ಗುಲ್ಬರ್ಗಾ

ಶಾಲೆಗಳಲ್ಲಿ ಖಾಸಗಿ ಕಾರ್ಯಕ್ರಮ ನಿಷೇಧ

Published On :

ಸುರಪುರ: ತಾಲೂಕಿನ ಸರ್ಕಾರಿ,  ಖಾಸಗಿ ಅನುದಾನಿತ, ಅನುದಾನ ರಹಿತ ಪ್ರಾಥಮಿಕ, ಪ್ರೌಢಶಾಲೆ ಮತ್ತು ಪಪೂ ಕಾಲೇಜುಗಳಲ್ಲಿ ಇನ್ನು ಖಾಸಗಿ ಕಾರ್ಯಕ್ರಮಗಳನ್ನು ನಿಷೇಧಿಸಲಾಗಿದೆ ಎಂದು ಬಿಇಒ ಎ.ವಿ. ಕೆಂಪರಂಗಯ್ಯ ಸ್ಪಷ್ಟಪಡಿಸಿದ್ದಾರೆ.
 ಶಾಲೆಗಳಲ್ಲಿ ಖಾಸಗಿ ಕಾರ್ಯಕ್ರಮಗಳನ್ನು ನಡೆಸುತ್ತಿರುವ ಕಾರಣ ತರಗತಿಗಳ ಬೋಧನೆಗೆ ತೊಂದರೆಯಾಗುತ್ತದ್ದು, ಇದು ಮಕ್ಕಳ ಕಲಿಕಾ ಪ್ರಗತಿಗೆ ಅಡ್ಡಿಯಾಗುತ್ತಿರುವುದು ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಶಾಲೆಗಳಲ್ಲಿ ಖಾಸಗಿ ಕಾರ್ಯಕ್ರಮಗಳಿಗೆ ಕಡಿವಾಣ ಹಾಕಲಾಗಿದೆ ಎಂದು ಬಿಇಒ ಮುಖ್ಯಗುರುಗಳಿಗೆ ಹೊರಡಿಸಿದ ಆದೇಶ ಪತ್ರದಲ್ಲಿ ತಿಳಿಸಿದ್ದಾರೆ.
ವಿಕಲಚೇತನರಿಗೆ 16 ಟಿವಿಎಸ್ ತ್ರಿಚಕ್ರ ವಾಹನ ವಿತರಣೆ
ಶಹಾಪುರ: ಪಟ್ಟಣದ ಐಬಿ ಹಿಂದುಗಡೆಯ ಕಾಂಗ್ರೆಸ್ ಕಾರ್ಯಲಯದಲ್ಲಿ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯ ಅನುದಾನದ ಸುಮಾರು 10.05 ಲಕ್ಷವೆಚ್ಚದಲ್ಲಿ, 16 ಟಿವಿಎಸ್ ಕಂಪನಿಯ ತ್ರಿಚಕ್ರ ವಾಹನಗಳನ್ನು, ಯಾದಗಿರಿ ಮತಕ್ಷೇತ್ರದ ಅಂಗವಿಕಲರಿಗೆ ಶಾಸಕ ಡಾ. ಮಾಲಕರಡ್ಡಿ ತ್ರಿಚಕ್ರ ವಾಹನಗಳನ್ನು ವಿತರಣೆ ಮಾಡಿ ಮಾತನಾಡಿ, ಸರ್ಕಾರದ ಯೋಜನೆಗಳನ್ನು ಸದುಪಯೋಗ ಪಡೆಯುವಂತೆ ತಿಳಿಸಿದರು. ಇದೇ ಸಂದರ್ಭದಲ್ಲಿ ಶ್ರೀನಿವಾಸರೆಡ್ಡಿ ಕಂದಕೂರ, ಶರಣಗೌಡ ಅರಕೇರಿ, ಸುನೀಲಗೌಡ ಅರಕೇರಿ, ಶರಣಬಸವ ಬಿರಾದರ, ಮಾಣಿಕರೆಡ್ಡಿ ಕುರಕುಂದಾ, ಪ್ರತಾಪ ಗುಂಡಹಳ್ಳಿ, ಬಲರಾಮ ಗುಂಡಹಳ್ಳಿ, ದೇವರೆಡ್ಡಿ, ಸಿದ್ದು ವಕೀಲ ಇನ್ನಿತರ ಕಾಂಗ್ರೆಸ್ ಮುಖಂಡರುಗಳು ಹಾಗೂ ಅಂಗವಿಕಲರು ಹಾಜರಿದ್ದರು.
'ಇಫ್ತಾರ್ ಕೂಟದಿಂದ ಸಾಮರಸ್ಯ'
ಶಹಾಪುರ: ರಂಜಾನ್ ತಿಂಗಳಲ್ಲಿ ಇಫ್ತಿಯಾರ್ ಕೂಟ ಏರ್ಪಡಿಸುವುದರಿಂದ ಪರಸ್ಪರ ಸಾಮರಸ್ಯಕ್ಕೆ ಸಹಕಾರಿಯಾಗುತ್ತದೆ. ರಂಜಾನ್ ತಿಂಗಳು ಮುಸ್ಲಿಂ ಬಾಂಧವರಿಗೆ ಅತ್ಯಂತ ಪವಿತ್ರವಾದುದು ಎಂದು ಮಾಜಿ ಸಚಿವ ಶರಶಬಸಪ್ಪಗೌಡ ದರ್ಶನಾಪುರ ಅಭಿಪ್ರಾಯಪಟ್ಟರು. ಪಟ್ಟಣದ ಚಾವುಸ್ ಕಾಂಪ್ಲೆಕ್ಸ್ ಹತ್ತಿರದ ಮಸೀದಿಯಲ್ಲಿ ಅಮರ ಚಾವುಸ್ ಏರ್ಪಡಿಸಿದ್ದ ಇಫ್ತಿಯಾರ್ ಕೂಟದಲ್ಲಿ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಮುಖಂಡರಾದ ಡಾ. ಚಂದ್ರಶೇಖರ ಸುಬೇದಾರ, ಅವದ್ ಬಿನ್ ಅಮರ ಚಾವುಸ್, ಸೋಫಿಸಾಬ ಜಮಾದಾರ, ಮುಸ್ತಫಾ ಬಾಂಬೆ ಸೇಠ, ಎಸ್.ಎಂ. ಮುಸ್ತಫ್, ವಿಜಯ ಹಿರೇಮಠ, ಬಸವರಾಜ ಹೇರುಂಡಿ, ಇಸ್ಮಾಯಿಲ್ ಚಾಂದ್, ಸೈಯದ್ ರಫಿಕ್ ಚೌದ್ರಿ ಇತರರು ಪಾಲ್ಗೊಂಡಿದ್ದರು.
ಪ್ರವೇಶಕ್ಕೆ ಅರ್ಜಿ
ಗುಲ್ಬರ್ಗ: ವಿಜ್ಞಾನೇಶ್ವರ ಸರ್ಕಾರಿ ಕಾನೂನು ಕಾಲೇಜಿನಲ್ಲಿ ಕಾನೂನು ಪದವಿ ಅಧ್ಯಯನಕ್ಕಾಗಿ ಅರ್ಹ ವಿದ್ಯಾರ್ಥಿಗಳಿಂದ ಪ್ರವೇಶಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ವಿವರಕ್ಕೆ ಡಾ. ಶಿವಾನಂದ ಎಚ್. ಲೇಂಗಟಿ, ಪ್ರಾಚಾರ್ಯರು ವಿಜ್ಞಾನೇಶ್ವರ ಸರ್ಕಾರಿ ಕಾನೂನು ಕಾಲೇಜು, ವಿಶ್ವವಿದ್ಯಾಲಯ ಆವರಣ, ಗುಲ್ಬರ್ಗ- 585106ನ್ನು ಅಥವಾ ದೂ. 94491 22506 ಸಂಪರ್ಕಿಸಬಹುದು.
ಉನ್ನತ ದರ್ಜೆ; ಸಾಧನೆ
ಗುಲ್ಬರ್ಗ/ಶಹಾಬಾದ್: ಶಹಾಬಾದ್ ನಗರದ ಕೂಡಲ ಸಂಗಮ ಶಿಕ್ಷಣ ಸಂಸ್ಥೆಯ ಕಲಾ ಮಹಿಳಾ ಮಹಾವಿದ್ಯಾಲಯದಲ್ಲಿ ಈಚೇಗೆ ನಡೆದ ಬಿಎ ಆರನೇ ಸೆಮಿಸ್ಟರ್ ಪರೀಕ್ಷೆಯಲ್ಲಿ 36 ವಿದ್ಯಾರ್ಥಿನಿಯವರು ಉನ್ನತ ದರ್ಜೆನಲ್ಲಿ ಪಾಸಾಗಿ ಮಹಾವಿದ್ಯಾಲಯಕ್ಕೆ ಕೀರ್ತಿ ತಂದಿದ್ದಾರೆ.  ಒಟ್ಟು 61 ವಿದ್ಯಾರ್ಥಿನಿಯರು ಹಾಜರಾಗಿದ್ದು, ಪಲ್ಲವಿ ಹಿರೇಮಠ ಶೇ.84. 20 ಅಂಕ ಪಡೆದು ಮಹಾವಿದ್ಯಾಲಯಕ್ಕೆ ಕೀರ್ತಿ ತಂದಿದ್ದಾಳೆ. 12 ವಿದ್ಯಾರ್ಥಿನಿಯರು ಪ್ರಥಮ ದರ್ಜೆಯಲ್ಲಿ ಪಾಸಾಗಿದ್ದು, ಒಟ್ಟು ಶೇ.98 ಫಲಿತಾಂಶ ಬಂದಿದೆ. ವಿದ್ಯಾರ್ಥಿನಿಯರ ಸಾಧನೆಗೆ ಸಂಸ್ಥೆ ಅಧ್ಯಕ್ಷ ಆರ್.ಜಿ. ಶೇಟಗಾರ, ಕಾರ್ಯದರ್ಶಿ ಎನ್.ಸಿ. ವಾರದ, ಪ್ರಾಚಾರ್ಯ ನಾನಾಗೌಡ, ಸಿಬ್ಬಂದಿ ಹರ್ಷ ವ್ಯಕ್ತಪಡಿಸಿದ್ದಾರೆ.
ಡೋಣಗಾಂವದಲ್ಲಿ ವಾಂತಿ- ಭೇದಿ ಮತ್ತಷ್ಟು  ಉಲ್ಬಣ
ಚಿತ್ತಾಪುರ: ತಾಲೂಕಿನ ಡೋಣಗಾಂವ ಗ್ರಾಮದಲ್ಲಿ ಮತ್ತೆ ವಾಂತಿ- ಭೇದಿ ಉಲ್ಬಣಗೊಂಡಿದ್ದು, ಬುಧವಾರ 11ಮಂದಿ ಚಿತ್ತಾಪುರ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದುವರೆಗೆ 21 ಜನರಿಗೆ ವಾಂತಿ- ಭೇದಿ ಕಾಣಿಸಿಕೊಂಡಿದ್ದು, ಒಬ್ಬ ಮಹಿಳೆ ಗ್ರಾಮದ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ, 20 ಜನ ಚಿತ್ತಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗ್ರಾಮದಲ್ಲಿ ಕಲುಷಿತ ನೀರು ಸೇವನೆಯಿಂದ ವಾಂತಿ- ಭೇದಿ ಉಂಟಾಗಿದೆ ಎಂದು ಹೇಳಲಾಗಿದೆ. ಗ್ರಾಮಕ್ಕೆ ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ಶಿವರಾಜ ಸಜ್ಜನ್, ತಾಲೂಕು ಆರೋಗ್ಯ ಅಧಿಕಾರಿ ಪ್ರಭುಲಿಂಗ ಮಾನಕರ್ ಬುಧವಾರ ತಾಲೂಕು ಆಸ್ಪತ್ರೆಗೆ ಭೇಟಿ ನೀಡಿ ರೋಗಿಗಳ ವಿಚಾರಣೆ ನಡೆಸಿ ನಂತರ ವೈದ್ಯರ ತಂಡದೊಂದಿಗೆ ಗ್ರಾಮಕ್ಕೆ ಭೇಟಿ ನೀಡಿ ರೋಗದಿಂದ ನರಳುತ್ತಿರುವವರಿಗೆ ಚಿಕಿತ್ಸೆ ನೀಡಿದ್ದಾರೆ. ನೀರು ಕಾಯಿಸಿ ಸೋಸಿ ಆರಿಸಿ ಕುಡಿಯುವಂತೆ ವೈದ್ಯರು ಸಲಹೆ ನೀಡಿದ್ದಾರೆ. ತಾಪಂ ಕಾರ್ಯನಿರ್ವಾಕಾಧಿಕಾರಿ ಸುರೇಶ ಬಿರಾದಾರ, ಗ್ರಾಪಂ ಅಧ್ಯಕ್ಷ ಸಾಬಣ್ಣ ಜಡಿ ಗ್ರಾಮಕ್ಕೆ ಭೇಟಿ ನೀಡಿ, ಸಾರ್ವಜನಿಕರಿಗೆ ಶುದ್ಧ ನೀರು ಒದಗಿಸಲು ಮೂರು ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗಿದೆ. ಒಂದು ವಾರದವರೆಗೆ ಟ್ಯಾಂಕರ್ ಮೂಲಕ ನೀರು ಒದಗಿಸಲಾಗುವುದು. ನಲ್ಲಿಯ ನೀರು ಕಲ್ಪಿಸಲು ನೂತನ ಯಂತ್ರ ತಂದಿಡಲಾಗಿದೆ ಎಂದು ಹೇಳಿದರು. ಊರ ಬಾವಿ ಹಾಗೂ ಹೊಸ ಬಾವಿಯಲ್ಲಿಯ ನೀರು ಸ್ವಚ್ಛಗೊಳಿಸಿ, ಶುದ್ಧ ನೀರು ಕಲ್ಪಿಸಲಾಗುವುದು ಎಂದು ಬಿರಾದಾರ ತಿಳಿಸಿದ್ದಾರೆ.
ಇಂದು ನೇರ ಫೋನ್ ಇನ್
ಗುಲ್ಬರ್ಗ: ಗುಲ್ಬರ್ಗ ದೂರದರ್ಶನ ಕೇಂದ್ರದಲ್ಲಿ ಆ.8 ರಂದು ಸಂಜೆ 6.30ಕ್ಕೆ ಪ್ರಸಾರವಾಗುವ ಜನಸ್ಪಂದನ ನೇರ ಫೋನ್ ಇನ್ ಕಾರ್ಯಕ್ರಮದಲ್ಲಿ ದಂತ ಆರೋಗ್ಯ ರಕ್ಷಣೆ ಕುರಿತ ಕಾರ್ಯಕ್ರಮ ಬಿತ್ತರಗೊಳ್ಳಲಿದೆ. ನಗರದ ದಂತ ತಜ್ಞರಾದ ಡಾ. ಸುಧೀಂದ್ರ ಮಾಹುರಕರ್ ಭಾಗವಹಿಸಲಿದ್ದಾರೆ. 220491, 220492 ದೂರವಾಣಿಗೆ ಸಂಪರ್ಕಿಸಿ ಸಾರ್ವಜನಿಕರು ದಂತ ಆರೋಗ್ಯ ರಕ್ಷಣೆ ಕುರಿತ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕೆಂದು ಕೋರಲಾಗಿದೆ.
ಬಸ್ ಲಾರಿ ಡಿಕ್ಕಿ: 15 ಜನ ಗಾಯ
ಗುಲ್ಬರ್ಗ: ರಾಷ್ಟ್ರೀಯ ಹೆದ್ದಾರಿ 218ರಲ್ಲಿ, ಫರಹತಾಬಾದ್ ಬಳಿ ಲಾರಿ ಮತ್ತು ಸಾರಿಗೆ ಸಂಸ್ಥೆ ಬಸ್ ಡಿಕ್ಕಿ ಸಂಭವಿಸಿ 15 ಪ್ರಯಾಣಿಕರು ಗಂಭೀರ ಗಾಯಗೊಂಡ ಘಟನೆ ಮಂಗಳವಾರ ಸಂಜೆ ನಡೆದಿದೆ. ಗಾಯಗೊಂಡವರನ್ನು ಗುಲ್ಬರ್ಗದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಈ ಕುರಿತು ಫರತಹಾಬಾದ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.