ಗುಲ್ಬರ್ಗಾ

ಪಶು ಆರೋಗ್ಯ ಸೇವೆಗಿಲ್ಲ ಸಿಬ್ಬಂದಿ

Published On :

ವಿಶೇಷ ವರದಿ
ಕ.ಪ್ರ. ವಾರ್ತೆ  ಗುಲ್ಬರ್ಗ  ಡಿ.18

ಗುಲ್ಬರ್ಗ ಹಾಗೂ ಯಾದಗಿರಿ ಜಿಲ್ಲೆಗಳಲ್ಲಿ ಜಾನುವಾರು ಆರೋಗ್ಯ ಸೇವೆ ಹಳ್ಳ ಹಿಡಿದಿದೆ. ಏಕೆಂದರೆ- ಇಲ್ಲಿರುವ ಪಶು ಆಸ್ಪತ್ರೆಗಳಲ್ಲಿ ಪಶು ವೈದ್ಯರಿಲ್ಲ, ಇಲಾಖೆಯ ಉಸ್ತುವಾರಿ ನೋಡಿಕೊಳ್ಳಲು ಸಹಾಯಕ ನಿರ್ದೇಶಕರೂ ಇಲ್ಲ. ಹೀಗಾಗಿ ಪಶು ಆಸ್ಪತ್ರೆಗಳು ಅಕ್ಷರಶಃ ಸ್ಮಾರಕಗಳಾಗಿವೆ.
ಅನೇಕ ಸಂದರ್ಭಗಳಲ್ಲಿ ಲಭ್ಯವಿರುವ ವೈದ್ಯರನ್ನೇ ನಾಲ್ಕಾರು ಆಸ್ಪತ್ರೆಗಳಿಗೆ ನಿಯೋಜನೆ ಮಾಡಿ ಚಲ್ತೆ ಹೈ ನೀತಿಗೆ ಇಲಾಖೆ ಮೊರೆ ಹೋಗಿದ್ದರೂ ವೈದ್ಯರು ತುರ್ತು ವೈದ್ಯಕೀಯ ಕರೆಗಳನ್ನು ನಿರ್ವಹಿಸುವಾಗ ಆಸ್ಪತ್ರೆಗೆ ಬೀಗ ಜಡಿದೇ ಹೋಗುವಂತಾಗಿದೆ. ಇದಕ್ಕೆ ಕಾರಣ ಪಶು ವೈದ್ಯರು, ಸಹಾಯಕ ನಿರ್ದೇಶಕರ ಹುದ್ದೆಗಳ ಜೊತೆಗೇ 'ಡಿ' ಗುಂಪಿನ ಹುದ್ದೆಗಳೂ ಈ ಉಭಯ ಜಿಲ್ಲೆಗಳಲ್ಲಿ ಶೇ.80 ರಷ್ಟು ಖಾಲಿ ಬಿದ್ದಿರುವುದು.
ಸ್ಥಳೀಯರೇ ಮಂತ್ರಿಯಾಗಿದ್ರು: ಈ ಜಿಲ್ಲೆಯವರೇ ಆಗಿರುವ ರೇವು ನಾಯಕ ಬೆಳಮಗಿ 8 ವರ್ಷ ಪಶು ವೈದ್ಯಕೀಯ ಇಲಾಖೆಯನ್ನು(ನಿರಂತರ 2 ಅವಧಿಗೆ) ಪ್ರತಿನಿಧಿಸಿದ್ದರೂ ಉಭಯ ಜಿಲ್ಲೆಗಳು ಜಾನುವಾರು ಆರೋಗ್ಯ ರಂಗದಲ್ಲಿ ತೀವ್ರ ಹಿನ್ನೆಡೆ ಎದುರಿಸುತ್ತಿರುವುದು ದುರಂತವೇ ಸರಿ.
ಇಡೀ ರಾಜ್ಯದಲ್ಲಿ ಪಶು ವೈದ್ಯರ 718 ಹುದ್ದೆ ಖಾಲಿ ಇದ್ದು, ಈ ಪೈಕಿ ಗುಲ್ಬರ್ಗ- ಯಾದಗಿರಿ ಜಿಲ್ಲೆಗಳ ಪಾಲು 89. ಇನ್ನು ಸಹಾಯಕ ನಿರ್ದೇಶಕರ 110 ಹುದ್ದೆ ರಾಜ್ಯದಲ್ಲಿ ಖಾಲಿ ಬಿದ್ದಿದ್ದು ಈ ಪೈಕಿ ಯಾದಗಿರಿ- ಗುಲ್ಬರ್ಗ ಪಾಲು 13ರಷ್ಟಾಗಿದೆ. ಜಾನುವಾರು ಆರೋಗ್ಯ ಸೇವೆಯ ಕಾಳಜಿ ಇರುವಂತಹ ಇಲಾಖೆಯಲ್ಲಿ ಅತ್ಯಂತ ಪ್ರಮುಖ ತಾಂತ್ರಿಕ ಹುದ್ದೆಗಳೆಂದು ಗಮನಿಸಿದ ಪಶು ವೈದ್ಯರು ಹಾಗೂ ಸಹಾಯಕ ನಿರ್ದೇಶಕರ ಹುದ್ದೆಗಳು ಈ ಪರಿಯಲ್ಲಿ ಖಾಲಿ ಇರುವುದರಿಂದಲೇ ಈ ಭಾಗದಲ್ಲಿರುವ ಜಾನುವಾರುಗಳಿಗೆ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ದೊರಕದಂತಾಗಿದೆ.
ಪಶುಗಳ ಮೂಕರೋದನ: ಸಿಬ್ಬಂದಿ ಕೊರತೆ ಕಾಡುತ್ತಿರುವುದರಿಂದ ಇಲಾಖೆಯಲ್ಲಿನ ಯಾವ ಕಾರ್ಯಕ್ರಮಗಳನ್ನೂ ಸಮರ್ಪಕವಾಗಿ ಅನುಷ್ಠಾನಕ್ಕೆ ತರಲಾಗುತ್ತಿಲ್ಲ ಎಂದು ಅಧಿಕಾರಿಗಳು ಅಸಹಾಯಕತೆ ಹೊರಹಾಕುತ್ತಿದ್ದಾರೆ. ಈಚೆಗೆ ರಾಜ್ಯವನ್ನೇ ಕಾಡಿದಂತಹ ಕಾಲುಬಾಯಿ ರೋಗ ಸಿಬ್ಬಂದಿ ಕೊರತೆಯಿಂದ ಉಭಯ ಜಿಲ್ಲೆಗಳಲ್ಲಿ ಜಾನುವಾರುಗಳನ್ನು ಸಾಕಷ್ಟು ಕಾಡಿತು.
ಇದನ್ನು ನಿಯಂತ್ರಿಸುವ, ಮುನ್ನೆಚ್ಚರಿಕೆ ಕ್ರಮವಾಗಿ ಲಸಿಕೆ ಹಾಕುವ ಕಾರ್ಯಕ್ರಮಗಳನ್ನು ನಿರೀಕ್ಷಿತ ವೇಗದಲ್ಲಿ ಕೈಗೊಳ್ಳಲು ಸಾಧ್ಯವಾಗಲಿಲ್ಲ. ಸಿಬ್ಬಂದಿ ಕೊರತೆ ಇಲಾಖೆಯನ್ನೇ ಲಕ್ವಾ ಹೊಡೆವಂತೆ ಮಾಡಿದ್ದರಿಂದ ಜಾನುವಾರು ಆರೋಗ್ಯ ಸೇವೆಗೆ ಉಭಯ ಜಿಲ್ಲೆಗಳಲ್ಲಿ ಗ್ರಹಣ ಹಿಡಿದಂತಾಗಿದೆ.
ರೈತರಂತೂ ಪಶು ಆಸ್ಪತ್ರೆಗಳಿಗೆ ಹೋಗಿ ಬಾಗಿಲು ಬೀಗ ಜಡಿದ ನೋಟ ಕಂಡು ವಾಪಸ್ಸಾಗುತ್ತಿದ್ದಾರೆ. ರೋಗ ಪೀಡಿತ ದನಗಳೊಂದಿಗೆ ಆಸ್ಪತ್ರೆಗೆ ಹೋಗಿ ವೈದ್ಯರಿಲ್ಲದ ನೋಟ ಕಂಡು ವಾಪಸ್ಸಾಗುವುದಕ್ಕಿಂತ ದೇಶಿ ಔಷಧಿಯನ್ನೇ ಬಳಸಿದರಾಯ್ತು ಎಂದು ಪಶು ಆಸ್ಪತ್ರೆಗಳ ದಾರಿಯನ್ನೇ ತುಳಿಯದಂತಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.