ಗುಲ್ಬರ್ಗಾ

ಸುಳ್ಳು ಜಾತಿ ಪತ್ರ ತಡೆಗೆ ಆಗ್ರಹ

Published On :

ಗುಲ್ಬರ್ಗ: ಹೈ-ಕ ಭಾಗದಲ್ಲಿ ಗೊಂಡ, ಕಾಡುಕುರುಬ, ಜೇನು ಕುರುಬ, ರಾಜಗೊಂಡ ಎಂದು ಶಾಲಾ ದಾಖಲೆಗಳಲ್ಲಿ ನಮೂದಿಸಿ ಕಾನೂನು ಬಾಹೀರವಾಗಿ ಎಸ್ಟಿ ಎಂದು ಸುಳ್ಳು ಜಾತಿಪತ್ರಗಳನ್ನು ಪಡೆಯುತ್ತಿದ್ದು, ತಕ್ಷಣ ಈ ಹಾವಳಿಗೆ ಮೂಗುದಾರ ಹಾಕುವಂತೆ ಜಿಲ್ಲಾ ವಾಲ್ಮೀಕಿ ನಾಯಕ ಸಂಘ ಜಿಲ್ಲಾಧಿಕಾರಿಗೆ ಆಗ್ರಹಿಸಿದೆ. ಜಾತಿಪತ್ರ ಕೋರಿ ಬರುವ ಅರ್ಜಿಗಳನ್ನು ಸೂಕ್ತವಾಗಿ ಪರಿಶೀಲಿಸಿ, ವ್ಯಕ್ತಿ ವಾಸವಿರುವ ಗ್ರಾಮಗಳಿಗೆ ತೆರಳಿ ಸುತ್ತಲಿನ ಜನರನ್ನು ವಿಚಾರಿಸಿ ಜಾತಿಪತ್ರ ನೀಡುವ ವಿಚಾರದಲ್ಲಿ ನಿರ್ಣಯಿಸಬೇಕು. ಆದರೆ ಗುಲ್ಬರ್ಗ ಸೇರಿದಂತೆ ಹೈ-ಕ ಭಾಗದಲ್ಲಿ ಈ ಕೆಲಸ ಸರಿಯಾಗಿ ನಡೆಯುತ್ತಿಲ್ಲ. ಸುಳ್ಳು ಜಾತಿಪತ್ರ ಹಾಜರುಪಡಿಸಿ ಸೇವೆಯಲ್ಲಿರುವವರ ತಕ್ಷಣ ಅಮಾನತಿಗೆ ಆಗ್ರಹಿಸಿದೆ.

ಜವಳಿ ಸಚಿವರ ಪ್ರವಾಸ
ಗುಲ್ಬರ್ಗ: ಜವಳಿ, ಬಂದರು ಮತ್ತು ಒಳನಾಡು ಜಲಸಾರಿಗೆ ಹಾಗೂ ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವ ಬಾಬುರಾವ ಚಿಂಚನಸೂರ ಡಿ.24ರಂದು ಗುಲ್ಬರ್ಗಕ್ಕೆ ಆಗಮಿಸುವರು.  ಬೆಳಗಿನ 9.30ಕ್ಕೆ ಬಸವಕಲ್ಯಾಣಕ್ಕೆ ಪ್ರಯಾಣಿಸಿ ಸ್ಥಳೀಯ ಕಾರ್ಯಕ್ರಮದಲ್ಲಿ ಭಾಗವಹಿಸುವರು. ಮಧ್ಯಾಹ್ನ 3ಕ್ಕೆ ಸ್ಥಳೀಯ ಇಲಾಖಾ ಅಧಿಕಾರಿಗಳೊಂದಿಗೆ ಚರ್ಚಿಸಿ ಸಾರ್ವಜನಿಕ ಕುಂದುಕೊರತೆಗಳ ವಿಚಾರಣೆ ಮಾಡುವರು. ಸಂಜೆ 6ಕ್ಕೆ ಗುಲ್ಬರ್ಗ ಆಗಮಿಸಿ ವಾಸ್ತವ್ಯ ಮಾಡುವರು. ಡಿ.25ರಂದು ಬೆಳಗ್ಗೆ 9ಕ್ಕೆ ಗುಲ್ಬರ್ಗದಿಂದ ರಾಯಚೂರಿಗೆ ಪ್ರಯಾಣಿಸುವರು. ಅಲ್ಲಿ ಸ್ಥಳೀಯ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಸಂಜೆ 6.30ಕ್ಕೆ ಯಾದಗಿರಿಗೆ ಆಗಮಿಸಿ ಅಲ್ಲಿಂದ 9ಕ್ಕೆ ಗುಲ್ಬರ್ಗದಿಂದ ಬೆಂಗಳೂರಿಗೆ ಪ್ರಯಾಣಿಸುವರು.

ನಿವೃತ್ತ ನ್ಯಾಯಮೂರ್ತಿ ಮಾಧವರಾವ್ ನಿಧನ
ಆಳಂದ: ತಾಲೂಕಿನ ಜಮಗಾ (ಆರ್) ಗ್ರಾಮದ ನಿವಾಸಿ, ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಮಾಧವರಾವ ಶರಣಪ್ಪ ಪಾಟೀಲ್ (94) ಗುರುವಾರ ಬೆಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ನಿಧನರಾಗಿದ್ದಾರೆ. ಮೃತರಿಗೆ ಪತ್ನಿ, ಮೂವರು ಪುತ್ರಿಯರು ಮತ್ತು ಒಬ್ಬ ಪುತ್ರ ಸೇರಿ ಅಪಾರ ಬಳಗವನ್ನು ಅಗಲಿದ್ದಾರೆ.  ಮೃತರ ಪಾರ್ಥಿವ ಶರೀರವನ್ನು ಬೆಂಗಳೂರಿನಿಂದ ಶುಕ್ರವಾರ ಬೆಳಗಿನ ಜಾವ ಆಳಂದ ಕೋರ್ಟ್ ಆವರಣದಲ್ಲಿ ಆ್ಯಂಬುಲೆನ್ಸ್ ಮೂಲಕ ಗೌರವಾಧರಗಳಿಗಳಿಂದ ತರಲಾಯಿತು. ಪಾರ್ಥಿವ ಶರೀರವನ್ನು ಕೆಲ ಕಾಲ ಸಾರ್ವಜನಿಕರ ದರ್ಶನಕ್ಕಿಡಲಾಗಿತ್ತು. ಕಿರಿಯ ಶ್ರೇಣಿಯ ದಿವಾಣಿ ನ್ಯಾಯಾಧೀಶ ಪ್ರಭು ಎನ್.ಬಡಿಗೇರ, ತಹಸೀಲ್ದಾರ್ ಪರಮೇಶ್ವರ ಕೆ.ಸ್ವಾಮಿ, ನ್ಯಾಯವಾದಿ ಸಂಘದ ಅಧ್ಯಕ್ಷ ಎಸ್.ಡಿ. ಬೋಸಗೆ, ನ್ಯಾಯವಾದಿಗಳು ಅಂತಿಮ ದರ್ಶನ ಪಡೆದರು. ಬಳಿಕ ಪಾಟೀಲರ ಸ್ವಗ್ರಾಮಕ್ಕೆ ಅವರ ಪಾರ್ಥಿವ ಶರೀರವನ್ನು ಕೊಂಡೊಯ್ಯಲಾಯಿತು. ಮಧ್ಯಾಹ್ನ ಜಮಗಾದ ತೋಟದಲ್ಲಿ ನಡೆದ ಅಂತ್ಯಕ್ರಿಯೆ ವೇಳೆ ಶಾಸಕ ಬಿ.ಆರ್. ಪಾಟೀಲ್, ಮಾಜಿ ಸಚಿವ ರೇವುನಾಯಕ ಬೆಳಮಗಿ ಅನೇಕರು ಭಾಗವಹಿಸಿದ್ದರು.

'ವಿಜ್ಞಾನ ಯುಗದಲ್ಲಿ ಮುಂದೆ ಬನ್ನಿ'
ಕೆಂಭಾವಿ: ಇದು ಆಧುನಿಕ ಯುಗ. ಈ ಯುಗವು ವಿಜ್ಞಾನಮಯವಾಗಿದ್ದು, ಮಕ್ಕಳು ಇತ್ತ ಹೆಚ್ಚು ಗಮನಹರಿಸಿ ಮುಂದೆ ಬರಬೇಕೆಂದು ಬಿಆರ್ಸಿ ಚಂದ್ರಕಾಂತ ಕೊಣ್ಣೂರ ಹೇಳಿದರು.
ಸಮೀಪದ ಅಗ್ನಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಅಜೀಮ್ ಪ್ರೇಮ್ ಜೀ ಪೌಂಡೇಷನ್ ಹಾಗೂ ಸಮುದಾಯದ ಸಹಯೋಗದಲ್ಲಿ ವಿಜ್ಞಾನ ಮೇಳದಲ್ಲಿ ಭಾಗವಹಿಸಿ ಮಾತನಾಡಿದರು. ಮುಖಂಡ ಶಂಕರಗೌಡ ಪೊಲೀಸಪಾಟೀಲ ಭಾಗವಹಿಸಿದ್ದರು. ಕೆಂಭಾವಿ ವಲಯದ ಸಿಆರ್ಪಿ ರಾಜಅಹ್ಮದ್ ಬಡಿಗೇರ ಉದ್ಘಾಟಿಸಿದರು. ಸೌರಶಕ್ತಿಯಿಂದ ನಮಗಾಗುವ ಹಲವು ಉಪಯೋಗಗಳು, ಹೀಗೆ ಸುಮಾರು 55 ಚಟುವಟಿಕೆಗಳನ್ನು ಮಕ್ಕಳು ಮಾಡಿ ತೋರಿಸಿದರು. ಶಾಲೆಯ ಪ್ರಧಾನಗುರು ಅಂಬಣ್ಣ ಅಂಬಿಗರ ಅಧ್ಯಕ್ಷತೆ ವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.