ಎಗ್ಗಿಲ್ಲದೆ ನಡೆದಿದೆ ಮರಳು ದಂಧೆ
ಕನ್ನಡಪ್ರಭ ವಾರ್ತೆ, ಗದಗ, ಮೇ 7
ಜಿಲ್ಲೆಯ ಒಂದು ಬದಿಯಲ್ಲಿ ಮಲಪ್ರಭಾ ಇನ್ನೊಂದು ಬದಿಯಲ್ಲಿ ತುಂಗಭದ್ರಾ ನದಿ ಹರಿಯುತ್ತಿದ್ದು, ಈ ನದಿ ಪಾತ್ರದಲ್ಲಿ ಹಾಗೂ ಜಿಲ್ಲೆಯಲ್ಲಿನ ಎಲ್ಲಾ ಪ್ರಮುಖ ಹಳ್ಳಗಳಲ್ಲಿ ಮರಳು ದಂಧೆ ಯಾವುದೇ ಲಂಗು ಲಗಾಮಿಲ್ಲದೇ ನಡೆಯುತ್ತಿದೆ. ಇದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಜಿಲ್ಲಾಡಳಿತ ಹರಸಾಹಸ ಪಡುತ್ತಿದೆಯಾದರೂ ಇಲಾಖೆಯಲ್ಲಿನ ಕೆಲ ಆಸೆ ಬುರುಕ ಅಧಿಕಾರಿಗಳ ಕರಾಮತ್ತಿನಿಂದಾಗಿ ಅಕ್ರಮ ನಡೆಸುವವರು ಆರಾಮವಾಗಿಯೇ ಈ ದಂಧೆ ಮುಂದುವರಿಸಿದ್ದಾರೆ.
ಜಿಲ್ಲೆಯ ಶಿರಹಟ್ಟಿ ತಾಲೂಕಿನ ಹೊಳೆಇಟಗಿ, ಕಲ್ಲಾಗನೂರು, ತೊಳಲಿ, ಮುಂಡರಗಿ ತಾಲೂಕಿನ ಬಿದರಳ್ಳಿ, ಗುಮ್ಮಗೋಳ, ಸಿಂಗಟಾಲೂರು, ಕಕ್ಕೂರು ಗ್ರಾಮಗಳ, ರೋಣ ತಾಲೂಕಿನ ಹೊನ್ನಿಗನೂರು, ಮುಗಳಿ, ತಳ್ಳಿಹಾಳ, ಸವಡಿ, ಹೊಳೆಆಲೂರು, ಹೊಳೆಮಣ್ಣೂರು ಹಾಗೂ ನರಗುಂದ ತಾಲೂಕಿನ ವ್ಯಾಪ್ತಿಯಲ್ಲಿ ಮಲಪ್ರಭಾ ದಂಡೆಯ ಬಳಿರುವ ಎಲ್ಲಾ ಗ್ರಾಮಗಳಲ್ಲಿಯೂ ಈ ದಂಧೆ ಸಾಕಷ್ಟು ಪ್ರಮಾಣದಲ್ಲಿ ನಡೆಯುತ್ತಿದೆ. ಇಲ್ಲಿ ಮರಳು ದಂಧೆ ನಡೆಸುವವರು ಗಣಿ ಮತ್ತು ಭೂವಿಜ್ಞಾನ ಇಲಾಖೆ ಪರವಾನಗಿ ಎಂದು ಹೇಳಿಕೊಂಡು ಕೆಲಸ ಮಾಡುತ್ತಿರುವ ಹಲವಾರು ಸಂಶಯಕ್ಕೆ ಕಾರಣವಾಗಿದೆ.
ರಾಜಕಾರಣ: ಜಿಲ್ಲೆಯಲ್ಲಿ ನಡೆಯುವ ಮರಳು ದಂಧೆಯಲ್ಲಿ ಬಹುತೇಕ ರಾಜಕೀಯ ಪಕ್ಷಗಳ ಪುಡಿ ರಾಜಕಾರಣಿಗಳದ್ದೇ ಪ್ರಭಾವ, ಯಾವುದೇ ಪ್ರಭಾವಿ ರಾಜಕಾರಣಿಗಳು ನೇರವಾಗಿ ಇದರಲ್ಲಿ ಭಾಗಿಯಾಗುತ್ತಿಲ್ಲ. ಅವರ ಹಿಂಬಾಲಕರೇ ಅತ್ಯಂತ ಹೆಚ್ಚಿನ ಪ್ರಭಾವ ಹೊಂದಿದ್ದಾರೆ, ಇಲ್ಲಿಯವರೆಗಿನ ಈ ಮರಳು ದಂಧೆಯ ವಿಷಯವಾಗಿ ಹಲವಾರು ರೀತಿಯ ಗೊಂದಲಗಳು ಸೃಷ್ಟಿಯಾಗಿದ್ದರೂ ಅದರಲ್ಲಿಯೂ ಮುಖ್ಯವಾಗಿ ದೊಡ್ಡ ಪ್ರಮಾಣದ ಹೊಡೆದಾಟಗಳು ಜಿಲ್ಲೆಯಲ್ಲಿ ನಡೆಯದಿದ್ದೂ ಇದೆ. ಆದರೆ, ನಿತ್ಯವೂ ಮುಸುಕಿನ ಗುದ್ದಾಟ ಇದ್ದದ್ದೇ.
ಹೊರ ಜಿಲ್ಲೆಗೆ ರವಾನೆ: ಜಿಲ್ಲೆಯಲ್ಲಿ ಲಭ್ಯವಾಗುವ ಮರಳು ಗದಗ ಜಿಲ್ಲೆಗಿಂತ ಅತ್ಯಂತ ಹೆಚ್ಚಾಗಿ ಹೊರ ಜಿಲ್ಲೆಗಳಿಗೆ ರವಾನೆಯಾಗುತ್ತಿದೆ. ಪಕ್ಕದ ಜಿಲ್ಲೆಗಳ ಪ್ರಮುಖ ನಗರಗಳಾದ ಧಾರವಾಡ, ಹುಬ್ಬಳ್ಳಿ, ನವಲಗುಂದ, ದೂರದ ಚಿಕ್ಕೋಡಿ ರವಾನೆಯಾಗುತ್ತದೆ. ಪ್ರತಿ ತಿಂಗಳು ಲಭ್ಯವಾಗುವ ಮರಳಿನಲ್ಲಿ ಶೇ. 65ರಷ್ಟು ಮರಳು ಬೇರೆ ಜಿಲ್ಲೆಗೆ ಸಾಗಾಣಿಕೆಯಾಗುತ್ತಿದೆ.
ಇನ್ನುಳಿದ ಶೇ. 35ರಷ್ಟು ಮಾತ್ರ ಜಿಲ್ಲೆಯಲ್ಲಿ ಬಳಕೆಯಾಗುತ್ತಿದ್ದು ಜಿಲ್ಲಾಡಳಿತ ಎಷ್ಟೇ ಕಟ್ಟುನಿಟ್ಟಿನ ಕ್ರಮ ತೆಗೆದುಕೊಂಡಿದ್ದರೂ ಗದಗ ಜಿಲ್ಲೆಯ ಮಟ್ಟಿಗೆ ಮರಳು ಸಾಗಾಟವೇ ಇಲ್ಲಿ ಪ್ರಮುಖ ಉದ್ಯೋಗವಾಗಿದೆ.
ಶಿವಕುಮಾರ ಕುಷ್ಟಗಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

