ಗುಲ್ಬರ್ಗಾ

ಸುದ್ದಿ ಸಂಕ್ಷೇಪ

Published On :

ಆತ್ಮಹತ್ಯೆ ಬೆದರಿಕೆ
ಗುಲ್ಬರ್ಗ/ಶಹಾಬಾದ್: ಶಹಾಬಾದ್ ನಗರದ ಹಲವು ಗಣ್ಯರೊಂದಿಗೆ 2007ರಿಂದ 2010ರ ವರೆಗೆ ಟ್ರಾನ್ಸ್‌ಪೋರ್ಟ್ ವ್ಯವಹಾರದಲ್ಲಿ ಕೊಡಬೇಕಾದ ಬಾಕಿ ಹಣವನ್ನು ಪಾವತಿಸದಿದ್ದರೆ ವಿಷಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಬೆನಕಲ್ ಗ್ರಾಮದ ಗವಿಸಿದ್ದಪ್ಪ ಬಾಗೋಡಿ ಎಂಬುವವರು ಪೊಲೀಸ್ ಠಾಣೆಗೆ ದೂರಿ, ಬೆದರಿಕೆ ಹಾಕಿದ್ದಾರೆ. ಕೊಪ್ಪಳದ ಹೊಸಳ್ಳಿ ಗ್ರಾಮದಲ್ಲಿ ಓಂ ಟ್ರಾನ್ಸ್‌ಪೋರ್ಟ್ ವ್ಯವಹಾರ ನಡೆಸುತ್ತಿದ್ದಾಗ ನಗರದ 13 ಜನರು ಅವರೊಂದಿಗೆ ವ್ಯವಹಾರ ನಡೆಸುತ್ತಿದ್ದರು. ವ್ಯವಹಾರದಲ್ಲಿ ಸುಮಾರು 9.5 ಲಕ್ಷ ನೀಡಬೇಕಾಗಿತ್ತು. ಆದರೆ, ಹಲವು ಬಾರಿ ಬಂದು ಕೇಳಿದಾಗ ಹಣ ನೀಡದೆ ಅನ್ಯಾಯ ಮಾಡಿದ್ದಾರೆಂದು ದೂರಿನಲ್ಲಿ ವಿವರಿಸಿದ್ದಾರೆ. ಸ್ಥಳೀಯ ಪೊಲೀಸರು ಮೌಖಿಕ ದೂರನ್ನು ಸ್ವೀಕರಿಸಿದ್ದು, ಈಗಾಗಲೇ ಮಧ್ಯಸ್ಥಿಕೆ ವಹಿಸಿ ನಾಲ್ಕು ಜನರನ್ನು ಮನವೊಲಿಸಿ ಹಣ ಹಿಂತಿರುಗಿಸಿ ಕೊಡುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನೂ 9 ಜನ ಹಣ ನೀಡಬೇಕಾಗಿದೆ. ನಗರದಲ್ಲಿಯೇ ವಾಸ್ತವ್ಯ ಹೂಡಿದ್ದು, ಪೊಲೀಸರ ಭರವಸೆಯಲ್ಲಿ ಕಾಲಕಳೆಯುತ್ತಿದ್ದಾನೆ.
ಓಲಾ ನಿಧನಕ್ಕೆ ಶೋಕ
ಗುಲ್ಬರ್ಗ: ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವ ಸೀಸರಾಮ ಓಲಾ ಅವರ ನಿಧನಕ್ಕೆ ಎನ್‌ಸಿವಿಟಿ ಸದಸ್ಯ ಜಗದೇವ ಗುತ್ತೇದಾರ ಸಂತಾಪ ಸೂಚಿಸಿದ್ದಾರೆ. ಕಾಂಗ್ರೆಸ್ ಪಕ್ಷದ ಒಬ್ಬ ಹಿರಿಯ ಅನುಭವಿ ಹಾಗೂ ಧೀಮಂತ ನಾಯಕರನ್ನು ಕಳೆದುಕೊಂಡಿದೆ. ಸಾರ್ವಜನಿಕರ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು ಎಂದು ತಿಳಿಸಿದ್ದಾರೆ. ಅವರ ನಿಧನದಿಂದ ಪಕ್ಷಕ್ಕೆ ತುಂಬಲಾರದ ನಷ್ಟ ಉಂಟಾಗಿದೆ. ಭಗವಂತನು ಅವರ ಆತ್ಮಕ್ಕೆ ಶಾಂತಿಯನ್ನು ನೀಡಲಿ ಅವರ ಕುಟುಂಬದವರಿಗೆ ದೇವರು ದುಃಖ ಭರಿಸುವ ಶಕ್ತಿಯನ್ನು ನೀಡಲಿ ಎಂದು ಜಗದೇವ ಗುತ್ತೇದಾರ, ಭೀಮರಾವ ಸರ್ವಮಂಗಳ ಪ್ರಾರ್ಥಿಸಿದ್ದಾರೆ.
ಕಾಯ್ದೆ ಕಾರ್ಯಾಗಾರ
ಗುಲ್ಬರ್ಗ: ಜಿಲ್ಲಾಡಳಿತ ಹಾಗೂ ಜಿಲ್ಲಾ ತಂಬಾಕು ನಿಯಂತ್ರಣ ಕೋಶ ಇವರ ಸಂಯುಕ್ತಾಶ್ರಯದಲ್ಲಿ ಡಿ.20ರಂದು ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಜಿಲ್ಲೆಯಲ್ಲಿ ತಂಬಾಕು ನಿಯಂತ್ರಣ ಕಾಯ್ದೆ ಪರಿಣಾಮಕಾರಿ ಅನುಷ್ಠಾನ, ಸಾಮರ್ಥ್ಯಾಭಿವೃದ್ಧಿ ಮತ್ತು ಮೇಲ್ವಿಚಾರಣೆ ಕುರಿತು ಪ್ರಾಧಿಕೃತ ಅಧಿಕಾರಿಗಳಿಗೆ ಒಂದು ದಿನದ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ.
ಅಪಘಾತದಲ್ಲಿ ಸಾವು, ಪರಿಹಾರ ಭರವಸೆ
ಚಿಂಚೋಳಿ: ತಾಲೂಕಿನ ಚಂದ್ರಂಪಳ್ಳಿ ಸಣ್ಣ ಸೇತುವೆ ಬಳಿ ಟ್ರ್ಯಾಕ್ಟರ್ ಪಲ್ಟಿಯಾಗಿ ಕಾಂಗ್ರೆಸ್ ಕಾರ್ಯಕರ್ತ ತುಕ್ಕಪ್ಪ ಕಲ್ಲಪ್ಪ ಮೃತಪಟ್ಟ ಹಿನ್ನೆಲೆಯಲ್ಲಿ ಶಾಸಕ ಡಾ. ಉಮೇಶ ಜಾಧವ ಅವರ ಕುಟುಂಬಕ್ಕೆ ಭೇಟಿ ನೀಡಿ ಸಾಂತ್ವನ ಹೇಳಿ ಸರ್ಕಾರದಿಂದ ಪರಿಹಾರ ಒದಗಿಸಿಕೊಡುವುದಾಗಿ ಭರವಸೆ ನೀಡಿದರು. ಚಂದ್ರಂಪಳ್ಳಿ ಗ್ರಾಮದ ತುಕ್ಕಪ್ಪ ಅತ್ಯಂತ ನಿಷ್ಠಾವಂತ ಕಾರ್ಯಕರ್ತನಾಗಿದ್ದು, ಅವರ ನಿಧನದಿಂದಾಗಿ ನಮ್ಮ ಪಕ್ಷಕ್ಕೆ ಹಾನಿಯಾಗಿದೆ. ಮೃತನ ಪತ್ನಿಗೆ ಸರ್ಕಾರದಿಂದ ವಿಧವಾ ವೇತನ ಮತ್ತು ರಾಷ್ಟ್ರೀಯ ಸಾಮಾಜಿಕ ಭದ್ರತೆ ಯೋಜನೆ ಅಡಿಯಲ್ಲಿ ಪರಿಹಾರ ಮತ್ತು ಆಶ್ರಯ ಯೋಜನೆ ಅಡಿಯಲ್ಲಿ ಮನೆ ಮಂಜೂರಿಗೊಳಿಸಲಾಗುವುದು ಎಂದರು. ಕಾಂಗ್ರೆಸ್ ಮುಖಂಡರಾದ ಕೆ.ಎಂ.ಬಾರಿ, ಪಪಂ ಸದಸ್ಯ ಅಬ್ದುಲ್ ಬಾಸೀತ್, ಸಂಗಯ್ಯ ಸ್ವಾಮಿ, ಲಕ್ಷ್ಮಣ ತುಮಕುಂಟಾ, ಇಬ್ರಾಹಿಂ ದೇಗಲಮಡಿ ಇತರರು ಇದ್ದರು.
ಪದಾಧಿಕಾರಿಗಳ ಆಯ್ಕೆ
ಚಿತ್ತಾಪುರ: ಪಟ್ಟಣದ ಸರ್ಕಾರಿ ಬಾಲಕರ ವಸತಿ ನಿಲಯದಲ್ಲಿ ದಸಂಸ ರಾಜ್ಯ ಸಂಘಟನಾ ಸಂಚಾಲಕ ಮರಿಯಪ್ಪ ಹಳ್ಳಿ ಹಾಗೂ ಜಿಲ್ಲಾ ಸಂಚಾಲಕ ಶಿವಶರಣಪ್ಪ ಕೋರನಳ್ಳಿ ನೇತೃತ್ವದಲ್ಲಿ ಸಭೆ ಸೇರಿ ಚಿತ್ತಾಪುರ ತಾಲೂಕಿನ ದಲಿತ ಸಂಘರ್ಷ ಸಮಿತಿಗೆ ನೂತನವಾಗಿ ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು ಎಂದು ಜಿಲ್ಲಾ ಸಂಘಟನಾ ಸಂಚಾಲಕ ಮಲ್ಲಿಕಾರ್ಜುನ ಬೆಣ್ಣೂರಕರ್ ತಿಳಿಸಿದ್ದಾರೆ.
ದಲಿತ ಸಂಘರ್ಷ ಸಮಿತಿ ಪದಾಧಿಕಾರಿಗಳು: ಸಂಚಾಲಕರಾಗಿ ರಮೇಶ ಕವಡೆ, ಸಂಘಟನಾ ಸಂಚಾಲಕರಾಗಿ ಶಿವಕುಮಾರ್ ಸಂಗನ, ಸಿದ್ದಣ್ಣ ತುನ್ನೂರ, ಗುರುನಾಥ ಹಲಕಟ್ಟಿ, ನವಾಬ್ ಮುನ್ಸಿ, ಕಲ್ಯಾಣಿ ಏರಿ, ಖಜಾಂಚಿ ಜಗನಾಥ ಮುಡಬೂಳಕರ್, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಬಸವರಾಜ ಮುಡಬೂಳ, ಮಲ್ಲಣ್ಣ ಮಸ್ಕಿ ನೇಮಕಗೊಂಡರು.
ದಲಿತ ವಿದ್ಯಾರ್ಥಿ ಒಕ್ಕೂಟ ಪದಾಧಿಕಾರಿಗಳು: ಸಂಚಾಲಕರಾಗಿ ಲೋಹಿತ ಮುದಡಗಿ, ಸಂಘಟನಾ ಸಂಚಾಲಕರಾಗಿ ಮಲ್ಲಿಕಾರ್ಜುನ ದೊಡ್ಮನಿ, ಮಲ್ಲಿಕಾರ್ಜುನ ಸಜ್ಜನ್, ಅನಂದ ಮೋಗಲಾ. ಖಜಾಂಚಿಯಾಗಿ ಬಸಂತ ಬರ್ಮಾ ಅವರನ್ನು ನೇಮಕ ಮಾಡಲಾಗಿದೆ ಎಂದು ಮಲ್ಲಿಕಾರ್ಜುನ ಬೆಣ್ಣೂರಕರ್ ತಿಳಿಸಿದ್ದಾರೆ.
'ಆರೋಗ್ಯಕ್ಕೆ ಇಕೋ ಕ್ಲಬ್‌'
ಆಳಂದ: ಇಂದಿನ ದಿನಮಾನಗಳ ಗಾಳಿ, ನೀರು, ಬೆಳಕಿನಷ್ಟೇ ಪರಿಸರವೂ ಅವಶ್ಯವಾಗಿದೆ. ವಿದ್ಯಾರ್ಥಿ ಜೀವನದಲ್ಲಿ ಪ್ರತಿಯೊಬ್ಬರು ಮನೆ ಅಂಗಳದಲ್ಲಿ, ಶಾಲಾ ಆವರಣಗಳಲ್ಲಿ ಗಿಡ ನೆಟ್ಟು ನಾವು ಬದುಕಿರುವವರೆಗೆ ಆ ಗಿಡವನ್ನು ನಾವು ನೋಡಿದಾಗ ನೆನಪಿಗೆ ಬರುವಂತಾಗುತ್ತದೆ. ಪ್ರತಿಯೊಬ್ಬರು ಗಿಡಗಳನ್ನು ನೆಟ್ಟು, ಬೆಳೆಸಿದಾಗ ಉತ್ತಮ ವಾತಾವರಣ ದೊರೆಯುತ್ತದೆ ಎಂದು ಬಸವೇಶ್ವರ ಡಿಇಡಿ ಕಾಲೇಜು ಉಪನ್ಯಾಸಕ ಸಂಜಯ ಪಾಟೀಲ್ ಹೇಳಿದರು. ತಾಲೂಕಿನ ತಡಕಲ್ ಶಿವಲಿಂಗೇಶ್ವರ ಪಪೂ ಕಾಲೇಜಿನಲ್ಲಿ ರಾಷ್ಟ್ರೀಯ ಹಸಿರು ಪಡೆ ಇಕೋ ಕ್ಲಬ್ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸಕರಾಗಿ ಅವರು ಮಾತನಾಡಿದರು. ಸಾಹಿತಿ ಆರ್.ಎಸ್. ಸ್ವಾಮಿ, ಶಿಕ್ಷಕ ಬಿ.ಆರ್. ಜಮಾದಾರ ಮಾತನಾಡಿದರು. ಸಂಸ್ಥೆಯ ಅಧ್ಯಕ್ಷ ಎಂ.ಸಿ.ಸ್ವಾಮಿ, ಉಪಾಧ್ಯಕ್ಷ ಶಿವಪುತ್ರಪ್ಪ ಬೆಳ್ಳೆ, ತಾಪಂ ಸದಸ್ಯ ಮಲ್ಲಿನಾಥ ಜಮಾದಾರ, ಗ್ರಾಪಂ ಅಧ್ಯಕ್ಷ ಶ್ರೀಶೈಲ್ ನವಲೆ, ಸದಸ್ಯ ಶರಣಬಸಪ್ಪ ಚಿಮ್ಮನ, ವಿಎಸ್‌ಎಸ್‌ಎನ್ ಅಧ್ಯಕ್ಷ ರಾಮಚಂದ್ರಪ್ಪ ಮಾಲಿಪಾಟೀಲ್, ಶೇಖಪ್ಪ ಜಮಾದಾರ, ಮಲ್ಲೆಶಪ್ಪ ಡಿಗ್ಗಿ, ಪ್ರಾಚಾರ್ಯ ಭೀಮರೆಡ್ಡಿ ರಾಸನೆ, ಶಿವಶರಣಪ್ಪ ಪೂಜಾರಿ, ಬಿ.ಪಿ.ಜಾಧವ, ಪಿ.ಪಿ.ಶಿವಶೆಟ್ಟಿ, ಹಣಮಂತ ಚವ್ಹಾಣ ಸೇರಿದಂತೆ ಇತರರು ಇದ್ದರು. ಇದೇ ಸಂದರ್ಭದಲ್ಲಿ ಶಾಲಾ ಆವರಣದಲ್ಲಿ ಸಸಿಗಳನ್ನು ನಡೆಲಾಯಿತು.
ಇಂಧನ ಉಳಿತಾಯ ದಿನ
ಸೇಡಂ: ಇಲ್ಲಿನ ವಾಸವದತ್ತಾ ಕಂಪನಿಯಲ್ಲಿ ಇಂಧನ ಉಳಿತಾಯ ದಿನಕ್ಕೆ ಕಂಪನಿಯ ಘಟಕ ಮುಖ್ಯಸ್ಥ ಚಂದ್ರೇಕುಮಾರ ಜೈನ್ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿ, ಇಂಧನ ನಮ್ಮ ದೇಶದ ಬಹು ದೊಡ್ಡ ಸಂಪತ್ತಾಗಿದೆ. ಇದನ್ನು ಉಳಿಸುವ ಕೆಲಸ ಪ್ರತಿಯೊಬ್ಬರದಾಗಿದೆ. ಆ ನಿಟ್ಟಿನಲ್ಲಿ ಸರ್ವರ ಪ್ರಯತ್ನ ಅಗತ್ಯ ಎಂದರು. ಕಾರ್ಯಕ್ರಮಕ್ಕೂ ಮುನ್ನ ಲಕ್ಷ್ಮಿನಾರಯಣ ನಗರದಲ್ಲಿ ಕಂಪನಿಯ ನೌಕರರು, ವಿದ್ಯಾರ್ಥಿಗಳು, ಆಡಳಿತ ಮಂಡಳಿಯ ಮೂಲಕ ರ್ಯಾಲಿ ನಡೆಸುವ ಮೂಲಕ ಇಂಧನ ಉಳಿತಾಯದ ಬಗ್ಗೆ ಅರಿವು ಮೂಡಿಸಲಾಯಿತು. ಈ ಸಂದರ್ಭದಲ್ಲಿ ವಿದ್ಯುತ್ ವಿಭಾಗದ ಮುಖ್ಯಸ್ಥ ಪಿ.ವಿ.ಎನ್ ಮಲ್ಲೇಶ್ವರಾವ, ಮಾನವ ಸಂಪನ್ಮೂಲ ವಿಭಾಗದ ಆರ್. ಎಸ್. ಪಾಟೀಲ ಇದ್ದರು. ನಂತರ ಇಂಧನ ಉಳಿಸುವ ಕುರಿತು ಪ್ರತಿಜ್ಞೆಯನ್ನು ಮಾಡಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.