ಎಸ್ಬಿಐ ಗ್ರಾಹಕರ ಏಳ್ಗೆಯೇ ನನ್ನುಸಿರು: ವಿನಾಯಕರಾಮ್
ಗಜೇಂದ್ರಗಡ: ಪ್ರತಿಯೊಬ್ಬರ ಬದುಕಿನಲ್ಲಿ ವರ್ಗಾವಣೆ ಎನ್ನುವ ಶಬ್ದ ಹಾದು ಹೊಗುತ್ತದೆ. ಬ್ಯಾಂಕಿನ ನಿಯಮಾವಳಿ ಪ್ರಕಾರ ನಾನು ಬ್ಯಾಂಕ್ ಸೇವೆಯಿಂದ ವರ್ಗವಾಗಿದ್ದೇನೆ. ಗ್ರಾಹಕರಿಗೆ ತ್ವರೀತ ಸೇವೆ ನೀಡುವಲ್ಲಿ ಮುಂಚೂಣಿ ಸಾಧಿಸಿರುವ ಎಸ್ಬಿಐ ಗ್ರಾಹಕರ ಏಳ್ಗೆಯೇ ನನ್ನುಸಿರು ಎಂದು ಸ್ಥಳೀಯ ಭಾರತೀಯ ಸ್ಟೇಟ್ ಬ್ಯಾಂಕ್ ಶಾಖೆ ವ್ಯವಸ್ಥಾಪಕ ವಿನಾಯಕರಾಮ್ ಶಿರಸಿಕರ ಹೇಳಿದರು.
ಈಚೆಗೆ ಹುಬ್ಬಳ್ಳಿ ವಿಭಾಗೀಯ ಕಚೇರಿಗೆ ವರ್ಗಾವಣೆಯಾದ ನಿಮಿತ್ತ ಅವರನ್ನು ಪಟ್ಟಣದ ಬ್ಯಾಂಕ್ ಸಿಬ್ಬಂದಿ ಹಮ್ಮಿಕೊಂಡಿದ್ದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ನೂತನ ಶಾಖಾ ವ್ಯವಸ್ಥಾಪಕ ರಾಜಶೇಖರ ಪಾಪನಾಳ ಮಾತನಾಡಿ, ಗ್ರಾಹಕರ ಅಭ್ಯುದಯ ಜತೆ ಗುಣಮಟ್ಟದ ಸೇವೆ ನೀಡುವುದು ಬ್ಯಾಂಕಿನ ಮುಖ್ಯಧ್ಯೇಯ. ಇದನ್ನು ಉಸಿರಾಗಿಸಿಕೊಂಡಿರುವ ವಿನಾಯಕರಾಮ್ ಶಿರಸಿಕರ ಗ್ರಾಹಕರಿಗೆ ಉತ್ತಮ ಸೇವೆ ನೀಡುವ ಮೂಲಕ ಬ್ಯಾಂಕ್ ಶ್ರೇಯೋಭಿವೃದ್ಧಿಗೆ ಕಳಕಳಿಯಿಂದ ಶ್ರಮಿಸಿದ್ದಾರೆ ಎಂದರು. ಕ್ಷೇತ್ರಾಧಿಕಾರಿ ಆಸೀಫ್ ಧಾರವಾಡಕರ, ಶಾಖಾ ಉಪಪ್ರಬಂಧಕ ಎಚ್.ಡಿ. ಪಾಟೀಲ, ಕೆ. ಹನುಮಂತ, ಕೆ. ನಾರಾಯಣ, ಕೆ. ರಘುರಾಮ, ಕೆ. ಸುಧಾಕರ, ರಿಶಿರಮಜನಕುಮಾರ, ವರಪ್ರಸಾದ, ಮಲ್ಲಿಕಾರ್ಜುನ ಸಂಗಳದ, ಗೋಪಾಲ ರಾಠೋಡ್, ಸುನೀಲ ಇತರರಿದ್ದರು.
ಪುರಸಭೆ ನಾಮನಿರ್ದೇಶನ ಸದಸ್ಯರ ಆಯ್ಕೆ
ಲಕ್ಷ್ಮೇಶ್ವರ: ಪಟ್ಟಣದ ಪುರಸಭೆಗೆ 5 ಜನರನ್ನು ನಾಮ ನಿರ್ದೇಶನ ಸದಸ್ಯರನ್ನಾಗಿ ಸರ್ಕಾರದ ಆದೇಶದಂತೆ ನಗರಾಭಿವೃದ್ಧಿ ಇಲಾಖೆಯ ಅಧೀನ ಕಾರ್ಯದರ್ಶಿ ಸಿದ್ದಿಕ್ ಪಾಷ ನೇಮಕ ಮಾಡಿ ಆದೇಶ ನೀಡಿದ್ದಾರೆ. ಪಟ್ಟಣದ ಹೊನ್ನಪ್ಪ ಬಾಲೆಹೊಸೂರ, ಕಿರಣ ನವಲೆ, ನೀಲಪ್ಪ ಶೆರಸೂರಿ, ವಿರೂಪಾಕ್ಷಪ್ಪ ಆದಿ ಹಾಗೂ ಮಲ್ಲನಗೌಡ ಪಾಟೀಲ ಇವರನ್ನು ಪುರಸಭೆಯ ನಾಮ ನಿರ್ದೇಶನ ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ ಎಂದು ಶಾಸಕ ರಾಮಕೃಷ್ಣ ದೊಡ್ಡಮನಿ ತಿಳಿಸಿದರು.
ಪಟ್ಟಣದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರ ಹಲವಾರು ದಿನಗಳಿಂದ ನಾಮ ನಿರ್ದೇಶನ ಸದಸ್ಯರನ್ನು ಆಯ್ಕೆ ಮಾಡಿತ್ತು. ಆದರೆ ಲೋಕಸಭೆ ಚುನಾವಣೆ ನೀತಿ ಸಂಹಿತೆ ಜಾರಿಗೆ ಬಂದ ಹಿನ್ನೆಲೆಯಲ್ಲಿ ನೆನೆಗುದಿಗೆ ಬಿದ್ದಿದ್ದ ನೇಮಕಾತಿಗಳನ್ನು ಈಗ ಮಾಡಲಾಗುತ್ತಿದ್ದು, ಪಕ್ಷಕ್ಕಾಗಿ ದುಡಿದ ನಿಷ್ಠಾವಂತ ಕಾರ್ಯಕರ್ತರನ್ನು ಗಣನೆಗೆ ತೆಗೆದುಕೊಂಡು ಹಂತ ಹಂತವಾಗಿ ಇನ್ನೂ ಹಲವಾರು ನೇಮಕಾತಿಗಳನ್ನು ನಾವೆಲ್ಲ ಹಿರಿಯರು ಸೇರಿಕೊಂಡು ಶೀಘ್ರವಾಗಿ ಮಾಡಲಾಗುತ್ತದೆ ಎಂದರು. ಮಾಜಿ ಶಾಸಕ ಜಿ.ಎಸ್. ಗಡ್ಡದೇವರಮಠ, ಪುರಸಭೆ ಮಾಜಿ ಅಧ್ಯಕ್ಷ ಎನ್.ಜಿ. ಹೊಂಬಳ, ವಿ.ಜಿ. ಪಡಗೇರಿ, ತಾಪಂ ಸದಸ್ಯ ಚೆನ್ನಪ್ಪ ಜಗಲಿ, ಪುರಸಭೆ ಸದಸ್ಯ ರಾಜು ಕುಂಬಿ, ವೆಂಕಟೇಶ ಮಾತಾಡೆ ಹಾಜರಿದ್ದರು.
ಸಾಮೂಹಿಕ ವಿವಾಹ ಸಾಮರಸ್ಯ ಪ್ರತೀಕ: ಶ್ರೀ
ಗದಗ: ಸಾಮೂಹಿಕ ವಿವಾಹಗಳು ಸಾಮರಸ್ಯದ ಪ್ರತೀಕವಾಗಿವೆ. ಸಮಾಜದಲ್ಲಿ ಸಮಾನತೆ ಸಹಕಾರ, ಸಹಬಾಳ್ವೆ ಬರಬೇಕಾದರೆ ಪ್ರತಿ ನಗರ ಹಳ್ಳಿಗಳಲ್ಲಿ ವರ್ಷಕ್ಕೆ ಒಂದು ಸಾರಿ ಎಲ್ಲರೂ ಒಂದಡೆ ಸೇರಿ ಒಕ್ಕಟ್ಟಿನಿಂದ ಮಾದರಿ ಮದುವೆ ಮಾಡಬೇಕು ಎಂದು ಬಳಗಾನೂರಿನ ಶಿವಶಾಂತವೀರ ಶ್ರೀಗಳು ಹೇಳಿದರು.
ಸೋಮವಾರ ತಾಲೂಕಿನ ಹೊಸಹಳ್ಳಿ ಗ್ರಾಮದ ಜ. ಬೂದೀಶ್ವರ ಶಿವಯೋಗಿಗಳ 155ನೇ ಜಾತ್ರಾಮಹೋತ್ಸವ ನಿಮಿತ್ಯವಾಗಿ ಹಮ್ಮಿಕೊಳ್ಳಲಾಗಿದ್ದ 23 ಜತೆ ಸಾಮೂಹಿಕ ವಿವಾಹದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಹೊಸಹಳ್ಳಿಯ ಬೂದೀಶ್ವರ ಶ್ರೀಗಳು ಮಾತನಾಡಿದರು. ಮುನವಳ್ಳಿ-ಭಂಡಾರಹಳ್ಳಿ ಸೋಮಶೇಖರಮಠದ ಮುರಘರಾಜೇಂದ್ರ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು. ಇಂದಿರಾಗಾಂಧಿ ರಾಷ್ಟ್ರೀಯ ಸದ್ಭಾವನಾ ಪ್ರಶಸ್ತಿ ಪುರಸ್ಕೃತ ಅರವಿಂದಸಿಂಗ್ ಬ್ಯಾಳಿ, ಕುರ್ತಕೋಟಿ ಗ್ರಾಪಂ ಅಧ್ಯಕ್ಷ ಅಪ್ಪಣ್ಣ ಇನಾಮತಿ, ಹುಲಕೋಟಿಯ ಗ್ರಾಪಂ ಅಧ್ಯಕ್ಷ ಚಂದ್ರಪ್ಪ ಕರಿಕಟ್ಟಿ, ದೇವರಡ್ಡಿ ರಡ್ಡೇರ ಇದ್ದರು. ಶಂಕರಯ್ಯ ಗುರಮಠ, ಕಲಾವಿದರು ಪ್ರಾರ್ಥಿಸಿದರು. ತುಳಸಪ್ಪ ರೋಣದ ನಿರ್ವಹಿಸಿದರು. ಪ್ರಭು ವಂದಿಸಿದರು.
ಪಂಚಮಸಾಲಿ ಬ್ಯಾಂಕಿಗೆ ಷಣ್ಮುಖಗೌಡ, ವಿಜಯಲಕ್ಷ್ಮೀ ಆಯ್ಕೆ
ಲಕ್ಷ್ಮೇಶ್ವರ: ಶಿರಹಟ್ಟಿ ತಾಲೂಕು ಪಂಚಮಸಾಲಿ ಕೋ-ಆಪ್ ಕ್ರೆಡಿಟ್ ಬ್ಯಾಂಕಿಗೆ 2014-15ನೇ ಸಾಲಿನಿಂದ 2018-19ನೇ ಸಾಲಿಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಹುದ್ದೆಗೆ ಮಂಗಳವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಷಣ್ಮುಖಗೌಡ ಪಾಟೀಲ, ಉಪಾಧ್ಯಕ್ಷರಾಗಿ ವಿಜಯಲಕ್ಷ್ಮೀ ಬಾಳಿಕಾಯಿ ಅವಿರೋಧ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ವಿ.ಎಸ್. ಸೊಬರದ ತಿಳಿಸಿದ್ದಾರೆ.
ಬ್ಯಾಂಕಿಗೆ ಮಂಗಳವಾರ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಹುದ್ದೆಗೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಷಣ್ಮುಖಗೌಡ ಪಾಟೀಲ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ವಿಜಯಲಕ್ಷ್ಮೀ ಚೆಂಬಣ್ಣ ಬಾಳಿಕಾಯಿಯವರು ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿಗಳು ಘೋಷಣೆ ಮಾಡಿದರು. ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನು ಅಭಿನಂದಿಸಿದ ಸೋಮಣ್ಣ ಮುಳಗುಂದ ಮಾತನಾಡಿ, ಸುಮಾರು ರು. 10 ಲಕ್ಷದಲ್ಲಿ ಪ್ರಾರಂಭಗೊಂಡಿರುವ ಪಂಚಮಸಾಲಿ ಕೋ-ಆಪ್ ಕ್ರೆಡಿಟ್ ಬ್ಯಾಂಕ್ ಅಭಿವೃದ್ದಿ ಹೊಂದುವಂತೆ ನಾವೆಲ್ಲರೂ ಶ್ರಮಿಸೋಣ, ಅಧ್ಯಕ್ಷರಿಗೆ ಎಲ್ಲರೂ ಸಹಕಾರ ನೀಡುತ್ತೇವೆ ಎಂದರು. ಎಪಿಎಂಸಿ ಅಧ್ಯಕ್ಷ ಕುಬೇರಪ್ಪ ಮಹಾಂತಶೆಟ್ಟರ್, ಟಿಎಪಿಎಂಎಸ್ ಅಧ್ಯಕ್ಷ ಗದಿಗೆಪ್ಪ ಯತ್ನಳ್ಳಿ, ಚಂಬಣ್ಣ ಬಾಳಿಕಾಯಿ, ಮಹಾದೇವಪ್ಪ ಒಣರೊಟ್ಟಿ, ಶಿವಪ್ಪ ಬಂಗಿ, ಸುರೇಶ ರಾಚನಾಯಕರ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

