ದಲಿತರ ನಿರ್ಲಕ್ಷ್ಯ; ಶಾಸಕ ಜಾಧವಗೆ ಘೇರಾವ್
ಕನ್ನಡಪ್ರಭ ವಾರ್ತೆ , ಚಿಂಚೋಳಿ , ಆ.16
ಸ್ಥಳೀಯ ಶಾಸಕ ಡಾ. ಉಮೇಶ ಜಾಧವ ಅವರು ದಲಿತ ಜನಾಂಗಕ್ಕೆ ಸಂಪೂರ್ಣವಾಗಿ ಕಡೆಗಣಿಸುತ್ತಿದ್ದಾರೆ. ದಲಿತರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲವೆಂದು ಆರೋಪಿಸಿ ತಾಲೂಕು ವಿವಿಧ ದಲಿತ ಸಂಘಟನೆ ಮುಖಂಡರು ಗುರುವಾರ ಶಾಸಕರಿಗೆ ಧಿಕ್ಕಾರ ಕೂಗಿ ಘೇರಾವ್ ಹಾಕಿ ಪ್ರತಿಭಟನೆ ನಡೆಸಿದಾಗ, ಪೊಲೀಸ್ ಪರೇಡ್ ಮೈದಾನದಲ್ಲಿ ಕೆಲಕಾಲ ಉದ್ವಿಗ್ನ ವಾತಾವರಣ ಉಂಟಾಯಿತು.
ಪಟ್ಟಣದ ಪೊಲೀಸ್ ಪರೇಡ್ ಮೈದಾನದಲ್ಲಿ 67ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯಲ್ಲಿ ಭಾಗವಹಿಸಿದ ಸ್ಥಳೀಯ ಶಾಸಕ ಡಾ. ಉಮೇಶ ಜಾಧವ ಅವರು ತಮ್ಮ ಭಾಷಣ ಮುಗಿಸಿದ ನಂತರ, ಪೊಲೀಸ್ ಪರೇಡ್ ಮೈದಾನದಲ್ಲಿ ಗಣ್ಯರು ಕುಳಿತಿದ್ದ ಸ್ಥಳಕ್ಕೆ ದಲಿತ ಮುಖಂಡರಾದ ಗೌತಮ ಬೊಮ್ಮನಳ್ಳಿ, ಕಾಶಿನಾಥ ಸಿಂಧ್ಯೆ, ವಾಮನರಾವ ಕೊರವಿ, ಪಾಂಡುರಂಗ ಲೊಡನೋರ, ರಾಜಶೇಖರ ಹೊಸಮನಿ ಇತರರು ಆಗಮಿಸಿ ಶಾಸಕರ ವಿರುದ್ಧ ಧಿಕ್ಕಾರ ಕೂಗತೊಡಗಿದರು.
ಅಮಾನತಿಗೆ ಆಕ್ರೋಶ: ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳಾದ ಡಿವೈಎಸ್ಪಿ ಪರಶುರಾಮ ಕೋರವಾರ, ಪಿಎಸ್ಐ ಡಿ.ಬಿ. ಕಟ್ಟಿಮನಿ, ಅಡಿವೆಪ್ಪ ಬನ್ನಿ, ಪಪಂ ಸದಸ್ಯ ಶಾಮರಾವ ಕೊರವಿ, ಮಾಜಿ ಸದಸ್ಯ ಜಗನ್ನಾಥ ಕಟ್ಟಿ, ನ್ಯಾಯವಾದಿ ಶ್ರೀಮಂತ ಕಟ್ಟಿಮನಿ, ಆರ್. ಗಣಪತರಾವ, ವಿಜಯಕುಮಾರ್ ಗಂಗನಪಳ್ಳಿ ಆಗಮಿಸಿ ದಲಿತ ಮುಖಂಡರನ್ನು ಸಮಾಧಾನಗೊಳಿಸಿದರು.
ಚಿಮ್ಮನಚೋಡ್ ದಲಿತರು ಶಾಸಕರಿಗೆ ಮನವಿ ಪತ್ರ ಸಲ್ಲಿಸಲು ಆಗಮಿಸಿದಾಗ, ಅಲ್ಲಿನ ಜಗನ್ನಾಥ ರಾಠೋಡ ಮಾಸ್ತರ್ ಮತ್ತು ಶರಣರೆಡ್ಡಿ, ಮಾಜಿ ತಾಪಂ ಉಪಾಧ್ಯಕ್ಷರು ದಲಿತರಿಗೆ ಬೆದರಿಕೆ ಹಾಕಿ ಪೊಲೀಸರಿಂದ ಮಾನಸಿಕ ಹಿಂಸೆ ನೀಡುತ್ತಿದ್ದಾರೆ. ಕೋಡ್ಲಿ ಗ್ರಾಮದ ರಾಣಿ ಕಿತ್ತೂರು ಚೆನ್ನಮ್ಮ ವಸತಿ ಶಾಲೆ ಪ್ರಾಂಶುಪಾಲರನ್ನು ವಿನಾಕಾರಣ ಅಮಾನತುಗೊಳಿಸಿದ್ದಾರೆ ಎಂದು ದಲಿತ ಮುಖಂಡ ಗೌತಮ ಬೊಮ್ಮನಳ್ಳಿ ಆಕ್ರೋಶ ವ್ಯಕ್ತಪಡಿಸಿದರು.
ಗೊಂದಲ ತಿಳಿ: ವಿವಿಧ ಬೇಡಿಕೆ ಮನವಿ ಪತ್ರವನ್ನು ಶಾಸಕ ಡಾ. ಉಮೇಶ ಜಾಧವ ಸ್ವೀಕರಿಸಿ, ನಿಮ್ಮ ಬೇಡಿಕೆಗಳ ಬಗ್ಗೆ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಕೊಳ್ಳುತ್ತೇನೆಂದು ಭರವಸೆ ನೀಡಿದ ನಂತರ ಗೊಂದಲಮಯ ವಾತಾವರಣ ಶಾಂತಗೊಂಡಿತು.
ಸುಮಾರು ಅರ್ಧ ಗಂಟೆ ತನಕ ದಲಿತ ಮುಖಂಡರು ನಡೆಸಿದ ಪ್ರತಿಭಟನೆ ಮತ್ತು ಧಿಕ್ಕಾರದಿಂದಾಗಿ ಸ್ವಾತಂತ್ರ್ಯೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಅಡಚಣೆ ಉಂಟಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

