ತನಿಖೆಗೆ ಆಗ್ರಹಿಸಿ ಧರಣಿ ಮುಂದುವರಿಕೆ
ಕನ್ನಡಪ್ರಭ ವಾರ್ತೆ, ಗಜೇಂದ್ರಗಡ, ಮೇ 27
ರಾಜೂರು ಗ್ರಾಪಂ ವ್ಯಾಪ್ತಿಯ ಗ್ರಾಮಗಳಿಗೆ ಮೂಲಭೂತ ಸೌಕರ್ಯ, ಖಾತ್ರಿ ಯೋಜನೆಯಲ್ಲಿ ಆಗಿದೆ ಎನ್ನಲಾದ ಭ್ರಷ್ಟಾಚಾರ ತನಿಖೆಗೆ ಒತ್ತಾಯಿಸಿ ಗ್ರಾಮಸ್ಥರು ಕಳೆದೆರೆಡು ದಿನದಿಂದ ಕೈಗೊಂಡಿರುವ ಧರಣಿ ಸತ್ಯಾಗ್ರಹ ಅಧಿಕಾರಿಗಳು ನೀಡಿದ ಭರವಸೆಗೊಪ್ಪದ ಪ್ರತಿಭಟನಾಕಾರರು ಮಂಗಳವಾರವೂ ಧರಣಿ ಮುಂದುವರೆಸಿದರು.
ಇದಕ್ಕೂ ಮುನ್ನ ಬೆಳಗ್ಗೆ ಪ್ರತಿಭಟನಾಕಾರರು ರಾಜೂರು ಗ್ರಾಮದ ಪ್ರಮುಖ ಬೀದಿಗಳಲ್ಲಿ ತಮಟೆ ಬಾರಿಸುವ ಮೂಲಕ ಭ್ರಷ್ಟರ ವಿರುದ್ಧ ಘೋಷಣೆ ಕೂಗಿ, ಮೆರವಣಿಗೆ ನಡೆಸಿದರು.
ಅವ್ಯವಹಾರ ಕುರಿತು ಹಲವಾರು ಸಂಘಟನೆಗಳ ಸಹಕಾರದಿಂದ ಜನರು ಮನವಿ, ಬೀದಿಗಿಳಿದು ಪ್ರತಿಭಟನೆ ಮಾಡಿದರೂ ಜನಪ್ರತಿನಿಧಿಗಳಾಗಲಿ ಅಥವಾ ಯಾವೊಬ್ಬ ಅಧಿಕಾರಿಯೂ ಸ್ಪಂದಿಸಿಲ್ಲ. ಹೀಗಾಗಿ ಈ ಬಾರಿ ನಮ್ಮ ಸಮಸ್ಯೆಗಳಿಗೆ ಪರಿಹಾರ ಸಿಗುವವರೆಗೂ ಗ್ರಾಪಂ ಮುಂದೆ ಧರಣಿ ಮುಂದುವರೆಸುತ್ತೇವೆ ಎಂದರು.
ಅಧಿಕಾರಿಗಳ ಭರವಸೆ: ಇದೇ ವೇಳೆ ಪ್ರತಿಭಟನಾ ಸ್ಥಳಕ್ಕೆ ತಾಲೂಕು ಕಾರ್ಯನಿರ್ವಾಹಕ ಅಧಿಕಾರಿ ಎಸ್.ಎಂ. ಪಿಡಶೆಟ್ಟಿ ಹಾಗೂ ಜಲಾನಯನ ಇಲಾಖೆ ಕೆ.ಎಂ. ಮೇಟಿ ಭೇಟಿ ನೀಡಿ ಧರಣಿ ನಿರತರಿಂದ ಅಹವಾಲು ಪಡೆದರು. ಬಳಿಕ ಮಾತನಾಡಿದ ಅವರು ಈ ಕುರಿತು ಮೇಲಧಿಕಾರಿಗಳ ಗಮನಕ್ಕೆ ತಂದು ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಲಾಗುವುದು. ಜತೆಗೆ ಅರ್ಹ ಪಲಾನುಭವಿಗಳಿಗೆ ನ್ಯಾಯ ಒದಗಿಸಲಾಗುವುದು ಎಂದರು. ಇದಕ್ಕೊಪ್ಪದ ಧರಣಿನಿರತರು ಸ್ಥಳದಲ್ಲೇ ಪರಿಹಾರಕ್ಕೆ ಆಗ್ರಹಿಸಿ ಧರಣಿ ಮುಂದುವರಿಸಿದರು.
ಎಂ.ಎಸ್. ಹಡಪದ, ಉಮೇಶ ರಾಠೋಡ, ಶಶಿಧರ ಹೂಗಾರ, ಕಳಕೇಶ ಉಕ್ಕಿಸಲ, ಬಾಲು ರಾಠೋಡ, ರಾಮಚಂದ್ರ ಹುದ್ದಾರೆ, ಬಿ.ಎಸ್. ಶೀಲವಂತರ, ಪೀರು ರಾಠೋಡ, ವಿ.ಬಿ. ಹಪ್ಪಳದ, ಅಮರೇಶ ನೂಲ್ವಿ, ಫಯಾಜ ತೋಟದ, ಬಾಬು ಮುಜಾವರ, ಹನಮಂತ ಹಿತ್ತಲಮನಿ, ಶರಣಪ್ಪ ಪೂಜಾರ, ಶರಣಪ್ಪ ಸಜ್ಜನರ ಇದ್ದರು.
ಸಮರ್ಪಕ ವಿದ್ಯುತ್ ಪೂರೈಕೆಗೆ ಆಗ್ರಹ
ಗಜೇಂದ್ರಗಡ: ಸಮೀಪದ ರಾಮಾಪುರ ಗ್ರಾಪಂ ವ್ಯಾಪ್ತಿಯ ಕೊಡಗಾನೂರ, ಚಿಲಝರಿ, ವೀರಾಪುರ, ಹೊಸರಾಂಪುರ, ಹಿರೇಕೊಪ್ಪ, ಪುರ್ತಗೇರಿ ಗ್ರಾಮಗಳಲ್ಲಿ ವಿದ್ಯುತ್ ಪೂರೈಕೆ ಸ್ಥಗಿತಗೊಂಡು ಗ್ರಾಮಸ್ಥರು ಪರದಾಡುವಂತಾಗಿದೆ. ಕೂಡಲೇ ಸಮರ್ಪಕ ವಿದ್ಯುತ್ ಪೂರೈಸಿ ಎಂದು ಆಗ್ರಹಿಸಿ ಮಂಗಳವಾರ ಗ್ರಾಮಸ್ಥರು ಹೆಸ್ಕಾಂ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ರಾಮಾಪುರ ಗ್ರಾಪಂ ವ್ಯಾಪ್ತಿಗೆ ಒಳಪಡುವ ಗ್ರಾಮಗಳು ಹೆಸ್ಕಾಂ ಇಲಾಖೆ ನಿರಂತರ ಜ್ಯೋತಿ ಯೋಜನೆಗೆ ಒಳಪಟ್ಟಿದ್ದರೂ ಪದೇ ಪದೆ ವಿದ್ಯುತ್ ಸ್ಥಗಿತಗೊಳಿಸಲಾಗುತ್ತಿದೆ. ಎರಡು ತಿಂಗಳಿಂದ ಗ್ರಾಮಗಳಲ್ಲಿ ವಿದ್ಯುತ್ ಕಣ್ಣಾಮುಚ್ಚಾಲೆಯಿಂದಾಗಿ ಹಿಟ್ಟಿನ ಗಿರಣಿಗಳು ಬಂದಾಗಿದ್ದು, ಕುಡಿಯುವ ನೀರು ಪೂರೈಕೆ ಸ್ಥಗಿತವಾಗಿದೆ. ಇದರಿಂದ ಗ್ರಾಮಸ್ಥರು ತೀವ್ರ ತೊಂದರೆ ಅನುಭವಿಸುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ವಿದ್ಯುತ್ ಅಭಾವದಿಂದ ಬೆಳಗಿನ ಸಮಯಕ್ಕೆ ಬೆಳೆಗಳಿಗೆ ನೀರುಣಿಸಲು ಆಗುತ್ತಿಲ್ಲ. ಇದರಿಂದ ಬೆಳೆ ಒಣಗುತ್ತಿವೆ. ಹೆಸ್ಕಾಂ ಅಧಿಕಾರಿಗಳಿಗೆ ಹಲವಾರು ಬಾರಿ ಮನವಿ ನೀಡಿದರು ಪ್ರಯೋಜನವಾಗಿಲ್ಲ. ಬೆಳಗ್ಗೆ ಸತತ 6 ಗಂಟೆ ತ್ರಿಫೇಸ್ ವಿದ್ಯುತ್ ಸರಬರಾಜು ಮಾಡಲು ಅಧಿಕಾರಿಗಳು ಮುಂದಾಗದಿದ್ದಲ್ಲಿ ಗ್ರಾಪಂ ಕಾರ್ಯಾಲಯ ಹಾಗೂ ಗಜೇಂದ್ರಗಡ ಹೆಸ್ಕಾಂ ಕಾರ್ಯಾಲಯಕ್ಕೆ ಬೀಗ ಜಡಿದು ಪ್ರತಿಭಟನೆ ಕೈಗೊಳ್ಳುತ್ತೇವೆ ಎಂದು ಈಶಪ್ಪ ರಾಠೋಡ, ಸೋಮಯ್ಯ ಬಾಳಿಕಾಯಿಮಠ, ಪರಸಪ್ಪ ಪೂಜಾರ, ಕಳಕಪ್ಪ ಕಾಡದ, ಗುಡದಪ್ಪ ತಳವಾರ, ನಾಗಯ್ಯ ಹಿರೇಮಠ, ಹನುಮಂತ ಹೂಗಾರ, ಮಹಾಂತಯ್ಯ ಕಂಪ್ಲಿಮಠ, ಅಜಯ ಹಡಪದ, ಮಾರುತೆಪ್ಪ ಸಕ್ರಿ, ರಾಮಪ್ಪ ಡೋಣಿ, ರುದ್ರಪ್ಪ ನಡುಕಟ್ಟಿನ ಎಚ್ಚರಿಸಿದರು. ಇದೇ ವೇಳೆ ಹೆಸ್ಕಾಂನ ಸಹಾಯಕ ಅಭಿಯಂತ ವಿ.ಟಿ. ರಾಜೂರ ಹಾಗೂ ಶಾಖಾಧಿಕಾರಿ ಎಸ್.ಬಿ. ಮಹಾಮನಿ ಅವರು ರೈತರಿಂದ ಮನವಿ ಸ್ವೀಕರಿಸಿ, ಹೆಸ್ಕಾಂ ಇಲಾಖೆ ನಿಗದಿಪಡಿಸಿದ ಸಮಯಕ್ಕನುಗುಣವಾಗಿ ಸಮರ್ಪಕ ವಿದ್ಯುತ್ ನೀಡಲಾಗುವುದು ಎಂದು ಭರವಸೆ ನೀಡಿದರು.
ಅರ್ಹರಿಗೆ ಮತ ನೀಡಲು ಪದವೀಧರ ಮಹಾಮಂಡಳ ನಿರ್ಧಾರ
ಗದಗ: ಜೂನ್ 20 ರಂದು ನಡೆಯಲಿರುವ ಕರ್ನಾಟಕ ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಪದವೀಧರರ ಬಗ್ಗೆ ನಿಜವಾದ ಕಾಳಜಿ ಹೊಂದಿರುವ ಹಾಗೂ ಅವರ ಧ್ವನಿಯಾಗಿ ಕೆಲಸ ಮಾಡುವ ಅಭ್ಯರ್ಥಿಗೆ ಮಾತ್ರ ಮತ ನೀಡಲು ಕರ್ನಾಟಕ ಪದವೀಧರರ ಮಹಾಮಂಡಳ ಹಾಗೂ ಸಮಾಜ ಚಿಂತಕರ ಕೂಟ ನಿರ್ಧರಿಸಿದೆ.
ಸೋಮವಾರ ಇಲ್ಲಿನ ಕೋರ್ಟ್ ಎದುರಿಗಿನ ಸಮಾಜ ಚಿಂತಕರ ಕೂಟದ ಕಚೇರಿಯಲ್ಲಿ ವಿವಿಧ ಕ್ಷೇತ್ರಗಳ ಪದವೀಧರರು ಹಾಗೂ ಕರ್ನಾಟಕ ಪದವೀಧರರ ಮಹಾಮಂಡಳದ ಪದಾಧಿಕಾರಿಗಳ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಯಿತು. ಮಹಾಮಂಡಳದ ಸಂಚಾಲಕ ನ್ಯಾಯವಾದಿ ಎಸ್.ಕೆ. ನದಾಫ್, ಸಮಾಜ ಚಿಂತಕರ ಕೂಟದ ಅಧ್ಯಕ್ಷ ರವಿಕಾಂತ ಅಂಗಡಿ, ಸಾಹಿತಿ ಎ.ಎಸ್. ಮಕಾನದಾರ, ಕರ್ನಾಟಕ ನದಾಫ್ ಪಿಂಜಾರ ಸಂಘದ ಪದವೀಧರ ಘಟಕದ ಸಂಚಾಲಕ ಎಂ.ಬಿ. ನದಾಫ್, ಡಾ. ಬಿ.ಡಿ. ತಳವಾರ ಮಾತನಾಡಿದರು. ಎಚ್.ಎನ್. ಗೂಳರಡ್ಡಿ, ಚಂದ್ರಕಾಂತ ಚವ್ಹಾಣ, ರವಿ ಕಂಪ್ಲಿ, ವೀರೇಶ ಹುಬ್ಬಳ್ಳಿ, ಎಸ್.ಎಂ. ಮರಿಗೌಡ್ರ, ಎನ್.ಡಿ. ಮೆಣಸಗಿ, ಟಿ.ಎನ್. ಭಾಂಡಗೆ, ವೈ.ಎನ್.ಪಾಟೀಲ, ರಾಜು ಯಾದವಾಡ ಇತರರಿದ್ದರು.
ಇಂದು ಶಿವಾನುಭವ ಗೋಷ್ಠಿ
ನರಗುಂದ: ಪಟ್ಟಣ ಪಂಚಗೃಹ ಗುಡ್ಡದ ಹಿರೇಮಠದಲ್ಲಿ 3ನೇ ಮಾಸಿಕ ಶಿವಾನುಭವ ಗೋಷ್ಠಿ ಮೇ 28ರ ಸಂಜೆ 6.30ಕ್ಕೆ ಸಿದ್ದೇಶ್ವರ ಧರ್ಮ ವಾಹಿನಿ ಮತ್ತು ಸಿದ್ದೇಶ್ವರ ಪಂಚಗೃಹ ಗುಡ್ಡದ ಹಿರೇಮಠದ ಆಶ್ರಯದಲ್ಲಿ ಶ್ರೀಮಠದ ಆವರಣದಲ್ಲಿ ಜರುಗಲಿದೆ. ಈ ಕಾರ್ಯಕ್ರಮಕ್ಕೆ ಪಂಚಗೃಹ ಗುಡ್ಡದ ಹಿರೇಮಠದ ಸಿದ್ಧಲಿಂಗ ಶಿವಾಚಾರ್ಯ ಶ್ರೀಗಳು, ವಿರಕ್ತಮಠದ ಚನ್ನಬಸವ ಶ್ರೀಗಳು, ಡಾ. ಚಂದ್ರಶೇಖರಯ್ಯ ಹಿರೇಮಠ, ಡಾ. ಬಸವರಾಜ ಹಿರೇಮಠ, ಅಶೋಕ ಸಾಲೂಟಿಗಿ, ವೀರಯ್ಯ ಸೂಳಿಕೇರಿ, ಧರ್ಮನಗೌಡ ಸಿದ್ದನಗೌಡ್ರ, ನಿಂಗನಗೌಡ ಪಾಟೀಲ, ರಾಜಶೇಖರ ಗಾಳಪ್ಪನವರ, ಶಿವಯೋಗಿ ಹಡಗಲಿಮಠ, ವಿರೂಪಾಕ್ಷಗೌಡ ರಾಯನಗೌಡ್ರ, ಕಳಸಾ ಬಂಡೂರಿ ಹೋರಾಟ ಸಮಿತಿ ಅಧ್ಯಕ್ಷ ವಿಜಯ ಕುಲಕರ್ಣಿ ಭಾಗವಹಿಸುವರು ಎಂದು ಪ್ರಕಟಣೆ ತಿಳಿಸಿದೆ.
ಸಿಡಿಲು: 6 ಜನರಿಗೆ ಗಾಯ
ನರಗುಂದ: ಗುರ್ಲಕಟ್ಟಿಯ ರಸ್ತೆಯಲ್ಲಿ ನಿಂತಿದ್ದ ಟಿಪ್ಪರ್ ವಾಹನದ ಬಳಿ ಕುಳಿತ ದಂಡಾಪುರದ ನಿವಾಸಿಗಳಲ್ಲಿ 6 ಜನರು ಸಿಡಿಲು ಬಡಿದು ಗಾಯಗೊಂಡಿರುವ ಘಟನೆ ಮಂಗಳವಾರ ಬೆಳಗ್ಗೆ ಜರುಗಿದೆ. ಗಾಯಗೊಂಡವರನ್ನು ಯಲ್ಲಪ್ಪ ಹಿರೇಕುಮ್ಮಿ, ಮಕ್ತಮಸಾಬ ಜವಳಿ, ದಾವಲಸಾಬ ತಹಶೀಲ್ದಾರ, ಕೋಮಲ ಮುಲಂಗಿ, ಮಹಬೂಸಾಬ ಜವಳಿ, ರಸುಲಸಾಬ ಕಾಲವಾಡ ತೀವ್ರ ಗಾಯಗೊಂಡವರಾಗಿದ್ದಾರೆ. ಇವರಲ್ಲಿ ಇಬ್ಬರನ್ನು ಹುಬ್ಬಳ್ಳಿ ಕಿಮ್ಸ್ಗೆ ದಾಖಲಿಸಲಾಗಿದೆ. ಇನ್ನುಳಿದ ನಾಲ್ವರು ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕರವೇಗೆ ಅಶೋಕಗೌಡ ನೇಮಕ
ಗದಗ: ಕರ್ನಾಟಕ ರಕ್ಷಣಾ ವೇದಿಕೆಯ ಗದಗ ಜಿಲ್ಲಾ ಘಟಕದ ವಕ್ತಾರರನ್ನಾಗಿ ನಗರದ ಅಶೋಕಗೌಡ ಚಿಕ್ಕನಗೌಡರ ಅವರನ್ನು ನೇಮಕಮಾಡಲಾಗಿದೆ ಎಂದು ಜಿಲ್ಲಾಧ್ಯಕ್ಷ ಹನಮಂತ ಅಬ್ಬಿಗೇರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

