ವಡವಾಟಿ ಕ್ಲಾರಿಯೋನೆಟ್, ಚೆನ್ನಣ್ಣರ ಮಾತಿಗೆ ಖುಷ್...
ಕನ್ನಡಪ್ರಭ ವಾರ್ತೆ ಗುಲ್ಬರ್ಗ ಡಿ.25
ನಮ್ಮನ್ನೆಲ್ಲ ಅಗಲಿರುವ ರಾಷ್ಟ್ರಕವಿ ಡಾ. ಜಿ.ಎಸ್. ಶಿವರುದ್ರಪ್ಪನವರೊಂದಿಗೆ ಗುಲ್ಬರ್ಗದ ಸಾಹಿತಿಗಳ ಒಡನಾಟವಿತ್ತು. ಇಲ್ಲಿನ ಬಂಡಾಯ ಸಾಹಿತಿ ಡಾ. ಚೆನ್ನಣ್ಣ ವಾಲೀಕಾರ್ ಅವರಂತೂ ಜಿಎಸ್ಸೆಸ್ ರಾಷ್ಟ್ರಕವಿಯಾದ ದಿನದ ಸಂಜೆ ಅವರೊಂದಿಗೆ ಕಳೆದ ಕ್ಷಣಗಳನ್ನು ಎಂದೂ ಮರೆಯರು.
“ಕನ್ನಡಪ್ರಭ’ ಜೊತೆ ಮಾತನಾಡಿದ ಡಾ. ಚೆನ್ನಣ್ಣ ವಾಲೀಕಾರ್ ಜಿಎಸ್ಸೆಸ್ ರಾಷ್ಟ್ರಕವಿಯಾದ ದಿನದ ಸಂಜೆ ತಾವು ಅವರೊಂದಿಗೆ ಕಳೆದ ಕ್ಷಣಗಳನ್ನೆಲ್ಲ ಮೆಲಕು ಹಾಕುತ್ತ ಮಂತ್ರಮುಗ್ಧರಾದರು. ರಾಷ್ಟ್ರಕವಿಯ ಅಗಲುವಿಕೆ ಕನ್ನಡಕ್ಕೆ ತುಂಬಲಾರದ ನಷ್ಟ ಎಂದು ಮರುಗಿದರು. ಅವರನ್ನು ಜೀವನ ಸಮೃದ್ಧಿಯ ಸಂಕೇತ ಎಂದು ಬಣ್ಣಿಸಿದರು.
ಆಡಿದ್ದು ಒಂದೇ ಮಾತು: ಇವತ್ತಿನ ಈ ಸಂಜೆಯ ಕಾರ್ಯಕ್ರಮದಲ್ಲಿ ನನಗಿಷ್ಟವಾದದ್ದು ನರಸಿಂಹಲು ವಡವಾಟಿ ಕ್ಲಾರಿಯೋನೇಟ್ ಹಾಗೂ ಡಾ. ಚೆನ್ನಣ್ಣರ ಹೂವಿನಂತೆ ಅರಳಿದ ಗಂಧ ಸೂಸಿದ ಮಾತುಗಳು... ಎಂದು ಜಿಎಸ್ಸೆಸ್ ತಮ್ಮ ಅಭಿನಂದನೆಗಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಆಡಿದ್ದು ಒಂದೇ ಮಾತು.
ಅದೂ ಚೆನ್ನಣ್ಣರನ್ನು ಹಾಗೂ ರಾಯಚೂರಿನ ವಡವಾಟಿ ಅವರನ್ನು ಮುಕ್ತವಾಗಿ ಹೊಗಳಿದ್ದರು.
ಜಿಎಸ್ಸೆಸ್ ಅಳಿಯ ಡಾ. ಕೆ.ಮರುಳಸಿದ್ದಪ್ಪ ಅವರು ಡಾ. ಚೆನ್ನಣ್ಣರ ಆಪ್ತರು. ಮಾಮಾ ರಾಷ್ಟ್ರಕವಿಯಾಗಿದ್ದಾರೆ, ಸಂಜೆ ಮನೆಯಲ್ಲಿ ಸಂಗೀತ ಕಾರ್ಯಕ್ರಮವಿದೆ ಬನ್ನಿ ಎಂಬ ಮರುಳಸಿದ್ದಪ್ಪ ಅವರ ಆಹ್ವಾನ ಸ್ವೀಕರಿಸಿ ಅಲ್ಲಿಗೆ ಹೋಗಿದ್ದ ಚೆನ್ನಣ್ಣ ವಾಲೀಕಾರ್ ಜಿಎಸ್ಸೆಸ್ ಕುರಿತು ನಾಲ್ಕು ಮಾತುಗಳನ್ನಾಡಲು ಅವಕಾಶ ಪಡೆದರು.
ಕಾವ್ಯ, ವಿಮರ್ಶೆ ಮಾತಿಗೆ ಮೈದುಂಬಿತ್ತು: ಸಂಗೀತಗಾರ ಶಿವಮೊಗ್ಗ ಸುಬ್ಬಣ್ಣ ಅವರು ಡಾ. ಚೆನ್ನಣ್ಣರನ್ನು ಕರೆದು ಜಿಎಸ್ಸೆಸ್ ಬಗ್ಗೆ ಮಾತನಾಡುವಂತೆ ಹೇಳಿದಾಗ ಜಿಎಸ್ಸೆಸ್ ಅವರ ಎರಡು ಕಣ್ಣುಗಳಾಗಿದ್ದ ಕಾವ್ಯ ಹಾಗೂ ವಿಮರ್ಶೆ ಬಗ್ಗೆಯೇ ಅಣ್ಣ ಮಾತನಾಡಿದಾಗ ನೀನು ಮಗುವಿನಂತೆ ಮಾತನಾಡಿದೆಯಲ್ಲೋ... ಎಂದು ಶಿವರುದ್ರಪ್ಪ ಚೆನ್ನಣ್ಣರನ್ನು ಅಪ್ಪಿಕೊಂಡು ಅಭಿನಂದಿಸಿರಂತೆ.
ನರಸಿಂಹಲು ಕ್ಲಾರಿಯೋನೇಟ್, ಚೆನ್ನಣ್ಣರ ಮಾತುಗಳಿಗೆ ಅಂದು ರಾಷ್ಟ್ರಕವಿ ಮನಸೋತಿದ್ದರು. ಡಾ. ಮರುಳಸಿದ್ದಪ್ಪನವರ ಜೊತೆಗೇ ಇಳಿದು ಬಂದ ಜಿಎಸ್ಸೆಸ್ ನಮ್ಮ ಅಳಿಯನ ಗೆಳೆಯ ಎಂದು ಗೊತ್ತಿರಲಿಲ್ಲ. ಮನೆಗೆ ಬನ್ನಿ, ಹೀಗೇ ಸಂತಸದ ಕ್ಷಣಗಳನ್ನು ಹಂಚಿಕೊಳ್ಳೋಣ ಎಂದಿದ್ದರಂತೆ.
ರಾಷ್ಟ್ರಕವಿ ಅಗಲಿದ ಈ ಸಂದರ್ಭದಲ್ಲಿ ದುಃಖದಲ್ಲಿರುವ ಡಾ. ಚೆನ್ನಣ್ಣ ವಾಲೀಕಾರ್ ಅವರು ಹಿರಿಯ ಜೀವದ ಅಗಲುವಿಕೆ ಸಹಿಸುವ ಶಕ್ತಿಯನ್ನು ಅವರ ಕುಟುಂಬಕ್ಕೆ ಭಗವಂತ ನೀಡಲಿ, ಹಿರಿಯರ ಆತ್ಮಕ್ಕೆ ಚಿರಶಾಂತಿ ದೊರಕಲಿ ಎಂದು ಗದ್ಗದಿತರಾಗಿ ಪ್ರಾರ್ಥಿಸಿದರು.
ಜಿಎಸ್ಸೆಸ್ ನಿಧನಕ್ಕೆ ಸಂತಾಪ
ಗುಲ್ಬರ್ಗ: ಕನ್ನಡ ಸಾಹಿತ್ಯ ದಿಗ್ಗಜ ಮತ್ತು ಕನ್ನಡ ಸಾಹಿತ್ಯದ ರಂಗಭೂಮಿ ಚಳವಳಿಗಾರ ರಾಷ್ಟ್ರಕವಿ ಡಾ. ಜಿ.ಎಸ್. ಶಿವರುದ್ರಪ್ಪ ನಿಧನಕ್ಕೆ ಬಹುಜನ ಜಾಗೃತಿ ವೇದಿಕೆ ಸಂತಾಪ ಸೂಚಿಸಿದೆ.
ವಿಭಾಗೀಯ ಅಧ್ಯಕ್ಷ ಪ್ರಕಾಶ ಹಾಗರಗಿ, ಕಾರ್ಯದರ್ಶಿ ಮಲ್ಲಿಕಾರ್ಜುನ ಕೆರಮಗಿ, ಅಶೋಕ ಬಬಲಾದ, ವಿಜಯಕುಮಾರ್ ಕಾಂಬಳೆ, ರವಿ ಕೋರೆ, ಪ್ರವೀಣಕುಮಾರ್ ಸುಜಾತ, ಶಂಕರ ಬೆಳಮಗಿ, ರಾಮಚಂದ್ರ ಜಂಡೆ ಇತರರು ಸಂತಾಪ ಸಭೆಯಲ್ಲಿ ಪಾಲ್ಗೊಂಡು ಶ್ರದ್ಧಾಂಜಲಿ ಸಲ್ಲಿಸಿದರು.
ಜಿಎಸ್ಸೆಸ್ಗೆ ನುಡಿನಮನ
ಗುಲ್ಬರ್ಗ: ಕನ್ನಡ ಭೂಮಿ ಜಾಗೃತಿ ಸಮಿತಿ ಜಿಲ್ಲಾ ಯುವ ಘಟಕದ ವತಿಯಿಂದ ನಗರದಲ್ಲಿ ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪ ಅವರಿಗೆ ನುಡಿನಮನ ಸಲ್ಲಿಸಿದೆ. ಪ್ರಶಾಂತ ತಂಬೂರಿ, ಅಶೋಕ ಕಮಲಪುರ, ಸುರೇಶ ಹತ್ತಿ, ನರಸಪ್ಪ ರಂಗೋಲಿ, ಮೋಸಿನ ಇನಾಮದಾರ, ತಬ್ರೇಜ್ ಪಟೇಲ್ ಇತರರು ಭಾಗವಹಿಸಿದ್ದರು.
ಭಾವಗೀತೆಗಳಿಂದ ಮನೆಮಾತು
ಜೀವನ ಪ್ರೀತಿಯ ಕವಿ, ಅವರ ಕೌಟುಂಬಿಕ ಜೀವನದ ಸಾರ- ಸತ್ವ ಸಾರುವ ಭಾವಗೀತೆಗಳು ಸದಾ ಹಸಿರು. ಜಿಎಸ್ಎಸ್ ಇಹಲೋಕದ ಬದುಕಿಗೆ ವಿದಾಯ ಹೇಳಿದರೂ ಅವರು ಭಾವಗೀತೆಗಳ ಮೂಲಕ ಸದಾ ಕನ್ನಡಿಗರ ಮನೆ- ಮನದಲ್ಲಿ ನೆಲೆಸಿದ್ದಾರೆ. ಜೀವನ ಸಮೃದ್ಧಿ ಇವರ ಕವಿತೆಗಳ ಜೀವಾಳವಾಗಿತ್ತು. ಭಾವತುಂಬಿದ ಕವನಗಲಿಂದಲೇ ನಾಡು- ನುಡಿ, ಬದುಕಿನ ಸಮೃದ್ಧಿ ಬಯಸಿದವರು ಜಿಎಸ್ಎಸ್. ಎದೆ ತುಂಬಿ ಹಾಡಿ ಹೋದ ಕವಿ ನಿಧನದಿಂದ ಕನ್ನಡ ಸಾರಸ್ವತ ಲೋಕ ಬಡವಾಗಿದೆ.
ಡಾ. ವಸಂತ ಕುಷ್ಟಗಿ, ಹಿರಿಯ ಕವಿಗಳು, ಗುಲ್ಬರ್ಗ
ಸ್ತ್ರೀಯರಿಗೆ ನೀಡಿದ್ದ ಗೌರವ ಅಪಾರ
ರಾಷ್ಟ್ರಕವಿ ಜಿಎಸ್ಎಸ್ ನಿಧನ ಕನ್ನಡ ನಾಡಿಗೆ ತುಂಬಲಾರದ ನಷ್ಟ. ಅವರ ಭಾವ ತುಂಬಿದ ಕವನಗಳು ಸದಾ ಸ್ಮರಣೀಯ. ನೀಲಿ ಬಾನಲ್ಲಿ.... ಎಂಬ ಅವರ ಸ್ತ್ರೀಗೆ ನಮಿಸಿದ ಕವನವಂತೂ ಇಡೀ ಸ್ತ್ರೀ ಕುಲಕ್ಕೇ ಗೌರವ ನೀಡಿದಂತಹ ಮೌಲಿಕ ಕೃತಿ. ಇಂತಹ ಕವನಗಳ ಸಾರ ನೈತಿಕ ಅಧ-ಪತನದತ್ತ ಸಾಗುತ್ತಿರುವ ಯುವಪಡೆಗೆ ಮಾರ್ಗಸೂಚಿ. ಬದುಕು, ಪ್ರಕೃತಿ, ಸ್ತ್ರೀ, ಮಕ್ಕಳು ಹೀಗೆ ಹಲವು ರೂಪಗಳಲ್ಲಿ ಭಾವ ತುಂಬಿ ಬರೆದ ರಾಷ್ಟ್ರಕವಿ ನಿಧನ ಕನ್ನಡಮಾತೆಗೆ ನಿಜಕ್ಕೂ ದೊಡ್ಡ ಪೆಟ್ಟು.
ಡಾ. ಎಸ್.ಎಸ್. ಗುಬ್ಬಿ, ವೈದ್ಯ ಸಾಹಿತಿ, ಗುಲ್ಬರ್ಗ
-ಶೇಷಮೂರ್ತಿ ಅವಧಾನಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

