ಗುಲ್ಬರ್ಗಾ

ಮತ ಹೈರಾಣ

Published On :

ಕನ್ನಡಪ್ರಭ ವಾರ್ತೆ, ಗುಲ್ಬರ್ಗ, ಏ.28
ವಿಧಾನಸಭಾ ಚುನಾವಣೆಯಲ್ಲಿ ಕರ್ತವ್ಯ ನಿರತರಾದ ಸಿಬ್ಬಂದಿಗೆ ಗುಲ್ಬರ್ಗ ನಗರ ಹಾಗೂ ಜಿಲ್ಲೆಯ ತಾಲೂಕು ಕೇಂದ್ರಗಳಲ್ಲಿ ಭಾನುವಾರ ವ್ಯವಸ್ಥೆಗೊಳಿಸಿದ್ದ ಅಂಚೆ ಮತಪತ್ರ ಚಲಾವಣೆಯಲ್ಲಿ ತೀವ್ರ ಅವ್ಯವಸ್ಥೆ ಕಂಡು ಬಂತು. ಇದರಿಂದಾಗಿ ಸರ್ಕಾರಿ ನೌಕರರು ತಮ್ಮ ಮತದಾನಕ್ಕೂ ಬಿಸಿಲಲ್ಲಿ ಪರದಾಡುವಂತಾಯ್ತು.
ಮತಪಟ್ಟಿಯಲ್ಲಿ ಹೆಸರಿದ್ದವರಿಗೆ ಮತಪತ್ರ ದೊರಕಲಿಲ್ಲ. ಮತಪತ್ರ ಸಿಕ್ಕವರಿಗೆ ಹೆಸರೇ ಪಟ್ಟಿಯಲ್ಲಿ ಇರಲಿಲ್ಲ. ಇಂತಹ ಒಂದೆರಡಲ್ಲ, ಸಾವಿರಾರು ನಿದರ್ಶನಗಳು ಮತ ಚಲಾವಣೆ ವೇಳೆ ಕಂಡುಬಂದವು. ಇದರಿಂದ ರೋಸಿ ಹೋದ ಸಿಬ್ಬಂದಿ ಇಡೀ ದಿನ ಸರತಿಯಲ್ಲಿ ನಿಂತು ಮತ ಹಾಕದೆ ಮನೆಗೆ ಮರಳಬೇಕಾಯ್ತು.
ಸಿಬ್ಬಂದಿ ಕೋಪತಾಪ: ಚುನಾವಣೆಯಲ್ಲಿ ಕರ್ತವ್ಯನಿರತ ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿರುವ ಸ್ಥಳಗಳಲ್ಲೇ ಬೆಳಗ್ಗೆ 9ರಿಂದ ಸಂಜೆ 4ರವರೆಗೆ ಅಂಚೆ ಮತಪತ್ರ ಚಲಾಯಿಸಲು ಭಾನುವಾರ ನಗರದ ಎನ್.ವಿ. ಪದವಿ ಕಾಲೇಜಿನಲ್ಲಿ ಗುಲ್ಬರ್ಗ ದಕ್ಷಿಣ ಮತ್ತು ಉತ್ತರ ಕ್ಷೇತ್ರ ವ್ಯಾಪ್ತಿ ಮತ್ತು ಗುಲ್ಬರ್ಗ ಗ್ರಾಮೀಣ ಕ್ಷೇತ್ರದ ಮತಗಟ್ಟೆ ವ್ಯವಸ್ಥೆಯನ್ನು ನಗರದ ಸರ್ಕಾರಿ ಎಂಪಿಎಚ್‌ಎಸ್‌ನಲ್ಲಿ ಮಾಡಲಾಗಿತ್ತು.
ಅದರಂತೆ ಚುನಾವಣೆ ಕರ್ತವ್ಯನಿರತ ಸಿಬ್ಬಂದಿ ಬೆಳಗ್ಗೆಯೇ ಮತಗಟ್ಟೆಗಳಿಗೆ ಆಗಮಿಸಿದ್ದರು. ಉತ್ತರ ಮತ್ತು ದಕ್ಷಿಣ ಕ್ಷೇತ್ರ ವ್ಯಾಪ್ತಿಯ ಸುಮಾರು 10 ಸಾವಿರ ಸಿಬ್ಬಂದಿಗೆ ತಲಾ ಒಂದು ಮತಗಟ್ಟೆ ಮಾತ್ರ ವ್ಯವಸ್ಥೆ ಮಾಡಿದ್ದರಿಂದ ಮತಪತ್ರ ಚಲಾವಣೆಗೆ ತೀವ್ರ ತೊಂದರೆಯಾಯಿತು.
ಚುನಾವಣಾ ಗುರುತಿನ ಚೀಟಿ ಸಂಖ್ಯೆ ಗಣಕಯಂತ್ರದಲ್ಲಿ ತೋರಿಸುತ್ತಿಲ್ಲ, ನಿಮ್ಮ ಹೆಸರು ನಗರದ ಸರ್ಕಾರಿ ಎಂಪಿಎಚ್‌ಎಸ್ ಕೇಂದ್ರದಲ್ಲಿ ಬರಬಹುದು ಅಲ್ಲಿಗೆ ಹೋಗಿ ಎಂದು ಕಾರ್ಯನಿರತರು ಹೇಳಿರುವುದರಿಂದ ಸಾವಿರಾರು ಸಿಬ್ಬಂದಿ ಎರಡೂ ಕೇಂದ್ರಗಳಿಗೆ ಪರದಾಡಬೇಕಾಯ್ತು ಮತ್ತು ಬ್ಯಾಲೆಟ್ ಪೇಪರ್‌ಗಳ ಅಭಾವದಿಂದ ಸಿಬ್ಬಂದಿ ಬಿಸಿಲಲ್ಲಿ ತೊಂದರೆ ಅನುಭವಿಸಬೇಕಾಗಿತ್ತು.
ಅಮಾನತು ಎಚ್ಚರಿಕೆ: ಈ ಅವ್ಯವಸ್ಥೆಯಿಂದ ಕೆಲವು ಸಿಬ್ಬಂದಿ ಆಕ್ರೋಶಗೊಂಡು ಜಿಲ್ಲಾಡಳಿತ ಮತ್ತು ಮಹಾನಗರ ಪಾಲಿಕೆ ಆಯುಕ್ತರ ವಿರುದ್ಧ ಘೋಷಣೆ ಕೂಗಿದರು. ಈ ವೇಳೆ ಸ್ಥಳದಲ್ಲಿದ್ದ ಜಿಪಂ ಮುಖ್ಯಾಧಿಕಾರಿ ಮತ್ತು ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷೆ ಪಲ್ಲವಿ ಆಕುರಾತಿ ಅವರು ವಾಗ್ವಾದಕ್ಕಿಳಿದ ಸಿಬ್ಬಂದಿಗೆ ಅಮಾನತುಗೊಳಿಸುವುದಾಗಿ ಎಚ್ಚರಿಸಿದ ಪ್ರಸಂಗವೂ ಸಹ ನಡೆಯಿತು.
ಸಿಬ್ಬಂದಿ ಪರದಾಟ ಮತ್ತು ಅವ್ಯವಸ್ಥೆಯನ್ನು ಗಮನಿಸಿದ ಪಲ್ಲವಿ ಅವರು, ಅಂಚೆ ಮತಪತ್ರ ಚಲಾವಣೆ ವ್ಯವಸ್ಥೆಯನ್ನು ಮೇ 3ರವರೆಗೆ ನಗರದ ಡಾ. ಎಸ್.ಎಂ. ಪಂಡಿತ ರಂಗಮಂದಿರದಲ್ಲಿ ಮಾಡಲಾಗುವುದು. ಎಲ್ಲ ಸಿಬ್ಬಂದಿ ಅಲ್ಲಿಯೇ ಹೋಗಿ ಮತಪತ್ರ ಚಲಾವಣೆ ಮಾಡಬೇಕೆಂದು ಹೇಳಿದಾಗ ಮತಚಲಾವಣೆಗೆ ಬಂದ ಸಾವಿರಾರು ಸಿಬ್ಬಂದಿ ನಿಟ್ಟಿಸಿರು ಬಿಟ್ಟು ಮರಳಿ ಹೋದರು.
ಮತಹಾಕಲಾಗಲಿಲ್ಲ: ಜಿಲ್ಲಾಧಿಕಾರಿಯೂ ಆಗಿರುವ ಜಿಲ್ಲಾ ಚುನಾವಣಾಧಿಕಾರಿ ಡಾ. ಜಗದೀಶ ಹೇಳಿಕೆಗಳಲ್ಲಿ ಅಂಚೆ ಮತದಾನ ತುಂಬ ಕಟ್ಟುನಿಟ್ಟು ಹಾಗೂ ಶಿಸ್ತಿನಿಂದ ಕೂಡಿರುವಂತೆ ಮಾಡುವ ಭರವಸೆ ನೀಡಿದ್ದರು. ಇದನ್ನು ನಂಬಿ ನೌಕರರು ಸರತಿಯಲ್ಲಿ ಇಡೀ ದಿನ ನಿಂತರೂ ಮತದಾನಕ್ಕೆ ಮುಹೂರ್ತ ಕೂಡಿಬರಲಿಲ್ಲ.
ಇಡೀ ದಿನದಲ್ಲಿ ಮತದಾನವಾಗಿದ್ದು ಕೇವಲ 45ರಿಂದ 60. ಹೀಗಿದ್ದಾಗ ಸಾವಿರಾರು ಜನ ಸರತಿಯಲ್ಲಿ ಬಂದರೂ ಮತದಾನಕ್ಕೆ ಅವಕಾಶ ದೊರಕೀತಾದರೂ ಹೇಗೆ ಎಂದು ಮತದಾನಕ್ಕೆ ಬಿಸಿಲಲ್ಲಿ ಸರದಿಯಲ್ಲಿ ನಿಂತಿದ್ದ ನೌಕರರೊಬ್ಬರು ಸ್ಥಳಕ್ಕೆ ಭೇಟಿ ನೀಡಿದ್ದ 'ಕನ್ನಡಪ್ರಭ'ದೊಂದಿಗೆ ಆಕ್ರೋಶ ವ್ಯಕ್ತಪಡಿಸಿದರು. ಅಂಚೆ ಮತಪತ್ರದಲ್ಲಿ ಸುಧಾರಣೆ ತರುವ ಜಿಲ್ಲಾಡಳಿತದ ಕ್ರಮ ನಿರೀಕ್ಷೆಯಂತೆ ಯಶ ಕಾಣದೆ ಎಡವಿದ್ದಕ್ಕೆ ಭಾನುವಾರದ ಈ ಬೆಳವಣಿಗೆ ಕನ್ನಡಿಯಾಗಿತ್ತು.

ಮತಗಟ್ಟೆ ಸಿಬ್ಬಂದಿಗೆ ಬಸ್ ವ್ಯವಸ್ಥೆ
ಗುಲ್ಬರ್ಗ: ಜಿಲ್ಲೆಯ 9 ವಿಧಾನಸಭಾ ಕ್ಷೇತ್ರಗಳ ಚುನಾವಣೆಯ ಮತದಾನವು ಏ.5 ರಂದು ಬೆಳಗಿನ 7ರಿಂದ ಸಂಜೆ 5ರವರೆಗೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಮತಗಟ್ಟೆ ಅಧಿಕಾರಿಗಳಿಗೆ ಏ.30 ರಂದು 2ನೇ ಸುತ್ತಿನ ಚುನಾವಣಾ ತರಬೇತಿ ಕಾರ್ಯಕ್ರಮವನ್ನು ಎಲ್ಲ ತಾಲೂಕು ಕೇಂದ್ರಗಳಲ್ಲಿ ಹಮ್ಮಿಕೊಳ್ಳಲಾಗಿದೆ.
ಮತಗಟ್ಟೆ ಅಧಿಕಾರಿಗಳು ಹಾಲಿ ಕೆಲಸ ನಿರ್ವಹಿಸುತ್ತಿರುವ ತಾಲೂಕಿನಿಂದ ಚುನಾವಣೆ ಕೆಲಸಕ್ಕಾಗಿ ನಿಯೋಜನೆಗೊಂಡಿರುವ ತಾಲೂಕುಗಳ ತರಬೇತಿಗೆ ಕರೆದೊಯ್ಯಲು ಹಾಗೂ ತರಬೇತಿ ನಂತರ ಮರಳಿ ಅದೇ ಸ್ಥಳಕ್ಕೆ ಕರೆತರಲು ಎನ್‌ಇಕೆಆರ್‌ಟಿಸಿ ಬಸ್ಸುಗಳ ವ್ಯವಸ್ಥೆ ಮಾಡಲಾಗಿದೆ.
ಈ ಬಸ್ಸುಗಳು ಏ.30 ರಂದು ಬೆಳಗ್ಗೆ 7ಕ್ಕೆ ಸರಿಯಾಗಿ ಆಯಾ ತಾಲೂಕು ನಗರ ಬಸ್ಸು ನಿಲ್ದಾಣಗಳಿಂದ ಹೊರಡುವವು. ಚುನಾವಣಾ ಸಿಬ್ಬಂದಿ ಸರಿಯಾದ ಸಮಯಕ್ಕೆ ಬಸ್ ನಿಲ್ದಾಣಗಳಿಗೆ ಆಗಮಿಸಿ ಈ ಸೌಲಭ್ಯವನ್ನು ಪಡೆದುಕೊಳ್ಳುವಂತೆ ಅಪರ ಜಿಲ್ಲಾಧಿಕಾರಿ ಹಾಗೂ ಅಪರ ಜಿಲ್ಲಾ ಚುನಾವಣಾಧಿಕಾರಿ ನಾಗೇಂದ್ರ ಪ್ರಸಾದ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.