ಗುಲ್ಬರ್ಗಾ

ರಸ್ತೆ ದುಸ್ಥಿತಿ, ಸಂಚಾರಕ್ಕೆ ಸಂಚಕಾರ

Published On :

ಕನ್ನಡಪ್ರಭ ವಾರ್ತೆ, ಹುಣಸಗಿ, ಆ.16
ಆಡಳಿತದ ಉದಾಸೀನವೋ.. ಜನಪ್ರತಿನಿಧಿಗಳ ಅಸಡ್ಡೆಯೋ.. ಅಥವಾ ಸಾರ್ವಜನಿಕರ ದೌರ್ಭಾಗ್ಯವೋ ಗೊತ್ತಿಲ್ಲ. ಆದರೆ ಸಾರ್ವಜನಿಕರಿಗೆ ತಮ್ಮ ಅಗತ್ಯತೆಗಳನ್ನು ಪೂರೈಸಿಕೊಳ್ಳಲೂ ಪರದಾಡಬೇಕಾದ ಪರಿಸ್ಥಿತಿ ಬಂದೊದಗಿದ್ದು ಮಾತ್ರ ವಿಪರ್ಯಾಸ.
   ಏಕೆಂದರೆ- ಶುಕ್ರವಾರ ಬೆಳಗ್ಗೆ 10 ಗಂಟೆ ವೇಳೆಗೆ ಹುಣಸಗಿಗೆ ಆಗಮಿಸುವ ಮತ್ತು ಪಟ್ಟಣದಿಂದ ಬೇರೆ ಊರುಗಳಿಗೆ ತೆರಳುವ ಬಸ್ಸುಗಳ ಸಂಚಾರವೇ ಸ್ಥಗಿತಗೊಂಡಿತು. ಇದಕ್ಕೆ ಕಾರಣ ಚಿಕ್ಕಹೆಬ್ಬಾಳ ಮತ್ತು ಹೆಬ್ಬಾಳ (ಬಿ) ಗ್ರಾಮಗಳ ನಡುವೆ ಬಸ್ಸುಗಳು ರಸ್ತೆಯಲ್ಲಿನ ತಗ್ಗುಗಳಲ್ಲಿ ಸಿಲುಕಿದ್ದು.
ಸಂಚಾರಕ್ಕೆ ಸಂಚಕಾರ: ಸುರಪುರ ಘಟಕದ ಹೈದರಾಬಾದ್- ತಾಳಿಕೋಟೆ ಬಸ್ಸು ಸುಮಾರು 8.30ರ ವೇಳೆಗೆ ತಗ್ಗಿನಲ್ಲಿ ಸಿಲುಕಿಕೊಂಡಿದ್ದು, ಸ್ವಲ್ಪ ಅಂತರದಲ್ಲೇ ತಾಳಿಕೋಟೆ ಘಟಕದ ಮತ್ತೊಂದು ಬಸ್ ದೊಡ್ಡ ಹೊಂಡದಲ್ಲಿ ಸಿಲುಕಿಕೊಂಡಿತು. ಈ ಎರಡೂ ಬಸ್‌ಗಳು ಒಂದೇ ಸ್ಥಳದಲ್ಲಿ ನಿಂತಿದ್ದರಿಂದ ಬೇರಾವ ವಾಹನಗಳಿಗೆ ಸಂಚರಿಸಲು ದಾರಿಯೇ ಇರಲಿಲ್ಲ. ಮಳೆ ಜಿಟಿಯಾಗಿ ಬಂದಿದ್ದರಿಂದ ರಸ್ತೆಗಳಲ್ಲಿನ ದೊಡ್ಡ ತಗ್ಗುಗಳಲ್ಲಿ ಮಳೆನೀರು ನಿಂತು ಚಕ್ರಗಳು ತಗ್ಗಿನಲ್ಲಿ ಸಿಲುಕಿ ಪ್ರಯಾಣಿಕರು ಪರದಾಡುವಂತಾಯಿತು.
ಸುತ್ತುವರಿದು ಪ್ರಯಾಣ: ಈ ರಸ್ತೆಯಲ್ಲಿ ದಿನನಿತ್ಯ ಪ್ರಯಾಣಿಸುವ ಶಾಲಾ ವಿದ್ಯಾರ್ಥಿಗಳು ಸೇರಿದಂತೆ ಪ್ರಯಾಣಿಕರು 50 ಕಿಮೀ ಸುತ್ತುವರಿದು ಪ್ರಯಾಣಿಸಬೇಕಾಯಿತು. ಹುಣಸಗಿಯಿಂದ ಯಡಹಳ್ಳಿ, ಕಕ್ಕೇರಾ, ಬೈಲಾಪುರ, ಬೆನಕನಹಳ್ಳಿ ಮಾರ್ಗವಾಗಿ ಬಸ್ಸುಗಳು ಸಂಚರಿಸಿದವು. ಚಿಕ್ಕ ವಾಹನಗಳಾದ ಟಂಟಂ, ಕಾರು, ಜೀಪ್, ಎತ್ತಿನಗಾಡಿಗಳು, ಬೈಕುಗಳ ಸವಾರರು ಪರದಾಡುವಂತಾಯಿತು.
   ಸಂಜೆ ಯಾದಗಿರಿಯಲ್ಲಿ ಕ್ರೇನ್ ಲಭ್ಯವಾಗದ ಕಾರಣ ಬಿಜಾಪುರದಿಂದ ತರಲಾಗುತ್ತಿದೆ ಎಂದು ತಿಳಿದು ಬಂದಿದೆ. ಆದ್ದರಿಂದ ಸಂಜೆವರೆಗೂ ಹೊಂಡದಲ್ಲಿ ಸಿಲುಕಿಕೊಂಡ ಬಸ್ಸುಗಳು ಅಲ್ಲೇ ನಿಲ್ಲುವಂತಾಯಿತು. ಅಲ್ಲದೇ ಸಂಚಾರವೂ ಸ್ಥಗಿತಗೊಂಡಿತು.
ಪೈಪ್‌ಲೈನ್‌ಗಾಗಿ ತಗ್ಗು?: ರೈತರು ತಮ್ಮ ಪೈಪ್‌ಲೈನ್‌ಗಾಗಿ ರಸ್ತೆ ಅಗೆದು ದೊಡ್ಡ ತಗ್ಗುಗಳನ್ನು ತೋಡಿದ್ದರಿಂದಲೇ ಇಂತಹ ಸಮಸ್ಯೆಗೆ ಕಾರಣ ಎನ್ನುತ್ತಾರೆ ವಿದ್ಯಾರ್ಥಿಗಳಾದ ಗಂಗಾಧರ ಮತ್ತು ರಾಜು ಹುಣಸಗಿ ಪಟ್ಟಣದಿಂದ ಸುರಪುರ, ಶಹಾಪುರ, ಯಾದಗಿರಿ, ಗುಲ್ಬರ್ಗ, ದೇವಾಪುರ ಕ್ರಾಸ್, ತಾಳಿಕೋಟೆ, ಮುದ್ದೇಬಿಹಾಳ, ಬಾಗಲಕೋಟ ಸೇರಿದಂತೆ ಇತರ ಪಟ್ಟಣಗಳಿಗೆ ಹೋಗಬೇಕಾದ ಪ್ರಯಾಣಿಕರ ಪಾಡು ಹೇಳತೀರದ್ದಾಗಿತ್ತು. ಹುಣಸಗಿ ಪಟ್ಟಣದಿಂದ ಈ ಮಾರ್ಗದಲ್ಲಿ ನಿತ್ಯ ಸುಮಾರು 100ಕ್ಕೂ ಹೆಚ್ಚು ಬಸ್ಸುಗಳ ಓಡಾಟವಿದ್ದು, ರಸ್ತೆ ದುಸ್ಥಿತಿಯಿಂದಾಗಿ ಶುಕ್ರವಾರ ಎಲ್ಲರೂ ಪರದಾಡುವಂತಾಯಿತು.
ಶೀಘ್ರವೇ ರಸ್ತೆ ದುರಸ್ತಿಯಾಗಲಿ: ದೇವಾಪುರ ಕ್ರಾಸ್‌ದಿಂದ ಹುಣಸಗಿ ಪಟ್ಟಣಕ್ಕೆ ಕೇವಲ 45 ನಿಮಿಷ ತೆಗೆದುಕೊಳ್ಳಬೇಕಾದ ಸಮಯ ಈಗ ಒಂದೂವರೆ ಗಂಟೆಗೂ ಹೆಚ್ಚು ತೆಗೆದುಕೊಳ್ಳುತ್ತಿದೆ. ಅಷ್ಟರಮಟ್ಟಿಗೆ ರಸ್ತೆ ಹದಗೆಟ್ಟಿದೆ. ಇದರಿಂದ ದಿನನಿತ್ಯ ಪ್ರಯಾಣಿಸುವ ವಿದ್ಯಾರ್ಥಿಗಳಿಗೆ, ವ್ಯಾಪಾರಸ್ಥರಿಗೆ, ಪ್ರಯಾಣಿಕರು ತೊಂದರೆಗಳನ್ನು ಅನುಭವಿಸುತ್ತಿದ್ದಾರೆ. ಶೀಘ್ರವೇ ಈ ರಸ್ತೆ ದುರಸ್ತಿ ಮಾಡಬೇಕಿದೆ.
  ಹುಣಸಗಿ ಪಟ್ಟಣದಿಂದ 24 ಕಿಮೀ ದೂರದಲ್ಲಿರುವ ತಾಳಿಕೋಟೆ ತಲುಪಲು 1.24 ಗಂಟೆ ತೆಗೆದುಕೊಳ್ಳುತ್ತದೆ. ಮೊದಲೇ ರಸ್ತೆ ತಗ್ಗುಗಳಿಂದ ಕೂಡಿದೆ. ಮಳೆ ಬಂದರೆ ರಸ್ತೆಗಳೆಲ್ಲ ಗದ್ದೆಗಳಂತಾಗುತ್ತವೆ. ಶೀಘ್ರವೇ ರಸ್ತೆ ದುರಸ್ತಿ ಕಾರ್ಯ ಕೈಗೊಂಡು ತೊಂದರೆ ತಪ್ಪಿಸಬೇಕೆಂಬುದು ಈ ಭಾಗದವರ ಒತ್ತಾಯ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.