ಶಂಕರ ಪ್ರತಿಷ್ಠಾನ ವಿದ್ಯಾರ್ಥಿ ವೇತನ
ಕನ್ನಡಪ್ರಭ ವಾರ್ತೆ ಗುಲ್ಬರ್ಗ ಡಿ.15
ಡಾ. ಪಿ.ಎಸ್. ಶಂಕರ ಪ್ರತಿಷ್ಠಾನದ 2013- 14ನೇ ಸಾಲಿನ ವೈದ್ಯ ವಿದ್ಯಾರ್ಥಿ ವೇತನದ ಫಲಾನುಭವಿಗಳಾಗಿ ಬೀದರ್ ಸರ್ಕಾರಿ ಮೆಡಿಕಲ್ ಕಾಲೇಜಿ (ಬ್ರಿಮ್ಸ್)ನ ಸುಕನ್ಯಾ ಬಿರಾದಾರ, ದಾವಣಗೆರೆ ಜೆಜೆಎಂ ಮೆಡಿಕಲ್ ಕಾಲೇಜಿನ ವಿದ್ಯಾ ಎಂ.ಎಲ್. ಹಾಗೂ ಹುಬ್ಬಳ್ಳಿಯ ಕಿಮ್ಸ್ ವಿದ್ಯಾರ್ಥಿ ಶಂಕರ ಗೆಜ್ಜಿ ಆಯ್ಕೆಗೊಂಡಿದ್ದಾರೆ.
ರೈತಾಪಿ ಬಡ ಕುಟುಂಬದ ಹಾಗೂ ಎಸ್ಸೆಸ್ಸೆಲ್ಸಿವರೆಗೆ ಕನ್ನಡ ಮಾಧ್ಯಮದಲ್ಲಿ ಅಧ್ಯಯನ ಮಾಡಿರುವ ಈ ಮೂವರು ಪ್ರತಿಭಾವಂತ ವಿದ್ಯಾರ್ಥಿಗಳಿಗೆ 2013ರ ಅಕ್ಟೋಬರ್ ತಿಂಗಳಿನಿಂದಲೇ ಪ್ರತಿ ತಿಂಗಳು ತಲಾ 1 ಸಾವಿರ ವೈದ್ಯ ವಿದ್ಯಾರ್ಥಿ ವೇತನವನ್ನು ಅವರ ಎಂಬಿಬಿಎಸ್ ಅಧ್ಯಯನದ ನಾಲ್ಕೂವರೆ ವರ್ಷದ ಅವಧಿವರೆಗೆ ನೀಡಲಾಗುವುದು.
ಸುಕನ್ಯಾ ಬಿರಾದಾರ: ತಂದೆ ರೇವಣಸಿದ್ದಪ್ಪ ಬಿರಾದಾರ ಅವರ ಮರಣದ ನಂತರ ತಾಯಿ ವಿಜಯಲಕ್ಷ್ಮೀ ಪೋಷಣೆಯಲ್ಲಿ, ಬೀದರ್ ವೈದ್ಯ ವಿಜ್ಞಾನ ಸಂಸ್ಥೆ (ಬ್ರಿಮ್ಸ್)ಯಲ್ಲಿ ಎಂಬಿಬಿಎಸ್ ಮೊದಲ ವರ್ಷದಲ್ಲಿ ಓದುತ್ತಿರುವ ಸುಕನ್ಯಾ ಪಿಯುಸಿ ಸೈನ್ಸ್ದಲ್ಲಿ ಶೇ. 90.30 ಅಂಕಗಳನ್ನು ಗಳಿಸಿದಂತೆ ಸಿಇಟಿಯಲ್ಲಿ ವೈದ್ಯಕೀಯ ವಿಭಾಗದಲ್ಲಿ 332ನೇ ರ್ಯಾಂಕ್ ಪಡೆದಿರುವ ಪ್ರತಿಭಾವಂತೆ.
ರ್ಯಾಂಕ್ ಚೆನ್ನಾಗಿದ್ದರೂ ಬಡತನದ ಸ್ಥಿತಿಯಿಂದ ಸ್ಥಳೀಯ ಬೀದರ್ ವೈದ್ಯಕೀಯ ಕಾಲೇಜನ್ನೇ ಆರಿಸಿಕೊಂಡ ಅನಿವಾರ್ಯತೆ ತನ್ನದು ಎಂದು ಹೇಳುವ ಸರಳ ಮನಸ್ಸಿನ ಸುಕನ್ಯಾ, ಡಾ. ಪಿ.ಎಸ್. ಶಂಕರ ಪ್ರತಿಷ್ಠಾನದ ಕಾರ್ಯದರ್ಶಿ ಡಾ. ಇಂದಿರಾ ವೀರಭದ್ರಪ್ಪ ವೈದ್ಯ ವಿದ್ಯಾರ್ಥಿ ವೇತನದ 7ನೇ ಫಲಾನುಭವಿ.
ವಿದ್ಯಾ ಎಂ.ಎಲ್: ಚಿತ್ರದುರ್ದ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಚಿತ್ರಹಳ್ಳಿ ಗ್ರಾಮದ ವಿದ್ಯಾ ಮಲ್ಲಿಕಾರ್ಜುನ ಎಲ್. ಪಿಯುಸಿ ಸೈನ್ಸ್ನಲ್ಲಿ 94.67 ಅಂಕಗಳನ್ನು ಪಡೆದು ಸಿಇಟಿ ಮೆಡಿಕಲ್ನಲ್ಲಿ 788ನೇ ರ್ಯಾಂಕ್ ಪಡೆದುಕೊಂಡಿದ್ದಾಳೆ. ದಾವಣಗೆರೆಯ ಪ್ರತಿಷ್ಠಿತ ಬಾಪೂಜಿ ಶಿಕ್ಷಣ ಸಂಸ್ಥೆಯ ಜೆ.ಜೆ.ಎಂ ಮೆಡಿಕಲ್ ಕಾಲೇಜಿನಲ್ಲಿ ಅಧ್ಯಯನ ನಿರತಳಾಗಿರುವ ಈ ಕುವರಿ ಲಿಂ. ಡಾ. ಎನ್.ಗಂಗಾಧರಪ್ಪ ವೈದ್ಯ ವಿದ್ಯಾರ್ಥಿವೇತನದ 4ನೇ ಫಲಾನುಭವಿ.
ಶಂಕರ ಗೆಜ್ಜಿ: ಬಡತನವನ್ನೇ ಹಾಸಿ ಹೊದ್ದು ಅವಿರತ ಪರಿಶ್ರಮದಿಂದ ಹುಬ್ಬಳ್ಳಿಯ ಕರ್ನಾಟಕ ವೈದ್ಯವಿಜ್ಞಾನ ಸಂಸ್ಥೆ (ಕಿಮ್ಸ್)ಯಲ್ಲಿ ಎಂಬಿಬಿಎಸ್ ಮೊದಲ ವರ್ಷದಲ್ಲಿ ಓದುತ್ತಿರುವ ಶಂಕರ ಸಂಗಣ್ಣ ಗೆಜ್ಜಿ ಬಿಜಾಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಸಾಸನೂರು ಗ್ರಾಮದವರು.
ಎಸ್ಸೆಸ್ಸೆಲ್ಸಿಯಲ್ಲಿ 625ಕ್ಕೆ 613 ಅಂಕ, ಪಿಯುಸಿಯಲ್ಲಿ 600ಕ್ಕೆ 567 ಅಂಕಗಳನ್ನು(94.50) ಪಡೆದು ಸಿಇಟಿ ಮೆಡಿಕಲ್ನಲ್ಲಿ 406ನೇ ರ್ಯಾಂಕ್ ಗಳಿಸಿರುವ ಶಂಕರ ಗೆಜ್ಜಿ ಅಪ್ಪಟ ಗ್ರಾಮಜನ್ಯ ಪ್ರತಿಭೆ. ಈತ ಡಾ. ಪಿ.ಎಸ್. ಶಂಕರ ವೈದ್ಯ ವಿದ್ಯಾರ್ಥಿ ವೇತನದ ಹೆಮ್ಮೆಯ 12ನೇ ಫಲಾನುಭವಿ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

