ಗುಲ್ಬರ್ಗಾ

ಸಂಕ್ಷಿಪ್ತ ಸುದ್ದಿ

Published On :

ಜಿಟಿ ಜಿಟಿ ಮಳೆ: ಜನ ಜೀವನ ಅಸ್ತವ್ಯಸ್ತ
ಚಿಂಚೋಳಿ: ತಾಲೂಕಿನಲ್ಲಿ ನಿರಂತರವಾಗಿ ಸುರಿಯುತ್ತಿರುವ ಜಿಟಿ ಜಿಟಿ ಮಳೆಯಿಂದಾಗಿ ಇಲ್ಲಿನ ಜನ ಜೀವನ ತುಂಬಾ ಅಸ್ತವ್ಯಸ್ತಗೊಂಡಿದೆ. ತಾಲೂಕಿನಲ್ಲಿ ಕಳೆದ ಎರಡು ವಾರಗಳಿಂದ ಸುರಿದ ಜಿಟಿ ಜಿಟಿ ಮಳೆಯಿಂದಾಗಿ ತತ್ತರಿಸಿ ಹೋಗಿದ್ದ ಇಲ್ಲಿನ ಜನರು ಕಳೆದ 4 ದಿನಗಳಲ್ಲಿ ಮಳೆಯಾಗಲಿಲ್ಲ ಹೀಗಾಗಿ ಕೃಷಿ ಚಟುವಟಿಕೆಗಳು ಭರದಿಂದ ನಡೆದಿದ್ದವು. ಇದೀಗ ಮಂಗಳವಾರ ಮಧ್ಯರಾತ್ರಿಯಿಂದ ಜಿಟಿ ಜಿಟಿ ಮಳೆಯಾಗುತ್ತಿದ್ದು, ಜನರು ಮಳೆಯಲ್ಲಿಯೇ ತಿರುಗಾಡುವಂತಾಗಿದೆ ಮತ್ತು ಶಾಲಾ ಕಾಲೇಜು ಮಕ್ಕಳು ಮಳೆಯಲ್ಲಿಯೇ ಹಾಜರಾಗಿದ್ದರು. ಇನ್ನು ಕೆಲವು ಸರ್ಕಾರಿ ಕಚೇರಿಗಳಲ್ಲಿ ಸಿಬ್ಬಂದಿ ಮತ್ತು ಅಧಿಕಾರಿಗಳ ಗೈರು ಕಾಣುತ್ತಿತ್ತು. ಹಳ್ಳಿಯಿಂದ ಸರ್ಕಾರಿ ಕೆಲಸಕ್ಕಾಗಿ ಬಂದ ಜನರು ಬರಿಗೈಯಿಂದ ತೆರಳಬೇಕಾಯಿತು. ಚಿಂಚೋಳಿ- 5 ಮಿಮಿ, ಕೋಡ್ಲಿ-7 ಮಿಮಿ, ಕುಂಚಾವರಂ- 8.3 ಮಿಮಿ, ಸುಲೇಪೇಟ್- 4.4 ಮಿಮಿ, ಐನಾಪುರ- 10.2 ಮಿಮಿ, ಚಿಮ್ಮನಚೋಡ- 9 ಮಿಮಿ ಮಳೆಯಾಗಿದೆ ಎಂದು ಜಲಮಾಪನ ಕೇಂದ್ರದ ಸಹಾಯಕ ಶ್ರೀಮಂತರಾಮ ಕನಕಪುರ ತಿಳಿಸಿದ್ದಾರೆ.
ನಿವೃತ್ತ ಪೊಲೀಸ್ ಅಧಿಕಾರಿಗಳ ಸಭೆ
ಗುಲ್ಬರ್ಗ: ಜು.4 ರಂದು ಬೆಳಿಗ್ಗೆ 10ಕ್ಕೆ ನಗರದ ಡಿಎಆರ್ ಹಳೆ ಕಚೇರಿ ಆವರಣದಲ್ಲಿ ನಿವೃತ್ತ ಪೊಲೀಸ್ ಅಧಿಕಾರಿಗಳ ಸಭೆ ನಡೆಯಲಿದೆ. ಜಿಲ್ಲೆಗೆ ಹೊಸದಾಗಿ ಅಧಿಕಾರ ವಹಿಸಿಕೊಂಡ ಎಸ್ಪಿ ಅವರಿಗೆ ಭೇಟಿ ಮಾಡಿ ಬೇಡಿಕೆಗಳ ಮನವಿ ಪತ್ರ ಸಲ್ಲಿಸುವ ಕುರಿತು, ನಿವೃತ್ತ ಪೊಲೀಸ್ ಅಧಿಕಾರಿಗಳ ವೈದ್ಯಕೀಯ, ಮಕ್ಕಳ ವಿದ್ಯಾಭ್ಯಾಸಗಳಿಗೆ, ನಿವೃತ್ತ ಅಧಿಕಾರಿಗೆ ವರ್ಷಕ್ಕೆ ಕೇವಲ 2500 ಸಹಾಯಧನ ಕೊಡುತ್ತಿದ್ದು, ಅದನ್ನು ಒಂದು ಲಕ್ಷ ರು.ಗೆ ಹೆಚ್ಚಿಸುವುದು ಮುಂತಾದ ವಿಷಯಗಳ ಕುರಿತು ಚರ್ಚಿಸಲಾಗುವುದು. ಹೆಚ್ಚಿನ ಸಂಖ್ಯೆಯಲ್ಲಿ ಜಿಲ್ಲೆಯ ಎಲ್ಲ ಹಿರಿಯ, ಕಿರಿಯ ನಿವೃತ್ತ ಪೊಲೀಸ್ ಅಧಿಕಾರಿಗಳು, ಕೆಎಸ್‌ಆರ್‌ಪಿ ನಿವೃತ್ತ ಅಧಿಕಾರಿಗಳು ಭಾಗವಹಿಸಬೇಕೆಂದು ಸಂಘದ ಅಧ್ಯಕ್ಷ ಜಿ.ಸಿ. ಬೆಳಮಗಿ ಕೋರಿದ್ದಾರೆ.
ರಾಷ್ಟ್ರಧ್ವಜಕ್ಕೆ ಅಗೌರವ; ಶಿಸ್ತು ಕ್ರಮ
ಗುಲ್ಬರ್ಗ: ಜಿಲ್ಲೆಯಲ್ಲಿ ಪ್ರತಿ ವರ್ಷದಂತೆ ಆ.15 ರಂದು ಸ್ವಾತಂತ್ರ್ಯೋತ್ಸವ ದಿನವನ್ನು ವಿಜೃಂಬಣೆಯಿಂದ ಆಚರಿಸಲಾಗುವುದು. ಅಧಿಕಾರಿಗಳು ಅಗತ್ಯವಿದ್ದಲ್ಲಿ ನೂತನ ರಾಷ್ಟ್ರಧ್ವಜವನ್ನು ಖರೀದಿಸಬೇಕು ಹಾಗೂ ರಾಷ್ಟ್ರಧ್ವಜಕ್ಕೆ ಯಾವುದೇ ಕಾರಣಕ್ಕೂ ಅಗೌರವ ಆಗದ ರೀತಿಯಲ್ಲಿ ನೋಡಿಕೊಳ್ಳಬೇಕು. ಒಂದು ವೇಳೆ ಅಗೌರವವಾಗಿರುವುದು ತಿಳಿದು ಬಂದಲ್ಲಿ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕಾನೂನಿನ ಅನ್ವಯ ಶಿಸ್ತಿನ ಕ್ರಮ ಜರುಗಿಸಲಾಗುವುದು ಎಂದು ಗುಲ್ಬರ್ಗ ಜಿಲ್ಲಾಧಿಕಾರಿ ಪ್ರಸನ್ನಕುಮಾರ್ ತಿಳಿಸಿದ್ದಾರೆ.
ಯುವಕ ಆತ್ಮಹತ್ಯೆ
ಗುಲ್ಬರ್ಗ: ಜೀವನದಲ್ಲಿ ಜಿಗುಪ್ಸೆಗೊಂಡ ಯುವಕನೊಬ್ಬ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬ್ರಹ್ಮಪುರ ಬಡಾವಣೆಯಲ್ಲಿ ನಡೆದಿದೆ. ಮಂಜುನಾಥ ತಂದೆ ಶಂಕ್ರೆಪ್ಪ ಕಾಳೆ (28) ಆತ್ಮಹತ್ಯೆಗೆ ಶರಣಾದ ಯುವಕ. ಸುದ್ದಿ ತಿಳಿದು ರಾಘವೇಂದ್ರ ನಗರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪರಿಚಿತ ಶವ ಪತ್ತೆ
ಗುಲ್ಬರ್ಗ: ನಗರದ ಲಾಲಗೇರಿ ಕ್ರಾಸ್ ಬಳಿಯ ಕೈಲಾಸನಗರದಲ್ಲಿ 35 ರಿಂದ 40 ವರ್ಷ ವಯಸ್ಸಿನ ಅಪರಿಚಿತ ವ್ಯಕ್ತಿಯೊಬ್ಬನ ಶವ ಶನಿವಾರ ಪತ್ತೆಯಾಗಿದೆ.
  ಶವದ ಪಕ್ಕದಲ್ಲಿಯೇ ಕ್ರಿಮಿನಾಶಕ ಬಾಟಲಿ ದೊರೆತಿದ್ದು, ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಮೃತ ವ್ಯಕ್ತಿ ಟೆಂಗಳಿ ಗ್ರಾಮದವನು ಎಂದು ತಿಳಿದು ಬಂದಿದೆ. ರಾಘವೇಂದ್ರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಕಿ ತಗುಲಿ ವ್ಯಕ್ತಿ ಸಾವು
ಗುಲ್ಬರ್ಗ: ರಾತ್ರಿ ವೇಳೆ ಮೈಮೇಲೆ ಚಿಮಣಿ ಬಿದ್ದು, ಬೆಂಕಿ ತಗುಲಿ ವ್ಯಕ್ತಿಯೊಬ್ಬ ಸಾವಿಗೀಡಾದ ಘಟನೆ ಚಿಂಚೋಳಿ ತಾಲೂಕಿನ ಐನೋಳ್ಳಿ ಗ್ರಾಮದಲ್ಲಿ ನಡೆದಿದೆ. ಕಲ್ಪಪ್ಪ ತಂದೆ ನಾಗಪ್ಪ ಅಣವಾರ (30) ಮೃತನು. ಚಿಂಚೋಳಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.
ಅತ್ಯಾಚಾರಗೈದ ಅಂಗವಿಕಲನ ಸೆರೆ
ಗುಲ್ಬರ್ಗ: ಐದು ವರ್ಷದ ಬಾಲಕಿ ಮೇಲೆ ಅಂಗವಿಕಲನೊಬ್ಬ ಅತ್ಯಾಚಾರವೆಸಗಿದ ಅಮಾನವೀಯ ಘಟನೆ ಜೇವರ್ಗಿ ತಾಲೂಕಿನ ಮಂದೇವಾಲ್ ಗ್ರಾಮದಲ್ಲಿ ನಡೆದಿದೆ.
ರಾಘವೇಂದ್ರ ತಂದೆ ಜಗದೇವಪ್ಪ ಕಟ್ಟಿಮನಿ (20) ಎಂಬಾತನೇ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ್ದು, ಆತನನ್ನು ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೊಪ್ಪಿಸಿದ್ದಾರೆ.
ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಚಾಕೊಲೇಟ್ ಕೊಡುವುದಾಗಿ ಹೇಳಿ, ಆಸೆ ತೋರಿಸಿ ಬಾಲಕಿ ಮೇಲೆ ಅತ್ಯಾಚಾರವೆಸಗಿದ್ದಾನೆ. ಬಾಲಕಿಯನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಜೇವರ್ಗಿ ಸಿಪಿಐ ರಾಮಣ್ಣ ಸಾವಳಗಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಈ ಕುರಿತು ನೆಲೋಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.