ಮೂಲ ಸೌಲಭ್ಯಕ್ಕೆ ಆಗ್ರಹಿಸಿ ಪ್ರತಿಭಟನೆ
ಗುಲ್ಬರ್ಗ/ಶಹಾಬಾದ್ ಆ.13
ಶಹಾಬಾದ್ನ ಎಲ್ಲಾ ವಾರ್ಡಗಳಲ್ಲಿ ರಸ್ತೆ, ಒಳಚರಂಡಿ, ಬೀದಿ ದೀಪ ಸೇರಿದಂತೆ ಹಲವು ಮೂಲ ಸೌಕರ್ಯಕ್ಕೆ ಆಗ್ರಹಿಸಿ ಎಸ್ಯುಸಿಐ (ಸಿ) ಪಕ್ಷದ ವತಿಯಿಂದ ನಗರಸಭೆ ಕಚೇರಿ ಎದುರು ಪ್ರತಿಭಟನೆ ನಡೆಸಿ ಆಡಳಿತಾಧಿಕಾರಿಗೆ ಮನವಿ ಸಲ್ಲಿಸಲಾಯಿತು.
ನಗರದಲ್ಲಿ ಸಮರ್ಪಕ ರಸ್ತೆ, ಕನಿಷ್ಠ ಕುಡಿಯುವ ನೀರು, ಮಹಿಳಾ ಶೌಚಾಲಯ, ಸಮರ್ಪಕ ಒಳಚರಂಡಿ ವ್ಯವಸ್ಥೆ ಕಲ್ಪಿಸದ ಜನಪ್ರತಿನಿಧಿಗಳು ಮತ ಕೇಳಲು ನಾಚಿಕೆಯಾಗಬೇಕು ಎಂದು ಎಸ್ಯುಸಿಐ-ಸಿ ಜಿಲ್ಲಾ ಕಾರ್ಯದರ್ಶಿ ಎಚ್.ವಿ.ದಿವಾಕರ್ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಸರಿಯಾದ ರಸ್ತೆಯಿಲ್ಲ: ಇಡೀ ನಗರ ರಾತ್ರಿ ಕತ್ತಲೆಯಲ್ಲಿದ್ದರೆ, ಕನಿಷ್ಠ ಓಡಾಡಲು ಸರಿಯಾದ ರಸ್ತೆಯಿಲ್ಲ, ಕುಡಿಯಲು ನೀರು ಇಲ್ಲದೆ ಜನರು ಪರದಾಡುವಂತಾಗಿದೆ ಎಂದು ದೂರಿದ ಅವರು, ಶಹಾಬಾದ್ ಕೈಗಾರಿಕಾ ಪಟ್ಟಣವಾಗಿರುವುದರಿಂದ ಇಲ್ಲಿ ಐಟಿಐ, ಡಿಪ್ಲೋಮ ಕಾಲೇಜುಗಳನ್ನು ಸ್ಥಾಪಿಸಲು ಸರ್ಕಾರಕ್ಕೆ ಆಗ್ರಹಸಿದರು.
ನದಿಯಿದ್ದರೂ ನೀರಿಗೆ ಸಮಸ್ಯೆ: ಸ್ಥಳೀಯ ಕಾರ್ಯದರ್ಶಿ ರಾಮಣ್ಣ ಇಬ್ರಾಹಿಂಪುರ ಮಾತನಾಡಿ, ಪಕ್ಕದಲ್ಲಿಯೇ ಕಾಗಿಣಾ ನದಿಯಿದ್ದರೂ ಎಲ್ಲ ವಾರ್ಡಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ.
ನಗರದಲ್ಲಿ ನೀರಿನ ಸರಬರಾಜನ್ನು ಖಾಸಗಿಯವರಿಗೆ ಒಪ್ಪಿಸುತ್ತಿರುವುದು ಖಂಡನೀಯ ಎಂದರು.
ಪಟ್ಟಣದಲ್ಲಿರುವ ಸಮುದಾಯ ಆರೋಗ್ಯ ಕೇಂದ್ರವನ್ನು ಸಾರ್ವಜನಿಕ ಆಸ್ಪತ್ರೆಯನ್ನಾಗಿ ಪರಿವರ್ತಿಸಬೇಕು, ತುರ್ತುಸೇವೆ 108 ಶಾಶ್ವತವಾಗಿ ಒದಗಿಸಬೇಕು, ನೀರಿನ ಖಾಸಗೀಕರಣ ಕೈಬಿಡಬೇಕು, ನಗರ ಸಾರಿಗೆ ಪ್ರಾರಂಭಿಸಬೇಕು, ಸರ್ಕಾರಿ ಐಟಿಐ, ಡಿಪ್ಲೋಮಾ ಕಾಲೇಜುಗಳನ್ನು ಸ್ಥಾಪಿಸಲು ಆಗ್ರಹಿಸಿ ತಹಸೀಲ್ದಾರ್ ಮಲ್ಲೇಶಿ ತಂಗಾರವರಿಗೆ ಮನವಿ ಸಲ್ಲಿಸಲಾಯಿತು. ಮುಖಂಡರಾದ ತಿಪ್ಪಣ ಬೆಲ್ಲದ, ಲಕ್ಷ್ಮಣ ಛತ್ರಬಂದ, ಎಸ್ಯುಸಿಐ-ಸಿ ಸದಸ್ಯರಾದ ಗಣಪತರಾವ ಮಾನೆ, ನಿಂಗಣ್ಣ ಜಂಬಗಿ, ಜನನ್ನಾಥ ಎಸ್.ಎಚ್, ರೇಷ್ಮಾ ಇಬ್ರಾಹಿಂಪುರ, ರಾಘವೇಂದ್ರ, ವಿರೇಶ, ಸಿದ್ದು ಚೌಧರಿ, ಶರಣು, ರಾಜೇಂದ್ರ ಆತನೂರ ಸೇರಿದಂತೆ ನೂರಾರು ಮಂದಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

