ಸುದ್ದಿ ಸಂಕ್ಷೇಪ
ಮಾಣಿ ಹೋಗಿ ಮಾಲೀಕನಾದ; ಇಂದು ಹೋಟೆಲ್ ಶುಭಾರಂಭ
ಗುಲ್ಬರ್ಗ: ಆಳಂದ ತಾಲೂಕಿನ ಬಿಲಗುಂದಿಯಿಂದ ಬಂದು ಗುಲ್ಬರ್ಗದ ಹೋಟೆಲ್ಗಳಲ್ಲಿ ಮಾಣಿಯಾಗಿ ಕೆಲಸ ಆರಂಭಿಸಿದ ಶಂಕರ ಪಾಟೀಲ್ ಹಾಗೂ ಶರಣು ಪಾಟೀಲ್ ಸಹೋದರರು ಇಂದು ಈ ರಂಗದಲ್ಲಿ ಉತ್ತಮ ಸಾಧನೆ ಮಾಡುವ ಮೂಲಕ ಮಾಣಿಯಿಂದ ಮಾಲೀಕರಾಗಿ ಬಡ್ತಿ ಪಡೆದಿದ್ದಾರೆ. ಇವರ ಒಡೆತನದ ಸಪ್ತಗಿರಿ ಹೋಟೆಲ್ ಅಪ್ಪನ ಕೆರೆ ಪಕ್ಕದಲ್ಲಿ ಡಿ.19ರಂದು ಉದ್ಘಾಟನೆಯಾಗುತ್ತಿದೆ.
ಸುದ್ದಿಗೋಷ್ಠಿಯಲ್ಲಿ ಈ ಸಂಗತಿಯನ್ನು ಶಂಕರ ಪಾಟೀಲ್ ಹಾಗೂ ಶರಣು ಪಾಟೀಲ್ ತಿಳಿಸಿದ್ದಾರೆ. ಸ್ಥಳೀಯ ಕಾಮತ್(ಸೆಂಟ್ರಲ್) ಹೋಟೆಲ್ನಲ್ಲಿ ಕೆಲಸಕ್ಕಿದ್ದೇವು. ಅಲ್ಲಿಂದ 2006ರಲ್ಲಿ ಹೊರಬಂದು ಚಿಕ್ಕದಾಗಿ ಹೋಟೆಲ್ ಉದ್ಯಮ ಆರಂಭಿಸಿದೆವು. ನಂತರ ಸರ್ದಾರ್ ಪಟೇಲ್ ವೃತ್ತದಲ್ಲಿನ ಕಾಮತ್ ಹೋಟೆಲ್ ಪಡೆದು ಕೋಮಲ್ ಎಂದು ಮರುನಾಮಕರಣ ಮಾಡಲಾಯ್ತು.
ಇದೀಗ ಸಪ್ತಗಿರಿ ಹೋಟೆಲ್ ಆರಂಭಿಸಲಾಗುತ್ತಿದೆ. ಹೋಟೆಲ್ ಉದ್ಯಮದಲ್ಲಿನ ಈ ಯಶಸ್ಸಿಗೆ ಕಾಮತ್ನ ಸ್ಥಳೀಯ ಮ್ಯಾನೇಜರ್ ವಿವೇಕರಾವ್ ಅವರು ಕಾರಣ. ಅವರ ಮಾರ್ಗದರ್ಶನವೇ ತಮಗೆ ಸಾಧನೆಗೆ ಸ್ಫೂರ್ತಿ ಎಂದರು. ಶಂಕರ ಪಾಟೀಲ್ ರೋಟರಿ ಕ್ಲಬ್ ಸದಸ್ಯರೂ ಆಗಿದ್ದಾರೆ. ಜನತೆಗೆ ಶುಚಿ- ರುಚಿ ಊಟ- ಉಪಹಾರ ಒದಗಿಸುವುದೇ ತಮ್ಮ ಧ್ಯೇಯ ಎಂದು ಹೇಳಿದ್ದಾರೆ.
ಕೊಲೆ ಅಪರಾಧಿಗೆ ಜೀವಾವಧಿ ಶಿಕ್ಷೆ
ಗುಲ್ಬರ್ಗ: ಜೇವರ್ಗಿ ತಾಲೂಕಿನ ಮಳ್ಳಿ ಗ್ರಾಮದ ಅಶೋಕ ಉರ್ಫ ಫೀನಿಕ್ಸ್, ತತ್ವೇಶ ಮತ್ತು ಮಹೇಶ ಜೊತೆಗೂಡಿ ಅಶೋಕನ ಪತ್ನಿ ಸಾವಿತ್ರಿಯ ಕತ್ತು ಹಿಸುಕಿ ಕೊಲೆಗೈದಿರುವುದು ಸಾಬೀತಾದ ಹಿನ್ನೆಲೆ ನಗರದ 4ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಗುಂಜೇಗಾವಿ ಅವರು ಆರೋಪಿಗಳಿಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಿದ್ದಾರೆ.
ಹಿನ್ನೆಲೆ: ಚಾಂದಕವಟೆ ಗ್ರಾಮದ ನಿಂಗಪ್ಪ ಅವರ ಮಗಳಾದ ಮೃತ ಸಾವಿತ್ರಿಯ ಗಂಡ ಅಶೋಕ ಉರ್ಫ ಫೀನಿಕ್ಸ್ನು ಸುಮಾರು ನಾಲ್ಕೈದು ವರ್ಷಗಳಿಂದ ತವರು ಮನೆಯಿಂದ ಹಣ ಮತ್ತು ಚಿನ್ನ ತರುವಂತೆ ಸಾವಿತ್ರಿಗೆ ಮಾನಸಿಕ ಮತ್ತು ದೈಹಿಕ ಕಿರುಕುಳ ಕೊಡುತ್ತಿದ್ದ. 2011ರ ಅ.29ರಂದು ಆರೋಪಿಗಳು ಸಾವಿತ್ರಿ ಜೊತೆ ಜಗಳ ತಗೆದು ಹಲ್ಲೆ ಮಾಡಿದ್ದಕ್ಕೆ ಅವಳು ರಾತ್ರಿ ಮನೆ ಬಿಟ್ಟು ಹೋಗಿದ್ದಳು. ಅ.30ರಂದು ಬೆಳಗಿನ ಜಾವ ಸಾವಿತ್ರಿಯು ಗ್ರಾಮದ ಬೋರವೆಲ್ ಹತ್ತಿರ ಸಿಕ್ಕಾಗ ಅವಳನ್ನು ಆರೋಪಿಗಳು ಪಕ್ಕದ ರಾಮರಾವ ದೇಶಪಾಂಡೆ ಅವರ ಹೊಲಕ್ಕೆ ಕರೆದೊಯ್ದು ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ. ನಂತರ ಸಾಕ್ಷಿ ನಾಶ ಮಾಡುವ ಉದ್ದೇಶದಿಂದ ಅವಳು ಉಟ್ಟ ಸೀರೆಯಿಂದಲೇ ಹುಣಸೆ ಮರಕ್ಕೆ ನೇಣು ಬಿಗಿದಿದ್ದರು. ಆರೋಪಿಗಳು ಮಾಡಿರುವ ಈ ಕೊಲೆ ಅಪರಾಧ ಸಾಬೀತಾಗಿರುವ ಹಿನ್ನೆಲೆಯಲ್ಲಿ ನ್ಯಾಯಾಧೀಶರು ಅವರಿಗೆ ಜೀವಾವಧಿ ಹಾಗೂ ಆರೋಪಿ ಗುರುಬಾಯಿಗೆ 3 ವರ್ಷ ಸಾದಾ ಶಿಕ್ಷೆಯನ್ನು ನೀಡಲಾಗಿದೆ.
'ಖಾತ್ರಿ' ಬಿಲ್ ಪಾವತಿಗೆ ಆಗ್ರಹ
ಚಿಂಚೋಳಿ: ತಾಲೂಕಿನ ಕೊಳ್ಳೂರ ಬಳಿಯ ಪಿತಾ ನಾಲಾ ನೀರು ಮಳೆಗಾಲದಲ್ಲಿ ತುಂಬಿ ಹರಿದು ಅನೇಕ ಮನೆಗಳಿಗೆ ನುಗ್ಗಿ ಹಾನಿಯನ್ನುಂಟು ಮಾಡುತ್ತಿದ್ದು, ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ನಾಲಾದಲ್ಲಿದ್ದ ಹೂಳು ತೆಗೆದು ಹಾಕಿದ್ದು, ಕಾರ್ಮಿಕರಿಗೆ ಹಣ ಪಾವತಿಸುವಂತೆ ಗ್ರಾಮಸ್ಥರು ಒತ್ತಾಯಿಸಿ ತಾಪಂ ಕಾರ್ಯಾಲಯದ ಮುಂದೆ ಧರಣಿ ನಡೆಸಿ ತಹಸೀಲ್ದಾರರಿಗೆ ಮನವಿ ಪತ್ರ ಸಲ್ಲಿಸಿದರು.
ಗ್ರಾಮದ ನಾಗಪ್ಪ ಮಾತನಾಡಿ, ನಾಲಾ ನೀರು ಸರಾಗವಾಗಿ ಹರಿದು ಹೋಗಲು ಅಧಿಕಾರಿಗಳ ಅನುಮತಿ ಮೇರೆಗೆ ಹೂಳು ತೆಗೆದು ಹಾಕಲಾಗಿದೆ. ಆದರೆ ಈವರೆಗೆ ತಾಪಂ ಮತ್ತು ಗ್ರಾಪಂ ವತಿಯಿಂದ ಬಿಲ್ಲು ಪಾವತಿ ಮಾಡಿಲ್ಲ ಎಂದು ದೂರಿದರು. ಬಿಲ್ ನೀಡುವಂತೆ ಅನೇಕ ಬಾರಿ ಅರ್ಜಿ ಸಲ್ಲಿಸಿ ಮಾಡಿದ ಮನವಿಗೆ ಅಧಿಕಾರಿಗಳು ಗಮನಹರಿಸಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಗ್ರಾಮಸ್ಥರಿಗೆ ಕೂಡಲೇ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಹಣ ಪಾವತಿಸಬೇಕೆಂದು ತಹಸೀಲ್ದಾರರಿಗೆ ಮನವಿ ಮಾಡಿದರು. ಧರಣಿಯಲ್ಲಿ ಶ್ರೀಧರ ಭೂತಪಳ್ಳಿ, ನರಸಪ್ಪ ಗುತ್ತಾ, ನಾಗಪ್ಪ ಐನೋಳ್ಳಿ, ನಾಗಪ್ಪ ಬುಡನೋರ್, ಖಂಡೆಪ್ಪ ಸಂಗಾವಿ, ತಿಪ್ಪಣ್ಣ ಹುಗ್ಗೆಳ್ಳಿ ಸೇರಿದಂತೆ ಒಟ್ಟು 50 ಜನ ಗ್ರಾಮಸ್ಥರು ಭಾಗವಹಿಸಿದ್ದರು.
ಇಂದು ಕೆಡಿಪಿ, ಎಸ್ಡಿಪಿ ಮಾಸಿಕ ಸಭೆ
ಗುಲ್ಬರ್ಗ: ಜಿಪಂ ಅಧ್ಯಕ್ಷ ರಮೇಶ ಶಂಕ್ರೆಪ್ಪ ಮರಗೋಳ ಅವರ ಅಧ್ಯಕ್ಷತೆಯಲ್ಲಿ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ(ಕೆಡಿಪಿ) ಹಾಗೂ ವಿಶೇಷ ಅಭಿವೃದ್ಧಿ ಯೋಜನೆ (ಎಸ್ಡಿಪಿ)ಯ ಮಾಸಿಕ ಪರಿಶೀಲನಾ ಸಭೆಯು ಡಿ.19 ಬೆ.11 ಗಂಟೆಗೆ ನಗರದ ಹಳೇ ಜಿಪಂ ಸಭಾಂಗಣದಲ್ಲಿ ನಡೆಯಲಿದೆ ಎಂದು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ತಿಳಿಸಿದ್ದಾರೆ.
ನಾಳೆಯಿಂದ ಯುವಜನ ಮೇಳ
ಗುಲ್ಬರ್ಗ: ಆಳಂದ ತಾಲೂಕಿನ ಸಂಗೋಳಗಿ(ಸಿ) ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಮತ್ತು ಪ್ರೌಢ ಶಾಲೆಯಲ್ಲಿ ಆಳಂದ ತಾಲೂಕು ಮಟ್ಟದ ಯುವಜನ ಮೇಳ ಡಿ.20ರಂದು ಬೆಳಗ್ಗೆ 11.30ಕ್ಕೆ ಹಮ್ಮಿಕೊಳ್ಳಲಾಗಿದೆ. ಜಿಪಂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಗುಲ್ಬರ್ಗ, ನೆಹರು ಯುವ ಕೇಂದ್ರ ಗುಲ್ಬರ್ಗ, ಮಹಾತ್ಮ ಜ್ಯೋತಿಬಾ ಪುಲೆ ಸಾಂಸ್ಕೃತಿಕ ಯುವಜನ ಸೇವಾ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಈ ಮೇಳ ಆಯೋಜಿಸಲಾಗಿದೆ. ವಿವರಕ್ಕೆ ಮೊ. 98808 74575ಗೆ ಸಂಪರ್ಕಿಸಬಹುದು. ಡಿ.22ರಂದು ಬೆಳಗ್ಗೆ 11ಕ್ಕೆ ಅಫಜಲ್ಪುರದ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ಅಫಜಲ್ಪುರ ತಾಲೂಕು ಮಟ್ಟದ ಯುವಜನ ಮೇಳ ಹಮ್ಮಿಕೊಳ್ಳಲಾಗಿದೆ. ಜಿಪಂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ನೆಹರು ಯುವ ಕೇಂದ್ರ ಗುಲ್ಬರ್ಗ ಮತ್ತು ಅಫಜಲ್ಪುರ ಸ್ಥಳೀಯ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ವಿವರಕ್ಕೆ ಮೊ. 98806 72955 ಅಥವಾ 98808 74575ಗೆ ಸಂಪರ್ಕಿಸಲು ಕಾರ್ಯಕ್ರಮ ಸಂಘಟಕರಾದ ಸುಭಾಷ ವಗ್ಗನಕರ್ ಮತ್ತು ನಾಗೇಶ ಕೊಳ್ಳಿ ಪ್ರಕಟಣೆ ಮೂಲಕ ಕೋರಿದ್ದಾರೆ.
ಇಂದು ಶಿಬಿರ
ಗುಲ್ಬರ್ಗ: ರೋಟರಿ ಕ್ಲಬ್ ಹಾಗೂ ಖಾಜಾ ಬಂದೇನವಾಜ್ ಆಸ್ಪತ್ರೆಯ ಸಹಯೋಗದಲ್ಲಿ ಡಿ.19ರಂದು ಬೆಳಗ್ಗೆ 9.30 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರಿಗೆ ಅಮರೇಶ್ವರ ಶಿಕ್ಷಣ ಸಂಸ್ಥೆ, ಶಕ್ತಿನಗರ ಬಡಾವಣೆ ಶಹಬಾದ್ ರಸ್ತೆ ಗುಲ್ಬರ್ಗದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿದೆ. ಮಹಿಳೆಯರು, ಮಕ್ಕಳು, ವಯಸ್ಕರು, ಗರ್ಭಿಣಿಯರು ಮತ್ತು ವೃದ್ಧರು ಯಾವುದೇ ರೀತಿಯ ರೋಗದಿಂದ ಬಳಲುವರು ಈ ಉಚಿತ ಆರೋಗ್ಯ ತಪಾಸಣಾ ಪಡೆದುಕೊಳ್ಳಬೇಕು. ನುರಿತ ವೈದ್ಯರಿಂದ ನಡೆಸುವ ತಪಾಸಣೆಯ ಸದುಪಯೋಗ ಪಡೆದುಕೊಳ್ಳಲು ಮನವಿ ಮಾಡಲಾಗಿದೆ.
ನಾಳೆ ಪಡಿ ಪೂಜೆ
ಚಿತ್ತಾಪುರ: ಇಲ್ಲಿಯ ಬಾಲಾಜಿ ಮಂದಿರದಲ್ಲಿ ಡಿ.20ರಂದು ಅಯ್ಯಪ್ಪಸ್ವಾಮಿ ಸನ್ನಿದಾನದಲ್ಲಿ 9ನೇ ವರ್ಷದ ಪಡಿಪೂಜೆ ಕಾರ್ಯಕ್ರಮ ಬೆಳಗ್ಗೆ 11ಕ್ಕೆ ಜರುಗಲಿದೆ. ಬೆ.5ಕ್ಕೆ ಸುಪ್ರಭಾತ, 6ಕ್ಕೆ ಅಭೀಷೇಕ, 10 ಗಂಟೆಗೆ ತುಳಸಿ ಅರ್ಚನೆ, ಬೆಳಗ್ಗೆ 11ಕ್ಕೆ ಮಂಡಲಪೂಜೆ(ಪಡಿಪೂಜೆ) ನಡೆಯಲಿದೆ ಎಂದು ಆನಂದ ತಿಳಿಸಿದ್ದಾರೆ.
ನಾಳೆ ಸಭೆ
ಗುಲ್ಬರ್ಗ: ಬಾಮಸೆಫ್ ಭಾರತ ಮುಕ್ತಿ ಮೋರ್ಚಾದ ಭಾರತೀಯ ವಿದ್ಯಾರ್ಥಿ ಮೋರ್ಚಾ ಸಂಘಟನೆ ಡಿ.20ರಂದು ಸಂಜೆ 4ಕ್ಕೆ ನಗರದ ಕನ್ನಡ ಭವನದಲ್ಲಿ ಸಭೆ ಕರೆಯಲಾಗಿದೆ. ಸಂಘಟನೆ ಕುರಿತು ಮತ್ತು ಜ್ವಲಂತ ಸಮಸ್ಯೆಗಳ ಕುರಿತು ಚರ್ಚೆ ನಡೆಯಲಿದ್ದು, ಕಾರ್ಯಕರ್ತರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಬೇಕು ಎಂದು ಪ್ರೊ. ಸುಭಾಷ ಶೀಲವಂತ ಕೋರಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

