ಗುಲ್ಬರ್ಗಾ

ಹಾಸ್ಟೆಲ್ ಅಡುಗೆ ಹೇಗೆ ವಿಷವಾಯ್ತು?

Published On :

ಕನ್ನಡಪ್ರಭ ವಾರ್ತೆ  ಗುಲ್ಬರ್ಗ  ಆ.27
ಜೇವರ್ಗಿ ಸಮಾಜ ಕಲ್ಯಾಣ ಇಲಾಖೆ ಮೆಟ್ರಿಕ್ ಪೂರ್ವ ವಸತಿ ನಿಲಯದಲ್ಲಿ ಮಕ್ಕಳು ತಿನ್ನುವ ಅನ್ನ- ಸಾಂಬಾರ್ ವಿಷವಾದದ್ದು ಹೇಗೆ.
ಘಟನೆ ಸಂಭವಿಸಿ (ಆಗಲ್ಟ್ 13) 2ವಾರ ಉರುಳಿದರೂ ಅಡುಗೆ ವಿಷವಾದದ್ದು, ಹೇಗೆ ಎಂಬುದು ಯಕ್ಷ ಪ್ರಶ್ನೆಯಾಗಿ ಉಳಿದಿದೆ. ಅನ್ನ- ಸಾಂಬಾರ್ ತಿಂದ ವಸತಿ ನಿಲಯದ 39 ಮಕ್ಕಳು ವಾಂತಿ- ಭೇದಿ, ಹೊಟ್ಟೆನೋವಿಂದ ನರಳುತ್ತ ಆಸ್ಪತ್ರೆ ಸೇರಿದ್ದು, ನಂತರ ಕುಸಿದು ಬಿದ್ದು ಜೀವನ್ಮರಣ ಹೋರಾಟ ನಡೆಸಿದ್ದು ದೊಡ್ಡ ಸುದ್ದಿಯಾಗಿತ್ತು.
ಘಟನೆಯಿಂದ ಅನಾರೋಗ್ಯ ಕಾಡಿದ್ದ 39 ಮಕ್ಕಳಲ್ಲಿ ಕೆಲವರಿಗೆ ವಾರಕಾಲ ಆರೈಕೆ ಮಾಡಿ ಮನೆಗೆ ಕಳುಹಿಸಲಾಗಿತ್ತು. ತುಂಬ ಗಂಭೀರವಾಗಿ ವಿಷ ದೇಹಸೇರಿ ತೊಂದರೆ ಎದುರಿಸಿದ್ದ 13 ಮಕ್ಕಳಿಗೆ 12 ದಿನಗಳ ಕಾಲ ನಗರದ ಚಿರಾಯು ಹಾಗೂ ಸರ್ಕಾರಿ ಆಸ್ಪತ್ರೆಯಲ್ಲಿ ಆರೈಕೆ ಮಾಡಿ ಮನೆಗೆ ಕಳುಹಿಸಲಾಗಿತ್ತು.
ಈ ಘಟನೆ ಸಂಭವಿಸಿದ ಮಾರನೆ ದಿನವೇ ಹಾಸ್ಟೆಲ್ ವಾರ್ಡನ್, ಅಡುಗೆ ಸಿಬ್ಬಂದಿ ಸೇವೆಯಿಂದ ಅಮಾನತು ಮಾಡಲಾಗಿದೆ. ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿಗಳ ದೂರಿನ ಮೇರೆಗೆ ಜೇವರ್ಗಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮಕ್ಕಳು ಅಂದು ರಾತ್ರಿ ಉಂಡಿರುವ ಅನ್ನ- ಸಾಂಬಾರ್ ನಮೂನೆ, ಅವರ ವಾಂತಿ- ಭೇದಿ ಸ್ಯಾಂಪಲ್‌ಗಳನ್ನೆಲ್ಲ ಗುಲ್ಬರ್ಗದ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ರವಾನಿಸಿದ್ದಾರೆ. ಆದರೆ 14 ದಿನಗಾಳದರೂ ಇಂದಿಗೂ ಈ ದುರಂತದ ತನಿಖೆ ಚುರುಕಾಗಿಲ್ಲ.
ಪ್ರಕರಣದ ಹಿಂದಿನ ಕಾಣದ ಕೈಗಳನ್ನು ಪತ್ತೆಹಚ್ಚಿ ದಂಡಿಸುವ ನಿಟ್ಟಿನಲ್ಲಿ ಹೆಜ್ಜೆ ಹಾಕದೆ ತನಿಖೆ ಕುಟುಂತ್ತ ಸಾಗಿದ್ದರೂ ಜಾಣಕುರುಡು ಧೋರಣೆಗೆ ಅಂಟಿಕೊಂಡಿರುವುದು ಇಡೀ ಬೆಳವಣಿಗೆಯನ್ನೇ ಜನತೆ ಸಂಶಯದಿಂದ ಕಾಣುವಂತೆ ಮಾಡಿದೆ.
ಕ್ರಿಮಿನಾಶಕ ವಿಷ ಪದಾರ್ಥ: ಉನ್ನತ ಮೂಲಗಳ ಪ್ರಕಾರ ಹಾಸ್ಟೆಲ್‌ನಲ್ಲಿ ಅಂದು ಮಕ್ಕಳಿಗೆ ಉಣಬಡಿಸಲಾಗಿದ್ದ ಅನ್ನದಲ್ಲಿ ಕ್ರಿಮಿನಾಶಕ ಪದಾರ್ಥದ ವಾಸನೆ ಇತ್ತು. ಇದನ್ನು ಹಲವು ಪೊಲೀಸ್ ಅಧಿಕಾರಿಗಳು ಅನುಭವಿಸಿದ್ದಾರೆ. ಜೊತೆಗೇ ವೈದ್ಯರೂ ಈ ಮಾತನ್ನು ಧೃಢೀಕರಿಸಿದ್ದಾರೆ. ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ವಿಜಯಲಕ್ಷ್ಮೀ ಅವರ ಪ್ರಕಾರ ಆಹಾರದಲ್ಲಿ ಆರ್ಗನಿಕ್ ಫಾಸ್ಪೋರಸ್ ಕ್ರಿಮಿನಾಶಕ ಅಂಶ ಹೇರಳವಾಗಿ ಪತ್ತೆಯಾಗಿದೆ. ಜೇವರ್ಗಿ ಹಾಗೂ ಗುಲ್ಬರ್ಗದಲ್ಲಿರುವ ವೈದ್ಯರು ಈ ಸಂಗತಿ ಧೃಢೀಕರಿಸಿದ್ದಾರೆ.
ಕೇವಲ ತೊಗರಿಯಂತಹ ಬೆಳೆಗಳಿಗೆ ಸಿಂಪರಣೆ ಮಾಡುವ ಕ್ರಿಮಿನಾಶಕ ಮಕ್ಕಳ ಅಡುಗೆಯನ್ನು ಹೇಗೆ ಸೇರಿಕೊಂಡಿತು ಎಂಬುದೇ ಗಂಭೀರ ಪ್ರಶ್ನೆ.
ಸಿಬ್ಬಂದಿ ಜಗಳ- ಮಕ್ಕಳ ಕಿಡಿಗೇಡಿತನ ಶಂಕೆ: ಅಡುಗೆಯವರು, ವಾರ್ಡನ್... ಹೀಗೆ ಹಾಸ್ಟೆಲ್‌ನಲ್ಲಿರುವ ಸಿಬ್ಬಂದಿ ಒಳಜಗಳವೇನಾದರೂ ಇಂತಹ ದುಷ್ಕೃತ್ಯಕ್ಕೆ ಪ್ರೇರಣೆಯಾದರೆ ಮಕ್ಕಳ ನಡುವಿನ ಹುಡುಗಾಟಿಕೆ ಬುದ್ಧಿ, ಕಿಡಿಗೇಡಿತನದ ಬುದ್ಧಿಯೂ ಇಂತಹ ದುರಂತಕ್ಕೆ ಕಾರಣವಾಗಿರಬಹುದೆ ಈ ಪ್ರಶ್ನೆಗಳು ಚರ್ಚೆಯಲ್ಲಿವೆ. ಆದರೆ ಜೇವರ್ಗಿ ದುರಂತದ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಖಮರುಲ್ ಇಸ್ಲಾಂರಿಂದ ಹಿಡಿದು ಸಮಾಜಕಲ್ಯಾಣ ಇಲಾಖೆ ಅಧಿಕಾರಿ, ಜೇವರ್ಗಿ ಪೊಲೀಸ್ ಸಿಬ್ಬಂದಿಗೆ ಪ್ರಶ್ನಿಸಿದರೂ ಎಲ್ಲರೂ ವಿಧಿ ವಿಜ್ಞಾನ ಪ್ರಯೋಗಾಲಯದ ವರಿದಿ ನಿರೀಕ್ಷೆಯಲ್ಲಿದ್ದೇವೆ ಎಂದೇ ಹೇಳಿ ಸಾಗಹಾಕುತ್ತಿದ್ದಾರೆ.
ಹಾಸ್ಟೆಲ್‌ನಲ್ಲಿ ಅಡುಗೆಯವರು ತಮಗೆ ಪೂರೈಸುವ ದವಸ- ಧಾನ್ಯ ಬಳಸಿ ಅಡುಗೆ ಸಿದ್ಧಪಡಿಸಿಟ್ಟು ಹೋಗಿಬಿಡುತ್ತಾರೆ. ರಾತ್ರಿ 8ಗಂಟೆ ಹೊತ್ತಿಗೆ ಮಕ್ಕಳಿಗೆ ಅಡುಗೆ ಬಡಿಸಲಾಗುತ್ತದೆ. ಎಂದಿನಂತೆ ಅಡುಗೆಯವರೂ ತಾವೇ ಸಿದ್ಧಪಡಿಸಿರುವ ಆಹಾರ ಮಕ್ಕಳಿಗೆಂದು ಮನೆಗೆ ತುಸು ಒಯ್ದಿದ್ದಾರೆ. ಮನೆಯಲ್ಲಿ ಉಂಡಿರುವ ಅವರಿಗೆ ಯಾವುದೇ ಅನಾರೋಗ್ಯ ಕಾಡಿಲ್ಲ ಹಾಸ್ಟೆಲ್ ಅಡುಗೆ ಉಂಡವರಿಗೇ ಯಾಕೆ ಅನಾರೋಗ್ಯ ಕಾಡಿತು ಎಂಬುದೇ ನಿಗೂಢವಾಗಿದೆ.
6 ಮಕ್ಕಳ ವಾಂತಿಯಲ್ಲಿ ರಕ್ತ ಬಂದಿತ್ತು. ಹೀಗಾಗಿ ವಿಷ ದೇಹವನ್ನು ತುಂಬ ಕಾಡಿದೆ ಎಂಬುದನ್ನು ಮಕ್ಕಳಿಗೆ ಚಿಕಿತ್ಸೆ ನೀಡಿದ ವೈದ್ಯರೇ ಆತಂಕದಲ್ಲಿದ್ದದ್ದು ಸ್ಮರಿಸಿದರೆ ಜೇವರ್ಗಿ ಹಾಸ್ಟೆಲ್‌ನಲ್ಲಿ ಅಡುಗೆ ಸಿದ್ಧಪಡಿಸಿದ ನಂತರ ಉದ್ದೇಶಪೂರ್ವಕವಾಗಿಯೇ ವಿಷಕಾರಿ ಪದಾರ್ಥ ಅನ್ನ- ಸಾಂಬಾರ್‌ನಲ್ಲಿ ಬೆರೆಸಿರುವುದು ಸದ್ಯದ ಸಾಂದರ್ಭಿಕ ಬೆಳವಣಿಗೆಗಳ ಹಿನ್ನೆಲೆಯಲ್ಲಿ ವಿಶ್ಲೇಷಣೆಗೊಳಪಡಿಸಿದಾಗ ಸತ್ಯ ಎಂದು ಕಂಡುಬರುತ್ತಿದೆ.  ಪ್ರಯೋಗಾಲಯದ ವರದಿಗೆ ಜಿಲ್ಲಾಡಳಿತ, ಜಿಲ್ಲಾ ಪೊಲೀಸ್, ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯವರು ನಿರೀಕ್ಷೆಯಲ್ಲಿದ್ದಾರೆ. ಆದರೆ ಘಟನೆ ನಡೆದು 15 ದಿನಗಳು ಕಳೆದರೂ ವರದಿ ಇನ್ನೂ ಯಾರ ಕೈ ಸೇರಿಲ್ಲ ಎಂಬುದೇ ಸೋಜಿಗದ ವಿಚಾರ.
ಜಿಲ್ಲಾ ಉಸ್ತುವಾರಿ ಸಚಿವರ ಮೌನ:  ಜೇವರ್ಗಿ ಹಾಸ್ಟೆಲ್ ಮಕ್ಕಳ ವಿಷಾಹಾರ ದುರಂತದ ಸಂಗತಿ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಖಮರುಲ್ ಇಸ್ಲಾಂ ಮೌನವಾಗಿದ್ದಾರೆ. ಪ್ರಕರಣದ ಬಗ್ಗೆ ಹೆಚ್ಚಿನ ತನಿಖೆ ನಡೆಸುವ ಹಾಗೂ ಇಂತಹ ಘಟನೆಗಳು ಜಿಲ್ಲೆಯಲ್ಲಿ ಎಲ್ಲಿಯೂ ಮರುಕಳಿಸದಂತೆ ಮಾಡಲು ಕಟ್ಟುನಿಟ್ಟುನ ಕ್ರಮಗಳನ್ನು ಕೈಗೊಳ್ಳಲು ಸಾಕಷ್ಟು ಅವಕಾಶಗಳಿದ್ದರೂ ಇಂದಿಗೂ ಆ ವಿಚಾರವಾಗಿ ಯಾವುದೇ ಕ್ರಮಗಳು ಜಿಲ್ಲಾ ಪಾಲಕ ಮಂತ್ರಿಗಳ ಅರ್ಹತೆಯಲ್ಲಿ ಕೈಗೊಳ್ಳುವ ಗೋಜಿಗೆ ಹೋಗಿಲ್ಲ.
 ಈ ಬಗ್ಗೆ ಪ್ರಶ್ನಿಸಿದಾಗಲೂ ಸಚಿವರು ಸಮಜಾಯಿಷಿ ನೀಡಿದರೆ ಹೊರತು ನಿಖರ ಮಾಹಿತಿ ನೀಡಲೇ ಇಲ್ಲ. ಹಾಸ್ಟೆಲ್‌ಗಳಿಗೆ ಕಳಪೆ ಗುಣಮಟ್ಟದ ಆಹಾರ ಸರಬರಾಜು ಆಗುತ್ತಿರುವ ವಿಚಾರ ಜಿಲ್ಲಾಧಿಕಾರಿಗಳೇ ಪತ್ತೆ ಹಚ್ಚಿ ಬಹಿರಂಗ ಹೇಳಿಕೆ ನೀಡಿದ್ದರೂ ಈ ವಿಚಾರವಾಗಿಯೂ ದಿನಸಿ ಪೂರೈಕೆದಾರರ ವಿರುದ್ಧ ಕ್ರಮಕ್ಕೆ ಇಂದಿಗೂ ಜಿಲ್ಲಾಡಳಿತವಾಗಲಿ, ಇಲಾಖೆಯಾಗಲಿ ಯಾರೂ ಮುಂದಾಗಿಲ್ಲ ಎಂಬುದು ಸೋಜಿಗದ ಸಂಗತಿ.
ಡಿಸಿ- ಸಿಇಓ ಮೌನ: ಜಿಲ್ಲಾಧಿಕಾರಿ ಪ್ರಸನ್ನಕುಮಾರ್, ಜಿಪಂ ಸಿಇಓ ಪಲ್ಲವಿ ಆಕುರಾತಿ ಹಾಸ್ಟೇಲ್‌ಗೆ ಭೇಟಿ ಕೊಟ್ಟು ಬಂದವರು. ಅಲ್ಲಿ ಘಟನೆ ದಿನ ಕಂಡ ಹುಳುಕು- ಕೊಳಕು ದಿನಸಿ 2 ದಿನಗಳಲ್ಲೇ ಬದಲಾಗಿದ್ದ ಸಂಗತಿಗೂ ಇವರು ಸಾಕ್ಷಿಯಾದವರು. ಆದಾಗ್ಯೂ ದಿನಸಿ ಪೂರೈಕೆಯಲ್ಲಿನ ಹುಳಕು ಬಯಲಿಗೆ ಎಳೆದು ಅದನ್ನು ಬಿಗಿಯಾಗಿಸುವಲ್ಲಿ Þ ಹಿರಿಯ ಅಧಿಕಾರಿಗಳ ಹಂತದಲ್ಲಿಯೂ ಯಾವುದೇ ಕ್ರಮಗಳು ಇಂದಿಗೂ ಜರುಗಿಲ್ಲ ಎಂಬುದು ಕಟು ವಾಸ್ತವ.
ಈ ವಿಚಾರವಾಗಿ ಜಿಲ್ಲಾಧಿಕಾರಿ ಪ್ರಸನ್ನಕುಮಾರರನ್ನು ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದಾಗ ಅವರು ಹಾರಿಕೆ ಉತ್ತರ ನೀಡಿದರೆ ಹೊರತು ಧಾನ್ಯ ಪೂರೈಸುವವರ ವಿರುದ್ಧ ಕ್ರಮ ಇಂದಿಗೂ ಜರುಗಿಸಿಲ್ಲ ಎಂಬುದಕ್ಕೆ ಯಾವುದೇ ಉತ್ತರ ನೀಡಲಿಲ್ಲ.

 ಶೇಷಮೂರ್ತಿ ಅವಧಾನಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.