ಗುಲ್ಬರ್ಗಾ

ಕುಸನೂರು ಗ್ರಾಪಂ ಕಚೇರಿಗೆ ಬೀಗ ಜಡಿದು ಪ್ರತಿಭಟನೆ

Published On :

ಗುಲ್ಬರ್ಗ: ಕುಸನೂರ ಗ್ರಾಪಂ ವ್ಯಾಪ್ತಿಯ ಸರಸ್ವತಿಪುರ, ಕೃಷ್ಣಾನಗರ ಹಾಗೂ ಎನ್‌ಜಿಒ ಬಡಾವಣೆಗಳಿಗೆ ಕುಡಿವ ನೀರು ಸೇರಿದಂತೆ ಮೂಲ ಸೌಲಭ್ಯ ಕಲ್ಪಿಸುವಂತೆ ಒತ್ತಾಯಿಸಿ ನಾಗರಿಕರು ಸರಸ್ವತಿಪುರ ಅಭಿವೃದ್ಧಿ ಸಮಿತಿ ನೇತೃತ್ವದಲ್ಲಿ ಬುಧವಾರ ಕುಸನೂರ ಗ್ರಾಪಂ ಕಚೇರಿಗೆ ಬೀಗ ಜಡಿದು ಖಾಲಿ ಕೊಡಗಳೊಂದಿಗೆ ಪ್ರತಿಭಟನೆ ನಡೆಸಿದರು. ಬಡಾವಣೆಗಳಲ್ಲಿ ಒಳರಸ್ತೆಗಳು ನಿರ್ಮಾಣವಾಗಿಲ್ಲ, ಮೂರು ಬಡಾವಣೆಗಳಲ್ಲಿ ಮುಖ್ಯ ರಸ್ತೆ ನಿರ್ಮಾಣ ಮಾಡಬೇಕು ಮತ್ತು ರಸ್ತೆ ಅಗಲೀಕರಣಗೊಳಿಸಬೇಕು. ಒಳಚರಂಡಿ ನಿರ್ಮಿಸಬೇಕು, ಶಾಶ್ವತ ಕುಡಿಯುವ ನೀರು ಕಲ್ಪಿಸಬೇಕು, ಸಾರ್ವಜನಿಕ ಕೊಳವೆಬಾವಿಗಳನ್ನು ಅಳವಡಿಸಬೇಕು, ಬೀದಿದೀಪಗಳು ಅಳವಡಿಸಬೇಕು, ಸಾರ್ವಜನಿಕ ಉದ್ಯಾನವನ, ಚಿಕ್ಕಮಕ್ಕಳಿಗಾಗಿ ಜೋಕಾಲಿ, ಚಾರು ಬಂಡೆಗಳ ನಿರ್ಮಾಣ ಹಾಗೂ ನಿರ್ವಹಣೆ ಮಾಡುವುದು ಸೇರಿದಂತೆ ವಿವಿಧ ಬೇಡಿಕೆಗಳು ಈಡೇರಿಸಬೇಕು ಎಂದು ಒತ್ತಾಯಿಸಿ ಸುಮಾರು ಒಂದು ಗಂಟೆಕಾಲ ಕಚೇರಿ ಬೀಗ ಜಡಿದು ಪ್ರತಿಭಟನೆ ನಡೆಸಿದರು. ಅಧಿಕಾರಿಗಳ ಭರವಸೆ ಮೇರೆಗೆ ಪ್ರತಿಭಟನಾಕಾರರು ತಮ್ಮ ಹೋರಾಟ ಕೈಬಿಟ್ಟರು. ಪ್ರತಿಭಟನೆಯಲ್ಲಿ ಸಮಿತಿ ಅಧ್ಯಕ್ಷ ಕೆ. ಮಲ್ಲಾರಿರಾವ, ಕಾರ್ಯಾಧ್ಯಕ್ಷ ಮಾರುತಿ ಪಾಟೀಲ್, ಕಾರ್ಯದರ್ಶಿ ಬಸವರಾಜ ಕುರನೆ ಸೇರಿದಂತೆ ಮೂರು ಬಡಾವಣೆಗಳ  ನಾಗರಿಕರು ಭಾಗವಹಿಸಿದ್ದರು.
ಆರೋಪದಲ್ಲಿ ಹುರುಳಿಲ್ಲ: ಸ್ಪಷ್ಟನೆ
ಚಿಂಚೋಳಿ:  ತಾಲೂಕು ಸಮಾಜ ಕಲ್ಯಾಣ ಇಲಾಖೆಯ ವಸತಿ ನಿಲಯಗಳಿಗೆ ಪ್ರವೇಶಕ್ಕಾಗಿ ವಿದ್ಯಾರ್ಥಿಗಳ ಆಯ್ಕೆ ಪಟ್ಟಿಗೆ ಶಾಸಕರು ಅನುಮೋದನೆ ನೀಡಿಲ್ಲ ಎಂದು ತಾಲೂಕು ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ ವಾದ) ಮಾಡಿರುವ ಆರೋಪ ಸತ್ಯಕ್ಕೆ ದೂರವಾಗಿದ್ದು, ಸಂಪೂರ್ಣ ನಿರಾಧಾರವಾಗಿದೆ ಎಂದು ತಾಲೂಕು ಕಾಂಗ್ರೆಸ್ ಸಮಿತಿ ಪರಿಶಿಷ್ಟ ಜಾತಿ ವಿಭಾಗದ ತಾಲೂಕು ಅಧ್ಯಕ್ಷ ಆರ್.ಗಣಪತರಾವ, ಮುಖಂಡರಾದ ಮನೋಹರ್ ದೇಗಲಮಡಿ, ಶಿವಕುಮಾರ್ ಕೊಳ್ಳೂರ್ ತಿಳಿಸಿದ್ದಾರೆ. ಪ್ರಸಕ್ತ ಸಾಲಿನಲ್ಲಿ ತಾಲೂಕಿನ ಸಮಾಜ ಕಲ್ಯಾಣ ಇಲಾಖೆ ವಸತಿ ನಿಲಯಕ್ಕಾಗಿ ಶಾಸಕ ಡಾ.ಉಮೇಶ ಜಾಧವ ಅವರು ಜೂ.29ರಂದು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಸಿದ್ದಪಡಿಸಿದ ಆಯ್ಕೆ ಪಟ್ಟಿಗೆ ಅನುಮೋದನೆ ನೀಡಿದ್ದಾರೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಈಗ ಎಲ್ಲ ವಿದ್ಯಾರ್ಥಿಗಳು ವಸತಿ ನಿಲಯದಲ್ಲಿನ ಸೌಲಭ್ಯಗಳನ್ನು ಪಡೆದುಕೊಳ್ಳುತ್ತಿದ್ದಾರೆ. ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ ವಾದ) ಪದಾಧಿಕಾರಿಗಳು ಗೊತ್ತುಗುರಿಯಿಲ್ಲದೆ, ಸಂಪೂರ್ಣ ಮಾಹಿತಿ ಇಲ್ಲದೆ ಶಾಸಕರ ವಿರುದ್ಧ ಸುಳ್ಳು ಆರೋಪ ಮಾಡಿರುವುದಕ್ಕೆ ಖಂಡನೀಯ ಎಂದು ತಿಳಿಸಿದ್ದಾರೆ.
ವಿವಾಹ ಮುಂದೂಡಿಕೆ
ಗುಲ್ಬರ್ಗ: ಗುಲ್ಬರ್ಗದ ರಾಜ್ಯ ಮಹಿಳಾ ನಿಲಯದ ನಿವಾಸಿ ಕುಮಾರಿ ವಿಜಯಲಕ್ಷ್ಮೀ ಅವರ ವಿವಾಹವು ಯಾದಗಿರಿಯ ದತ್ತುರಾವ ಅವರೊಂದಿಗೆ ಆ.29ರಂದು ನಡೆಯಬೇಕಿತ್ತು. ಆ ವಿವಾಹದ ದಿನಾಂಕವನ್ನು ಮುಂದೂಡಲಾಗಿದೆ ಎಂದು ರಾಜ್ಯ ಮಹಿಳಾ ನಿಲಯದ ಅಧೀಕ್ಷಕರು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.