ಗುಲ್ಬರ್ಗಾ

ಕಡಿಮೆ ಮತದಾನ; ಗ್ರಾಮಗಳ ಆಯ್ಕೆಗೆ ಸಲಹೆ

Published On :

ಕನ್ನಡಪ್ರಭ ವಾರ್ತೆ, ಯಾದಗಿರಿ, ಏ.16
ಜಿಲ್ಲೆಯ ಪ್ರತಿಯೊಂದು ಸರ್ಕಾರೇತರ ಸಂಘ ಸಂಸ್ಥೆಗಳು ಈ ಹಿಂದಿನ ಚುನಾವಣೆಗಳಲ್ಲಿ ಶೇ. 50ಕ್ಕಿಂತ ಕಡಿಮೆ ಮತದಾನವಾಗಿರುವ ತಲಾ 10 ಗ್ರಾಮಗಳನ್ನು ಆಯ್ಕೆ ಮಾಡಿ, ಅಲ್ಲಿ ಮತದಾನದ ಮಹತ್ವದ ಬಗ್ಗೆ ಜಾಗೃತಿ ಮೂಡಿಸಬೇಕು. ಈ ಚುನಾವಣೆಯಲ್ಲಿ ಶೇ.100ರಷ್ಟು ಮತದಾನ ಆಗಿಸುವಲ್ಲಿ ಯಶಸ್ವಿಯಾಗಬೇಕೆಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಪಿ.ರಾಜೇಂದ್ರ ಚೋಳನ್ ಹೇಳಿದರು.
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಮತದಾನದ ಮಹತ್ವದ ಬಗ್ಗೆ ಹಾಗೂ ಸ್ವೀಪ್ ಕಾರ್ಯಚಟುವಟಿಕೆಗಳ ಕುರಿತ ಸಂಘ ಸಂಸ್ಥೆಗಳಿಗೆ ಏರ್ಪಡಿಸಿದ್ದ ಕಾರ್ಯಾಗಾರ ಉದ್ಫಾಟಿಸಿ ಅವರು ಮಾತನಾಡಿದರು.
ಶೇ.100 ಮತದಾನವಾದರೆ ಬಹುಮಾನ: ಕಳೆದ ಬಾರಿ ಶೇ. 50ಕ್ಕಿಂತ ಕಡಿಮೆ ಮತದಾನವಾಗಿರುವ ಪ್ರತಿ ಮತಗಟ್ಟೆಗಳ ಮಟ್ಟದಲ್ಲಿ ಗಮನ ನೀಡಬೇಕು. ಫಲಿತಾಂಶ ಆಧಾರಿತ ಕಾರ್ಯವಾಗಬೇಕು. ಪ್ರತಿಯೊಂದು ಸರ್ಕಾರೇತರ ಸಂಸ್ಥೆಯು 10 ಗ್ರಾಮಗಳನ್ನು ಗುರುತಿಸಿ ಮತದಾನದ ಮಹತ್ವದ ಕುರಿತು ಜಾಗೃತಿ ಮೂಡಿಸಿ ಈ ಬಾರಿ ಅಲ್ಲಿ ಶೇ.100ರಷ್ಟು ಮತದಾನ ಆಗುವಲ್ಲಿ ಯಶಸ್ವಿಗೊಂಡಲ್ಲಿ ಅಂತಹ ಸಂಸ್ಥೆಗಳಿಗೆ ಬಹುಮಾನ ಧನ, ಪ್ರಮಾಣ ಪತ್ರ ನೀಡುವುದರ ಜತೆಗೆ ಚುನಾವಣಾ ಆಯೋಗದ ಗಮನಕ್ಕೂ ಸಹ ತರಲಾಗುವುದು ಎಂದು ಹೇಳಿದರು.
ಸರ್ಕಾರೇತರ ಸಂಘ ಸಂಸ್ಥೆಗಳು ಆರೋಗ್ಯ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ವಿದ್ಯಾರ್ಥಿಗಳ ಸಹಕಾರದೊಂದಿಗೆ ಮನೆಮನೆಗೆ ತೆರಳಿ ಮತದಾನದ ಮಹತ್ವದ ಬಗ್ಗೆ ಜಾಗೃತಿ ಮೂಡಿಸಬೇಕು. ಆರ್ಥಿಕವಾಗಿ, ಸಾಮಾಜಿಕವಾಗಿ ಹಾಗೂ ಇತರೆ ಎಲ್ಲ ಕ್ಷೇತ್ರಗಳಲ್ಲಿ ಈ ಜಿಲ್ಲೆ ಹಿಂದೆ ಇರುವ ಹಿನ್ನೆಲೆಯಲ್ಲಿ ಮತದಾನದ ಮಹತ್ವದ ಬಗ್ಗೆ ಸಾರ್ವಜನಿಕರಲ್ಲಿ, ವಿಶೇಷವಾಗಿ ಯುವ ಜನಾಂಗದಲ್ಲಿ, ಮಹಿಳೆಯರಲ್ಲಿ ಜಾಗೃತಿ ಮೂಡಿಸಿ ಉತ್ತಮ ನಾಯಕತ್ವ ದೊರೆಯಲು ನೆರವಾಗಬೇಕೆಂದು ಸಲಹೆ ನೀಡಿದರು.
ಶಾಂತಿಯುತ, ನ್ಯಾಯಸಮ್ಮತ ಮತದಾನಕ್ಕೆ ನೆರವಾಗಿ: ಮತದಾನ ಮಹತ್ವದ ಕುರಿತು ಜಾಗೃತಿ ಮೂಡಿಸುವಂತಹ ಸಂಸ್ಥೆಗಳಿಗೆ ಜಿಲ್ಲಾಡಳಿತ ವತಿಯಿಂದ ಎಲ್ಲ ಪ್ರಚಾರ ಸಾಮಗ್ರಿ, ಅವಶ್ಯ ಸೌಲಭ್ಯ ಸಹ ನೀಡಲಾಗುತ್ತದೆ. ಅವಶ್ಯವಿದ್ದಲ್ಲಿ ವಾಹನ ಸೌಕರ್ಯ ನೀಡಲಾಗುತ್ತದೆ. ಕಾರಣ ಇಂತಹ ಮಹತ್ವದ ಚಟುವಟಿಕೆ ಕೈಗೊಂಡು ಮತದಾರರು ಮತದಾನ ಮಾಡಲು ಮುಂದೆ ಬರಲು ಪ್ರೋತ್ಸಾಹಿಸಬೇಕು. ಜಿಲ್ಲೆಯಲ್ಲಿ ನ್ಯಾಯಸಮ್ಮತ ಹಾಗೂ ಶಾಂತಿಯುತ ಮತದಾನಕ್ಕೆ ನೆರವು ಆಗಬೇಕೆಂದು ಕರೆ ನೀಡಿದರು.
ಹೈ- ಕ ಪ್ರದೇಶಗಳಾದ ಯಾದಗಿರಿ, ಗುಲ್ಬರ್ಗ, ರಾಯಚೂರು, ಕೊಪ್ಪಳ, ಬೀದರ್, ಬಳ್ಳಾರಿ ಮತ್ತು ಬಿಜಾಪುರ ಜಿಲ್ಲೆಗಳಲ್ಲಿ ಈ ಹಿಂದೆ ಶೇ.50ಕ್ಕೂ ಕಡಿಮೆ ಮತದಾನ ಆಗಿರುವುದನ್ನು ಗಮನಿಸಲಾಗಿದೆ.
ಈ ಹಿನ್ನೆಲೆಯಲ್ಲಿ ಮತದಾರರಲ್ಲಿ ಮತದಾನ ಚಲಾಯಿಸುವ ಕುರಿತ ಜಾಗೃತಿ ಕಾರ್ಯಕ್ರಮಗಳು ತೀವ್ರಗತಿಯಲ್ಲಿ ನಡೆಯುವ ಅವಶ್ಯಕತೆ ಇದೆ. ಸ್ವೀಪ್ ಚಟುವಟಿಕೆಯಡಿ ಮತದಾರರಿಗೆ ಮತದಾನ ಮಹತ್ವದ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಈ ಕಾರ್ಯಾಗಾರ ಏರ್ಪಡಿಸಲಾಗಿದ್ದು, ಈ ಸಂಸ್ಥೆಗಳು ಗ್ರಾಮೀಣ ಹಾಗೂ ನಗರಪ್ರದೇಶಗಳಲ್ಲಿ ಅರಿವು ಮೂಡಿಸುವ ಕೆಲಸ ಮಾಡಬೇಕು ಎಂದರು.
ಅಲಕ್ಷ್ಯ ಬೇಡ: ಉಪನ್ಯಾಸ ನೀಡಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಮಲ್ಲಿಕಾರ್ಜುನ ಮುಕ್ಕಾ, ಮತದಾರರು ನಿರಾಶಾವಾದಿಗಳು, ಅಲಕ್ಷ್ಯವಾದಿಗಳು, ಅರೆ ಮನಸ್ಸಿನವರಾಗದೆ ಯಾವುದೇ ಆಸೆ ಆಮಿಷಗಳಿಗೆ ಒಳಗಾಗದೆ ಮತಚಲಾಯಿಸಬೇಕು. ಈ ಕುರಿತು ವಿವಿಧ ಸಂಘ ಸಂಸ್ಥೆಗಳು ಮತ್ತು ಸರ್ಕಾರಿ ಇಲಾಖೆಗಳು ಸ್ವೀಪ್ ಕಾರ್ಯಕ್ರಮದಡಿ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಹೇಳಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಪಂ ಸಿಇಒ ಹಾಗೂ ಸ್ವೀಪ್ ಸಮಿತಿ ಅಧ್ಯಕ್ಷ ಎಸ್.ಎ. ಜಿಲಾನಿ, ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಇನ್ನಷ್ಟು ಶಕ್ತಿಶಾಲಿಯಾಗಲು ಎಲ್ಲ ನಾಗರಿಕರು ಕಡ್ಡಾಯವಾಗಿ ಮತ ಚಲಾಯಿಸಬೇಕು. ಮಹಿಳೆಯರು ಮತ್ತು ಯುವ ಜನಾಂಗ ಶೇ. 100ರಷ್ಟು ಮತ ಚಲಾಯಿಸಬೇಕಾಗಿದೆ. ಆಗ ಮಾತ್ರ ಒಳ್ಳೆಯ ಅಭ್ಯರ್ಥಿ ಆಯ್ಕೆ ಮಾಡಿ ಒಳ್ಳೆಯ ನಾಯಕತ್ವ ನೀಡಬಹುದಾಗಿದೆ ಎಂದು ಹೇಳಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಸಿದ್ದರಾಜ ತಳವಾರ ಮಾತನಾಡಿದರು. ಕಟ್ಟಡ ಕಾರ್ಮಿಕ ಸಂಘದ ಅಧ್ಯಕ್ಷ ಸೈದಪ್ಪ ಗುತ್ತೇದಾರ, ಸುಧಾ ಕೋರಿ, ಸಿದ್ದಾರೆಡ್ಡಿ ಪಾಟೀಲ, ಸೈಯದ್ ಕಮರುದ್ಧೀನ್ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.