ಸರ್ಕಾರದ ಕೊಡುಗೆಗೆ ನನ್ನದು ಎನ್ನಲ್ಲ
ಕ.ಪ್ರ. ವಾರ್ತೆ ಯಾದಗಿರಿ ಏ.27
ಕಳೆದ ಐದು ವರ್ಷಗಳಲ್ಲಿ ಬಿಜೆಪಿ ಸರ್ಕಾರ ಅನೇಕ ಜನಪರ ಯೋಜನೆಗಳನ್ನು ಜಾರಿಗೆ ತಂದಿದೆ. ಅವೆಲ್ಲವೂ ಬಿಜೆಪಿ ಸರ್ಕಾರದ ಕೊಡುಗೆಯೇ ಹೊರತು ಒಬ್ಬ ವ್ಯಕ್ತಿಯ ಸಾಧನೆಗಳಲ್ಲ ಎಂದು ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಹೇಳಿದರು.
ನಗರದ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಶನಿವಾರ ಬಿಜೆಪಿ ಹಮ್ಮಿಕೊಂಡಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿ, ನಾನು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದಾಗಿನಿಂದ ಇಲ್ಲಿಯವರೆಗೆ ಅನೇಕ ಜನಪರ ಯೋಜನೆಗಳನ್ನು ಜಾರಿಗೊಳಿಸಿದ್ದೇನೆ. ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ರಾಜ್ಯದಲ್ಲಿ ಅಭಿವೃದ್ಧಿಯ ಹೊಳೆಯನ್ನೇ ಹರಿಸಿದೆ ಎಂದರು.
ಅಭಿವೃದ್ಧಿ ಕಾರ್ಯ ಸರ್ಕಾರ ಮಾಡಿದ್ದು..: ರಾಜ್ಯ ಬರಗಾಲದಿಂದ ತತ್ತರಿಸಿದಾಗ ರೈತಾಪಿ ವರ್ಗದ 25 ಸಾವಿರ ಸಾಲ ಮನ್ನಾ ಮಾಡಲಾಗಿದೆ. ಆಗ ನಾನು ಸಿಎಂ ಆಗಿ ಕೇವಲ 8 ದಿನವಾಗಿತ್ತು. ಆ ಮೂಲಕ ರೈತರ ಕಷ್ಟಕ್ಕೆ ಸ್ಪಂದಿಸಿದ್ದೇನೆ. ಆದರೆ ಇದೆಲ್ಲವನ್ನು ಮಾಡಿದ್ದು ಶೆಟ್ಟರ್ ಅಲ್ಲ. ಬಿಜೆಪಿ ಸರ್ಕಾರ ಎಂದು ಮಾರ್ಮಿಕವಾಗಿ ನುಡಿದರು.
ಯಾದಗಿರಿಯನ್ನು ಜಿಲ್ಲಾ ಕೇಂದ್ರವನ್ನಾಗಿ ಘೋಷಣೆ ಮಾಡಿದ್ದು ಬಿಜೆಪಿ ಸರ್ಕಾರವೇ ಹೊರತು ಯಾವೊಬ್ಬ ವ್ಯಕ್ತಿಯಲ್ಲ ಎಂದು ಪರೋಕ್ಷವಾಗಿ ಯಡಿಯೂರಪ್ಪನವರನ್ನು ಟೀಕಿಸಿದ ಶೆಟ್ಟರ್, ಯಾವುದೇ ಯೋಜನೆ ಜಾರಿಗೆ ಸಚಿವ ಸಂಪುಟದ ಒಪ್ಪಿಗೆ, ಎಲ್ಲ ಶಾಸಕರ ಸಹಕಾರ ಕಾರಣವಾಗಿರುತ್ತದೆ. ಈ ಬಾರಿ ಬಜೆಟ್ನಲ್ಲಿ 43 ಹೊಸ ತಾಲೂಕು ಘೋಷಣೆ ಮಾಡಲಾಗಿದ್ದು, ಅವುಗಳಲ್ಲಿ ಯಾದಗಿರಿ ಜಿಲ್ಲೆಯ 3 ತಾಲೂಕುಗಳು ಸೇರಿವೆ. ಇದು ಬಿಜೆಪಿ ಸರ್ಕಾರದ ಕೊಡುಗೆ. ಆದರೆ ಬಿಎಸ್ವೈ ಅವರು ಸಿಎಂ ಆಗಿದ್ದಾಗ ಆರಂಭಿಸಿದ ಎಲ್ಲ ಯೋಜನೆಗಳು ನನ್ನದು ಎಂದು ಯಡಿಯೂರಪ್ಪ ಹೇಳಿಕೊಂಡು ತಿರುಗುತ್ತಿರುವುದು ಸರಿಯಲ್ಲ ಎಂದು ಟೀಕಿಸಿದರು.
ಬಿಜೆಪಿಗೆ ಬಹುಮತ: ಸುಮಾರು 40 ವರ್ಷ ರಾಜ್ಯದಲ್ಲಿ ಆಡಳಿತ ನಡೆಸಿದ ಕಾಂಗ್ರೆಸ್ ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸಿಲ್ಲ. ಆದರೆ, ಬಿಜೆಪಿಯ 5 ವರ್ಷಗಳ ಅಧಿಕಾರಾವಧಿಯಲ್ಲಿ ಹೈ-ಕ ಪ್ರದೇಶದಲ್ಲಿ 23 ನೀರಾವರಿ ಯೋಜನೆಗಳನ್ನು ಮಂಜೂರು ಮಾಡಿದೆ. ಡಾ. ನಂಜುಡಪ್ಪ ವರದಿ ಅನುಷ್ಠಾನ ಬಿಜೆಪಿ ಸರ್ಕಾರ ಬಂದ ಮೇಲೆ ಸಮರ್ಪಕವಾಗಿ ಅನುಷ್ಠಾನಗೊಂಡಿದೆ. ವರದಿಯಲ್ಲಿ ತಿಳಿಸಿರುವಂತೆ 10 ಸಾವಿರ ಕೋಟಿಯನ್ನು ಹೈ-ಕ ಭಾಗದ ಹಿಂದುಳಿದ ತಾಲೂಕುಗಳ ಅಭಿವೃದ್ಧಿಗೆ ಬಳಸಲಾಗಿದೆ. ಆದ್ದರಿಂದ ಈ ಬಾರಿಯೂ ಬಿಜೆಪಿ ಬಹುಮತದಿಂದ ಆಯ್ಕೆಯಾಗುವುದು ಖಚಿತ ಎಂದು ಹೇಳಿದರು.
ನಿವೃತ್ತಿಗೊಳಿಸಿ: ಬಿಜೆಪಿ ಎಲ್ಲ ಕ್ಷೇತ್ರಗಳಲ್ಲಿ ಹೊಸ ಮುಖಗಳನ್ನು ಪರಿಚಯಿಸುತ್ತಿದೆ. ಕ್ಷೇತ್ರದಿಂದ ಯುವಕ ಚಂದ್ರಶೇಖರ ಮಾಗನೂರ ಅವರು ಸ್ಪರ್ಧಿಸಿದ್ದಾರೆ. ಈಗ ಬದಲಾವಣೆಯ ಕಾಲ ಬಂದಿದೆ. ಕ್ಷೇತ್ರದ ಶಾಸಕರಾಗಿರುವ ಕಾಂಗ್ರೆಸ್ನ ಮಾಲಕರೆಡ್ಡಿಯವರಿಗೆ ವಯಸ್ಸಾಗಿದೆ. ರಾಜಕೀಯದಿಂದ ಅವರೇ ನಿವೃತ್ತರಾಗಬೇಕಿತ್ತು. ಇಲ್ಲದಿದ್ದರೆ ಆ ಕೆಲಸವನ್ನು ಮತದಾರರೇ ಮಾಡಬೇಕು. ಕೇವಲ 2 ಕುಟುಂಬಗಳಿಗೆ ಯಾದಗಿರಿಯನ್ನು ಒತ್ತೆ ಇಟ್ಟಿಲ್ಲ. ಆದ್ದರಿಂದ ಈ ಬಾರಿ ಬಿಜೆಪಿಗೆ ಮತ ನೀಡುವ ಮೂಲಕ ಮಾಗನೂರ ಅವರನ್ನು ಗೆಲ್ಲಿಸಿ ಎಂದು ಶೆಟ್ಟರ್ ಮನವಿ ಮಾಡಿದರು. ಅಭ್ಯರ್ಥಿ ಚಂದ್ರಶೇಖರ ಮಾಗನೂರ ಮಾತನಾಡಿ, ಮತಕ್ಷೇತ್ರದಲ್ಲಿ ಬಿಜೆಪಿ ಅಲೆ ಇದೆ. ಈಗಾಗಲೇ 125ಕ್ಕೂ ಹೆಚ್ಚು ಗ್ರಾಮಗಳಿಗೆ ಭೇಟಿ ನೀಡಿದ್ದೇನೆ. ಆದರೆ ಹಾಲಿ ಶಾಸಕರು ಇದುವರೆಗೆ ಆ ಗ್ರಾಮಗಳಿಗೆ ಭೇಟಿ ನೀಡದವರು ಚುನಾವಣಾ ಸಂದರ್ಭದಲ್ಲಿ ಮತ್ತೆ ಹೋಗುತ್ತಿದ್ದಾರೆ. ಇದರಿಂದ ಮತದಾರರು ಬಿಜೆಪಿಯತ್ತ ಒಲವು ವ್ಯಕ್ತಪಡಿಸುತ್ತಿದ್ದು, ನನ್ನ ಗೆಲವು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಗುರುಮಠಕಲ್ ಕ್ಷೇತ್ರದ ಅಭ್ಯರ್ಥಿ ಗುರೀಶ ಮಟ್ಟಣ್ಣವರ, ಎಚ್ಕೆಡಿಬಿ ಅಧ್ಯಕ್ಷ ಮಹಾಂತಗೌಡ ಪಾಟೀಲ್, ಬಿ.ಜಯಾಚಾರ್ಯ, ಬದ್ರಿನಾರಾಯಣ ಭಟ್ಟಡ್, ಸುನೀಲ್ ಗಾಂಧಿ, ನೀಲಕಂಠರಾಯ ಯಲ್ಹೇರಿ, ದೇವಿಂದ್ರನಾಥ ನಾದ್, ದೇವರಾಜ ನಾಯಕ, ಬಸವರಾಜ ಖಂಡ್ರೆ ಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

