ಗುಲ್ಬರ್ಗಾ

ಸಿಎಂ ಅಭ್ಯರ್ಥಿ ಘೋಷಣೆಯಿಂದ ಬಿಜೆಪಿಗೆ ಬಲ

Published On :

ಕನ್ನಡಪ್ರಭ ವಾರ್ತೆ, ಶಹಾಪುರ, ಏ.23
ಕಳಂಕರಹಿತ ರಾಜಕೀಯ ಮುತ್ಸದ್ಧಿ ಜಗದೀಶ ಶೆಟ್ಟರ್ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಬಿಜೆಪಿ ಘೋಷಣೆ ಮಾಡಿದ ಮೇಲೆ ಉತ್ತರ ಕರ್ನಾಟಕ ಭಾಗದಲ್ಲಿ ಬಿಜೆಪಿಗೆ ಹೆಚ್ಚಿನ ಬಲ ಬಂದಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರಘುನಾಥ ಮಲ್ಕಾಪುರೆ ಹೇಳಿದರು.
ಶಹಾಪುರ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ವೀರಣ್ಣಗೌಡ ಮಲ್ಲಾಬಾದಿ ಅವರ ಪರವಾಗಿ ಪಟ್ಟಣದ ಹಲವು ವಾರ್ಡುಗಳಲ್ಲಿ ಮಂಗಳವಾರ ಬಿಜೆಪಿ ಕಾರ್ಯಕರ್ತರೊಂದಿಗೆ ಮತಯಾಚನೆ ನಡೆಸಿ ನಂತರ ಮಾತನಾಡಿದರು.
ಸಮಸ್ಯೆ ಮಧ್ಯೆಯೂ ಉತ್ತಮ ಆಡಳಿತ:  ಬಿಜೆಪಿ ಹಲವು ಸಮಸ್ಯೆಗಳು, ಪ್ರತಿಪಕ್ಷಗಳು ನೀಡುವ ತೊಂದರೆಗಳನ್ನು ಸಹಿಸಿಕೊಂಡು 5 ವರ್ಷ ಉತ್ತಮ ಆಡಳಿತ ನೀಡಿದ್ದು ಜನತೆ ಮರೆತಿಲ್ಲ ಎಂದರು.
ನಗರಸಭೆಗೆ 30 ಕೋಟಿ, ಪುರಸಭೆಗೆ 10 ಕೋಟಿ, ಪಟ್ಟಣ ಪಂಚಾಯಿತಿಗೆ ತಲಾ 5 ಕೋಟಿ ಅನುದಾನವನ್ನು ನೇರವಾಗಿ ನೀಡುವ ಮೂಲಕ ಅಭಿವೃದ್ಧಿಗೆ ಬಿಜೆಪಿ ಸರ್ಕಾರ ಆದ್ಯತೆ ನೀಡಿದೆ. ಕಾಂಗ್ರೆಸ್ ನಿರ್ಲಕ್ಷ್ಯ ಮಾಡಿದ್ದ ನಂಜುಂಡಪ್ಪ ಆಯೋಗದ ವರದಿಯನ್ನು ಪುರಸ್ಕರಿಸಿ ಸಾಕಷ್ಟು ಅನುದಾನ ನೀಡಿದ್ದು ಹೈ ಕ 371 ಕಲಂ ತಿದ್ದುಪಡಿ ಅನುಷ್ಠಾನಕ್ಕೆ ಒಕ್ಕೊರಲಾಗಿ ಕೇಂದ್ರದ ಮೇಲೆ ಒತ್ತಡ ಹೇರಿದ್ದು ಬಿಜೆಪಿ ಸಾಧನೆಯಾಗಿದೆ ಎಂದರು.
ಕೆಜೆಪಿ ಅತೃಪ್ತರ ಒಕ್ಕೂಟ: ಕೇಂದ್ರದಲ್ಲಿ ಆಡಳಿತ ನಡೆಸುವ ಯುಪಿಎ ಸರ್ಕಾರದ ಭ್ರಷ್ಟಾಚಾರ ಮತ್ತು ಭಯೋತ್ಪಾದನೆ ದಮನಗೊಳಿಸುವಲ್ಲಿ ವಿಫಲವಾಗಿದೆ. ಕೆಜೆಪಿ ಎಂಬುದು ಅತೃಪ್ತರ ಒಕ್ಕೂಟವಾಗಿದೆ. ಅಧಿಕಾರ ಸಿಗಲಿಲ್ಲವೆಂದು ಯಡಿಯೂರಪ್ಪನವರು ಬಿಜೆಪಿ ಮೇಲೆ ಸೇಡು ತೀರಿಸಿಕೊಳ್ಳಲು ಕೆಜೆಪಿ ಸ್ಥಾಪಿಸಿದ್ದು, ಅದು ಜನಹಿತವಾದ ಪಕ್ಷವೇ ಅಲ್ಲ. ಇದರಿಂದ ಯಾವುದೇ ಪ್ರಯೋಜನವಿಲ್ಲ. ಆದ್ದರಿಂದ ಈ ಬಾರಿ ಶಹಾಪುರ ಮತಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಮಲ್ಲಾಬಾದಿ ವೀರಣ್ಣಗೌಡರನ್ನು ಗೆಲ್ಲಿಸುವಂತೆ ಮತದಾರರಲ್ಲಿ ಮನವಿ ಮಾಡಿದರು. ಯಲ್ಲಯ ನಾಯಕ ವನದುರ್ಗ, ಗುರುರಾಜ ಕಾಮಾ, ಮಲ್ಲಕಾರ್ಜುನ ಚಿಲ್ಲಾಳ, ಮಂಜುನಾಥ ಗಂಗಾಧರಮಠ, ಅಶೋಕ ಮಲ್ಲಾಬಾದಿ, ದೇವು ಕೋನೇರ, ಶಾಂತವೀರ ಪಾಟೀಲ, ಭೀಮರಾಯ ಜಂಗಳಿ, ಬಸವರಾಜ ಅರುಣಿ, ಮಲ್ಲಿಕಾರ್ಜುನ ಅಂಗಡಿ, ಮಲ್ಲು, ಅಂಬಣ್ಣ, ಶಂಕ್ರಣ್ಣ, ಮೌನೇಶ, ರಾಘು ಇತರರು ಇದ್ದರು.

'ಸೇವೆ ಮಾಡಲು ಅವಕಾಶ ನೀಡಿ'
ಯಾದಗಿರಿ: ಕಳೆದ 5 ವರ್ಷಗಳಿಂದ ಶಾಸಕರಾಗಿ ಅಧಿಕಾರ ನಡೆಸಿದವರು ಅಭಿವೃದ್ಧಿಯನ್ನು ಮರೆತಿದ್ದಾರೆ. ಬಿಜೆಪಿ ನಾಯಕರು ನನ್ನನ್ನು ಗುರುತಿಸಿ ಯಾದಗಿರಿ ಮತಕ್ಷೇತ್ರದಲ್ಲಿ ಸೇವೆ ಮಾಡಲು ಅವಕಾಶ ಕಲ್ಪಿಸಿಕೊಟ್ಟಿದ್ದು, ಮತದಾರರು ಬಿಜೆಪಿಯನ್ನು ಬೆಂಬಲಿಸುವಂತೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಚಂದ್ರಶೇಖರ ಮಾಗನೂರ ಮನವಿ ಮಾಡಿದರು.
ಅವರು ಕ್ಷೇತ್ರದ ಬಿದರಾಣಿ ಗ್ರಾಮದಲ್ಲಿ ಬಿಜೆಪಿ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿ, ಯಾದಗಿರಿ ಮತಕ್ಷೇತ್ರ ಪ್ರಮುಖವಾಗಿ ಮೂಲ ಸೌಕರ್ಯಗಳ ಕೊರತೆ ಅನುಭವಿಸುತ್ತಿದೆ. ಕ್ಷೇತ್ರದಲ್ಲಿ ಕುಡಿವ ನೀರು, ರಸ್ತೆ ಮತ್ತು ಕೃಷ್ಣಾ ಕಾಲುವೆ ಕೊನೆಯಂಚಿನ ರೈತರಿಗೆ ನಾರಾಯಣಪುರದ ಜಲಾಶಯದ ನೀರು ತಲುಪುತ್ತಿಲ್ಲ. ಇದರಿಂದ ರೈತರು ಪ್ರತಿ ವರ್ಷ ಸಮಸ್ಯೆಯಲ್ಲಿಯೇ ನರಳಾಡುತ್ತಿದ್ದು, ಶಾಸಕರೆನಿಸಿಕೊಂಡವರು ಇತ್ತ ತಿರುಗಿ ನೋಡುತ್ತಿಲ್ಲ. ಅಧಿಕಾರ ಇದ್ದಾಗ ಜನರನ್ನು ಮರೆತವರು ಈಗ ಮತ ಕೇಳಲು ಬರುತ್ತಿರುವುದು ನಾಚಿಕೆಗೇಡಿನ ಸಂಗತಿ. ಅದಕ್ಕಾಗಿ ಈ ಬಾರಿ ಬಿಜೆಪಿಯನ್ನು ಬೆಂಬಲಿಸಿ. ನಾನು ಶಾಸಕನಾದರೆ ಈ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸುವುದಾಗಿ ಭರವಸೆ ನೀಡಿದರು.
ಈಗಾಗಲೇ ಕ್ಷೇತ್ರಾದ್ಯಂತ ಬಿಜೆಪಿಗೆ ವ್ಯಾಪಕ ಬೆಂಬಲ ವ್ಯಕ್ತವಾಗಿದ್ದು, ವಿವಿಧ ಪಕ್ಷಗಳ ಕಾರ್ಯಕರ್ತರು ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದಾರೆ. ಆದ್ದರಿಂದ ಬಿಜೆಪಿಗೆ ಆನೆಬಲ ಬಂದಂತಾಗಿದೆ ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಬೆಂಡೆಬೆಂಬಳಿ ಗ್ರಾಮದ ವೆಂಕಟರಡ್ಡಿ ಪೊಲೀಸ್ ಪಾಟೀಲ್ ಜೆಡಿಎಸ್ ತೊರೆದು ಬಿಜೆಪಿ ಸೇರ್ಪಡೆಯಾದರು.

ಉತ್ತಮರಿಗೆ ಮತ ನೀಡಿ
ಗುರುಮಠಕಲ್: ಚುನಾವಣೆಯಲ್ಲಿ ಗೆದ್ದು ಕ್ಷೇತ್ರಕ್ಕಾಗಿ ದುಡಿಯದೆ ಬರೀ ಮೋಜಿನಲ್ಲಿ ಕಾಲ ಕಳೆಯುವ ನಾಯಕರಿಗೆ ಈ ಬಾರಿ ತಕ್ಕ ಪಾಠ ಕಲಿಸಿ. ಕ್ಷೇತ್ರದ ಜನರ ಆಶೋತ್ತರಗಳಿಗೆ ಸ್ಪಂದಿಸುವ ವ್ಯಕ್ತಿಗೆ ಮತ ನೀಡಿ ಎಂದು ಬಿಜೆಪಿ ಅಭ್ಯರ್ಥಿ ಗಿರೀಶ್ ಮಟ್ಟಣ್ನವರ್ ಕರೆ ನೀಡಿದರು.
ಗುರುಮಠಕಲ್ ಮತಕ್ಷೇತ್ರ ವ್ಯಾಪ್ತಿಯ ಧರಂಪುರ, ಆಶನಾಳ, ನಾಗರಬಂಡ ತಾಂಡಾ, ಸಾವೂರು, ಹೆಗ್ಗಣಗೇರಾ, ಲಿಂಗೇರಿ ಸ್ಟೇಷನ್, ಸೈದಾಪುರ, ನೀಲಹಳ್ಳಿ, ಸೌರಾಷ್ಟ್ರಹಳ್ಳಿ ಗ್ರಾಮಗಳಲ್ಲಿ ಮತ ಯಾಚಿಸಿ, ಮಾತನಾಡಿದರು.
ಈ ಹಿಂದೆ ಕ್ಷೇತ್ರದಿಂದ ಆಯ್ಕೆಯಾಗಿ ಹೋದ ಪ್ರತಿನಿಧಿಗಳು ಇಲ್ಲಿಯ ಜನರ ಸಮಸ್ಯೆಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದ್ದಾರೆ. ಕಳಪೆ ಕಾಮಗಾರಿಗಳನ್ನು ಮಾಡಿ ಹಣ ಎತ್ತಿದ್ದಾರೆ. ಕ್ಷೇತ್ರದ ಹಾಲಿ ಶಾಸಕ ಬಾಬುರಾವ್ ಚಿಂಚನಸೂರ್ ಬರೀ ಸುಳ್ಳು ಆಶ್ವಾಸನೆಗಳನ್ನು ಕೊಡುತ್ತಿದ್ದಾರೆ. ಇಷ್ಟು ದಿನ ಗುಳೆ ಕಾರ್ಮಿಕರ ಬಗ್ಗೆ ಚಕಾರ ಎತ್ತದ ಶಾಸಕರು ಈಗ ಕಡೇಚೂರು ಭಾಗದಲ್ಲಿ ದೊಡ್ಡ ಕಾರ್ಖಾನೆಗಳನ್ನು ಆರಂಭಿಸಲು ಪ್ರಯತ್ನಿಸುತ್ತಿದೇನೆ ಎಂದು ಸುಳ್ಳು ಹೇಳುತ್ತಿದ್ದಾರೆ ಎಂದು ಕಿಡಿ ಕಾರಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.