ಗುಲ್ಬರ್ಗಾ

ಸಭೆ ನಡೆಸಿ ಸಮಸ್ಯೆ ಬಗೆಹರಿಸಿಕೊಳ್ಳಿ

Published On :

ಗುಲ್ಬರ್ಗ: ಕಬ್ಬಿನ ಬೆಲೆ ನಿಗದಿ ಮತ್ತು ಬಾಕಿಯಿರುವ ಹಣ ಪಾವತಿಸುವ ಕುರಿತು ಕೂಡಲೇ ರೈತರು ಹಾಗೂ ಆಯಾ ಸಕ್ಕರೆ ಕಾರ್ಖಾನೆಗಳ ಆಡಳಿತ ಮಂಡಳಿ ಹಾಗೂ ಅಧಿಕಾರಿಗಳು ಸೇರಿಕೊಂಡು ಸಭೆಯನ್ನು ನಡೆಸುವ ಮೂಲಕ ಪರಿಹಾರ ಕಂಡುಕೊಳ್ಳಬೇಕೆಂದು ಜಿಲ್ಲಾಧಿಕಾರಿ ಎನ್.ವಿ. ಪ್ರಸಾದ ಕಾರ್ಖಾನೆಗಳ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ನಗರದ ವಿಕಾಸ ಭವನದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸುದೀರ್ಘ ಸಭೆ ನಡೆಸಿದ ನಂತರ ಈ ಸೂಚನೆಯನ್ನು ಜಿಲ್ಲಾಧಿಕಾರಿಗಳು ನೀಡಿದ್ದಾರೆ. ಅಲ್ಲದೆ ಹೀಗೆ ಗೊಂದಲ ಮಾಡಿಕೊಂಡು ಪದೇ ಪದೇ ಜಿಲ್ಲಾಡಳಿತ ಮಧ್ಯಪ್ರವೇಶ ಮಾಡುವಂತೆ ಮಾಡಬೇಡಿ. ನ್ಯಾಯ ಸಮ್ಮತವಾಗಿ ರೈತರಿಗೆ ಕೊಡಬೇಕಾದ ಬೆಲೆ ಇನ್ನಿತರ ಸವಲತ್ತುಗಳನ್ನು ಕಾನೂನುಬದ್ಧವಾಗಿ ನೀಡಬೇಕೆಂದು ಜಿಲ್ಲಾಧಿಕಾರಿ ಎನ್.ವಿ. ಪ್ರಸಾದ ಮತ್ತು ಹೆಚ್ಚುವರಿ ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ಹೇಳಿದರು.
ನಿರ್ಧರಿತ ಬೆಲೆ ನೀಡದಿದ್ರೆ ಕ್ರಮ: ಬೆಲೆ ನಿಗದಿ ಮಾಡುವ ಅಧಿಕಾರ ಜಿಲ್ಲಾಡಳಿತಕ್ಕೆ ಇಲ್ಲ. ಅಲ್ಲದೆ ಇದು ಈಗ ಕೋರ್ಟ್ನಲ್ಲಿರುವುದರಿಂದ ಸರ್ಕಾರದ ಮಟ್ಟದಲ್ಲಿ ಆಗಬೇಕಿದೆ. ಸರ್ಕಾರ ನಿರ್ಧರಿಸಿದ ಬೆಲೆಯನ್ನು ಕಾರ್ಖಾನೆಗಳು ನೀಡಬೇಕು, ಉಲ್ಲಂಘಿಸಿದರೆ ಕ್ರಮ ಅನಿವಾರ್ಯವಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಬೆಲೆ ನಿಗದಿ, ಕಬ್ಬು ಪ್ರದೇಶ ಹಂಚಿಕೆ ಮಾಡುವುದರ ಕುರಿತು ರೈತರು ಸಲ್ಲಿಸಿದ ಮನವಿಯನ್ನು ಆಧರಿಸಿ ಕಬ್ಬು ಮತ್ತು ಸಕ್ಕರೆ ಆಯುಕ್ತರಿಗೆ ಪತ್ರ ಬರೆದು ನಿರ್ದೇಶನ ಪಡೆದುಕೊಂಡು ಅದರಂತೆ ಮುಂದಿನ ದಿನಗಳಲ್ಲಿ ಕ್ರಮ ಕೈಗೊಳ್ಳಲಾಗುವುದು. ಅಲ್ಲಿಯವರೆಗೂ ಈಗ ಚಿಂಚೋಳಿ ಮತ್ತು ಚಿತ್ತಾಪುರ ತಾಲೂಕಿನಲ್ಲಿ ಬೆಳೆದಿರುವ ಕಬ್ಬನ್ನು ಕಟಾವು ಮಾಡಿ ಎತ್ತುವಳಿ ಮಾಡುವಂತೆ ಗ್ರೀನ್ ಕೋರ್ ಕಾರ್ಖಾನೆಯ ಅಧಿಕಾರಿಗಳಿಗೆ ಡಿಸಿ ತಿಳಿಸಿದರು.
ಕಬ್ಬು ಎತ್ತುವಳಿ ಆಡಳಿತ ಮಂಡಳಿ ಹೊಣೆ: ಅಲ್ಲದೆ ಆಯಾ ಕಾರ್ಖಾನೆಗಳ ವ್ಯಾಪ್ತಿಯಲ್ಲಿ ಬೆಳೆದಿರುವ ಕಬ್ಬು ಎತ್ತುವಳಿ ಮಾಡುವುದು ಆಡಳಿತ ಮಂಡಳಿಗಳ ಹೊಣೆಯಾಗಿದೆ. ಅಲ್ಲದೆ ಕಾರ್ಖಾನೆಗಳು ರೈತರೊಂದಿಗೆ ಸರಿಯಾಗಿ ವರ್ತನೆ ಮಾಡದೆ ಹೋದರೆ ಕ್ರಮ ಕೈಗೊಳ್ಳುವಂತೆ ಸಕ್ಕರೆ ಆಯುಕ್ತರಿಗೆ ಪತ್ರ ಬರೆಯುವುದಾಗಿ ತಿಳಿಸಿದರು.
ಕಬ್ಬು ಬೆಳೆದ ರೈತರಿಗೆ ಏಕರೂಪ ದರವನ್ನು ನೀಡುತ್ತಿಲ್ಲ, ಒಬ್ಬರಿಗೊಂದು, ಮತ್ತೊಬ್ಬರಿಗೊಂದು ಮಾಡಲಾಗುತ್ತಿದೆ. ಸಾಗಣೆ ವೆಚ್ಚದಲ್ಲಿಯೂ ಹೀಗೆ ಮಾಡಲಾಗುತ್ತಿದೆ ಎಂದು ಸಭೆಯಲ್ಲಿ ಪಾಲ್ಗೊಂಡಿದ್ದ ರೈತರು ಆಕ್ರೋಶ ವ್ಯಕ್ತಪಡಿಸಿದರು.
ಸಭೆ ಹಳ್ಳಿ ಪಂಚಾಯ್ತಿಗಿಂತಲೂ ಕಡೆ: ಒಂದು ಹಂತದಲ್ಲಿ ಅಧಿಕಾರಿಗಳ ವಿರುದ್ಧವೇ ಸಿಡಿದೆದ್ದ ರೈತರು, ನೀವು ಸಹ ಕಾರ್ಖಾನೆಗಳ ಪರವಾಗಿದ್ದೀರಿ, ರೈತರ ನೆರವಿಗೆ ಬರುತ್ತಿಲ್ಲ ಎಂದು ಆರೋಪಿಸಿದರು. ನಿಮ್ಮ ಮಾತು ಕೇಳಲ್ಲ ಅಂದ್ರೆ ಯಾಕ್ರಿ ಸಭೆ ಮಾಡುತ್ತಿದ್ದೀರಿ ಎಂದು ಡಿಸಿ ಅವರನ್ನೇ ಖಾರವಾಗಿ ಪ್ರಶ್ನಿಸಿದರು. ಅಲ್ಲದೆ ಹಳ್ಳಿಯಲ್ಲಿ ನಡೆಯುವ ಪಂಚಾಯಿತಿಗಿಂತಲೂ ಕಡೆಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಆಗ ಡಿಸಿ ರೈತರನ್ನು ಸಮಾಧಾನಪಡಿಸಿದರು. ಕಂಪನಿಯವರು ಈ ಸಲ ಕಬ್ಬು ಸಾಗಣೆಯಲ್ಲಿ ಬೆಲೆಯನ್ನು ಕಡಿತ ಮಾಡಲ್ಲ ಎಂದು ಸ್ಪಷ್ಟಪಡಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.