ಗುಲ್ಬರ್ಗಾ

ಸಮಾಜಕ್ಕೆ ವಿಶ್ವಕರ್ಮರ ಕೊಡುಗೆ ಅಪಾರ: ನಂಜುಂಡಿ

Published On :

ಕನ್ನಡಪ್ರಭ ವಾರ್ತೆ, ಯಾದಗಿರಿ, ಆ.25
ವಿಶ್ವದಲ್ಲಿ ಶಿಲ್ಪಕಲೆಗೆ ಮಹತ್ವ ಕೊಟ್ಟ ಕೀರ್ತಿ ವಿಶ್ವಕರ್ಮ ಸಮಾಜಕ್ಕೆ ಸಲ್ಲುತ್ತದೆ. ಸಮಾಜ ಸಂಘಟಿತವಾಗಿ ಕುಲಕಸುಬನ್ನು ಉಳಿಸಿಕೊಂಡು ಹೋಗಲು ಗಟ್ಟಿ ನಿರ್ಧಾರ ತೆಗೆದುಕೊಳ್ಳುವುದು ಅಗತ್ಯವಿದೆ ಎಂದು ವಿಶ್ವಕರ್ಮ ಸಮಾಜ ರಾಜ್ಯಾಧ್ಯಕ್ಷ ಕೆ.ಪಿ. ನಂಜುಂಡಿ ಹೇಳಿದರು.
ವಿಶ್ವಕರ್ಮ ಸಮಾಜದ 5ನೇ ಜಯಂತ್ಯುತ್ಸವ ಹಿನ್ನೆಲೆಯಲ್ಲಿ ನಗರದ ವೀರಶೈವ ಕಲ್ಯಾಣ ಮಂಟದಲ್ಲಿ ಶನಿವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಬೇಲೂರು, ಹಳೆಬೀಡಿನಲ್ಲಿರುವ ಶಿಲ್ಪಕಲೆಗಳು ರಾಷ್ಟ್ರೀಯ ಗಮನ ಸೆಳೆಯುತ್ತಿವೆ. ಇದರಿಂದಾಗಿ ನಮ್ಮ ಸಮಾಜದ ಕೊಡುಗೆಯನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ರಾಜ್ಯ ಸರ್ಕಾರ ವಿಶ್ವಕರ್ಮ ಸಮಾಜದ ಅಭಿವೃದ್ಧಿಗೆ ನಿಗಮ ಮಂಡಳಿ ಸ್ಥಾಪಿಸಿದರೆ ಸಾಲದು. ಆದರೆ ನಮ್ಮ ಕುಲಕಸುಬು ಉಳಿಸಿ ಬೆಳೆಸಿಕೊಂಡು ಹೋಗಲು ಗಟ್ಟಿ ನಿರ್ಧಾರ ಕೈಗೊಳ್ಳುವುದು ಅತ್ಯವಶ್ಯವಿದೆ. ಇದನ್ನು ಸರ್ಕಾರ ಗಂಬೀರವಾಗಿ ಪರಿಗಣಿಸಬೇಕು ಎಂದು ಒತ್ತಾಯಿಸಿದರು.
ಹಿನ್ನಡೆಗೆ ಕಾರಣ: ರಾಜ್ಯದಲ್ಲಿ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕವಾಗಿ ವಿಶ್ವಕರ್ಮ ಸಮಾಜವು ಕಳೆದ ಆರು ದಶಕಗಳಿಂದಲೂ ತುಳಿತಕ್ಕೊಳಗಾಗಿದೆ. ಇದು ನಾವು ಅಭಿವೃದ್ಧಿಯಲ್ಲಿ ತೀವ್ರ ಹಿಂದುಳಿಯಲು ಪ್ರಮುಖ ಕಾರಣವಾಗಿದೆ. ರಾಜ್ಯದಲ್ಲಿ ಸುಮಾರು 35 ಲಕ್ಷದಷ್ಟು ಜನಸಂಖ್ಯೆಯನ್ನು ಸಮಾಜ ಹೊಂದಿದೆ. ಇದಲ್ಲದೇ ಎಲ್ಲಾ ವಿಧಾನಸಭೆ ಕ್ಷೇತ್ರಗಳಲ್ಲಿ ಸುಮಾರು 10ರಿಂದ 20 ಸಾವಿರ ಸಮಾಜದ ಜನರಿದ್ದಾರೆ. ಅಭ್ಯರ್ಥಿಗಳನ್ನು ಗೆಲ್ಲಿಸುವಲ್ಲಿ ನಮ್ಮ ಸಮಾಜದ ಕೊಡಗೆ ಅಲ್ಲಗಳೆಯುವಂತಿಲ್ಲ ಎಂದರು.
ಗ್ರಾಮೀಣ ಪ್ರದೇಶದಲ್ಲಿ ಇರುವ ವಿಶ್ವಕರ್ಮ ಸಮಾಜ ಬಾಂಧವರು ಸ್ಪರ್ಧಾತ್ಮಕ ಜಗತ್ತಿನಲ್ಲಿ ತಮ್ಮ ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ಕಲಿಸಲು ಮುಂದಾಗಬೇಕಿದೆ. ಇದರಿಂದಾಗಿ ಸಮಾಜದಲ್ಲಿ ಮುಖ್ಯವಾಹಿನಿಗೆ ಬರಲು ಅನುಕೂಲವಾಗುತ್ತದೆ. ಮಕ್ಕಳನ್ನು ಹುದುಗಿರುವ ಪ್ರತಿಭೆಯನ್ನು ಪ್ರೋತ್ಸಾಹಿಸುವ ಕೆಲಸ ಆಗಬೇಕಿದೆ. ಒಂದು ವೇಳೆ ಶಿಕ್ಷಣ ಮೊಟಕುಗೊಳಿಸಿದರೆ ಅವರ ಭವಿಷ್ಯಕ್ಕೆ ಕಲ್ಲು ಹಾಕಿದಂತಾಗುತ್ತದೆ. ಈಗಾಗಲೇ ರಾಜ್ಯದಲ್ಲಿ ಬಹುತೇಕ ಸಮುದಾಯದ ಹೆಸರಿನಲ್ಲಿ ಸರ್ಕಾರದ ನೇತೃತ್ವದಲ್ಲಿಯೇ ಜಯಂತ್ಯುತ್ಸವ ಆಚರಣೆ ಮಾಡಲಾಗುತ್ತಿದೆ. ಇದಕ್ಕೆ ತಮ್ಮದೇನು ಅಭ್ಯಂತರವಿಲ್ಲ. ಇದಲ್ಲದೇ ಪ್ರತಿವರ್ಷ ವಿಶ್ವಕರ್ಮ ಜಯಂತ್ಯುತ್ಸವನ್ನು ಸರ್ಕಾರವೇ ಆಚರಿಸಲು ಮುಂದಾಗಬೇಕು ಎಂದು ಆಗ್ರಹಿಸಿದರು.
ಅಭಿವೃದ್ಧಿ ಮಂಡಳಿ: ಕಾಳಹಸ್ತೇಂದ್ರ ಸ್ವಾಮೀಜಿ ಮಾತನಾಡಿ, ಸತತ 13 ವರ್ಷಗಳ ಕಾಲ ಕೆ.ಪಿ. ನಂಜುಂಡಿ ಅವರ ಹೋರಾಟದ ಫಲವಾಗಿ ರಾಜ್ಯ ಸರ್ಕಾರ ವಿಶ್ವಕರ್ಮ ಸಮಾಜದ ಹೆಸರಿನಲ್ಲಿ ಅಭಿವೃದ್ಧಿ ಮಂಡಳಿ ಸ್ಥಾಪನೆ ಮಾಡಿದೆ. ಒಗ್ಗಟ್ಟಿನಿಂದ ಇದ್ದರೆ ಸರ್ಕಾರದಿಂದ ಸೌಲಭ್ಯಗಳನ್ನು ಪಡೆಯಬಹುದು. ಇದಲ್ಲದೇ ರಾಜಕೀಯವಾಗಿ ಇನ್ನೂ ಸದೃಡರಾಗಬೇಕಿದೆ ಎಂದರು. ಇದಕ್ಕೂ ಮುನ್ನ ಕೆ.ಪಿ. ನುಂಜುಂಡಿ ಅವರನ್ನು ಮೈಲಾಪುರ ಅಗಸಿಯಿಂದ ರಥದ ಮೂಲಕ ಮೆರವಣಿಗೆ ಮಾಡಿ ಸಭೆಯಲ್ಲಿ ಅವರನ್ನು ಗೌರವಿಸಲಾಯಿತು.
ಮಹೇಶ್ವ ವಿಶ್ವಕರ್ಮ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಶ್ರೀನಿವಾಸ ಸ್ವಾಮೀಜಿ, ದೇವೀಂದ್ರ ಸ್ವಾಮೀಜಿ, ರವೀಂದ್ರ ಸ್ವಾಮೀಜಿ, ವೀರೇಂದ್ರ ಇನಾಮದಾರ, ಮಲ್ಲಾರಡ್‌ಡಿ ಅರಕೇರಾ, ಐ.ಸಿ. ಪಾಂಚಾಯಿತಿ, ಬ್ರಹ್ಮಗಣೇಶ, ಮೋನಪ್ಪ ಬಡಿಗೇರ ಇತರರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.