ಗದಗ

ಅನುದಾನ ವಿತರಣೆ ವಿಳಂಬ: ಲೋಕಾಕ್ಕೆ ದೂರು

Published On :

ಕನ್ನಡಪ್ರಭ ವಾರ್ತೆ, ರೋಣ, ಮೇ 29
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಸ್ಥಳೀಯ ಪುರಸಭೆಯು 22.75 ಅನುದಾನದಲ್ಲಿ ಬರತಕ್ಕಂಥ ಸೌಲಭ್ಯಗಳನ್ನು ಪಲಾನುಭವಿಗಳಿಗೆ 3 ವರ್ಷಗಳಿಂದ ವಿತರಣೆ ಮಾಡಿರುವುದಿಲ್ಲ ಎಂದು ಪಟ್ಟಣದ ಯಲ್ಲಪ್ಪ ಪೂಜಾರ ಗುರುವಾರ ತಾಪಂ ಸಭಾಭವನದಲ್ಲಿ ಸಾರ್ವಜನಿಕ ಆಹವಾಲು ಸ್ವೀಕರಿಸಲು ಆಗಮಿಸಿದ ಜಿಲ್ಲಾ ಲೋಕಾಯುಕ್ತರಿಗೆ ದೂರು ಸಲ್ಲಿಸಿದರು.
ಸ್ಥಳೀಯ ಪುರಸಭೆಯಿಂದ 2010-11ನೇ ಸಾಲಿನಲ್ಲಿ ಕುಟೀರ ಅಂಗಡಿಗಳನ್ನು, 2011-12ನೇ ಸಾಲಿನಲ್ಲಿ ಕಂಪ್ಯೂಟರ್, ಭಾಗ್ಯ ಜ್ಯೋತಿ ಸಂಪರ್ಕ ಮತ್ತು ಬಾಂಡೆ ಸಾಮಗ್ರಿಗಳನ್ನು ವಿತರಣೆ ಮಾಡುವಲ್ಲಿ ಫಲಾನುಭವಿಗಳನ್ನು ಆಯ್ಕೆ ಮಾಡಿದ್ದಾರೆ. ಆದರೆ ಅವರಿಗೆ ಈವರೆಗೂ ಸೌಲಭ್ಯಗಳನ್ನು ವಿತರಣೆ ಮಾಡಿರುವುದಿಲ್ಲ. 2012-13ನೇ ಸಾಲಿನಲ್ಲಿ ಗ್ಯಾಸ್ ಸೌಲಭ್ಯ ಕಲ್ಪಿಸಲು ಫಲಾನುಭವಿಗಳನ್ನು ಆಯ್ಕೆ ಮಾಡಿದ್ದಾರೆ. ಆದರೂ ಈವರೆಗೆ ವಿತರಣೆ ಮಾಡಿಲ್ಲ. ಅಲ್ಲದೆ ಎಸ್ಸಿ, ಎಸ್ಟಿ ಅನುದಾನದಲ್ಲಿ ಕಾಯ್ದಿರಿಸಿದ ಹಣವನ್ನು ಫಲಾನುಭವಿಗಳಿಗೆ ಸಮರ್ಪಕವಾಗಿ ತಲುಪಿಸುತ್ತಿಲ್ಲ. ಈ ಕುರಿತು ಪುರಸಭೆ  ಮುಖ್ಯಾಧಿಕಾರಿಯನ್ನು ಸಂಪರ್ಕಿಸಿದ್ದಲ್ಲಿ ಸ್ಪಂದಿಸುತ್ತಿಲ್ಲ ಎಂದು ಯಲ್ಲಪ್ಪ ಪೂಜಾರ ಲೋಕಾಯುಕ್ತರಲ್ಲಿ ಮನವಿ ಮಾಡಿಕೊಂಡರು. ಮನವಿ ಸ್ವೀಕರಿಸಿದ ಲೋಕಾಯುಕ್ತ ಡಿವೈಎಸ್ಪಿ ಕೆ.ಸಿ. ಅಸುಂಡಿ, ಈ ಕುರಿತು ಪುರಸಭೆ ಮುಖ್ಯಾಧಿಕಾರಿಗಳಿಂದ ಸಮಗ್ರ ಮಾಹಿತಿ ಪಡೆದು ವಿಚಾರಣೆ ನಡೆಸಲಾಗುವುದು. ಯಾವುದೇ ಕಾರಣಕ್ಕೂ ಫಲಾನುಭವಿಗಳಿಗೆ ತೊಂದರೆಯಾಗದಂತೆ ವಿತರಣೆ ಮಾಡುವಲ್ಲಿ ವಿಳಂಬವಾಗದಂತೆ ಕ್ರಮ ಕೈಗೊಳ್ಳಲು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು ಎಂದು ಭರವಸೆ ನೀಡಿದರು.
ಅರ್ಜಿ ಸಲ್ಲಿಸಿದರು: ಖಾತ್ರಿ ಯೋಜನೆಯಲ್ಲಿ ಒಳಗಟ್ಟಿ ನಿರ್ಮಿಸಿಕೊಂಡ ವರ್ಷಗಳಾದರೂ ರು. 25 ಸಾವಿರಗಳಲ್ಲಿ ಈವರೆಗೆ ರು. 7 ಸಾವಿರ ಮಾತ್ರ ನನ್ನ ಖಾತೆಗೆ ಜಮಾ ಮಾಡಿದ್ದಾರೆ. ಉಳಿದ ರು. 18 ಸಾವಿರಗಳನ್ನು ಈವರೆಗೂ ಜಮಾ ಮಾಡಿಲ್ಲ. ಈ ಕುರಿತು ಗ್ರಾಪಂ ಪಿಡಿಒ ಸ್ಪಂದನೆ ನೀಡುತ್ತಿಲ್ಲ ಎಂದು ತಾಲೂಕಿನ ಬಸಲಾಪುರ ಗ್ರಾಮದ ಹನುಮಂತಪ್ಪ ಹುಲ್ಲೂರ ದೂರು ಸಲ್ಲಿಸಿದರು. 2001ರಿಂದ ಇಲ್ಲಿವರೆಗಿನ ಗಣಕೀಕೃತ ಪಹಣಿಪತ್ರ ದೊರೆಯುತ್ತಿಲ್ಲ. ಈ ಕುರಿತು ಪಹಣಿಪತ್ರ ವಿರತಣಾ ಕೇಂದ್ರದಲ್ಲಿ ವಿಚಾರಿಸಿದಲ್ಲಿ, ಇವುಗಳು ನಿಮಗೆ ಲಭ್ಯವಿಲ್ಲ ಎನ್ನುತ್ತಿದ್ದಾರೆ. ಇದರಿಂದ ವಾರಸಾ, ಬ್ಯಾಂಕ್ ಸಾಲ, ಸರ್ಕಾರಿ ಸೌಲಭ್ಯ ಪಡೆಯಲು ತೊಂದರೆಯಾಗಿದೆ ಎಂದು ತಾಲೂಕಿನ ಕುರಹಟ್ಟಿ ಗ್ರಾಮದ ಹನುಮಪ್ಪ ಮಾದರ ಅರ್ಜಿ ಸಲ್ಲಿಸಿದರು. ತಾಲೂಕಿನ ಸೂಡಿ ಗ್ರಾಮದಲ್ಲಿ ಗ್ರಾಪಂ ಪರವಾನಗಿ ಪಡೆದು ಪ್ರಾರಂಭಿಸಲಾದ ಸೇವಾ ಸಹಕಾರಿ ಸಂಘದ ಹಾಲಿನ ಕೇಂದ್ರವನ್ನು ಈಗ ಗ್ರಾಪಂ ಅಧಿಕಾರಿಗಳು ಏಕಾಏಕಿ ಸ್ಥಳಾಂತರ ಮಾಡುವಂತೆ ನೋಟಿಸ್ ನೀಡಿದ್ದಾರೆ. ಒಟ್ಟು 5 ಅರ್ಜಿಗಳು ಬಂದಿದ್ದವು. ಈ ವೇಳೆ ತಹಸೀಲ್ದಾರ್ ಎ.ಜಿ. ಪಂಡಿತ, ಲೋಕಾಯುಕ್ತ ಸಿಬ್ಬಂದಿ ಗೀತಾ ಬಿರಸಲ್, ಎನ್.ಎಸ್. ತಾಯಣ್ಣವರ ಇದ್ದರು.
ಕುಟೀರ ಅಂಗಡಿಗಳನ್ನು, ಕಂಪ್ಯೂಟರ್, ಭಾಗ್ಯ ಜ್ಯೋತಿ ಸಂಪರ್ಕ, ಗ್ಯಾಸ್, ಬಾಂಡೆ ಸಾಮಗ್ರಿ ವಿತರಣೆಗೆ ಫಲಾನುಭವಿಗಳನ್ನು ಆಯ್ಕೆ ಮಾಡಿದರೂ ಸೌಲಭ್ಯಗಳನ್ನು ನೀಡಿಲ್ಲ. ಎಸ್ಸಿ, ಎಸ್ಟಿ ಅನುದಾನದಲ್ಲಿ ಕಾಯ್ದಿರಿಸಿದ ಹಣವನ್ನು ಫಲಾನುಭವಿಗಳಿಗೆ ಸಮರ್ಪಕವಾಗಿ ತಲುಪಿಸುತ್ತಿಲ್ಲ. ಈ ಕುರಿತು ರೋಣ ಪುರಸಭೆ  ಮುಖ್ಯಾಧಿಕಾರಿಯನ್ನು ಸಂಪರ್ಕಿಸಿದ್ದಲ್ಲಿ ಸ್ಪಂದಿಸುತ್ತಿಲ್ಲ.
- ಫಲಾನುಭವಿಗಳು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.