ಗುಲ್ಬರ್ಗಾ

ವಿಶ್ವಕಲಾ ದಿನಾಚರಣೆಗೆ ಭರದ ಸಿದ್ಧತೆ

Published On :

ಕನ್ನಡಪ್ರಭ ವಾರ್ತೆ, ಗುಲ್ಬರ್ಗ, ಏ.8
ಇದೇ ಮೊದಲ ಬಾರಿಗೆ ನಗರದ ವಿಟಿಎನ್ ಕ್ರಿಯೇಟಿವ್ ಆರ್ಟ್ ಸ್ಟುಡಿಯೋದಲ್ಲಿ ಏ.14 ಮತ್ತು 15ರಂದು ವಿಶ್ವಕಲಾ ದಿನಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಈ ನಿಮಿತ್ತ ಚಿತ್ರಕಲಾ ಪ್ರದರ್ಶನ ಹಾಗೂ ವಿಚಾರ ಸಂಕಿರಣ ಜರುಲಿದೆ.
  ಭಾನುವಾರ ದಿ ಐಡಿಯಲ್ ಫೈನ್ ಆರ್ಟ್ ಕಾಲೇಜಿನ ಪ್ರಾಂಶುಪಾಲ ಬಸವರಾಜ್ ಜಾನೆ ಅವರು ಸ್ಟುಡಿಯೋಕ್ಕೆ ಭೇಟಿ ನೀಡಿ, ವಿಟಿಎನ್ ಸ್ಟುಡಿಯೋದ ಮುಖ್ಯಸ್ಥ ಹಾಗೂ ಖ್ಯಾತ ಲೋಹ ಶಿಲ್ಪಿ ವಿಶ್ವೇಶ್ವರಯ್ಯ ಟಿ.ಎನ್. ಅವರ ತೈಲವರ್ಣದ ಭಾವಚಿತ್ರ ಪ್ರಾತ್ಯಕ್ಷಿಕೆಯೊಂದನ್ನು ನೆರವೇರಿಸಿದರು.
ಕಲಾ ನೈಪುಣ್ಯತೆ ಮರೆದ ಜಾನೆ: ಮಧ್ಯಾಹ್ನ ಆಕಸ್ಮಿಕವಾಗಿ ಭೇಟಿ ನೀಡಿದ ಜಾನೆಯವರು ಸ್ಟುಡಿಯೋದಲ್ಲಿ ಕುರ್ಚಿ ಮೇಲೆ ಕುಳಿತ ಖ್ಯಾತ ಕಲಾವಿದ ವಿಶ್ವೇಶ್ವರಯ್ಯ ಅವರ ತೈಲವರ್ಣದ ಭಾವಚಿತ್ರವನ್ನು ಕೇವಲ ಒಂದೇ ತಾಸಿನಲ್ಲಿ ಬಿಡಿಸಿ ತಮ್ಮ ಕಲಾನೈಪುಣ್ಯ ಪ್ರದರ್ಶಿಸಿದರು.
  ಬೆಳಗಾವಿಯ ಸುವರ್ಣಸೌಧದ ಅಶೋಕಸ್ತಂಭ ಸೇರಿದಂತೆ ರಾಷ್ಟ್ರಪಿತ ಗಾಂಧಿಯವರು, ಜಗಜ್ಯೋತಿ ಬಸವೇಶ್ವರರು, ಭಾರತರತ್ನ ಡಾ. ಅಂಬೇಡ್ಕರರು, ಛತ್ರಪತಿ ಶಿವಾಜಿ ಮಹಾರಾಜರು, ಸ್ವಾಮಿ ವಿವೇಕಾನಂದರು ಮುಂತಾದ ಮಹಾತ್ಮರ ಪುತ್ಥಳಿಗಳನ್ನು ರಚಿಸಿ ನಾಡಿನೆಲ್ಲೆಡೆ ಚಿರಪರಿಚಿತರಾದ ವಿಶ್ವೇಶ್ವರಯ್ಯನವರ ತೈಲವರ್ಣದ ಭಾವಚಿತ್ರವನ್ನು ಜಾನೆ ಅವರು ತದ್ರೂಪವಾಗಿ ಬಿಡಿಸಿದ್ದನ್ನು ನೋಡಿದ ಅಲ್ಲಿನ ಪ್ರತಿಭಾವಂತ ಕಲಾವಿದರು ಹಾಗೂ ಸಿಬ್ಬಂದಿ ಕಲಾವಿದನ ಕಲಾನೈಪುಣ್ಯಕ್ಕೆ ತಲೆದೂಗಿದರು.
20ಕ್ಕೂ ಹೆಚ್ಚು ಚಿತ್ರಗಳು: ಇದೇ ವೇಳೆ ನಗರದ ವೆಂಕಟೇಶ್ವರ ನಗರದ ನಿವಾಸಿ ಕಲಾವಿದ ಕೃಷ್ಣಪ್ರಕಾಶ್ ಅವರೂ ರೇಖಾ ಚಿತ್ರವೊಂದನ್ನು ಆಕರ್ಷಕವಾಗಿ ಬಿಡಿಸಿ ತೋರಿಸಿದರು. ಚಿತ್ರಕಲಾ ಪ್ರದರ್ಶನದಲ್ಲಿ ಭಾಗವಹಿಸಲು ವಿವಿಧ ಕಲಾವಿದರು ತಮ್ಮ ಪೇಂಟಿಂಗ್ಸ್ನ್ನು ಕಳಿಸಲಾರಂಭಿಸಿದ್ದು, ಇಲ್ಲಿಯವರೆಗೆ ಸುಮಾರು 20 ಚಿತ್ರಕಲೆಗಳು ಸ್ಟುಡಿಯೋದಲ್ಲಿ ಬಂದಿವೆ. ಬಸವರಾಜ್ ಜಾನೆ, ಎಸ್.ಎಂ. ನೀಲಾ ಸೇರಿದಂತೆ ಅನೇಕ ಕಲಾವಿದರ ಕಲಾಕೃತಿಗಳು ಪ್ರದರ್ಶನಕ್ಕಾಗಿ ಸಿದ್ಧಗೊಂಡಿವೆ.
  ಈ ಸಂದರ್ಭದಲ್ಲಿ ರಮೇಶ್, ಫಯೂಮ್, ಜಗ್ಗು, ರುಕ್ಕು, ನಾರಾಯಣ್ ಜೋಷಿ, ಶಿವು, ಚಂದ್ರಕಲಾ, ಶಾಂತಾಬಾಯಿ, ಅನಿತಾ, ಸಂಗೀತಾ, ಈರಮ್ಮಾ, ದುರುಗಮ್ಮ ಮುಂತಾದವರು ಉಪಸ್ಥಿತರಿದ್ದರು.
ಲಿಯೋನಾರ್ಡೋ ಡಾ- ವಿಂಚಿ ಜನ್ಮದಿನ ಪ್ರಯುಕ್ತ: ಮ್ಯಾಕ್ಸಿಕೋದ ಅಂತಾರಾಷ್ಟ್ರೀಯ ಕಲಾವಿದರ ಸಂಘವು ಏ.15ರಂದು ವಿಶ್ವವಿಖ್ಯಾತ ಚಿತ್ರಕಲಾವಿದ ಲಿಯೋನಾರ್ಡೋ ಡಾ- ವಿಂಚಿ ಅವರ ಜನ್ಮದಿನದ ಅಂಗವಾಗಿ ವಿಶ್ವಕಲೆ ದಿನಾಚರಣೆ ಹಮ್ಮಿಕೊಳ್ಳುತ್ತಿದ್ದು, ಈ ನಿಮಿತ್ತ ಚಿತ್ರಕಲಾವಿದ, ಶಿಲ್ಪಕಲಾವಿದ. ಗಣಿತ ತಜ್ಞ- ಸಂಶೋಧಕರಾಗಿರುವ ಲಿಯೋನಾರ್ಡೋ ಡಾ- ವಿಂಚಿ ಅವರ ಸ್ಮರಣಾರ್ಥ ಇದೇ ಮೊದಲ ಬಾರಿಗೆ ವಿಶ್ವಕಲಾ ದಿನಾಚರಣೆಯನ್ನು ಹಮ್ಮಿಕೊಂಡಿದೆ.
  ವಿಟಿಎನ್ ಸ್ಟುಡಿಯೋ ಹಾಗೂ ಇಂಡಿಯನ್ ರಾಯಲ್ ಅಕಾಡೆಮಿ ಆರ್ಟ್ ಮತ್ತು ಸಂಸ್ಕೃತಿ ಸಂಸ್ಥೆಗಳು ಈ ಪ್ರದರ್ಶನಕ್ಕೆ ಸಹಕರಿಸಿವೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.