ಗುಲ್ಬರ್ಗಾ

ಗುಳೆ ಮತದಾರರ ಓಲೈಕೆ ಅಪರಾಧ: ಡಿಸಿ

Published On :

ಕನ್ನಡಪ್ರಭ ವಾರ್ತೆ   ಗುಲ್ಬರ್ಗ   ಏ.19
ಯಾವುದೇ ಪಕ್ಷದವರು ಹಾಗೂ ಅಭ್ಯರ್ಥಿಗಳು ವಲಸೆ ಹೋಗಿರುವ ಮತದಾರರನ್ನು ಓಲೈಸಿ ಮತದಾನ ಮಾಡಲು ಬಸ್ಸುಗಳಲ್ಲಿ ಕರೆದುಕೊಂಡು ಬರುವಂತಿಲ್ಲ. ಇದು ಶಿಕ್ಷಾರ್ಹ ಅಪರಾಧ ಎಂದು ಜಿಲ್ಲಾ ಚುನಾವಣಾಧಿಕಾರಿ ಡಾ. ಕೆ.ಜಿ. ಜಗದೀಶ ಹೇಳಿದರು.
ಅವರು ಶುಕ್ರವಾರ ಗುಲ್ಬರ್ಗದಲ್ಲಿ ಚುನಾವಣಾ ಸಾಮಾನ್ಯ ವೀಕ್ಷಕರ ಸಮ್ಮುಖದಲ್ಲಿ ಜರುಗಿದ ರಾಜಕೀಯ ಪಕ್ಷಗಳ ಸಭೆಯಲ್ಲಿ ಕೇಳಲಾದ ವಿವಿಧ ಪ್ರಶ್ನೆಗಳಿಗೆ ಉತ್ತರಿಸಿ ಮಾತನಾಡಿ, ವಲಸೆ ಹೋದ ಮತದಾರರು ಅವರವರ ಖರ್ಚಿನಲ್ಲಿಯೇ ಬಂದು ಮತದಾನ ಮಾಡಬೇಕಾಗುತ್ತದೆ. ಈ ಕುರಿತು ಎಲ್ಲ ಗಡಿ ಭಾಗಗಳಲ್ಲಿ ತೀವ್ರ ನಿಗಾ ಇಡಲಾಗಿದೆ ಎಂದರು.
800 ಜನರ ಬಂಧನ: ಜಿಲ್ಲೆಯಲ್ಲಿ 126 ಗ್ರಾಮಗಳನ್ನು ಸೂಕ್ಷ್ಮವೆಂದು ಗುರುತಿಸಿದ್ದು, ಮತದಾರರಲ್ಲಿ ಭಯದ ವಾತಾವರಣ ಸೃಷ್ಟಿಯುಂಟು ಮಾಡುವವರ ಬಗ್ಗೆ ಉಚಿತ ಕರೆ ದೂರವಾಣಿ 1800 425 0784 ಮತ್ತು 1800 425 0785ಗಳಿಗೆ ದೂರು ನೀಡಬಹುದು.
ಮುಂಜಾಗ್ರತಾ ಕ್ರಮವಾಗಿ ಜಿಲ್ಲಾದ್ಯಂತ 800 ಜನರನ್ನು ಬಂಧಿಸಲಾಗಿದೆ. ಇದಲ್ಲದೆ ಮತದಾರರ ಭಾವಚಿತ್ರವಿರುವ ಗುರುತಿನ ಚೀಟಿಯನ್ನು(ಎಪಿಕ್ ಕಾರ್ಡ್) ಬೆದರಿಸಿ ಪಡೆಯುವುದು ಸಹ ಗಂಭೀರ ಅಪರಾಧ. ಜಿಲ್ಲೆಯಲ್ಲಿ ಶೇ.99.5ರಷ್ಟು ಮತದಾರರಿಗೆ ಗುರುತಿನ ಚೀಟಿ ನೀಡಲಾಗಿದೆ. ಮತದಾನದ ಸಂದರ್ಭದಲ್ಲಿ ಎಪಿಕ್ ಕಾರ್ಡ್ ಇಲ್ಲದಿದ್ದರೂ ಚುನಾವಣಾ ಆಯೋಗ ಸೂಚಿಸಿರುವ 23 ಪರ್ಯಾಯ ದಾಖಲೆ ಕಡ್ಡಾಯ ಎಂದು ತಿಳಿಸಿದರು.
ಜಾಹೀರಾತಿಗೆ ಅನುಮತಿ ಕಡ್ಡಾಯ: ಪತ್ರಿಕೆ ಮತ್ತು ವಿವಿಧ ವಿದ್ಯುನ್ಮಾನ ವಾಹಿನಿಗಳಲ್ಲಿ ಜಾಹೀರಾತು ನೀಡಲು ಹಾಗೂ ಪ್ರಸಾರ ಮಾಡಲು ಕಡ್ಡಾಯವಾಗಿ ನಿಗದಿತ ನಮೂನೆಯಲ್ಲಿ ಅನುಮತಿ ಪಡೆಯಲೇಬೇಕು. ಜಾಹೀರಾತುಗಳಲ್ಲಿ ಯಾವುದೇ ಜಾತಿ, ಧರ್ಮ, ಸೌಹಾರ್ಹತೆಗೆ ಧಕ್ಕೆ ಉಂಟು ಮಾಡುವುದು ಹಾಗೂ ಜಾತಿ ಆಧಾರದ ಮೇಲೆ ಮತ ಯಾಚಿಸುವುದು ಅಪರಾಧ. ಅದೇ ರೀತಿ ಚುನಾವಣೆಯಲ್ಲಿ ಸ್ಪರ್ಧಿಸಿದ ಯಾವುದೇ ಅಭ್ಯರ್ಥಿಯು ಇನ್ನೊಬ್ಬ ಅಭ್ಯರ್ಥಿ ಪರವಾಗಿ ಪ್ರಚಾರ ಮಾಡುವಂತಿಲ್ಲ ಎಂದರು.
ಏಕಗವಾಕ್ಷ ಪದ್ಧತಿಯ ಪ್ರಕಾರ ಬೆಳಗ್ಗೆ 10ರಿಂದ ಮಧ್ಯಾಹ್ನ 3 ಗಂಟೆಯವರೆಗೆ ವಿವಿಧ ಪಕ್ಷಗಳು ಪ್ರಚಾರಕ್ಕಾಗಿ ಕೇಳಲಾಗುವ ವಿವಿಧ ಅನುಮತಿಗಳನ್ನು ಸಂಜೆ 6 ಗಂಟೆಯೊಳಗೆ ನೀಡುವ ವ್ಯವಸ್ಥೆ ಮಾಡಲಾಗಿದೆ. ತಡವಾಗದಂತೆ ಕ್ರಮ ಜರುಗಿಸಲಾಗುವುದು.
15 ನಿಮಿಷದಲ್ಲೇ ತಂಡ: ಮಹಾರಾಷ್ಟ್ರ ರಾಜ್ಯದ ವಾಹನ ಪಡೆಯಲು ಅನುಮತಿ ನೀಡಲು ಬರುವುದಿಲ್ಲ. ಕಳೆದ ವರ್ಷಕ್ಕಿಂತ ಹೆಚ್ಚು ಅಬಕಾರಿ ಮದ್ಯ ಮುಂತಾದ ಮಾದಕ ದ್ರವ್ಯಗಳನ್ನು ಲಿಫ್ಟ್ ಮಾಡಲು ಅನುಮತಿ ನೀಡಲಾಗುವುದಿಲ್ಲ. ಈ ಕುರಿತು ಸಂಶಯಗಳಿದ್ದರೆ ದೂರು ನೀಡಬಹುದು. ಅಕ್ರಮ ಮದ್ಯ ಸಂಗ್ರಹಣೆ, ವಿತರಣೆ ಹಾಗೂ ಮಾರಾಟದ ಬಗ್ಗೆ ಕೂಡಲೇ ಮಾಹಿತಿ ನೀಡಿದರೆ 15 ನಿಮಿಷದಲ್ಲಿ ತಂಡ ಕಳುಹಿಸಲಾಗುವುದು. ಎಲ್ಲ ಅಭ್ಯರ್ಥಿಗಳನ್ನು ಒಂದೇ ರೀತಿ ಪರಿಗಣಿಸಿ ಪಕ್ಷಾತೀತವಾಗಿ ಕ್ರಮ ಜರುಗಿಸಲಾಗುವುದು ಎಂದರು.
ಬ್ಯಾನರ್, ಕರಪತ್ರ ಮುಂತಾದವುಗಳ ಅನುಮತಿ ಪಡೆಯಬೇಕಲ್ಲದೆ ಮುದ್ರಕರ ಹೆಸರು, ಮೊಬೈಲ್ ಸಂಖ್ಯೆ ಕಡ್ಡಾಯವಾಗಿ ಮುದ್ರಿಸಿರಬೇಕು. ಮುದ್ರಿತ ವಿಷಯ ಯಾವುದೇ ಜಾತಿ, ಧರ್ಮ, ಅಭ್ಯರ್ಥಿ ವಿರುದ್ಧ ಇರಬಾರದು.
ಖಾತೆ ಕಡ್ಡಾಯ: ವಿವಿಧ ಪಕ್ಷಗಳ ಕಚೇರಿಗಳಲ್ಲಿ ಇರುವ 20-30 ಪದಾಧಿಕಾರಿಗಳ ಸಾಮೂಹಿಕ ಭೋಜನ ವ್ಯವಸ್ಥೆಗೆ ಯಾವುದೇ ಅಭ್ಯಂತರವಿಲ್ಲ. ಇವರನ್ನು ಹೊರತುಪಡಿಸಿ ಉಳಿದವರನ್ನು ಪಕ್ಷದ ಕಾರ್ಯಕರ್ತರೆಂದು ಪರಿಗಣಿಸುವುದಿಲ್ಲ. ವಿವಾಹ ಮತ್ತು ಮತ್ತಿತರ ಸಮಾರಂಭಗಳ ಮಾಹಿತಿ ನೀಡಬೇಕು. ವಿವಾಹ ಮತ್ತಿತರ ಸಮಾರಂಭಗಳಲ್ಲಿ ಯಾವುದೇ ಪಕ್ಷದ ಬ್ಯಾನರ್, ಪೋಸ್ಟರ್, ಬಾವುಟ ಹಾಕುವಂತಿಲ್ಲ. ಮತ ಯಾಚಿಸುವಂತಿಲ್ಲ. ವಿಶ್ವಸನೀಯ(ಜೆನ್ಯುಇನ್) ವೆಚ್ಚಗಳಿಗಾಗಿ ಏಕಕಾಲದಲ್ಲಿ 50 ಸಾವಿರ ಮಾತ್ರ ಕೊಂಡೊಯ್ಯಲು ಅನುಮತಿ ಇರುತ್ತದೆ. ಚೆಕ್ಗಳ ಮೂಲಕವೇ ಎಲ್ಲ ಹಣ ಪಾವತಿಸಬೇಕು. ಇದಕ್ಕಾಗಿ ಖಾತೆ ತೆರೆಯುವುದು ಕಡ್ಡಾಯ ಎಂದು ಹೇಳಿದರು.
ಸರ್ಕಾರದಿಂದಲೇ ವೋಟರ್ಸ್ ಸ್ಲಿಪ್: ಮತದಾರರ ಮನೆಗಳಿಗೆ 'ವೋಟರ್ಸ್ ಸ್ಲಿಪ್' ತಲುಪಿಸಲಾಗುವುದು. ಪಕ್ಷದವರೂ ಬಿಳಿ ಹಾಳೆಯಲ್ಲಿ ಮತದಾರರಿಗೆ ಚೀಟಿ ನೀಡಬಹುದಾದರೂ ಅದರಲ್ಲಿ ಪಕ್ಷದ ಹಾಗೂ ಅಭ್ಯರ್ಥಿಯ ಚಿತ್ರ ಮತ್ತು ಹೆಸರು ಸೇರಿರಬಾರದು. ಎಲ್ಲ ಮತಗಟ್ಟೆಗಳಲ್ಲಿ ಕುಡಿಯುವ ನೀರು, ನೆರಳಿನ ವ್ಯವಸ್ಥೆ ಹಾಗೂ ಮಹಿಳೆಯರಿಗೆ ಆದ್ಯತೆಯ ಮೇಲೆ ಮತ ಚಲಾವಣೆ ವ್ಯವಸ್ಥೆ ಮಾಡಲಾಗಿದೆ. ಮಜ್ಜಿಗೆ ಪೂರೈಸುವ ಬಗ್ಗೆಯೂ ಚುನಾವಣಾ ಆಯೋಗದ ಅನುಮತಿ ಕೇಳಲಾಗಿದೆ ಎಂದರು.
ಪ್ರಚಾರಕ್ಕಾಗಿ ಆಗಮಿಸುವ ಪ್ರಮುಖ ಪ್ರಚಾರಕರೊಂದಿಗೆ ಸ್ಪರ್ಧಿಸಿದ ಅಭ್ಯರ್ಥಿಗಳು ಹೆಲಿಕಾಪ್ಟರ್ಗಳಲ್ಲಿ ಪ್ರವಾಸ ಮಾಡಿದರೆ ಅರ್ಧ ಖರ್ಚು ಅವರ ಲೆಕ್ಕಕ್ಕೆ ಜಮಾ ಮಾಡಲಾಗುವುದು. ಹಣ, ಆಭರಣ ಇತರ ವಸ್ತುಗಳನ್ನು ಅಗತ್ಯ ದಾಖಲೆಗಳಿಲ್ಲದೆ ಸಾಗಾಟ ಮಾಡಿದರೆ ಚುನಾವಣಾ ಅಪರಾಧ ಪ್ರಕರಣ ದಾಖಲಿಸಲಾಗುವುದು. ಮತಗಟ್ಟೆಗಳ 200 ಮೀಟರ್ ವ್ಯಾಪ್ತಿ ಹೊರಗೆ 2 ತಾತ್ಕಾಲಿಕ ಕಚೇರಿ ತೆರೆಯಬಹುದು. ಒಂದು ಬ್ಯಾನರ್ ಮತ್ತು ಒಂದು ಬಾವುಟ ಮಾತ್ರ ಹಾಕಿರಬೇಕು ಎಂದು ತಿಳಿಸಿದರು. ಅಲ್ಲದೆ ಮುಕ್ತ, ನ್ಯಾಯ ಸಮ್ಮತ ಮತ್ತು ನಿಷ್ಪಕ್ಷಪಾತ ಚುನಾವಣೆ ನಡೆಸಲು ಪಕ್ಷದವರು ಸಹಕರಿಸಬೇಕೆಂದರು.
ಎಲ್ಲ ಚಟುವಟಿಕೆಗಳ ಮೇಲೆ ನಿಗಾ: ಚುನಾವಣೆಯ ಸಾಮಾನ್ಯ ವೀಕ್ಷಕ ಅಶೋಕಕುಮಾರ ಮಲ್ಲಿಕ್ ಮಾತನಾಡಿ, ಬೃಹತ್ ಪ್ರಜಾಪ್ರಭುತ್ವ ಹೊಂದಿದ ಭಾರತದಲ್ಲಿ ಚುನಾವಣೆ ಪ್ರಜಾಪ್ರಭುತ್ವದ ಮಹತ್ತರ ಘಟ್ಟ. ಭಾರತ ಚುನಾವಣಾ ಆಯೋಗವು ಕರ್ನಾಟಕ ವಿಧಾನಸಭಾ ಚುನಾವಣೆ- 2013ರ ಮೈಕ್ರೋ ಲೇವಲ್ದಿಂದ ಮೇಜರ್ ಲೇವಲ್ವರೆಗಿನ ಎಲ್ಲ ಚಟುವಟಿಕೆಗಳ ಮೇಲೆ ನಿಗಾ ಇಟ್ಟಿದೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.