ವಿವಿಧ ಬೇಡಿಕೆ ಈಡೇರಿಕೆಗೆ ಕೃಷಿ ಕೂಲಿಕಾರರ ಒತ್ತಾಯ
ಯಾದಗಿರಿ: ಉದ್ಯೋಗ ಖಾತ್ರಿ ಯೋಜನೆ ಸಮರ್ಪಕ ಅನುಷ್ಠಾನದಲ್ಲಿ ಹಲವು ತೊಂದರೆಗಳು ಎದುರಾಗಿದ್ದು, ಅವುಗಳ ಪರಿಹಾರ ಮತ್ತು ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ (ಎಐಎಡಬ್ಲ್ಯೂಯು)ದ ಜಿಲ್ಲಾ ಸಮಿತಿ ರಾಜ್ಯ ಗ್ರಾಮೀಣ ಪಂಚಾಯತ್ ರಾಜ್ ಪ್ರಧಾನ ಕಾರ್ಯದರ್ಶಿಗಳಿಗೆ ಮನವಿ ಪತ್ರ ಸಲ್ಲಿಸಿದರು. ಬೆಂಗಳೂರಿನಲ್ಲಿ ನಡೆದ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಅನುಷ್ಠಾನ ಕುರಿತು ಕಾಯಕ ಗುಂಪುಗಳ ಕಾಯಕ ಬಂಧುಗಳ ರಾಜ್ಯಮಟ್ಟದ ಸಮಾವೇಶದಲ್ಲಿ ಸಲ್ಲಿಸಿದ ಮನವಿ ಪತ್ರದಲಲ್ಲಿನ ಸಾರಾಂಶ ಹೀಗಿದೆ.
ಕಾಯಕ ಸಂಘಗಳ ಕೂಲಿಕಾರರು ಫಾರಂ. 6ರಲ್ಲಿ ಸಲ್ಲಿಸುವ ಅರ್ಜಿಯಲ್ಲಿ ಕೇಳಿಕೊಂಡ ದಿನದಿಂದ ಅವರಿಗೆ ಕೆಲಸ ಒದಗಿಸಲಾಗುವುದಿಲ್ಲ. ಕೆಲಸಕ್ಕಾಗಿ ಅನೇಕ ಬಾರಿ ಗ್ರಾಮ ಪಂಚಾಯತಿ ಆಫೀಸಿಗೆ ಅಲೆದಾಡಬೇಕಾಗುತ್ತದೆ. ಕೆಲಸಕ್ಕಾಗಿ ಗ್ರಾಪಂ ಆಫೀಸ್ ಎದುರು ಧರಣಿ ಮುಷ್ಕರ ನಡೆಸಬೇಕಾಗುತ್ತದೆ. ಇಷ್ಟು ಮಾಡಿದ ನಂತರವೂ ಕೆಲಸ ಸಿಗದಿದ್ದರೆ, ಕೂಲಿಕಾರರು ಸಹಜವಾಗಿ ಉದ್ಯೋಗ ಖಾತ್ರಿ ಯೋಜನೆಯ ವಿಷಯದಲ್ಲಿ ವಿಶ್ವಾಸ ಕಳೆದುಕೊಳ್ಳುತ್ತಾರೆ. ಈ ಸಮಸ್ಯೆಗೆ ಪರಿಹಾರ ಇಲ್ಲವೇ?
ಕೆಲಸಕ್ಕಾಗಿ ಅರ್ಜಿ ಸಲ್ಲಿಸಲಾದ 15 ದಿನಗಳ ಒಳಗಾಗಿ ಕೆಲಸವನ್ನು ಒದಗಿಸದಿದ್ದರೆ, ಕಾಯ್ದೆ ಪ್ರಕಾರ ಕೊಡಬೇಕಾದ ನಿರುದ್ಯೋಗ ಭತ್ಯೆ ಪಾವತಿಯಾಗುತ್ತಿಲ್ಲ. ಇದಕ್ಕಾಗಿ ಧರಣಿ ಸತ್ಯಾಗ್ರಹದಂತಹ ಹೋರಾಟಗಳನ್ನು ಮಾಡಿದರೂ ಪ್ರಯೋಜನವಾಗುತ್ತಿಲ್ಲ, ಇದರಿಂದಾಗಿ ಕೂಲಿಕಾರರಿಗೆ ಈ ಯೋಜನೆಯ ಕುರಿತು ವಿಶ್ವಾಸವೇ ಇಲ್ಲದಂತಾಗಿದೆ.
ಮಾಡಿದ ಕೆಲಸಕ್ಕೆ ಸರಯಾಗಿ ಕೂಲಿ ಹಣ ಸಂದಾಯ ಆಗುವುದಿಲ್ಲ. ಮಾಡಿದ ಕೆಲಸದ ಅಳತೆಯ ವಿಷಯದಲ್ಲಿ ತಕರಾರು ತೆಗೆದು ಕೂಲಿ ಹಣವನ್ನು ಕಡಿತ ಮಾಡಲಾಗುತ್ತದೆ. ಇದರಿಂದ ಕೂಲಿಕಾರರಿಗೆ ಉದ್ಯೋಗ ಖಾತ್ರಿ ಕೆಲಸದ ಬಗ್ಗೆ ಆಸಕ್ತಿ ಕಡಿಮೆಯಾಗುತ್ತದೆ.
ಮಾಡಿದ ಕೆಲಸಕ್ಕೆ ಕೂಲಿ ಹಣ ಸಂದಾಯ ಆಗುವುದಿಲ್ಲ. ಕೂಲಿ ಹಣ ತಡವಾಗಿ ಸಂದಾಯವಾದಾಗ ದಿನಕ್ಕೆ ರು. 20 ದರದಲ್ಲಿ ಪರಿಹಾರ ನೀಡಬೇಕೆಂಬ ನಿರ್ದೇಶನ ಜಾರಿಯಾಗಿಲ್ಲ.
ಮಾಡಿದ ಕೆಲಸಕ್ಕೆ ಕೂಲಿ ಹಣ ಸಂದಾಯಗವಾಗದೆ ಬಾಕಿ ಇರುವ ಇದುವರೆಗಿನ ಎಲ್ಲಾ ಪ್ರಕರಣಗಳನ್ನು ಪರಿಶೀಲನೆಗೆ ಒಳಪಡಿಸಿ ಅರ್ಹ ಕೆಲಸಗಾರರಿಗೆ ಅವರ ಕೂಲಿ ಹಣವನ್ನು ಸಂದಾಯ ಮಾಡಬೇಕು.
ದೂರದ ಕೆಲಸಕ್ಕೆ ಹೋಗಬೇಕಾಗುವ ಕೆಲಸಗಾರರಿಗೆ ಸರಿಯಾಗಿ ಪ್ರಯಾಣ ಭತ್ಯೆ ನೀಡಲಾಗುತ್ತಿಲ್ಲ. ದೂರದ ಮಿತಿಯನ್ನು 5 ಕಿ.ಮೀ. ಯಿಂದ 3 ಕಿ.ಮೀ.ಗೆ ಇಳಿಸಬೇಕು. ಸಲಕರಣೆಗಳ ಭತ್ಯೆ ಕೊಡುವುದನ್ನು ಮುಂದುವರೆಸಬೇಕು.
ಕಾಯಕ ಬಂಧುಗಳಿಗೆ ಹೆಚ್ಚುವರಿಯಾಗಿ ಕೊಡಬೇಕಾದ ಪ್ರೋತ್ಸಾಹ ಧನ ಇದುವರೆಗೂ ಪಾವತಿ ಮಾಡಿರುವುದಿಲ್ಲ.
ಕೆಲಸದ ಸಮಯದಲ್ಲಿ ಅಪಘಾತ ಸಂಭವಿಸಿದಾಗ ವೈದ್ಯಕೀಯ ಚಿಕಿತ್ಸೆ ಪಡೆಯುವ ಬಗೆ ಹೇಗೆ? ಪರಿಹಾರ ಪಡೆಯುವುದು ಹೇಗೆ?
ಕೆಲಸಗಾರರಿಗೆ ನಿಗದಿಪಡಿಸಿದ ಕೆಲಸವನ್ನು ಅವರು ಮುಗಿಸಿದ ನಂತರ ಮನೆಗೆ ತೆರಳಲು ಕೆಲವು ಕಡೆ ಅನುಮತಿ ಕೊಡಲಾಗುತ್ತಿಲ್ಲ. ಇಂತಹ ಕಾರ್ಮಿಕ ವಿರೋಧಿ ಧೋರಣೆಯನ್ನು ನಿಲ್ಲಿಸಬೇಕು.
ಯೋಜನೆಯ ಅಡಿಯಲ್ಲಿ ಅಂಗವಿಕಲರಿಗೂ, ವಯೋವೃದ್ಧರಿಗೂ ಕೆಲಸ ಮಾಡಲು ಸಾಧ್ಯವಾಗುವಂತೆ ಸರಳವಾದ ಕೆಲಸಗಳನ್ನು ನಿಗದಿಪಡಿಸಬೇಕು.
ಬೇಸಿಗೆಯ ದಿನಗಳಲ್ಲಿ ಮಣ್ಣು ಗಟ್ಟಿಯಾಗಿರುವುದರಿಂದ ಕೆಲಸದ ಕನಿಷ್ಠ ಪ್ರಮಾಣ ಕಡಿಮೆ ಮಾಡಬೇಕು.
ನೀರಾವರಿ ಪ್ರದೇಶಗಳಲ್ಲಿ ಕಾಲುವೆಗಳ ಹೂಳೆತ್ತುವ ಕೆಲಸವನ್ನು ಉದ್ಯೋಗ ಖಾತ್ರಿ ಯೋಜನೆಯ ಅಡಿಯಲ್ಲಿ ಸೇರಿಸಬೇಕು.
ಅರಣ್ಯ ಸಸಿಗಳನ್ನು ಬೆಳೆಸುವ ನರ್ಸರಿಗಳಲ್ಲಿ ಉದ್ಯೋಗ ಖಾತ್ರಿ ಕೆಲಸಗಾರರಿಗೆ ಕೆಲಸ ಒದಗಿಸಬೇಕು.
ತೆರೆದ ಬಾವಿಯಿಂದ ಮಣ್ಣನ್ನು ಮೇಲೆತ್ತಿ ಹಾಕಲು ನೀಡುವ ಹೆಚ್ಚುವರಿ ದರದಲ್ಲಿಯೇ ಮದಗ ಕೆರೆ ಹೂಳೆತ್ತುವುದ ಕಾಮಗಾರಿಗಳಿಗೂ ಕೂಲಿ ಸಂದಾಯ ಮಾಡಬೇಕು.
ವಾರಕ್ಕೊಮ್ಮೆ ಕಾಯಕ ಬಂಧುವಿನಿಂದ ಫಾರಂ. ನಂ. 6ರಲ್ಲಿ ಅರ್ಜಿಯನ್ನು ಪಡೆಯಬೇಕೆಂಬ ನಿಯಮವನ್ನು ಪಾಲಿಸಲು ಸಹಕರಿಸದಿರುವ ಪಿಡಿಓಗಳ ವಿರುದ್ಧ ಕ್ರಮ ಜರುಗಿಸಬೇಕು.
ಪ್ರತಿಯೊಂದು ನೋಂದಾಯಿತ ಕುಟುಂಬಕ್ಕೆ ವರ್ಷದಲ್ಲಿ ಕನಿಷ್ಟ 100 ದಿನ ಕೆಲಸ ಸಿಗುವುದನ್ನು ಖಚಿತಪಡಿಸಬೇಕು. ನೂರಕ್ಕಿಂತ ಹೆಚ್ಚು ದಿನ ಕೆಲಸ ಬಯಸುವ ಕುಟುಂಬಗಳಿಗೆ ಅವರ ಬೇಡಿಕೆಗೆ ಅನುಸಾರ ಕೆಲಸ ಒದಗಿಸಬೇಕು.
ಉದ್ಯೋಗ ಖಾತ್ರಿ ಯೋಜನೆಯ ಅಡಿಯಲ್ಲಿ ಭ್ರಷ್ಟಾಚಾರವನ್ನು ತಡೆಗಟ್ಟಲು ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು.
ಉದ್ಯೋಗ ಖಾತ್ರಿ ಯೋಜನೆಯ ಅಡಿಯಲ್ಲಿ ಕನಿಷ್ಠ ದಿನಗೂಲಿಯನ್ನು 300 ಹೆಚ್ಚಿಸಬೇಕು.
ಇಲಾಖೆಯಿಂದ ಒದಗಿಸಲಾದ ಸಹಾಯವಾಣಿ-ಟೋಲ್ ಫ್ರೀ ಕರೆಯಿಂದ ಕೂಲಿಕಾರರ ದೂರುಗಳು ದಾಖಲಾಗುತ್ತಿಲ್ಲ. ಎಲ್ಲಾ ದೂರುಗಳನ್ನು ಅದು ದಾಖಲು ಮಾಡಿಕೊಳ್ಳುವಂತಿರಬೇಕು.
ಯೋಜನೆಯ ಜಾರಿಗಾಗಿ ನಿಸ್ವಾರ್ಥದಿಂದ ಕೆಲಸ ಮಾಡುತ್ತಿರುವ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದಂತಹ ಪ್ರಜಾಸತ್ತಾತ್ಮಕ ಸಂಘಟನೆಗಳ ಕೆಲಸವನ್ನು ಸರ್ಕಾರ ಗೌರವಿಸಿ, ಪ್ರೋತ್ಸಾಹಿಸಬೇಕು.
ಈ ಸಂದರ್ಭದಲ್ಲಿ ರಾಜ್ಯ ಅಧ್ಯಕ್ಷರಾದ ನಿತ್ಯಾನಂದಸ್ವಾಮಿ, ಪ್ರಧಾನ ಕಾರ್ಯದರ್ಶಿ ಚಂದ್ರಪ್ಪ ಹೊಸ್ಕೇರಾ ಹಾಗೂ ಉಪಾಧ್ಯಕ್ಷ ಜಿ.ಎನ್. ನಾಗರಾಜ್, ಮತ್ತು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಶೋಕ್ ಲಾಲ್, ಯಾದಗಿರಿ ಜಿಲ್ಲಾ ಅಧ್ಯಕ್ಷ ದಾವಲ್ ಸಾಬ್ ನದಾಫ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

