ಕೆಎಂಎಫ್ 12 ನಿರ್ದೇಶಕರ ಆಯ್ಕೆ
ಧಾರವಾಡ: ಧಾರವಾಡ, ಗದಗ, ಹಾವೇರಿ ಹಾಗೂ ಉತ್ತರ ಕನ್ನಡ ಜಿಲ್ಲೆ ವ್ಯಾಪ್ತಿಯ ಇಲ್ಲಿಯ ಸಹಕಾರಿ ಹಾಲು ಒಕ್ಕೂಟದ ಚುನಾವಣೆ ಸೋಮವಾರ ಶಾಂತಿಯುತವಾಗಿ ನಡೆದಿದ್ದು, ಒಟ್ಟು 12 ನಿರ್ದೇಶಕರು ಆಯ್ಕೆಯಾದರು.
ಐದು ವರ್ಷಗಳ ಅಧಿಕಾರ ಅವಧಿಯ ಈ ಚುನಾವಣೆಯಲ್ಲಿ ಮುಂಚಿತವಾಗಿಯೇ, 12 ಸ್ಥಾನಗಳಲ್ಲಿ ಮೂರು ಅವಿರೋಧವಾಗಿ ಆಯ್ಕೆಯಾಗಿದ್ದರು. ಹುಬ್ಬಳ್ಳಿ-ಕುಂದಗೋಳ ಮತ ಕ್ಷೇತ್ರದ ಗಂಗಪ್ಪ ಮೂಕಪ್ಪ ಮೊರಬದ, ಹಾವೇರಿ-ರಾಣಿಬೆನ್ನೂರು-ಬ್ಯಾಡಗಿ ಮತಕ್ಷೇತ್ರದ ಬಸವರಾಜ ನೀಲಪ್ಪ ಅಬರಗೊಂಡ, ಗದಗ-ನರಗುಂದ ಕ್ಷೇತ್ರದ ಹನುಮಂತಗೌಡ ಹಿರೇಗೌಡರ ಅವಿರೋಧವಾಗಿ ಆಯ್ಕೆಗೊಂಡಿದ್ದರು.
ಇನ್ನುಳಿದ ಒಂಬತ್ತು ಸ್ಥಾನಗಳಿಗೆ ಸೋಮವಾರ ನಡೆದ ಚುನಾವಣೆಯಲ್ಲಿ ನಿರ್ದೇಶಕರನ್ನು ಆಯ್ಕೆ ಮಾಡಲಾಯಿತು. 20 ಅಭ್ಯರ್ಥಿಗಳು ಕಣದಲ್ಲಿದ್ದರು. ಹಾಲು ಉತ್ಪಾದಕರ ಸಹಕಾರಿ ಸದಸ್ಯಗಳ ಸಂಘಗಳ 753 ಸದಸ್ಯರ ಪೈಕಿ 535 ಮತಗಳು ಚಲಾವಣೆಯಾದವು. ಈ ಪೈಕಿ ಆರು ಮತಗಳು ತಿರಸ್ಕೃತಗೊಂಡವು.
ಗೆದ್ದವರು: ಧಾರವಾಡ ಮತ್ತು ನವಲಗುಂದ ತಾಲೂಕು ಕ್ಷೇತ್ರ-ಶಂಕರ ವೀರಪ್ಪ ಮುಗದ, ಕಲಘಟಗಿ ತಾಲೂಕು ಕ್ಷೇತ್ರ-ಯಲ್ಲಪ್ಪ ಬಸಪ್ಪ ದಾಸನಕೊಪ್ಪ, ಶಿಗ್ಗಾಂವಿ ಮತ್ತು ಸವಣೂರು ತಾಲೂಕು ಕ್ಷೇತ್ರ-ವಿರೂಪಾಕ್ಷ ಬಸವಂತಪ್ಪ ವಿಜಾಪುರ, ಹಿರೇಕೆರೂರು ಮತ್ತು ಹಾನಗಲ್ ತಾಲೂಕು ಕ್ಷೇತ್ರ-ಹನುಮಂತಗೌಡ ಬಸನಗೌಡ, ರೋಣ ತಾಲೂಕು ಕ್ಷೇತ್ರ-ನೀಲಕಂಠಪ್ಪ ಅಸೂಟಿ, ಮುಂಡರಗಿ ಮತ್ತು ಶಿರಹಟ್ಟಿ ಕ್ಷೇತ್ರ- ಮಂಜುನಾಥ ಹನುಮಂತಗೌಡ ಪಾಟೀಲ, ಶಿರಸಿ ತಾಲೂಕು ಕ್ಷೇತ್ರ-ಸುರೇಶ್ಚಂದ್ರ ಕೃಷ್ಣ ಹೆಗಡೆ, ಸಿದ್ದಾಪುರ, ಕುಮಟಾ, ಹೊನ್ನಾವರ ಮತ್ತು ಭಟ್ಕಳ ಕ್ಷೇತ್ರ-ಲಕ್ಷ್ಮೀನಾರಾಯಣ ಕೃಷ್ಣ ಹೆಗಡೆ, ಯಲ್ಲಾಪುರ, ಹಳಿಯಾಳ, ಮುಂಡಗೋಡ, ಅಂಕೋಲಾ, ಜೋಯಿಡಾ ಮತ್ತು ಕಾರವಾರ ಕ್ಷೇತ್ರ-ಪ್ರಶಾಂತ ಸುಬ್ರಾಯ ಸುಭಾಹಿತ್ ಪ್ರತಿಸ್ಪರ್ಧಿಗಳಿಗಿಂತ ಹೆಚ್ಚು ಮತ ಪಡೆದು ಆಯ್ಕೆಯಾದ ನಿರ್ದೇಶಕರು ಎಂದು ಚುನಾವಣಾಧಿಕಾರಿ ಮಹೇಶ ಕರ್ಜಗಿ ಘೋಷಣೆ ಮಾಡಿದರು. ಚುನಾವಣೆ ಫಲಿತಾಂಶ ಹೊರಬೀಳುತ್ತಿದ್ದಂತೆಯೇ ಗೆದ್ದ ಅಭ್ಯರ್ಥಿಗಳ ಬೆಂಬಲಿಗರು ಬಣ್ಣ ಎರೆಚಿ, ಪಟಾಕಿ ಸಿಡಿಸಿ ಸಂಭ್ರಮಿಸಿದರು. ಪ್ರಸ್ತುತ 12 ನಿರ್ದೇಶಕರು ಆಯ್ಕೆಯಾಗಿದ್ದು 15 ದಿನಗಳೊಳಗೆ ಅಧ್ಯಕ್ಷ ಸ್ಥಾನಕ್ಕಾಗಿ ನಿರ್ದೇಶಕರ ಮಧ್ಯೆ ಚುನಾವಣೆ ನಡೆಯಲಿದೆ. ಈ ಕುರಿತು ಅಧಿಕೃತ ಅಧಿಸೂಚನೆ ಹೊರಡಿಸಿ ನಿರ್ದೇಶಕರಿಗೆ ಮಾಹಿತಿ ಒದಗಿಸುತ್ತೇನೆಂದು ಚುನಾವಣಾಧಿಕಾರಿ ಮಹೇಶ ಕರ್ಜಗಿ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

