ಗುಲ್ಬರ್ಗಾ

ಅಧಿಕಾರಿಗಳ ಅಂಧೇರಿ ದರ್ಬಾರ್; ಖರ್ಗೆ ಕಿಡಿ

Published On :

ಕನ್ನಡಪ್ರಭ ವಾರ್ತೆ, ಗುಲ್ಬರ್ಗ, ಡಿ.1
ಅಧಿಕಾರಿಗಳ ಅಸಮರ್ಪಕ ಮಾಹಿತಿಯಿಂದ ಸಿಡಿಮಿಡಿಗೊಂಡ ರೇಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ, ಜಿಲ್ಲೆಯಲ್ಲಿ ಅಧಿಕಾರಿಗಳು ಅಂಧಾ ದರ್ಬಾರ್ ನಡೆಸಿದ್ದಾರೆಂದು ಸಿಡಿಮಿಡಿಗೊಂಡ ಪ್ರಸಂಗ ನಡೆಯಿತು.
ಇಲ್ಲಿನ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಭಾನುವಾರ ನಡೆದ ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಯಲ್ಲಿ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಸಾಕಷ್ಟು ಅನುದಾನ ಬಿಡುಗಡೆ ಮಾಡುತ್ತಿವೆ. ಆದರೆ, ಅಧಿಕಾರಿಗಳು ಅನುದಾನವನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳುತ್ತಿಲ್ಲ. ಅಪೂರ್ಣ ಕಾಮಗಾರಿಗಳಿಂದ ಗುಲ್ಬರ್ಗ ಪ್ರಗತಿ ಕುಂಟುತ್ತಿದೆ ಎಂದು ಏರಿದ ಧ್ವನಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.
ಅನುದಾನ ವಾಪಸ್: 2011- 12ನೇ ಸಾಲಿನ ವಿವಿಧ ಅಭಿವೃದ್ಧಿ ಕಾಮಗಾರಿ ನೆನೆಗುದಿಗೆ ಬಿದ್ದಿವೆ. ಜಿಪಂ ವ್ಯಾಪ್ತಿಯ ವಿವಿಧ ಯೋಜನೆಗಳ ಅರ್ಧದಷ್ಟು ಅನುದಾನವನ್ನು ನಿಗದಿತ ಅವಧಿಯಲ್ಲಿ ಖರ್ಚು ಮಾಡದ ಕಾರಣ ವಾಪಸ್ ಹೋಗಿದೆ. ಪ್ರತಿ ವರ್ಷ 15- 20 ಕೋಟಿಗಳಂತೆ ಮೂರು ವರ್ಷಗಳಲ್ಲಿ ಸುಮಾರು 100 ಕೋಟಿ ಸರ್ಕಾರಕ್ಕೆ ಮರಳಿ ಹೋಗಿವೆ. ಹೀಗಾದರೆ ಅಭಿವೃದ್ಧಿ ಆಗೋದಾದ್ರೂ ಹೇಗೆಂದು ಖಾರವಾಗಿ ಪ್ರಶ್ನಿಸಿದರು.
ಪ್ರಾಮಾಣಿಕವಾಗಿ ಶ್ರಮಿಸುತ್ತಿಲ್ಲ: ಕೇಂದ್ರ-ರಾಜ್ಯ ಸರ್ಕಾರದಿಂದ ಹೈ-ಕ ಭಾಗದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಕೋಟ್ಯಂತರ ಅನುದಾನ ಬಿಡುಗಡೆಯಾಗುತ್ತಿವೆ. ಆದರೆ, ಅಧಿಕಾರಿಗಳ ನಿಷ್ಕಾಳಜಿಯಿಂದಾಗಿ ಅಭಿವೃದ್ಧಿ ಆಗುತ್ತಿಲ್ಲ. ಇದಕ್ಕೆ ಅಧಿಕಾರಿಗಳು ಬೇಜವಾಬ್ದಾರಿ ಕಾರಣ ಎಂದು ಹರಿಹಾಯ್ದರು.
ಜಿಪಂ ಅಧ್ಯಕ್ಷರು, ಸಿಇಒ ಜಿಪಂ ವ್ಯಾಪ್ತಿಯ ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಸೂಕ್ತ ಎಚ್ಚರಿಕೆ ನೀಡಿ ಸಮರ್ಪಕವಾಗಿ ಅನುದಾನ ಬಳಕೆ ಮಾಡುವಂತೆ ನೋಡಿಕೊಳ್ಳಿ, ಯಾವ ಅಧಿಕಾರಿಗಳು ತಮ್ಮ ಆದೇಶಕ್ಕೆ ಮನ್ನಡೆ ನೀಡುವುದಿಲ್ಲವೋ ಅಂಥವರ ವಿರುದ್ಧ ಮುಲಾಜಿಯಿಲ್ಲದೆ ಕ್ರಮ ಕೈಗೊಳ್ಳಿ ಎಂದರು.
ಈ ಭಾಗದ ಅಭಿವೃದ್ಧಿಗೆ ಸಂವಿಧಾನದ 371(ಜೆ)ನೇ ವಿಧಿ ಅನ್ವಯ ಹೆಚ್ಚು ಅನುದಾನ ಬರಲಿದೆ. ಈ ಭಾಗದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಮುತುವರ್ಜಿ ವಹಿಸಿ ಅನುದಾನ ಕಾಲಮಿತಿಯಲ್ಲಿ ಬಳಸಿಕೊಂಡು ಅಭಿವೃದ್ಧಿಗೆ ಆದ್ಯತೆ ನೀಡಬೇಕು. ಶಾಸಕರು ಮತ್ತು ಉನ್ನತ ಅಧಿಕಾರಿಗಳು ಮೇಲಿಂದ ಮೇಲೆ ತಮ್ಮ ವ್ಯಾಪ್ತಿಯಲ್ಲಿ ನಡೆಯುವ ಕಾಮಗಾರಿಗಳ ಪರಿಶೀಲನೆ ನಡೆಸಬೇಕೆಂದು ಸಲಹೆ ನೀಡಿದರು.
ರಾಜ್ಯದಿಂದ ಆಗದಿದ್ರೆ ಕೇಂದ್ರಕ್ಕೆ ವಹಿಸಿ: ಜಿಲ್ಲೆಯ ಅಭಿವೃದ್ಧಿಗೆ ಪೂರಕವಾಗುವ ವಿಮಾನ ನಿಲ್ದಾಣ ಕಾಮಗಾರಿ ಹಲವು ದಶಕಗಳಿಂದ ನೆನೆಗುದಿಗೆ ಬಿದ್ದಿದೆ. ಗುತ್ತಿಗೆದಾರ ಸಂಸ್ಥೆ ರಾಹಿ ಹಾಗೂ ಅದರ ಪಾಲುದಾರಿಕೆ ಸಂಸ್ಥೆಗಳ ಮಧ್ಯದ ಭಿನ್ನಮತ ಕಾರಣವೆಂದ ಅವರು, ರಾಜ್ಯ ಸರ್ಕಾರದಿಂದ ಈ ಕಾಮಗಾರಿ ಪೂರ್ಣಗೊಳಿಸಲು ಸಾಧ್ಯವಾಗದಿದ್ದರೆ ಕೇಂದ್ರಕ್ಕೆ ವಹಿಸಿಕೊಡಿ, ನಾವು ಅದನ್ನು ಪೂರ್ಣಗೊಳಿಸುತ್ತಿವೆ ಎಂದರು.
ಸಭೆಯಲ್ಲಿ ಹಾಜರಿದ್ದ ರಾಜ್ಯ ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ್, ಖರ್ಗೆಯವರ ಈ ಮಾತಿಗೆ ಸ್ಪಂದಿಸಿದರಲ್ಲದೆ ಬಾಕಿ ಉಳಿದಿರುವ ಶೇ.20ರಷ್ಟು ಕಾಮಗಾರಿಯನ್ನು ಆದಷ್ಟು ಬೇಗ ಪೂರ್ಣಗೊಳಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಉಸ್ತುವಾರಿ ಸಚಿವ ಖಮರುಲ್ ಇಸ್ಲಾಂ ಮತ್ತು ತಾವು (ಶರಣಪ್ರಕಾಶ ಪಾಟೀಲ್) ಸೇರಿ ಇದನ್ನು ಗಂಭೀರವಾಗಿ ಪರಿಗಣಿಸಿ ಕ್ರಮ ಕೈಗೊಳ್ಳಿ ಎಂದು ಖರ್ಗೆ ಸಲಹೆ ನೀಡಿದರು.
ವಿಳಂಬೋತ್ಸವ ಆಚರಿಸ್ರಿ: ಗುಲ್ಬರ್ಗ ತಾಲೂಕಿನ ಮಹಾಗಾಂ ಬಳಿಯ ಕುರಿಕೋಟ ಸೇತುವೆ ಕಾಮಗಾರಿ ಮತ್ತೆ ನೆನೆಗುದಿಗೆ ಬಿದ್ದಿದೆ. ಕಳೆದ 10 ವರ್ಷಗಳಿಂದ ಈ ಕಾಮಗಾರಿ ವಿಳಂಬವಾಗಿರುವುದಿರಂದ ವಿಳಂಬೋತ್ಸವ ಆಚರಿಸಬೇಕೆಂದು ಅಧಿಕಾರಿಗಳಿಗೆ ಖರ್ಗೆ ತಿವಿದರು. ರಾಜ್ಯ ಸರ್ಕಾರ ಈ ಸೇತುವೆ ಕಾಮಗಾರಿಗೆ ಅನುದಾನ ನೀಡಿದ್ದರೂ ಕಾಮಗಾರಿ ಪೂರ್ಣಗೊಳ್ಳುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದಾಗ ಸಂಬಂಧಿತ ಅಧಿಕಾರಿಯೊಬ್ಬರು 2- 3 ದಿನಗಳಲ್ಲಿ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದು ಉತ್ತರಿಸಿದರು.
ಸಣ್ಣೂರ- ಶಹಾಬಾದ್, ಮಾಡಬೂಳ- ಗೋಟೂರ್, ಚಿಂಚೋಳಿ- ಕುರಿಕೋಟ- ಹೇರೂರ ರಸ್ತೆ ಕಾಮಗಾರಿಗೆ ಅನುದಾನ ಬಿಡುಗಡೆಯಾದರೂ ಕಾಮಗಾರಿ ನಡೆದಿಲ್ಲ. ಕೂಡಲೇ ಕಾಮಗಾರಿ ಕೈಗೊಳ್ಳಲು ಅಧಿಕಾರಿಗಳಿಗೆ ಖರ್ಗೆ ಸೂಚಿಸಿದರು. ಡಿಸಿ ಎನ್.ವಿ.ಪ್ರಸಾದ, ಜಿಪಂ ಅಧ್ಯಕ್ಷ ರಮೇಶ ಮರಗೋಳ, ಜಿಪಂ ಸಿಇಒ ಕುಮಾರ್, ಯಾದಗಿರಿ ಡಿಸಿ ಜಮಾದಾರ್, ವಿವಿಧ ಇಲಾಖೆಗಳ ಅಧಿಕಾರಿಗಳು, ಶಾಸಕರಾದ ಡಾ.ಉಮೇಶ ಜಾಧವ, ಬಿ.ಆರ್. ಪಾಟೀಲ್, ಜಿ.ರಾಮಕೃಷ್ಣ, ಅಲ್ಲಂಪ್ರಭು ಪಾಟೀಲ್ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.