ವಿಷಾಹಾರ ಸೇವಿಸಿ 36 ಮಕ್ಕಳು ಅಸ್ವಸ್ಥ
ಕ.ಪ್ರ.ವಾರ್ತೆ ಕೆಂಭಾವಿ ಆ.23
ಬೆಳಗಿನ ಉಪಾಹಾರ ಸೇವಿಸಿ ಇಲ್ಲಿಗೆ ಸಮೀಪದ ಯಕ್ತಾಪುರ ಗ್ರಾಮದ ಕಸ್ತೂರಬಾ ವಸತಿ ಶಾಲೆಯ 36 ವಿದ್ಯಾರ್ಥಿಗಳು ಅಸ್ವಸ್ಥಗೊಂಡ ಘಟನೆ ಶುಕ್ರವಾರ ನಡೆದಿದೆ.
ಶುಕ್ರವಾರ ಬೆಳಗ್ಗೆ ಉಪಾಹಾರವಾಗಿ ಅವಲಕ್ಕಿ ಒಗ್ಗರಣೆಯನ್ನು ವಿದ್ಯಾರ್ಥಿಗಳಿಗೆ ನೀಡಲಾಗಿತ್ತು. ಅದನ್ನು ತಿಂದು ವಿದ್ಯಾರ್ಥಿಗಳು ಶಾಲೆಗೆ ಬಂದಿದ್ದರು. ಪ್ರಾರ್ಥನೆ ಸಂದರ್ಭ ಕೆಲ ವಿದ್ಯಾರ್ಥಿಗಳು ಹೊಟ್ಟೆನೋವು ಹಾಗೂ ವಾಂತಿ ಮಾಡಿಕೊಂಡರು. ತಕ್ಷಣ 8 ವಿದ್ಯಾರ್ಥಿಗಳನ್ನು ಕೆಂಭಾವಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆತಂದು ಚಿಕಿತ್ಸೆ ನೀಡಲಾಯಿತು. ನಂತರ ಉಪಾಹಾರ ಸೇವಿಸಿದ ಎಲ್ಲಾ ವಿದ್ಯಾರ್ಥಿಗಳು ವಾಂತಿ ಮಾಡಿಕೊಳ್ಳಲು ಆರಂಭಿಸಿದರು. ಶಾಲೆಯ ಶಿಕ್ಷಕರು ಹಾಗೂ ಸಿಬ್ಬಂದಿ ತಕ್ಷಣ ಎಲ್ಲಾ ವಿದ್ಯಾರ್ಥಿಗಳನ್ನು ಆಸ್ಪತ್ರೆಗೆ ದಾಖಲಿಸಿದರು.
ವಿಷಾಹಾರ ಸೇವನೆಯಿಂದ ಮಕ್ಕಳು ಅಸ್ವಸ್ಥಗೊಂಡಿದ್ದಾರೆ ಎನ್ನಲಾಗಿದೆ. ಆಸ್ಪತ್ರೆ ವೈದ್ಯಾಧಿಕಾರಿ ಡಾ.ಶಂಕರಗೌಡ ಮೂಲಿಮನಿ ತಪಾಸಣೆ ನಡೆಸಿ, ಸದ್ಯ ಯಾವುದೇ ಅಪಾಯವಿಲ್ಲ. ವಿದ್ಯಾರ್ಥಿಗಳು ಗುಣಮುಖರಾಗುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಮುಂಜಾನೆ ಅವಲಕ್ಕಿ ಸುಸಲಾ ಮಾಡಿದ್ದರು. ಅದನ್ನು ತಿಂದು ಶಾಲೆಗೆ ಬಂದೆವು. ಸ್ವಲ್ಪ ಹೊತ್ತಿನ ಬಳಿಕ ಹೊಟ್ಟಿ ಬ್ಯಾನಿ ಆಯಿತು. ವಾಂತಿ ಆರಂಭವಾಯಿತು. ನಂತರ ಆಸ್ಪತ್ರೆಗೆ ಕರೆದುಕೊಂಡು ಬಂದರು ಎಂದು ಅಸ್ವಸ್ಥ ವಿದ್ಯಾರ್ಥಿನಿ ಮಲಮ್ಮ ತಿಳಿಸಿದರು.
ಕಸ್ತೂರಬಾ ವಸತಿ ನಿಲಯದಲ್ಲಿ 88 ವಿದ್ಯಾರ್ಥಿಗಳಿದ್ದು, ಶುಕ್ರವಾರ 44 ವಿದ್ಯಾರ್ಥಿಗಳ ಹಾಜರಾತಿಯಿತ್ತು. ಅವರಲ್ಲಿ ಕೆಲವರು ಉಪಾಹಾರ ಸೇವಿಸಿರಲಿಲ್ಲ. ಆಹಾರ ಸೇವಿಸಿದ ಎಲ್ಲ ವಿದ್ಯಾರ್ಥಿಗಳು ಅಸ್ವಸ್ಥಗೊಂಡಿದ್ದಾರೆ. ಪಾಲಕರಲ್ಲಿ ಆತಂಕ ಮೂಡಿಸಿತ್ತು. ವಸತಿ ನಿಲಯವನ್ನು ಎನ್ಜಿಒ ಮೂಲಕ ನಡೆಸಲಾಗುತ್ತಿದ್ದು, ಕಳಪೆ ಆಹಾರ ಪೂರೈಕೆಯಿಂದ ಈ ಘಟನೆ ನಡೆದಿರಬಹು ಎಂದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಇಂದಿನ ಉಪಾಹಾರ ಹಾಗೂ ಆಹಾರ ಸಾಮಗ್ರಿಗಳನ್ನು ಪರೀಕ್ಷೆಗೆ ಒಳಪಡೆಸಿ ತಪ್ಪಿತಸ್ಥರ ವಿರುದ್ದ ಕ್ರಮ ಜರುಗಿಸಲಾಗುವುದು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೆಂಪರಂಗಯ್ಯ ತಿಳಿಸಿದ್ದಾರೆ. ಅವಲಕ್ಕಿ ವಗ್ಗರಣೆಯನ್ನು ಪರೀಕ್ಷೆಗಾಗಿ ಕಳುಹಿಸಲಾಗಿದೆ.
ಕ್ರಮ ಕೈಗೊಳ್ಳಲು ಸೂಚನೆ: ಈ ಘಟನೆಗೆ ಯಾರೇ ಕಾರಣರಾಗಿದ್ದರೂ ಅವರ ವಿರುದ್ದ ನಿರ್ದಾಕ್ಷಿಣ್ಯ ಕ್ರಮ ಜರುಗಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಶಾಸಕ ಗುರು ಪಾಟೀಲ ತಿಳಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ಅವರು, ಬಡ ಹೆಣ್ಣು ಮಕ್ಕಳಿಗೆ ಉತ್ತಮ ಶಿಕ್ಷಣ ಸಿಗಲಿ ಎಂದು ಸರ್ಕಾರ ಕಸ್ತೂರಬಾ ವಸತಿ ಶಾಲೆ ತೆರೆದಿದೆ. ಆದರೆ ವಸತಿ ನಿಲಯದ ನಿರ್ವಹಣೆ ಸರಿಯಾಗಿ ಆಗುತ್ತಿಲ್ಲ. ಇದರಿಂದ ಮಕ್ಕಳ ಓದಿನ ಮೇಲೆ ಪರಿಣಾಮ ಬೀರುತ್ತದೆ. ಅಲ್ಲದೇ ಪಾಲಕರಿಗೂ ಆತಂಕ ಉಂಟಾಗುತ್ತದೆ. ಆದ್ದರಿಂದ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಲು ಸೂಚಸಲಾಗಿದೆ ಎಂದು ಅವರು ತಿಳಿಸಿದರು.
ಪಾಲಕರ ದೂರು: ಬಡ ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡಲು ಸರ್ಕಾರ ಕೊಟ್ಯಂತರ ರು. ಖರ್ಚು ಮಾಡುತ್ತದೆ. ಆದರೆ, ಅಲ್ಲಿ ವಸತಿ ನಿಲಯದ ನಿರ್ವಹಣೆಯನ್ನು ಎನ್ಜಿಒಗೆ ವಹಿಸಲಾಗಿದೆ. ಸದ್ಯ ತರಕಾರಿ ಹಾಗೂ ಆಹಾರ ಧಾನ್ಯಗಳ ದರ ದುಪ್ಪಟ್ಟಾಗಿದೆ. ಎರಡು ಹೊತ್ತಿನ ಊಟ ಹಾಗೂ ಉಪಾಹಾರಕ್ಕಾಗಿ ಕೇವಲ 19 ಗಳನ್ನು ಎನ್ಜಿಒಗೆ ನೀಡಲಾಗುತ್ತಿದೆ. ಇದರಿಂದ ಮಕ್ಕಳಿಗೆ ಗುಣಮಟ್ಟದ ಆಹಾರ ನೀಡಲು ಸಾಧ್ಯವಿಲ್ಲ. ಆದ್ದರಿಂದ ಇದರ ಹೊಣೆ ಬೇರೆ ವಸತಿ ನಿಲಯದಂತೆ ನೇರವಾಗಿ ಸರ್ಕಾರವೇ ನಿಭಾಯಿಸಬೇಕು ಎಂದು ಪಾಲಕರು ಆಗ್ರಹಿಸಿದ್ದಾರೆ.
ಮಕ್ಕಳು ಅವಲಕ್ಕಿ ವಗ್ಗರಣೆ ತಿಂದು ಅಸ್ವಸ್ಥಗೊಂಡ ಘಟನೆ ಇಡೀ ಪಾಲಕ ವರ್ಗಕ್ಕೆ ಆಘಾತ ನೀಡಿದೆ. ಈ ಘಟನೆ ಬಗ್ಗೆ ಮಾಧ್ಯಮದಲ್ಲಿ ಪ್ರಸಾರವಾದರೂ ಆಸ್ಪತ್ರೆಗೆ ಇದುವರೆಗೆ ಯಾಮೊಬ್ಬ ಜನಪ್ರತಿನಿಧಿಯಾಗಲಿ, ಜಿಲ್ಲಾ ಮಟ್ಟದ ಅಧಿಕಾರಿಗಳಾಗಲಿ ಭೇಟಿ ನೀಡಿಲ್ಲ ಎಂದು ಪಾಲಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಕೆಂಪ ರಂಗಯ್ಯ ಅವರು ಯಕ್ತಾಪುರ ಕಸ್ತೂರಬಾ ಶಾಲೆಗೆ 3 ದಿನಗಳ ರಜೆ ಘೋಷಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

