ಗುಲ್ಬರ್ಗಾ

'ಖಾತ್ರಿ' ವೇತನ ಪಾವತಿಗೆ ಒತ್ತಾಯಿಸಿ ಧರಣಿ

Published On :

ಚಿಂಚೋಳಿ: ತಾಲೂಕಿನಲ್ಲಿ 2012-13ನೇ ಸಾಲಿನ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಬದುಕು ನಿರ್ಮಾಣ ಮಾಡಿದ ಕೂಲಿಕಾರರಿಗೆ ವೇತನ ಪಾವತಿಸುವಂತೆ ಒತ್ತಾಯಿಸಿ ಕರ್ನಾಟಕ ಪ್ರಾಂತ ರೈತಸಂಘದ ಮುಖಂಡರು ತಾಲೂಕು ಪಂಚಾಯತಿ ಕಾರ್ಯಾಲಯ ಮುಂದೆ ಧರಣಿ ಸತ್ಯಾಗ್ರಹ ನಡೆಸಿ ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು. ತಾಲೂಕಿನಲ್ಲಿರುವ ಅನೇಕ ಕೂಲಿ ಕಾರ್ಮಿಕರು ಉದ್ಯೋಗಕ್ಕಾಗಿ ವಲಸೆ ಹೋಗುವುದನ್ನು ತಪ್ಪಿಸಲು ಕೇಂದ್ರ ಸರ್ಕಾರ ಖಾತ್ರಿ ಜಾರಿಗೆ ತಂದಿದೆ. ಈ ಯೋಜನೆ ಅಡಿಯಲ್ಲಿ ಅನೇಕ ಬಡ ಕೂಲಿ ಕಾರ್ಮಿಕರಿಗೆ ಕೆಲಸ ನೀಡಿದೇ ಕೆಲವು ಕಡೆ ಯಂತ್ರ (ಜೆಸಿಬಿ)ದ ಮೂಲಕ ಕೆಲಸಗಳನ್ನು ಮಾಡಿ ಅಧಿಕಾರಿಗಳು ಬಿಲ್ ಮಾಡಿ ಯೋಜನೆಯನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆಂದು ಆರೋಪಿಸಿದರು. ಕೂಲಿ ಕಾರ್ಮಿಕರಿಗೆ ಕಳದೆ 9 ತಿಂಗಳಿಂದ ವೇತನ ನೀಡಿಲ್ಲ. ಕೂಡಲೇ ವೇತನ ನೀಡಬೇಕೆಂದು ಮುಖಂಡ ಸಿದ್ದಲಿಂಗಯ್ಯ ಸ್ವಾಮಿ ಎಂಪಳ್ಳಿ ಆಗ್ರಹಿಸಿದರು. ಸಾಲೇಬೀರನಳ್ಳಿ, ಯಂಪಳ್ಳಿ, ಕನಕಪುರ, ಕೆರೋಳಿ, ನಾಗಾಇದಲಾಯಿ, ಕೊಳ್ಳುರ, ಭಂಟನಳ್ಳಿ ಮುಂತಾದ ಗ್ರಾಮಗಳ ಕೂಲಿ ಕಾರ್ಮಿಕರಿಗೆ ಕೂಲಿವೇತನ ನೀಡಬೇಕೆಂದು ಮನವಿ ಪತ್ರವನ್ನು ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಜಗದೇವ ಬೈಗೊಂಡ ಸ್ವೀಕರಿಸಿ ಮಾತನಾಡಿ, ಈ ಬಗ್ಗೆ ಮೇಲಾಧಿಕಾರಿಗಳೊಂದಿಗೆ ಮತ್ತು ಪಂಚಾಯತಿ ಅಭಿವೃದ್ಧಿಅಧಿಕಾರಿಗಳೊಂದಿಗೆ ಚರ್ಚಿಸಿ ಶೀಘ್ರವಾಗಿ ವೇತನ ನೀಡುವ ವ್ಯವಸ್ಥೆ ಮಾಡಲಾಗುವುದೆಂದು ಭರವಸೆ ನೀಡಿದ ನಂತರ ಧರಣಿ ಸತ್ಯಾಗ್ರಹ ವಾಪಸ್ಸು ಪಡೆಯಲಾಯಿತು. ಪ್ರದೀಪ ತಿರಲಾಪುರ, ಶರಣಬಸಪ್ಪ ಮಮಶೆಟ್ಟಿ ಮುಂತಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ನಾಳೆ ಸಿಇಟಿ ತರಬೇತಿ ಉಚಿತ ಶಿಬಿರ
ಗುಲ್ಬರ್ಗ: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನಗರ ಶಾಖೆ ವತಿಯಿಂದ ದ್ವಿತೀಯ ವರ್ಷದ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗಾಗಿ ಏ.2ರಂದು ನಡೆಯಬೇಕಿದ್ದ ಉಚಿತ ಸಿಇಟಿ ತರಬೇತಿ ಶಿಬಿರ ಅನಿವಾರ್ಯ ಕಾರಣಗಳಿಂದ ಏ.4ರಿಂದ ಏ.18ರವರೆಗೆ ನಗರದ ಗುಡ್‌ಲಕ್ ಹೊಟೇಲ್ ಹತ್ತಿರ ಸತ್ಯಂ ಪದವಿ ಪೂರ್ವ ಕಾಲೇಜಿನನಲ್ಲಿ ನಡೆಸಲು ನಿರ್ಧರಿಸಲಾಗಿದೆ. ಬಡ ಹಾಗೂ ಪ್ರತಿಭಾವಂತ ಗ್ರಾಮೀಣ ವಿದ್ಯಾರ್ಥಿಗಳು ಸಿಇಟಿ ಪರೀಕ್ಷೆಗಳನ್ನು ಸಮರ್ಥವಾಗಿ ಎದುರಿಸಲು ಶಿಬಿರ ಹಮ್ಮಿಕೊಳ್ಳಲಾಗಿದೆ. ಜಿಲ್ಲೆಯ ಬಡ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳು ಇದರ ಲಾಭ ಪಡೆದುಕೊಳ್ಳಬೇಕೆಂದು ಸಿಇಟಿ ಸಂಚಾಲಕಿ ರೋಹಿಣಿ ಪಾಟೀಲ್, ನಗರ ಕಾರ್ಯದರ್ಶಿ ಪ್ರವೀಣ ನಾಯಕ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.