ಮಠಗಳಿಂದ ಸಂಸ್ಕೃತಿ, ಪರಂಪರೆ ಬೆಳವಣಿಗೆ
ಕನ್ನಡಪ್ರಭ ವಾರ್ತೆ, ಲಕ್ಷ್ಮೇಶ್ವರ, ಮೇ 23
ಮನುಷ್ಯನಿಗೆ ನೀತಿ ನಡುವಳಿಕೆ, ಆಚಾರ-ವಿಚಾರ ತಿಳಿವಳಿಕೆಗಳನ್ನು ಕಟ್ಟಿ ಕೊಡುವ ಕಾರ್ಯವನ್ನು ಮಠ-ಮಾನ್ಯಗಳು ಮಾಡುತ್ತಿರುವುದು ಉತ್ತಮ ಕಾರ್ಯವಾಗಿದೆ. ಮೌಲ್ಯಯುತ ಮಾತುಗಳು ಮನುಷ್ಯನಿಗೆ ಶೋಭೆ ತರುತ್ತವೆ ಮತ್ತೊಬ್ಬರ ಮನಸ್ಸು ನೋಯಿಸುವ ಮಾತುಗಳು ಸಮಾಜ ಒಡೆಯುತ್ತವೆ ಎಂದು ಮಾಜಿ ಮುಖ್ಯಮಂತ್ರಿ, ಸಂಸದ ಬಿ.ಎಸ್. ಯಡಿಯೂರಪ್ಪ ಹೇಳಿದರು.
ಸಮೀಪದ ಬಾಲೆಹೊಸೂರಿನ ಮೂಜಗಂ ಸಭಾ ಮಂಟಪದಲ್ಲಿ ಶುಕ್ರವಾರ ಜರುಗಿದ ದಿಂಗಾಲೇಶ್ವರಮಠ ಹಾಗೂ ದಾಸೋಹ ಭವನದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ನೈತಿಕ ಮೌಲ್ಯ ಜಾಗೃತಗೊಳ್ಳಲಿ: ಇಂದು ಮಠ ಮಾನ್ಯಗಳು ಸಮಾಜದಲ್ಲಿ ಧರ್ಮ, ರಾಷ್ಟ್ರಪ್ರೇಮ, ರಾಷ್ಟ್ರಪ್ರಜ್ಞೆ ಬೆಳೆಸುವ ಜತೆಯಲ್ಲಿ ಭಾರತೀಯ ಪರಂಪರೆ ಹಾಗೂ ಸಂಸ್ಕೃತಿ ಉಳಿಸಿ ಬೆಳೆಸುವ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ. ನಮ್ಮ ಮಕ್ಕಳಿಗೆ ಸೀತೆ, ಸಾವಿತ್ರಿ, ದಮಯಂತಿಯರ ಕಥೆಗಳನ್ನು ತಿಳಿಸಿ ಅವರಲ್ಲಿರುವ ನೈತಿಕ ಮೌಲ್ಯಗಳನ್ನು ಜಾಗೃತಗೊಳಿಸುವ ಕಾರ್ಯ ಮಾಡಬೇಕಾಗಿದೆ ಎಂದರು.
ಭಾರತದತ್ತ ಜಗತ್ತಿನ ನೋಟ: ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಮಾತನಾಡಿ, ಪಾಶ್ಚಿಮಾತ್ಯರು ಕುಟುಂಬ ಸಂಸ್ಕೃತಿ ನಾಶಮಾಡುತ್ತ ಕೇವಲ ಟಿವಿ ಹಾಗೂ ಇಂಟರ್ನೆಟ್ ಸಂಸ್ಕೃತಿ ಬೆಳೆಸುತ್ತ ಮನುಷ್ಯನ ಸಾಮಾಜಿಕ ಬದುಕು ನಾಶಗೊಳಿಸುತ್ತಾ ಹೊರಟಿರುವುದು ನಾಚಿಕೆಗೆಡಿನ ಸಂಗತಿ. ಈ ಮಧ್ಯೆ ಜಗತ್ತಿನ ಬೃಹತ್ ಪ್ರಜಾಪ್ರಭುತ್ವ ರಾಷ್ಟ್ರ ಭಾರತ ಹೊಸ ಶಕ್ತಿ ಹುಟ್ಟುಹಾಕಿರುವುದು ಹೆಮ್ಮೆಯ ಸಂಗತಿ. ಪ್ರಜಾಪ್ರಭುತ್ವದ ದೇಗುಲವಾದ ಸಂಸತ್ತಿನ ಬಾಗಿಲಿಗೆ ನಿಯೋಜಿತ ಪ್ರಧಾನಮಂತ್ರಿ ತಲೆ ಬಾಗಿರುವ ಸಂಗತಿ ಜಗತ್ತು ಮತ್ತೊಮ್ಮೆ ಭಾರತದತ್ತ ನೋಟ ಹೊರಳುವಂತೆ ಮಾಡಿದೆ ಎಂದರು.
ಮಾಜಿ ಸಚಿವ ಸಿ.ಎಂ. ಉದಾಸಿ, ಸಂಸದ ಪ್ರಹ್ಲಾದ ಜೋಶಿ, ಶಿವಕುಮಾರ ಉದಾಸಿ ಮಾತನಾಡಿದರು. ಬಾಲೆಹೊಸೂರಿನ ದಿಂಗಾಲೇಶ್ವರ ಮಠದ ನೂತನ ಕಟ್ಟಡ ಉದ್ಘಾಟನೆ ನೆರವೇರಿಸಿದ ಹುಬ್ಬಳ್ಳಿಯ ಮೂರುಸಾವಿರ ಮಠದ ಗುರುಸಿದ್ಧರಾಜಯೋಗೀಂದ್ರ ಶ್ರೀ, ಶಿವಮೊಗ್ಗ ಜಿಲ್ಲೆಯ ಆನಂದಪುರ ಬೆಕ್ಕಿನಕಲ್ಮಠದ ಮಲ್ಲಿಕಾರ್ಜುನ ಮುರುಘರಾಜೇಂದ್ರ ಶ್ರೀ, ಶಿರಹಟ್ಟಿಯ ಫಕ್ಕೀರಸಿದ್ದರಾಮ ಶ್ರೀ, ಕಂಪ್ಲಿಯ ಬ್ರಹ್ಮಕುಮಾರಿ ಭಾರತಿ, ಕುಮಾರ ದಿಂಗಾಲೇಶ್ವರ ಮಠದ ಕುಮಾರ ದಿಂಗಾಲೇಶ್ವರ ಶ್ರೀ, ಹಾವೇರಿಯ ಹುಕ್ಕೇರಿಮಠದ ಸದಾಶಿವ ಶ್ರೀ, ಮಾಜಿ ಶಾಸಕ ಜಿ.ಎಸ್. ಗಡ್ಡದೇವರಮಠ ಪ್ರಾಸ್ತಾವಿಕ ಮಾತನಾಡಿದರು. ಶಾಸಕ ಯು.ಬಿ. ಬಣಕಾರ, ನೇಹರು ಓಲೇಕಾರ, ಮಾಜಿ ಸಚಿವ ಎಸ್.ಎಸ್. ಪಾಟೀಲ, ಮಾಜಿ ಶಾಸಕ ರಾಮಣ್ಣ ಲಮಾಣಿ, ಶಿವರಾಜ ಸಜ್ಜನರ, ಶಂಕರ ಮುನೇನಕೊಪ್ಪ, ವಿ.ಎಸ್. ಪಾಟೀಲ, ಜಿ. ಶಿವಣ್ಣ, ಮಲ್ಲಿಕಾರ್ಜುನ ಸಾಹುಕಾರ, ಗ್ರಾಪಂ ಅಧ್ಯಕ್ಷೆ ಮಾಲತಿ ಬಾರ್ಕಿ, ಜಿಪಂನ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಎಸ್. ದೊಡ್ಡಗೌಡರ, ತಾಪಂ ಉಪಾಧ್ಯಕ್ಷೆ ಶಾರದಾ ಕವಲೂರ ಇತರರಿದ್ದರು. ಶಾಸಕ ರಾಮಕೃಷ್ಣ ದೊಡ್ಡಮನಿ ಸ್ವಾಗತಿಸಿದರು.
ಶುಕ್ರವಾರ ಬೆಳಗ್ಗೆ ನೂರಾರು ಜಂಗಮ ವಟುಗಳಿಗೆ ಅಯ್ಯಾಚಾರ ದೀಕ್ಷೆ ನೀಡಲಾಯಿತು. ನಂತರ 1111 ತ್ರಿವರ್ಣ ರೀತಿಯ ಕ್ಷೀರ ಕುಂಭಗಳನ್ನು ಹೊತ್ತ ಮಹಿಳೆಯರು ಮರೆವಣಿಗೆ ಮೂಲಕ ಕುಂಭೋತ್ಸವ ಯಶಸ್ವಿಯಾಗಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಶ್ರೀಮಠಕ್ಕೆ ತಲುಪಿತು. ಬಾಲೆಹೊಸೂರಿನ ದಿಂಗಾಲೇಶ್ವರ ಮಠದ ಉದ್ಘಾಟನೆಗೆ ಸುಮಾರು 10 ಸಾವಿರಕ್ಕೂ ಅಧಿಕ ಜನಸಮೂಹ ಆಗಮಿಸಿ ಕಾರ್ಯಕ್ರಮದ ಯಶಸ್ಸಿಗೆ ಸಾಕ್ಷಿಯಾದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

