿಗಿದೆ. ಸುಮಾರ 6 ಕೋಟಿ ಜನಸಂಖ್ಯೆ ಇರುವ ಕರ್ನಾಟಕದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿಗೆ ಆಜೀವ ಸದಸ್ಯರ ಸಂಖ್ಯೆ ಕೇವಲ 3 ಲಕ್ಷ ಇರುವುದು ವಿಷಾದಕರ ಸಂಗತಿಯಾಗಿದೆ. ರಾಜ್ಯದಲ್ಲಿ ಕನಿಷ್ಠ 3 ಕೋಟಿಯಾದರೂ ಆಜೀವ ಸದಸ್ಯರನ್ನು ಮಾಡಬೇಕು. ಕನ್ನಡಿಗರೂ ಸ್ವಯಂಪ್ರೇರಣೆಯಿಂದ ಸದಸ್ಯತ್ವ ಪಡೆದುಕೊಳ್ಳಲು ಮುಂದೆ ಬರಬೇಕು. ಇಂದು ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿಯೇ ಕನ್ನಡಮಾಯವಾಗುತ್ತಿದ್ದು, ಅಲ್ಲಿಯೇ ಕನ್ನಡವನ್ನು ಉಳಿಸಿ ಬೆಳೆಸಲು ಹರಸಾಹಸ ಪಡಬೇಕಾಗಿದೆ. ಇಂಗ್ಲಿಷ್ ಅನ್ನದ ಭಾಷೆಯಾದರೆ ಕನ್ನಡ ನೀರಿನ ಹಾಗೂ ಜೀವಜಲದ ಭಾಷೆಯಾಗಿದೆ. ಆದ್ದರಿಂದ ಕನ್ನಡಿಗರು ಹಾಗೂ ಕನ್ನಡಾಭಿಮಾನಿಗಳು ಕನ್ನಡವನ್ನು ಕನ್ನಡ ಸಾಹಿತ್ಯ ಪರಿಷತ್ತನ್ನು ಎಂದಿಗೂ ಕೈಬಿಡಬಾರದು ಎಂದರು. ಗದಗ ತಾಲೂಕು ಕಸಾಪ ಅಧ್ಯಕ್ಷ ಕಿಶೋರಬಾಬು ನಾಗರಕಟ್ಟಿ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ತು ಗ್ರಾಮೀಣ ಪ್ರದೇಶಗಳತ್ತ ಮುಖಮಾಡುವ ಮೂಲಕ ಅಲ್ಲಿಯೇ ಹೆಚ್ಚು-ಹೆಚ್ಚು ಕಾರ್ಯಕ್ರಮಗಳನ್ನು ಕನ್ನಡದ ಭದ್ರಕೋಟೆಯಗಿರುವ ಅಲ್ಲಿಯೇ ಕನ್ನಡದ ಕುರಿತಾಗಿರುವ ಹೊಸ ಹೊಸ ವಿಚಾರಗಳ ಕುರಿತು ತಿಳಿಸಿಕೊಡುವುದರ ಜೊತೆಗೆ ಕನ್ನಡ ನುಡಿ-ನೆಲ-ಜಲ ಕುರಿತು ಹೆಚ್ಚು ಜಾಗೃತಿ ಮಾಡಬೇಕು ಎಂದರು. ಪ್ರಾ. ಡಾ. ಎಂ.ಬಿ. ಬೆಳವಟಗಿಮಠ, ಬಿ.ಎಫ್. ಈಟಿ ಮಾತನಾಡಿದರು. ತಾಲೂಕು ಕಸಾಪ ಅಧ್ಯಕ್ಷ ಎಸ್.ಬಿ. ಹಿರೇಮಠ ಅಧ್ಯಕ್ಷತೆವಹಿಸಿ ಮಾತನಾಡಿರು. ಶಶಿಕಾಂತ ಕೊರ್ಲಹಳ್ಳಿ, ಎಸ್.ಆರ್. ಬಸಾಪುರ, ಜಿ.ಎಸ್. ಯತ್ನಟ್ಟಿ, ಆರ್.ಕೆ. ರಾಯನಗೌಡರ, ಡಾ. ಅಕ್ಕಮಹಾದೇವಿ ಕಲ್ಯಾಣಿ, ಡಿ.ಎಚ್. ನಾಯಕ, ಎನ್.ಎಫ್. ದ್ಯಾವನಗೌಡರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಸಿ.ಎಸ್. ಅರಸನಾಳ ಸ್ವಾಗತಿಸಿ, ನಿರೂಪಿಸಿದರು. ಕಾಶೀನಾಥ ಶಿರಬಡಗಿ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.