ಗದಗ

ಮುಂಗಾರು ಬಿತ್ತನೆ ಸಿದ್ಧತೆ

Published On :

- ಎಸ್.ಜಿ. ತೆಗ್ಗಿನಮನಿ
ನರಗುಂದ: ಜಿಲ್ಲೆಯಲ್ಲಿ ಸಂಪೂರ್ಣ ನೀರಾವರಿಯನ್ನು ಹೊಂದಿರುವ ಏಕೈಕ ತಾಲೂಕು ಎಂಬ ಹೆಗ್ಗಳಿಕೆ ಹೊಂದಿರುವ ನರಗುಂದ ತಾಲೂಕಿನ ರೈತ ಸಮುದಾಯ ಮುಂಗಾರು ಬಿತ್ತನೆಗೆ ಭರದ ಸಿದ್ಧತೆಯಲ್ಲಿ ತೊಡಗಿದ್ದು, ಭೂಮಿ ಸಿದ್ಧಗೊಳಿಸುವುದು, ಬೀಜ ಗೊಬ್ಬರಗಳ ದಾಸ್ತಾನು ಸೇರಿದಂತೆ ತಾಲೂಕಿನಾದ್ಯಂತ ಕೃಷಿ ಪೂರಕ ಚಟುವಟಿಕೆಗಳು ಗರಿಗೆದರಿವೆ.
3 ವರ್ಷಗಳಿಂದ ಸತತವಾಗಿ ಬರಗಾಲವನ್ನು ಎದುರಿಸಿರುವ ತಾಲೂಕಿನ ರೈತರು ಈ ಬಾರಿಯಾದರೂ ಉತ್ತಮ ಮಳೆಯಾಗಲಿ ಎಂಬ ಆಶಯದಲ್ಲಿದ್ದಾರೆ. ಈ ಹಿಂದೆ ಆಗಿರುವ ಅಲ್ಪ ಮಳೆಯನ್ನೇ ಆಧಾರವಾಗಿಟ್ಟುಕೊಂಡು ಬಿತ್ತನೆ ಮಾಡಿ, ಸಾಕಷ್ಟು ನಷ್ಟವನ್ನು ಅನುಭವಿಸಿದ್ದಾರೆ. ಮತ್ತೆ ಕೆಲ ರೈತರಿಗೆ ಮಾತ್ರ ಉತ್ತಮ ಲಾಭವೂ ದೊರತಿದೆ. ಹಾಗಾಗಿ ಮುಂಗಾರು ಪ್ರಾರಂಭದಲ್ಲಿಯೇ ಉತ್ತಮವಾಗಿ ಸುರಿದಲ್ಲಿ ರೈತರ ಪ್ರಮುಖ ಆದಾಯದ ವಸ್ತುವಾದ ಮುಂಗಾರಿನಲ್ಲಿ ಹೆಚ್ಚಿನ ಇಳುವರಿ ಆ ಮೂಲಕ ಲಾಭವನ್ನು ರೈತ ಸಮುದಾಯ ನಿರೀಕ್ಷಿಸುತ್ತಿದೆ.
ಭರದ ಸಿದ್ಧತೆ: ಹಿಂದೆ ಆಗಿರುವ ಎಲ್ಲಾ ಕಹಿಗಳನ್ನು ಮರೆತಿರುವ ರೈತರು ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿಗಾಗಿ ಈಗಾಗಲೇ ಭೂಮಿ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಬೇಸಿಗೆ ಸಂದರ್ಭದಲ್ಲಿ ಆಳವಾದ ಭೂಮಿ ಉಳುಮೆ ಮಾಡಿರುವುದರಿಂದ ಆಗಾಗ್ಗೆ ಕೊಂಚ ಮಳೆಯಾಗಿರುವ ಹಿನ್ನೆಲೆಯಲ್ಲಿ ಹೊಲಗಳನ್ನು ಹರಗುವುದು, ರಂಟೆ ಹೊಡೆಯುವುದು ಮತ್ತೆ ಕೆಲವರು ನೇಗಿಲು ಹೊಡೆಯುವ ಕಾರ್ಯದಲ್ಲಿ ಮಗ್ನರಾಗಿದ್ದಾರೆ. ತಾಲೂಕಿನ ಒಣ ಬೇಸಾಯ ಹಾಗೂ ನೀರಾವರಿ ಜಮೀನುಗಳನ್ನು ಹೊಂದಿರುವ ಎಲ್ಲಾ ರೈತರು ತಮ್ಮ ಕೃಷಿ ಕಾಯಕದಲ್ಲಿ ಮಗ್ನರಾಗಿದ್ದಾರೆ.
ಬೀಜದ ಕೊರತೆ: ಮಲಪ್ರಭಾ ಜಲಾಶಯದಲ್ಲಿ ವಾಡಿಕೆಯಷ್ಟು ನೀರು ಸಂಗ್ರಹವಾಗುತ್ತಿಲ್ಲ. ಪ್ರತಿ ವರ್ಷವೂ ಮುಂಗಾರು ಮತ್ತು ಹಿಂಗಾರು ಮಳೆ ಸಮರ್ಪಕವಾಗಿ ಆಗದಿರುವುದರಿಂದ ಕಾಲುವೆ ನೀರಾವರಿ ನಂಬಿರುವ ರೈತರು ಒಣಬೇಸಾಯದ ಆಧಾರದಲ್ಲಿಯೇ ಕೃಷಿ ಮಾಡುವಂಥ ಸ್ಥಿತಿ ನರಗುಂದ ತಾಲೂಕಿನಲ್ಲಿ ನಿರ್ಮಾಣವಾಗಿದೆ. ಮುಂಗಾರು ಹಂಗಾಮಿನಲ್ಲಿ ಮೆಣಸಿನಕಾಯಿ, ಉಳ್ಳಾಗಡ್ಡಿ, ಹೈಬ್ರೀಡ್ ಜೋಳ, ಹೆಸರು, ಅಲಸಂದಿ, ಬೀಜಗಳು ತಾಲೂಕು ಕೃಷಿ ಇಲಾಖೆಯಲ್ಲಿ ಸಿಗದಿರುವುದರಿಂದ ರೈತರು ಹಾವೇರಿ, ಧಾರವಾಡಕ್ಕೆ ಹೋಗಿ ತರುವಂತಾಗಿದೆ.
ಬಿತ್ತನೆ ಗುರಿ: ತಾಲೂಕಿನ ಒಟ್ಟು 50322 ಹೆಕ್ಟೇರ್ ಪ್ರದೇಶವಿದ್ದು, ಅದರಲ್ಲಿ 40700 ಹೆ ಸಾಗುವಳಿ ಪ್ರದೇಶವಿದೆ. ಪ್ರಸಕ್ತ ಸಾಲಿನ ಮುಂಗಾರಿನಲ್ಲಿ ನೀರಾವರಿ ವ್ಯಾಪ್ತಿಯಲ್ಲಿ 24500 ಹೆ. ಹಾಗೂ ಖುಷ್ಕಿಯಲ್ಲಿ 5200 ಹೆ. ಬಿತ್ತನೆಯ ಗುರಿ ಹೊಂದಲಾಗಿದೆ. 36049 ಟನ್ ರಾಸಾಯನಿಕ ಗೊಬ್ಬರ ಇದ್ದು, ಆದರೆ ಇಲ್ಲಿಯವರೆಗೆ ಮುಂಗಾರು ಬಿತ್ತನೆಗೆ ಬೇಕಾದ ಯಾವುದೇ ಬೀಜಗಳು ಪೂರೈಕೆಯಾಗಿಲ್ಲ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.