ಗುಲ್ಬರ್ಗಾ

ಸುದ್ದಿ ಸಂಕ್ಷೇಪ

Published On :

ತಾಯಂದಿರ ಸಭೆ ಮುಕ್ತಾಯ
ಗುಲ್ಬರ್ಗ: ಗುಲ್ಬರ್ಗ ನಗರ ಶಿಶು ಅಭವೃದ್ಧಿ ಯೋಜನಾಧಿಕಾರಿಗಳ ಕಚೇರಿಯಿಂದ ಈಚೆಗೆ ನಗರದ ಸಿಐಬಿ ಕಾಲೋನಿಯಲ್ಲಿ ತಾಯಂದಿರ ಸಭೆ ಹಮ್ಮಿಕೊಳ್ಳಲಾಗಿತ್ತು. ಶಿಶು ಅಭಿವೃದ್ಧಿ ಯೋಜನಾಧಿಕಾರಿ ರಾಮಣ್ಣ ಬೆಣ್ಣೆಶಿರೂರ ಗುಲಾಬಿ ಗಿಡಕ್ಕೆ ನೀರೆರೆಯುವುದರ ಮೂಲಕ ಸಭೆಗೆ ಚಾಲನೆ ನೀಡಿ ಇಲಾಖೆಯ ವಿವಿಧ 6 ಸೇವೆಗಳು ಕುರಿತು ಮಾಹಿತಿ ನೀಡಿದರು. ಹೀರಾಪುರ ವಲಯ ಮೇಲ್ವಿಚಾರಕಿ ಗೋದಾವರಿ ಬಿ. ಯಾದವ ಸಭೆ ಉದ್ದೇಶಿಸಿ ಮಾತನಾಡಿ, ತಾಯಿಯ ಎದೆ ಹಾಲು ಮಹತ್ವ ವಿವರಿಸುತ್ತಾ ಎದೆ ಹಾಲು ಕುಡಿದ ಮಕ್ಕಳಿಗೆ ಕಾಮಾಲೆ, ಶ್ವಾಸಕೋಶದ ರೋಗಗಳು, ಹೃದಯ ರೋಗಗಳು, ಚರ್ಮ ರೋಗಗಳು ಬರುವುದಿಲ್ಲ ಮತ್ತು ತಾಯಿ- ಮಗುವಿನ ನಡುವೆ ಅವಿನಾಭಾವ ಸಂಬಂಧ ಏರ್ಪಡುತ್ತದೆ. ಎದೆ ಹಾಲು ಮಗುವಿಗೆ ಬೇಕಾದಾಗ ಸಿಗುವ ಹಾಗೂ ಮಗುವಿಗೆ ಬೇಕಾದಷ್ಟೆ ಬೆಚ್ಚಗೆ ಮತ್ತು ರುಚಿಯಾಗಿ ಸಿಗುತ್ತದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಸ್ತ್ರೀಶಕ್ತಿ ಸಂಘದ ಅಧ್ಯಕ್ಷೆ ಭಾರತೀಬಾಯಿ ಸೇರಿದಂತೆ ಹಿರಿಯ ನಾಗರಿಕರು ಉಪಸ್ಥಿತರಿದ್ದರು. ಕಾಂತಾ ಕಾಲೋನಿ-1ರ ಅಂಗನವಾಡಿ ಕಾರ್ಯಕರ್ತೆ ರಾಧಾ ಸ್ವಾಗತಿಸಿದರು. ಸಿಐಬಿ ಕಾಲೋನಿ-1ರ ಅಂಗನವಾಡಿ ಕಾರ್ಯಕರ್ತೆ ಜಗದೇವಿ ಜೈಭೀಮ ವಂದಿಸಿದರು.
ಪೌರಾಡಳಿತ ಸಚಿವರ ಪ್ರವಾಸ
ಪೌರಾಡಳಿತ, ಸಾರ್ವಜನಿಕ ಉದ್ಯಮಗಳು ಹಾಗೂ ಅಲ್ಪಸಂಖ್ಯಾತರ ಕಲ್ಯಾಣ, ವಕ್ಫ್ ಮತ್ತು ಹಜ್ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಖಮರುಲ್ ಇಸ್ಲಾಂ ಅವರು. ಡಿ.23ರಂದು ಬೆಳಗಿನ 10.30ಕ್ಕೆ ಅಂಗವಿಕಲರ ಕ್ರೀಡಾ ಸ್ಪರ್ಧೆಯಲ್ಲಿ ವಿಜೇತ ಕ್ರೀಡಾಪಟುಗಳ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಭಾಗವಹಿಸುವರು. ಮಧ್ಯಾಹ್ನ 2ರಿಂದ ಸಂಜೆ 6 ಗಂಟೆವರೆಗೆ ಸಾರ್ವಜನಿಕ ಭೇಟಿ ಹಾಗೂ ಕುಂದುಕೊರತೆಗಳ ವಿಚಾರಣೆ ನಡೆಸಿ ರಾತ್ರಿ 9ಕ್ಕೆ ಯಶವಂತಪುರ- ಸೋಲಾಪುರ ಎಕ್ಸ್‌ಪ್ರೆಸ್ ರೈಲಿನ ಮೂಲಕ ಬೆಂಗಳೂರಿಗೆ ಪ್ರಯಾಣಿಸುವರು.
ಇಂದು ಗಾಯನ ಕಾರ್ಯಕ್ರಮ
ಡಿ.23ರಂದು ಬೆಳಗ್ಗೆ 11ಕ್ಕೆ ಚಿತ್ತಾಪುರ ಪಟ್ಟಣದ ಶ್ರೀಗಂಗಾ ಪರಮೇಶ್ವರಿ ಪದವಿ ಪೂರ್ವ ಕಾಲೇಜಿನಲ್ಲಿ ಕಲಾವಿದೆ ಚಂದ್ರಕಲಾ ಪ್ರಭಾಕರ್ ಅವರು ಹಾಡೀರೆ ರಾಗಗಳ- ತೂಗೀರೆ ದೀಪಗಳು ಎಂಬ ಕೋಲಾಟ ಪದಗಳ ಗಾಯನ ಕಾರ್ಯಕ್ರಮ ನೀಡಲಿದ್ದಾರೆ.
ವಿಕಲಚೇತನರ ದಿನಾಚರಣೆ
ಗುಲ್ಬರ್ಗ ನಗರದ ಚಂದ್ರಶೇಖರ ಪಾಟೀಲ್ ಕ್ರೀಡಾಂಗಣದ ಎದುರಿರುವ ಜಿಲ್ಲಾ ವಿಕಲಚೇತನ ಮತ್ತು ಹಿರಿಯ ನಾಗರಿಕರ ಸಬಲೀಕರಣ ಕಚೇರಿಯಲ್ಲಿ ಡಿ.23ರಂದು ಬೆಳಗ್ಗೆ 11ಕ್ಕೆ ವಿಶ್ವ ವಿಕಲಚೇತನರ ದಿನಾಚರಣೆ ನಡೆಯಲಿದೆ.
30ರಂದು ಕೆಡಿಪಿ ತ್ರೈಮಾಸಿಕ ಸಭೆ
ಪೌರಾಡಳಿತ, ಸಾರ್ವಜನಿಕ ಉದ್ಯಮಗಳು ಹಾಗೂ ಅಲ್ಪಸಂಖ್ಯಾತರ ಕಲ್ಯಾಣ, ವಕ್ಫ್ ಮತ್ತು ಹಜ್ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಖಮರುಲ್ ಇಸ್ಲಾಂ ಅವರ ಅಧ್ಯಕ್ಷತೆಯಲ್ಲಿ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ (ಕೆಡಿಪಿ) ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯು ಡಿ.30ರ ಬೆಳಗ್ಗೆ 11ಕ್ಕೆ ಗುಲ್ಬರ್ಗ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ನಡೆಯಲಿದೆ ಎಂದು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ತಿಳಿಸಿದ್ದಾರೆ.
ನಾಳೆ ಕಾರ್ಯಕ್ರಮ
ಗುಲ್ಬರ್ಗ: ಡಿ.24 ರಂದು ರಾತ್ರಿ 8ಕ್ಕೆ ನಗರದ ಚಾಂದಬೀಬೀ ಮಹಿಳಾ ಶಿಕ್ಷಣ ಮಹಾವಿದ್ಯಾಲಯದ ಮೈದಾನದಲ್ಲಿ ಖ್ಯಾತ ಸಂಗೀತ ಗಾಯಕ ಮಹ್ಮದ್ ರಫೀ ಅವರ 89ನೇ ಹುಟ್ಟವನ್ನು ಅಜೀಮೊ ಶಾಮ ಮಹ್ಮದ್ ರಫೀ ಕೆ ನಾಮ ಎಂಬ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. 89 ಕೆಜಿ ಕೇಕ್ ಕತ್ತರಿಸಿ ಸಾರ್ವಜನಿಕರಿಗೆ ವಿತರಣೆ ಮಾಡಲಾಗುತ್ತಿದೆ. ಖ್ಯಾತ ಚಿತ್ರನಟಿ, ಹಿನ್ನಲೆ ಗಾಯಕಿ ಸಲ್ಮಾ ಆಗಾ, ಮಹ್ಮದ್ ರಫೀ ಅವರ ಧರ್ಮಪತ್ನಿ ದೇಬಾಸಿಸ್ ದಾಸಗುಪ್ತಾ, ಅಕ್ಬರ್ ಸೋಲಾಪುರಿ, ಮಹ್ಮದ್ ಪಟೇಲ್ ಇನ್ನಿತರ ಕಲಾವಿದರು ಭಾಗವಹಿಸಲಿದ್ದಾರೆ. ಸಾರ್ವಜನಿಕರು ಭಾಗವಹಿಸಲು ಸಂಚಾಲಕ ಡಾ. ಮಹ್ಮದ್ ಅಷ್ಪಾಕ್ ಚುಲಬುಲ್ ಕೋರಿದ್ದಾರೆ.

ಲೋಕಪಾಲ ಅಂಗೀಕಾರ; ಅಭಿನಂದನೆ
ಆಳಂದ: ಲೋಕಸಭೆಯಲ್ಲಿ ಜನಲೋಕಪಾಲ ಮಸೂದೆ ಅಂಗೀಕಾರಕ್ಕೆ ಯುಪಿಎ ಸರ್ಕಾರದ ಯುವ ನಾಯಕ ರಾಹುಲ್ ಗಾಂಧಿಯವರು ಕಾರಣಿಕರ್ತರಾಗಿದ್ದಾರೆಂದು ಸ್ಥಳೀಯ ಕಾಂಗ್ರೆಸ್ ಕಾರ್ಯಕರ್ತರು ಹರ್ಷ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ. ಈ ಕುರಿತು ಕಾಂಗ್ರೆಸ್ ಸಮಿತಿ ಬ್ಲಾಕ್ ಅಧ್ಯಕ್ಷ ಮೊಹಮದ್ ಮಕ್ದುಮ್ ಅನ್ಸಾರಿ ಕಾಲೇಮಿರ್, ಪ್ರಧಾನ ಕಾರ್ಯದರ್ಶಿ ತಾನಾಯಿ ಟಿ. ಸೂರ್ಯವಂಶಿ, ಮಾದನಹಿಪ್ಪರಗಾ ಬ್ಲಾಕ್ ಅಧ್ಯಕ್ಷ ಬಸವಗೌಡ ಪಾಟೀಲ್, ಕೆಪಿಸಿಸಿ ಸದಸ್ಯ ಜಗನಾಥ ಶೇಗಜಿ ಪ್ರತಿಕ್ರಿಯೆ ನೀಡಿದರು.

ಕಾಲೇಜು ಸಾಂಸ್ಕೃತಿಕ ಉತ್ಸವ
ಕ.ಪ್ರ. ವಾರ್ತೆ  ಗುಲ್ಬರ್ಗ  ಡಿ.22
ಈಚೆಗೆ ನಗರದ ಶರಣಬಸವೇಶ್ವರ ವಸತಿ ಪದವಿಪೂರ್ವ ಕಾಲೇಜಿನಲ್ಲಿ ಎರಡು ದಿನಗಳ ಕಾಲ ಅಂತರ ಕಾಲೇಜು ಸಾಂಸ್ಕೃತಿಕ ಉತ್ಸವ ಹಮ್ಮಿಕೊಳ್ಳಲಾಗಿತ್ತು.
ನವದೆಹಲಿಯ ಡಾ. ನಜೀರ್ ಅಹ್ಮದ್ ಕಾರ್ಯಕ್ರಮ ಉದ್ಘಾಟಿಸಿದರು. ಎರಡು ದಿನದ ಉತ್ಸವದಲ್ಲಿ ಗುಲ್ಬರ್ಗದಲ್ಲಿರುವ 19 ಪದವಿಪೂರ್ವ ಕಾಲೇಜಿನ ಪ್ರತಿಭಾನ್ವಿತ ವಿದ್ಯಾರ್ಥಿಗಳು ಸಾಹಿತ್ಯ, ಸಂಗೀತ, ಚಿತ್ರಕಲೆ, ರಂಗೋಲಿ, ನೃತ್ಯ ಇತ್ಯಾದಿ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು.
ಮಕ್ಕಳಲ್ಲಿ ಆತ್ಮವಿಶ್ವಾಸ, ಚಿಂತನಶೀಲತೆ, ಕರ್ತವ್ಯನಿಷ್ಠತೆ, ಶ್ರಮಶೀಲತೆ ಮತ್ತು ಅತಿಥಿ- ಸತ್ಕಾರಗಳ ಬಗ್ಗೆ ಅರಿವು ಮೂಡಿಸಲು ಉತ್ಸವ ಆಯೋಜಿಸಲಾಗಿತ್ತು. ನಗರದ ಶರಣಬಸವೇಶ್ವರ ವಸತಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಅತಿ ಹೆಚ್ಚಿನ (105) ಅಂಕಗಳನ್ನು ಪಡೆದು ಸಮಗ್ರ ಪ್ರಶಸ್ತಿ ಪಡೆದುಕೊಂಡಿತ್ತು. 50 ಅಂಕಗಳನ್ನು ಗಳಿಸಿ ಸೆಂಟ್ ಝೆವಿಯಲ್ ಪದವಿಪೂರ್ವ ಕಾಲೇಜು ದ್ವಿತೀಯ ಸ್ಥಾನ ಗಳಿಸಿದೆ.
ಪದವಿಪೂರ್ವ ಇಲಾಖೆಯ ಉಪನಿರ್ದೇಶಕ ಎಸ್.ಎಂ. ಸಾಳುಂಕೆ, ಶ್ರೀಶೈಲ್ ಹೊಗಾಡೆ ಇತರರು ಉಪಸ್ಥಿತರಿದ್ದರು. ಸಮಗ್ರ ಪ್ರಶಸ್ತಿ ಪಡೆದ ಶರಣಬಸವೇಶ್ವರ ವಸತಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ಸಂಸ್ಥೆಯ ಅಧ್ಯಕ್ಷ ಡಾ. ಶರಣಬಸವಪ್ಪ ಅಪ್ಪ ಅಭಿನಂದಿಸಿ ಉಜ್ವಲ ಭವಿಷ್ಯಕ್ಕಾಗಿ ಆಶೀರ್ವದಿಸಿದ್ದಾರೆ.

ವಿದ್ಯಾರ್ಥಿಗಳ ಸೈಕಲ್ ಓಟ
ಗುಲ್ಬರ್ಗ: ನಗರದ ಕಾಯಕ ಫೌಂಡೇಶನ್ ಸಂಸ್ಥೆಯು ರಾಮಮಂದಿರ ಬಳಿ ವಿದ್ಯಾರ್ಥಿ- ವಿದ್ಯಾರ್ಥಿನಿಯರಿಗೆ ಸೈಕಲ್ ಸ್ಪರ್ಧೆ ಆಯೋಜಿಸಿತ್ತು. ಗುಲ್ಬರ್ಗ ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ಮಹಾವಿದ್ಯಾಲಯ ಪ್ರಾಚಾರ್ಯ ಡಾ. ಎಂ.ಎಸ್. ಪಾಸೋಡಿ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು.
ಕಾಯಕ ಫೌಂಡೇಶನ್ ಟ್ರಸ್ಟ್ ಸಂಸ್ಥಾಪಕ ಶಿವರಾಜ ಪಾಟೀಲ್ ಸೈಕಲ್ ಓಟದ ಸ್ಪರ್ಧೆ ಆಯೋಜಿಸಿದ್ದರು. ವಿದ್ಯಾರ್ಥಿಗಳಿಗಾಗಿ ಇಂಥ ಹೊಸ ಸ್ಪರ್ಧೆ ಆಯೋಜಿಸುವ ಮೂಲಕ ಅವರ ದೈಹಿಕ ಆರೋಗ್ಯ ಕಾಪಾಡಿಕೊಳ್ಳುವ ಸಂದೇಶ ಇದರಿಂದ ರವಾನೆಯಾದಂತಾಯ್ತು.
ಬಸವರಾಜ ವಕೀಲರು, ಡಾ. ಶ್ರೀನಿವಾಸರೆಡ್ಡಿ, ಅಜಯಕುಮಾರ, ಸೂಗಣ್ಣಗೌಡ ಪಾಟೀಲ್, ಲಿಂಗರಾಜ ಬಿರಾದಾರ, ಪತ್ರಕರ್ತ ವಾದಿರಾಜ ವ್ಯಾಸಮುದ್ರ ಕಾಯಕ ಸಂಸ್ಥೆ ಸಿಬ್ಬಂದಿ ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.