ಸಮರ್ಪಕ ವಿದ್ಯುತ್ ಪೂರೈಕೆಗೆ ಆಗ್ರಹ
ಕನ್ನಡಪ್ರಭ ವಾರ್ತೆ ಆಳಂದ ಡಿ.13
ನೀರಿಲ್ಲದೆ ತೋಟಗಾರಿಕೆ ಬೆಳೆ ಒಣಗುತ್ತಿದ್ದು, ಕೃಷಿ ಪಂಪಸೆಟ್ಗಳಿಗೆ ಸಮರ್ಪಕ ವಿದ್ಯುತ್ ಪೂರೈಸಬೇಕೆಂದು ಒತ್ತಾಯಿಸಿ ತಾಲೂಕಿನ ಸರಸಂಬಾ 33 ಕೆವಿ ವಿದ್ಯುತ್ ಘಟಕದ ಮುಂದೆ ರೈತರು ಪ್ರತಿಭಟನಾ ಧರಣಿ ಸತ್ಯಾಗ್ರಹ ನಡೆಸಿದರು.
ಬೆಳಗಿನ ಹೊತ್ತಿನಲ್ಲಿ 33 ಕೆವಿ ವಿದ್ಯುತ್ ಘಟಕದ ಮುಂದೆ ಹಠಾತ್ ಜಮಾಯಿಸಿದ ಸರಸಂಬಾ ವಲಯದ ರೈತರು, ಎರಡು ಫೇಸ್ ವಿದ್ಯುತ್ನ್ನು 12 ಗಂಟೆ ಮತ್ತು ಮೂರು ಫೇಸ್ ವಿದ್ಯುತ್ 8 ಗಂಟೆ ಪೂರೈಸಬೇಕು ಎಂದು ಒತ್ತಾಯಿಸಿ ನಡೆಸಿದ ಧರಣಿ ಸತ್ಯಾಗ್ರಹ ಸಂಜೆ 7.30ಕ್ಕೆ ಮೇಲಾಧಿಕಾರಿಗಳ ಭರವಸೆಯಿಂದ ತೆರೆ ಕಂಡಿತು.
ಸ್ಥಳಕ್ಕೆ ಜೆಸ್ಕಾಂ ವ್ಯವಸ್ಥಾಪಕರು ಬಂದು ಸೂಕ್ತ ಭರವಸೆ ನೀಡಿದರೆ ಮಾತ್ರ ಧರಣಿ ಹಿಂಪಡೆದುಕೊಳ್ಳಲಾಗುವುದು ಎಂದು ರೈತರು ಪಟ್ಟು ಹಿಡಿದಿದ್ದರು.
ಸರ್ಕಾರದ ನಿಯಮವೂ ಪಾಲನೆಯಾಗುತ್ತಿಲ್ಲ: ಈಗಾಗಲೇ ಪೂರೈಸುವ 6 ಗಂಟೆ ವಿದ್ಯುತ್ನಲ್ಲಿ ಹತ್ತಾರು ಬಾರಿ ಕಡಿತಗೊಳಿಸುತ್ತಿದ್ದಾರೆ. ಇದರಿಂದ ಬೆಳೆಗಳಿಗೆ ನೀರುಣಿಸಲು ಸಾಧ್ಯವಾಗುತ್ತಿಲ್ಲ. ಸರ್ಕಾರ ನಿಯಮದಂತೆಯೂ ವಿದ್ಯುತ್ ಸರಬರಾಜು ಮಾಡುತ್ತಿಲ್ಲ ಎಂದು ಆರೋಪಿಸಿದರು.
ಗ್ರಾಪಂ ಮಾಜಿ ಅಧ್ಯಕ್ಷ ಪಂಡಿತ ಜಿಡಗೆ, ಸದಸ್ಯ ಮಲ್ಲಿನಾಥ ಎನ್. ಭಕರೆ, ಮಹಾಂತಪ್ಪ ಆಲೂರೆ, ಬಸವರಾಜ ಪಾಟೀಲ್, ನಾಗಪ್ಪ ಮುಗಳೆ, ಮಹಾಂತಪ್ಪ ಮಾಡಿಯಾಳೆ, ಶರಣಬಸಪ್ಪ ಚೌಧರಿ, ಶರಣಬಸಪ್ಪ ಭಕರೆ, ರಾಜಕಶೇಖರ ಖಾನಾಪುರೆ, ಲಕ್ಷ್ಮಣ ಪಾಟೀಲ್, ಮಲ್ಲಿನಾಥ ಮುಗಳೆ ಸೇರಿದಂತೆ ಅನೇಕ ರೈತರು ಸ್ಥಳಕ್ಕೆ ಮೇಲಾಧಿಕಾರಿಗಳು ಬಂದು ಭರವಸೆ ನೀಡುವಂತೆ ಪಟ್ಟುಹಿಡಿದುಕೊಂಡಿದ್ದರು.
ವಲಯದ ಹಿರೋಳಿ, ಸಾವಳೇಶ್ವರ, ಪಡಸಾವಳಿ, ನಿರುಗುಡಿ, ಅಂಬೆವಾಡ ಸೇರಿ ಇನ್ನಿತರ ರೈತರು ಪಾಲ್ಗೊಂಡಿದ್ದರು.
ಅಧಿಕಾರಿ ಭರವಸೆ: ಬೆಳಗಿನಿಂದಲೇ ರೈತರು ಧರಣಿ ಆರಂಭಿಸಿದ್ದರೂ ಸಂಜೆ 7.30ರ ಸುಮಾರಿಗೆ ಗುಲ್ಬರ್ಗ ಜೆಸ್ಕಾಂನ ಕಾರ್ಯನಿರ್ವಾಹಕ ಅಭಿಯಂತರ ಸಿದ್ರಾಮ ಪಾಟೀಲ್ ಭೇಟಿ ನೀಡಿ, ವಿದ್ಯುತ್ ಸರಬರಾಜು ಘಟಕದಲ್ಲಿ ಸಿಬ್ಬಂದಿ ನೇಮಿಸಿ ಮಧ್ಯ ಮಧ್ಯ ವಿದ್ಯುತ್ ಪೂರೈಕೆಯಲ್ಲಿ ಕಡಿತ ಮಾಡದಂತೆ ಆರು ಗಂಟೆ ಮೂರು ಫೇಸ್ ವಿದ್ಯುತ್ ನೀಡಲಾಗುವುದು ಎಂದು ಭರವಸೆ ನೀಡಿದ ಮೇಲೆ ಧರಣಿ ಹಿಂಪಡೆಯಲಾಯಿತು. ಮಾದನಹಿಪ್ಪರಗಾ ಪಿಎಸ್ಐ ಡಿ.ಬಿ. ಕಟ್ಟಿಮನಿ ಬಂದೋಬಸ್ತ್ ಒದಗಿಸಿದರು.
ಸಿಎಂಗೇ ಕೇಳಿ...
ನೀವು ಏನೇ ಕೇಳೋದಿದ್ದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನೇ ಕೇಳಿ. ನಮ್ಮ ಕೈಯಲ್ಲಿ ಏನೂ ಇಲ್ಲ ಎಂದು ನೇರಾನೇರ ಉತ್ತರ ಕೊಟ್ಟವರು ಸರಸಂಬಾ ವಿದ್ಯುತ್ ಘಟಕದ ಎಂಜಿನಿಯರ್. ಸಮರ್ಪಕ ವಿದ್ಯುತ್ ಪೂರೈಕೆಗೆ ಕೇಳಿದರೆ ಈ ರೀತಿ ಹೇಳಿದ್ದಾರೆ ಎಂದು ರೈತ, ಗ್ರಾಪಂ ಸದಸ್ಯ ಮಲ್ಲಿನಾಥ ಎನ್.ಭಕರೆ ಆರೋಪಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

