ಜಿಲ್ಲೆಯ ಹಿನ್ನೋಟ
ಜಿಲ್ಲೆಯ ಪಾಲಿಗೆ 2013 ಪ್ರಗತಿ- ವಿಗತಿಗಳ ವರ್ಷ. ಕುಳಿ ತುಂಬಿದ ಕೆಟ್ಟ ರಸ್ತೆಗಳು ಜಿಲ್ಲೆಯ ಜನರ ಜೀವ ಹಿಂಡಿದೆ, ಮಲ್ಲಿಕಾರ್ಜುನ ಖರ್ಗೆ ಅವರಿಗೆ ರೇಲ್ವೆ ಖಾತೆ ನಿರ್ವಹಿಸುವ ಜವಾಬ್ದಾರಿ ಹೆಗಲೇರಿ ರೈಲು ಮೂಲ ಸೌಕರ್ಯ ಹಳಿ ಹತ್ತಿ ವೇಗವಾಗಿ ಓಡಿದ ವರ್ಷವೂ ಹೌದು. ಹೀಗಾಗಿ ರೇಲ್ವೆ ಸೌಕರ್ಯ ಹಳಿ ಹತ್ತಿದರೆ, ರಸ್ತೆ ಸೌಕರ್ಯ ಹಳಿ ತಪ್ಪಿದ ವರ್ಷವಾಯ್ತು. ಇನ್ನು ಸಂವಿಧಾನದ ಕಲಂ 371(ಜೆ) ತಿದ್ದುಪಡಿಗೆ ಸಂಸತ್ತಿನಲ್ಲಿ ಸರ್ವಾನುಮತದ ಅಂಗೀಕಾರ ದೊರಕಿದ್ದಲ್ಲದೆ ರಾಷ್ಟ್ರಪತಿ ಅಂಕಿತ ಮುದ್ರೆ ಬಿದ್ದ ವರ್ಷ, ರಾಜ್ಯಪಾಲರು ಕಲಂ 371(ಜೆ) ಅನ್ವಯ ಮಂಡಳಿ ರಚನೆಗೆ ಸಹಿ ಹಾಕಿದ ವರ್ಷ. ಹೈ-ಕ ಪಾಲಿನ ಪ್ರಗತಿ ಪೋಷಣೆಯ- ಹಿತಕಾರಿ ವರ್ಷವಾಯ್ತು.
ರೇಲ್ವೆ ಯೋಜನೆಗಳಿಗೆ ಖರ್ಗೆ ಹಸಿರು ನಿಶಾನೆ
ಮಲ್ಲಿಕಾರ್ಜುನ ಖರ್ಗೆ ರೇಲ್ವೆ ಸಚಿವರಾಗುತ್ತಿದ್ದಂತೆಯೇ ರೇಲ್ವೆ ಮೂಲ ಸೌಕರ್ಯದಲ್ಲಿ ಕ್ರಾಂತಿಯಾಯ್ತು. ದಶಕಗಳಿಂದ ನೆನೆಗುದಿಗೆ ಬಿದ್ದಿದ್ದ ಗುಲ್ಬರ್ಗ- ಬೀದರ್ ಮಾರ್ಗದ ಕುರಿಕೋಟಾ ಸೇತುವೆ, ಮರಗುತ್ತಿ ಸುರಂಗಕ್ಕೆ ಚಾಲನೆ ದೊರಕಿತು. ಗುಲ್ಬರ್ಗದಲ್ಲಿಯೂ ನಿಲ್ದಾಣ ನವೀಕರಣ ಶುರುವಾಯ್ತು. 4ನೇ ಪ್ಲಾಟ್ ಫಾರ್ಮ್ ಅಭಿವೃದ್ಧಿಗೆ ಹಸಿರು ನಿಶಾನೆ, ಗುಲ್ಬರ್ಗ ಮಾದರಿ ರೈಲು ನಿಲ್ದಾಣಕ್ಕೂ ಚಾಲನೆ ದೊರಕಿತು.
ಇದಲ್ಲದೆ ಹೊಟಗಿ- ಗುಲ್ಬರ್ಗ ಜೋಡಿ ಹಳಿ ಮಾರ್ಗ, ವಾಡಿ- ದೌಂಡ್ ವಿದ್ಯುದ್ದೀಕರಣಕ್ಕೂ ಹಸಿರು ನಿಶಾನೆ, ಗುಲ್ಬರ್ಗದಿಂದಲೇ ಹೊಸ ರೈಲುಗಳ ಶುಭಾರಂಭಕ್ಕೆ ಅನುಕೂಲವಾಗುವಂತಹ ಪಿಟ್ ಲೈನ್ ಸೌಕರ್ಯವೂ ಇಲ್ಲಿ ಬಂದಿದ್ದು ಜಿಲ್ಲೆಯ ಜನರ ಸೌಭಾಗ್ಯ.
ಇದಲ್ಲದೆ ವರ್ಷದ ಕೊನೆಯಲ್ಲಿ ಗುಲ್ಬರ್ಗಕ್ಕೆ ರೇಲ್ವೆ ವಿಭಾಗೀಯ ಆಡಳಿತ ಕಚೇರಿಗೆ ಮಂಜೂರಾತಿ ದೊರಕಿದೆ. ಹೆಚ್ಚುವರಿ ಬಜೆಟ್ನಲ್ಲಿ ಇದನ್ನು ಸೇರ್ಪಡೆ ಮಾಡಲಾಗಿದೆ ಎಂದು ಖರ್ಗೆ ಹೇಳುವ ಮೂಲಕ ವಿಭಾಗೀಯ ಕಚೇರಿಯ ಈ ಭಾಗದವರ ಕನಸು ನನಸಾಗಿಸುವ ದಿಶೆಯಲ್ಲಿ ಮಹತ್ವದ ಹೆಜ್ಜೆ ಇರಿಸಿದಂತಾಯ್ತು.
ಕಲಂ 371(ಜೆ) ಕೊಡುಗೆ
2013ರ ಜನವರಿಯಲ್ಲಿ ಕಲಂ 371(ಜೆ) ಹೋರಾಟಕ್ಕೆ ಜಯ ದೊರಕಿದ್ದು. ರಾಷ್ಟ್ರಪತಿಗಳೂ ಈ ವಿಧಿಗೆ ಅಂಕಿತ ಮುದ್ರೆ ಒತ್ತುವ ಮೂಲಕ ಹೈ- ಕ ಪ್ರಗತಿಗೆ ಮುನ್ನುಡಿ ಬರೆದರಲ್ಲದೆ, ರಾಜ್ಯ ಸರ್ಕಾರವೂ ಈ ವಿಧಿಯ ಪ್ರಕಾರ ಪ್ರತ್ಯೇಕ ಮಂಡಳಿಗೂ ಅಂಗೀಕಾರ ನೀಡಿದೆ. ಇನ್ನೇನು ಈ ವಿಧಿಯನ್ವಯ ಮೀಸಲಾತಿ ನೀತಿ ಪಕ್ಕಾ ರಚನೆಯಾಗಿ ನೇಮಕಾತಿ ಸೇರಿದಂತೆ ವಿಧಿಯ ಸಂಪೂರ್ಣ ಲಾಭ ಈ ಭಾಗಕ್ಕೆ ದೊರಕಬೇಕಾಗಿದೆ.
ವಿಮಾನಯಾನ ಇನ್ನೂ ಕನಸು
ರಾಹಿ ಒಡೆತನದಲ್ಲಿ ಸಾಗಿದ್ದ ವಿಮಾನ ನಿಲ್ದಾಣ ಕಾಮಗಾರಿಗೆ ಗ್ರಹಣ ಅಮರಿತು. ರಾಹಿಯಲ್ಲಿರುವ ಪಾಲುದಾರ ಕಂಪನಿಗಳ ನಡುವಿನ ಜಗಳವೇ ಗ್ರಹಣಕ್ಕೆ ಮೂಲವಾಯ್ತು. ಇದರಿಂದ ವಿಮಾನಯಾನ ಕನಸು ಕನಸಾಗಿಯೇ ಉಳಿದಿದ್ದು ವಿಪರ್ಯಾಸ. ನಗರ ಹಾಗೂ ಜಿಲ್ಲೆಯ ರಸ್ತೆಗಳು ಅತಿ ಮಳೆಯಿಂದ ಹದಗೆಟ್ಟು ಹೋಗಿದ್ದರೂ ಅವುಗಳ ದುರಸ್ತಿಗೆ ಕ್ಯಾರೆ ಎನ್ನದ ಜಿಲ್ಲಾಡಳಿತದಿಂದಾಗಿ ಜನರ ಬದುಕು ಬವಣೆ ದ್ವಿಗುಣಗೊಂಡ ವರ್ಷ.
ಹೈಕೋರ್ಟ್ ಪೂರ್ಣಪೀಠ
2007ರಲ್ಲೇ ಇಲ್ಲಿನ ಅಫಜಲ್ಪುರ ರಸ್ತೆಯಲ್ಲಿ ಸ್ಥಾಪನೆಯಾಗಿದ್ದ ಹೈಕೋರ್ಟ್ ಸಂಚಾರಿ ಪೀಠ ಆ.31ರಂದು ಪೂರ್ಣಪೀಠವಾಯ್ತು. ಇದರೊಂದಿಗೆ ಈ ಭಾಗದ ಜನರ, ಕಕ್ಷಿದಾರರ, ವಕೀಲರ ಬಹುದಿನಗಳ ಬೇಡಿಕೆ ಈಡೇರಿತು. ಐಟಿ ಪಾರ್ಕ್ ಸಹ ಆರಂಭವಾಯ್ತು.
ಕಳ್ಳಕಾಕರ ಹಾವಳಿ...
ಕಡಗಂಚಿಯ ಎಸ್ಬಿಐ ಬ್ಯಾಂಕ್ 2 ಬಾರಿ ದರೋಡೆಗೊಳಗಾಗಿದ್ದು, ನಗರದ ಮುತ್ತೂಟ್ ಹಣಕಾಸು ಸಂಸ್ಥೆಯಲ್ಲಿಯೂ ಬಹುಕೋಟಿ ರು. ಕಳವಾಗಿದ್ದು ತಲ್ಲಣ ಮೂಡಿಸಿತು. ಇನ್ನೂ ಈ ಪ್ರಕರಣಗಳ ಆರೋಪಿಗಳನ್ನು ಬಂಧಿಸುವುದು ಪೊಲೀಸರಿಗೆ ಆಗಿಲ್ಲ. ಸರಗಳ್ಳತನ, ಮನೆಗಳ ದರೋಡೆ ಎಂದಿನಂತೆ ಸಾಗಿದ್ದಲ್ಲದೆ ಸೇಫ್ ಸಿಟಿ ಗುಲ್ಬರ್ಗ ಪ್ರೊಜೆಕ್ಟ್ ಬಂದರೂ ಪೊಲೀಸರಿಗೆ ಕಳ್ಳರು ಸವಾಲೆಸೆದ ವರ್ಷ. ಹೈಕಶಿ ಸಂಸ್ಥೆ, ಅಧ್ಯಕ್ಷ ನಮೋಶಿ ಮನೆ ಮೇಲೆ ನಡೆದ ಐಟಿ ದಾಳಿ, ಭ್ರಷ್ಟ ಅಧಿಕಾರಿಗಳ ಮನೆಗಳ ಮೇಲಿನ ಲೋಕಾ ದಾಳಿಗಳೂ ಸುದ್ದಿ ಮಾಡಿದ ವರ್ಷ. ಕೋಲಿ ಸಮಾಜ ಮುಖಂಡ ವಿಠ್ಠಲ್ ಹೆರೂರ್ ನಿಧನ ದುಃಖ ನೀಡಿದ ವರ್ಷ. ಇನ್ನು ಸಾಂಸ್ಕೃತಿಕವಾಗಿ ಕಸಾಪ ನಗರದಲ್ಲೇ ಸಮ್ಮೇಳನ ನಡೆಸಿ ರಂಗಕರ್ಮಿಗೆ ಅಧ್ಯಕ್ಷ ಪಟ್ಟ ನೀಡಿದ್ದು ಸಂತಸ ತಂದಿತು. ಕಲಾವಿದ ವಿಜಯ ಹಾಗರಗುಂಡಗಿಗೆ ರಾಜ್ಯೋತ್ಸವ ಪುರಸ್ಕಾರ ದೊರಕಿದ್ದು ಕಲಾಲೋಕದಲ್ಲಿಯೂ ಸಮಾಧಾನ ತಂದ ವರ್ಷ.
ಚಿತ್ತಾಪುರ ತಾಲೂಕು
ಚಿತ್ತಾಪುರ ತಾಲೂಕಿನ ರಾವೂರ ಸಿದ್ದಲಿಂಗೇಶ್ವರ ಮಠದಲ್ಲಿ ಜುಲೈ ತಿಂಗಳಲ್ಲಿ ಪತ್ರಿಕೆ ದಿನಾಚರಣೆ ಆಚರಿಸಿದ್ದು ವಿಶೇಷ. ಅಕ್ಟೋಬರ್ ತಿಂಗಳಿನಲ್ಲಿ ಬದಲಾದ ರಾಜಕೀಯದ ಕಾರಣ ತಾಲೂಕಿಗೆ ಜಿಪಂ ಅಧ್ಯಕ್ಷ ಸ್ಥಾನ ಒಲಿದು, ಈ ತಾಲೂಕಿಗೆ ಜಿಪಂ, ತಾಪಂ, ಪುರಸಭೆ, ಎಪಿಎಂಸಿ, ಟಿಎಪಿಸಿಎಂಎಸ್ ಸೇರಿದಂತೆ ಹಲವಾರು ಗ್ರಾಪಂಗಳಲ್ಲಿ ಸಾಲು ಸಾಲಾಗಿ ಅಧಿಕಾರದ ಗದ್ದುಗೆ ಹಿಡಿದಂತೆ ಆಗಿದೆ. ಇನ್ನೂ ರೈತಾಪಿ ವರ್ಗಕ್ಕೆ ಪ್ರಾರಂಭದಲ್ಲಿ ಮಳೆಯಿಂದ ಕಂಗಾಲಾದ ರೈತನಿಗೆ ಉದ್ದು, ಹೆಸರು ಸ್ವಲ್ಪ ನೋವು ತಂದಿದ್ದರು. ತೊಗರಿಯು ಉತ್ತಮವಾಗಿದೆ ಎನ್ನುವಾಗಲೇ ಮಂಜಿನಿಂದ ರೈತನ ಬೆಳೆಯು ಹಾಳಾಗಿ ಇಳುವರಿಯಲ್ಲಿ ಏರು ಪೇರಾಗಿದೆ. ರೈತನಿಗೆ ಖುಷಿಯಂತೂ ಆಗಲು ಸಾಧ್ಯವಿಲ್ಲ.
ಜ್ಞಾನಗಂಗೆ ಸುದ್ದಿ
ಅರ್ಥಶಾಸ್ತ್ರ ವಿಭಾಗದ ಪ್ರೊ. ದಶರಥ ನಾಯಕ ತಮ್ಮ ಸಂಶೋಧನಾ ವಿದ್ಯಾರ್ಥಿನಿಗೆ ಕಿರಕುಳ ನೀಡಿದ ಪ್ರಕರಣ ಜ್ಞಾನಗಂಗೆಗೆ ಕಪ್ಪುಚುಕ್ಕೆಯಾಯ್ತು. ದಶರಥ ನಾಯಕ ಬಂಧನದೊಂದಿಗೆ ಪ್ರಕರಣ ತಿರುವು ಪಡೆದದ್ದಲ್ಲದೆ ಅನೇಕ ಜಾತಿ ಸಂಘಟನೆಗಳು ಇದನ್ನು ಸದರಿ ಪ್ರಕರಣದ ಬಗ್ಗೆ ಹೋರಾಟಕ್ಕಿಳಿದು ಅದು ಸಾಗುವ ದಿಕ್ಕನ್ನೇ ಬದಲಿಸಿದ್ದು ದುರಂತ.
ಕಗ್ಗಂಟಾದ ಸಮಸ್ಯೆಗಳು
1. ನಗರದ ಕೊಳಚೆ ನೀರು, ಚರಂಡಿ ನೀರು ಎಲ್ಲವೂ ನಾಲಾದ ಮೂಲಕ ಭೀಮಾ ನದಿ ಸೇರುತ್ತಿರುವುದು.
2. ಕಡಗಂಚಿ ಬಳಿಯ ಕೇಂದ್ರೀಯ ವಿವಿ ಕ್ಯಾಂಪಸ್ಗೆ ನೀರಿನ ಭಯ ಕಾಡುವುದು ಪರಿಹಾರ ಕಂಡಿಲ್ಲ.
3. ನಗರ ಕಸ ವಿಲೇವಾರಿ, ಬಡಾವಣೆ ನೈರ್ಮಲ್ಯ ಹೇಗೆ ಕಾಪಾಡಬೇಕು ಎಂಬುದೇ ಪಾಲಿಕೆಗೆ ದೊಡ್ಡ ಸವಾಲು.
4. ಹೆದ್ದಾರಿ, ಜಿಲ್ಲಾ- ತಾಲೂಕು ಕೇಂದ್ರ ಹಾಗೂ ತಾಲೂಕುಗಳಿಂದ ಗ್ರಾಮ ರಸ್ತೆ ಸಂಪರ್ಕ ಅಧೋಗತಿಗೆ.
5. ನಗರೋತ್ಥಾನ ಯೋಜನೆಯಲ್ಲಿ ಆರಂಭವಾಗಿರುವ ರಸ್ತೆಗಳು ಕುಂಟುತ್ತ ಸಾಗಿದ್ದು ಮುಗಿಯೋದೆಂದು?
6. ನಗರದಲ್ಲಿನ ವಿದ್ಯುತ್ ಚಿತಾಗಾರ ಆರಂಭವಾಗೋದು ಯಾವಾಗ?
7. ಜಿಲ್ಲಾ ನೀರಾವರಿ ಯೋಜನೆಗಳಿಂದ ರೈತರ ಹೊಲಗಳಿಗೆ ನೀರು ಹರಿಯೋದು ಯಾವಾಗ?
ರಾಜಕೀಯ ಅದಲು- ಬದಲು
ಮೇ ತಿಂಗಳಲ್ಲಿ ನಡೆದ ಅಸೆಂಬ್ಲಿ ಚುನಾವಣೆ ಜಿಲ್ಲೆಯ ರಾಜಕೀಯವನ್ನೇ ಬದಲಿಸಿತು. ಬಿಜೆಪಿಯ ಬಹುತೇಕರು ಸೋಲುಂಡರೆ ಕಾಂಗ್ರೆಸ್ನ ಅನೇಕರು ಗೆಲವು ಸಾಧಿಸಿದರು. ಖರ್ಗೆ ಹಾಗೂ ಧರಂಸಿಂಗ್ ಪುತ್ರರಿಬ್ಬರ ಗೆಲವು, ಡಾ. ಶರಣಪ್ರಕಾಶ, ಖಮರುಲ್ ಇಸ್ಲಾಂರಿಗೆ ಸಚಿವ ಪಟ್ಟ ಗಿಟ್ಟಿದ್ದು ಗಮನಾರ್ಹ. ಜಿಪಂ.ನಲ್ಲಿ ರಾಜಕೀಯ ಅವಿಶ್ವಾಸ ಪರ್ವಗಳದ್ದೇ ಕಾಲ. ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಎಲ್ಲರೂ ಅವಿಶ್ವಾಸದಲ್ಲೇ ಪರಸ್ಪರ ಕಾಲೆಳೆಯುವ ಮೂಲಕ ಜಿಲ್ಲೆಯ ಪ್ರಗತಿಗೆ ವರವಾಗಬೇಕಿದ್ದ ಜಿಪಂ ಎರವಾಯ್ತು. ಇದೇ ಅವಿಶ್ವಾಸ ರಾಜಕೀಯ ತಾಪಂ, ಗ್ರಾಪಂಗಳಿಗೂ ಮಾದರಿಯಾದದ್ದು ವಿಪರ್ಯಾಸ.
ಮಕ್ಕಳು ಅಸ್ವಸ್ಥ- ಆತಂಕ
ಜೇವರ್ಗಿ ಸಮಾಜ ಕಲ್ಯಾಣ ಇಲಾಖೆಯ 40 ಮಕ್ಕಳು ಹಾಸ್ಟೆಲ್ ಅಡುಗೆ ತಿಂದು ಅಸ್ವಸ್ಥರಾದ ಘಟನೆ ಜಿಲ್ಲಾಡಳಿತವನ್ನು ಬೆಚ್ಚಿ ಬೀಳಿಸಿತ್ತು. ವಿಷಾಹಾರಕ್ಕೇನು ಕಾರಣ ಎಂಬುದು ನಿಗೂಢವಾದರೂ ಹಾಸ್ಟೆಲ್ಗಳ ಅವ್ಯವಸ್ಥೆಗೆ ಈ ಪ್ರಕರಣ ಕನ್ನಡಿ ಹಿಡಿದಿದ್ದಂತೂ ನಿಜ. ಇದಲ್ಲದೆ ಚಿಂಚೋಳಿ ತಾಲೂಕಿನ ಕೊಂಚಾವರಂ ಭಾಗದಲ್ಲಿ ಲಂಬಾಣಿ ಮಹಿಳೆಯರು ತಾವೇ ಹೆತ್ತ ಹೆಣ್ಣು ಹಸುಳೆಗಳನ್ನು ಸಾಕಲಾಗದು ಎಂದು ಸರ್ಕಾರಿ ಅನಾಥ ಮಕ್ಕಳ ಗೃಹಗಳಿಗೆ ನೀಡುವ ಧೋರಣೆ ಪ್ರದರ್ಶಿಸಿದ್ದು ಜಿಲ್ಲೆಯ ಇತಿಹಾಸದಲ್ಲಿ ಕರಾಳ ಘಟನೆಯಾಯ್ತು.
ಇಎಸ್ಐಸಿ- ಸಿಯುಕೆ
ಕಾರ್ಮಿಕ ಇಲಾಖೆಯಡಿ ಗುಲ್ಬರ್ಗಕ್ಕೆ 1,100 ಕೋಟಿ ಮೊತ್ತದ ಇಎಸ್ಐಸಿ ಆಸ್ಪತ್ರೆ, ವೈದ್ಯಕೀಯ ಕಾಲೇಜು ಪೈಕಿ ವೈದ್ಯಕೀಯ ಆಸ್ಪತ್ರೆ ಶುಭಾರಂಭ ಮಾಡಿವೆ. ಅಲ್ಲದೆ ಇಲ್ಲಿ 90 ಕನ್ನಡಿಗ ವಿದ್ಯಾರ್ಥಿಗಳಿಗೆ ಪ್ರವೇಶ ದೊರಕಿದ್ದು ವಿಶೇಷ. ಇನ್ನು 2009ರಲ್ಲೇ ಗುಲ್ಬರ್ಗದಲ್ಲಿ ಆರಂಭವಾಗಿದ್ದ ಕರ್ನಾಟಕ ಕೇಂದ್ರೀಯ ವಿವಿ(ಸಿಯುಕೆ) ತನ್ನ ನೂತನ ಕ್ಯಾಂಪಸ್ಗೆ ಸ್ಥಳಾಂತರಗೊಂಡಿದ್ದಲ್ಲದೆ ಹೊಸ ಕೋರ್ಸ್ಗಳ ಮೂಲಕ ಹೆಚ್ಚಿನ ವಿದ್ಯಾರ್ಥಿಗಳನ್ನು ಸೆಳೆಯುವ ಕಸರತ್ತು ಆರಂಭಿಸಿತು.
'ಅಡ್ಡ' ಪಲ್ಲಕ್ಕಿ!
ಜೇವರ್ಗಿಯಲ್ಲಿ ಅಕ್ಟೋಬರ್ನಲ್ಲಿ ನಡೆದ ರಂಭಾಪುರಿ ಗುರುಗಳ ಅಡ್ಡಪಲ್ಲಕ್ಕಿ ಉತ್ಸವ ಬಹು ಚರ್ಚೆಯಾದ ವಿಚಾರ. ಅಡ್ಡಪಲ್ಲಕ್ಕಿ ಬೇಕು- ಬೇಡ ಎಂದು ಎರಡು ಗುಂಪುಗಳಾಗಿ ನಡೆದ ಚರ್ಚೆ ತಿಂಗಳ ಪರ್ಯಂತ ಸಾಗಿತ್ತಲ್ಲದೆ ಇದು ಜಿಲ್ಲಾಡಳಿತಕ್ಕೂ ಪೇಚಿಗೆ ಸಿಲುಕಿಸಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗಮನ ಸೆಳೆದ ಈ ವಿವಾದ ಕೊನೆಗೆ ಹಲವು ತಿರುವು ಪಡೆದು ಯಥಾರೀತಿ ಅಡ್ಡಪಲ್ಲಕ್ಕಿಯೊಂದಿಗೆ ಮಂಗಳವಾಯಿತು.
ಮರಳು ದಂಧೆ
ವರ್ಷಪೂರ್ತಿ ಭೀಮಾ, ಕಾಗಿಣಾ, ಕಮಲಾವತಿ ದಡದಲ್ಲಿ ಅಕ್ರಮ ಮರಳು ದಂಧೆ ಸಾಗಿದ ವರ್ಷ. ಬೇಸಿಗೆಯಲ್ಲಂತೂ ಮರಳು ಲೂಟಿ ಎಗ್ಗಿಲ್ಲದೆ ಸಾಗಿ ನದಿಗಳ ಒಡಲು ಖಾಲಿ. ಜಿಲ್ಲಾಡಳಿತ, ಪೊಲೀಸ್ ಮೌನ. ಸ್ಥಳೀಯ ಪಂಚಾಯ್ತಿಗಳವರೂ ಕ್ಯಾರೆ ಎನ್ನದ್ದರಿಂದ ಮರಳು ಮಾಫಿಯಾಕ್ಕೆ ಮೂಗುದಾರ ಹಾಕುವುದು ಹೇಗೆಂಬ ಪ್ರಶ್ನೆ ಉದ್ಭವವಾದ ವರ್ಷ. ಆದಾಗ್ಯೂ ಪತ್ರಿಕೆಗಳ ವರದಿಗೆ ಸ್ಪಂದಿಸಿದ ಜಿಲ್ಲಾಡಳಿತ ಮರಳು ದಂಧೆಗೆ ಕಡಿವಾಣ ಹಾಕಲು ಯತ್ನಿಸಿದ್ದು ತುಸು ಸಮಾಧಾನ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

