'ಸನ್ಮಾನದಿಂದ ಕರ್ತವ್ಯ ಪ್ರಜ್ಞೆ ಜಾಗೃತ'
ಗುಲ್ಬರ್ಗ: ಪತ್ರಿಕೆ ವಿತರಣೆಯಲ್ಲಿ ವಿಳಂಬವಾದಲ್ಲಿ ಬಿಲ್ಲು ನೀಡುವ ಮಾಲೀಕ ಗುಲ್ಲು ಮಾಡುವುದನ್ನು, ಸರಿಯಾದ ಸಮಯಕ್ಕೆ ಪತ್ರಿಕೆ ಸ್ವೀಕರಿಸದಿದ್ದರೆ ಸಿಟ್ಟು ಮಾಡುವ ಏಜೆಂಟರಿಂದ ಬೈಗುಳ ತಿನ್ನುವುದನ್ನೇ ರೂಢಿಸಿಕೊಂಡ ಪತ್ರಿಕಾ ವಿತರಕರಿಗೆ ವಿಶ್ವಜ್ಯೋತಿ ಪ್ರತಿಷ್ಠಾನ ಹಾಗೂ ಸಹೃದಯಿಗಳು ಸ್ವೆಟರ್ ವಿತರಿಸಿ ಚಳಿಯಲ್ಲಿಯೂ ಬೇಗ ಪತ್ರಿಕೆ ಹಾಕಲು ಅನುಕೂಲ ಕಲ್ಪಿಸಿಕೊಟ್ಟರು.
ಆಗಮಿಸಿದ್ದ ಎಲ್ಲ ಪತ್ರಿಕೆ ವಿತರಕರಿಗೂ ಸ್ವೆಟರ್ ನೀಡಲಾಯ್ತು. ಸ್ವೆಟರ್ಗಳ ಸೈಜು, ಬಣ್ಣವನ್ನು ನೋಡದೆ ನೀಡಿದ ಕೈಗಳಿಗೆ ಮಂದಹಾಸದಿಂದ ಧನ್ಯವಾದ ಅರ್ಪಿಸಿ, ನಾಡಿನಲ್ಲಿಯೇ ವಿಶಿಷ್ಟವಾಗಿ ಕಂಡುಬಂದ ಈ ಕಾರ್ಯಕ್ರಮಕ್ಕೆ ವಿತರಕರು ಅಭಿನಂದಿಸಿದರು.
ದುಡಿವ ಕೈಗಳೇ ಮಿಗಿಲು: ಕಾರ್ಯಕ್ರಮದ ನೇತೃತ್ವ ವಹಿಸಿದ ಪ್ರತಿಷ್ಠಾನದ ಸಂಸ್ಥಾಪಕ ವಿಜಯಕುಮಾರ ತೇಗಲತಿಪ್ಪಿ, ಬದುಕಿಗಾಗಿ ಆಯ್ದುಕೊಂಡ ಯಾವುದೇ ಕೆಲಸ ಕೀಳರಿಮೆಯದಲ್ಲ. ಸ್ವಾಭಿಮಾನದ ಬದುಕಿಗಾಗಿ ಹೋರಾಡುವ ಪತ್ರಿಕಾ ವಿತರಕರಿಗೆ ಬುದ್ಧ, ಬಸವ, ಅಂಬೇಡ್ಕರರ ಆದರ್ಶಗಳು ದಾರಿದೀಪವಾಗಬೇಕು. ಕಾಯಕವೇ ಕೈಲಾಸವೆಂಬ ಶರಣವಾಣಿಯಂತೆ ದುಡಿಯುವ ಕೈಗಳು, ಮುಗಿಯುವ ಕೈಗಳಿಗಿಂತಲೂ ಮಿಗಿಲು ಎಂದರು. ಸಮಾರಂಭದಲ್ಲಿ 200ಕ್ಕೂ ಹೆಚ್ಚು ಸ್ವೆಟರ್ಗಳನ್ನು ಹಂಚಲಾಯಿತು. ಪ್ರತಿಷ್ಠಾನದ ಇಂತಹ ವಿಶಿಷ್ಟ ಕಾರ್ಯಕ್ಕೆ ಸಹಕರಿಸಿದ ದಾನಿಗಳನ್ನು ಸ್ಮರಿಸಲಾಯಿತು.
ಪತ್ರಿಕೆ ವಿತರಣೆಯಿಂದ ಎತ್ತರಕ್ಕೆ..: ಸಂಚಾರಿ ಪೊಲೀಸ್ ಠಾಣೆಯ ಆರಕ್ಷಕ ನಿರೀಕ್ಷಕ ಪ್ರಭು ಮಾತನಾಡಿ, ಸಾಮಾಜಿಕ ಬದಲಾವಣೆಗೆ ಪ್ರಾಮಾಣಿಕ ಸೇವೆ ಮಾಡುವ ಮನಸ್ಸು ಬಹುಮುಖ್ಯವಾದುದು. ಸಮಾಜದ ಕೆಳಹಂತದಲ್ಲಿ ಕಾರ್ಯ ಮಾಡುವವ ಸೇವೆ ಅಸಾಮಾನ್ಯವಾದುದು. ರಾಷ್ಟ್ರಧ್ಯಕ್ಷರಂಥವರು ಪತ್ರಿಕಾ ವಿತರಣೆಯಿಂದ ಆ ಹಂತಕ್ಕೆ ತಲುಪಿದ್ದಾರೆಂದರೆ ತಮ್ಮ ಕಾರ್ಯದ ಬಗ್ಗೆ ತಾವು ತಿಳಿಯಬಹುದು ಎಂದರು.
ಸುಲಫಲ ಮಠದ ಡಾ. ಮಹಾಂತ ಶಿವಾಚಾರ್ಯರು ಆಶೀರ್ವಚನ ನೀಡಿದರು. ಎಚ್ಕೆಇ ಸಂಸ್ಥೆಯ ಅಧ್ಯಕ್ಷ ಶಶೀಲ್ ನಮೋಶಿ, ರಾಜು ಲೇಂಗಟಿ, ಶ್ರೀಕಾಂತ ಪಾಟೀಲ ತಿಳಗೂಳ, ಡಾ. ಲಿಂಗರಾಜ ಕೋಣಿನ್ ಮಾತನಾಡಿದರು. ಪ್ರತಿಷ್ಠಾನದ ಶಿವರಾಜ ಅಂಡಗಿ, ಬಿ.ಎಂ. ಪಾಟೀಲ ಕಲ್ಲೂರ, ರಾಜಶೇಖರ ಯಾಳಗಿ, ಶಿವಕುಮಾರ ಸಿ.ಎಚ್., ಕೆ.ಗಿರಿಮಲ್ಲ, ಎಂ.ಬಿ. ನಿಂಗಪ್ಪ, ವಿಶ್ವನಾಥ ಕಾಡಾದಿ, ಕೆ.ಎಸ್. ಬಂಧು ಸಿದ್ದೇಶ್ವರ, ಮನೋಹರ ಪೊದ್ದಾರ, ಜಗದೀಶ ಪಡಶೆಟ್ಟಿ, ಪ್ರಶಾಂತ ಪಾಟೀಲ ಪಾಲ್ಗೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

