ಆಯುಕ್ತ ಕುರ್ಚಿಗಾಗಿ ಮ್ಯೂಸಿಕಲ್ ಚೇರ್ ಆಟ
ಗುಲ್ಬರ್ಗ: ಗುಲ್ಬರ್ಗ ಮಹಾನಗರ ಪಾಲಿಕೆ ಆಯುಕ್ತರ ಹುದ್ದೆಗೆ ಈಗ ಇಬ್ಬರು ಹಿರಿಯ ಅಧಿಕಾರಿಗಳು ಮ್ಯೂಸಿಕಲ್ ಚೇರ್ ಆಟಕ್ಕೆ ಮುಂದಾಗಿದ್ದಾರೆ. ಈ ಆಟಕ್ಕೆ ಸರ್ಕಾರವೇ ಅಂಗಳ ಸಿದ್ಧಪಡಿಸಿದೆ. ಇದೀಗ ಇಲ್ಲಿ ರೆಫರಿಯಾಗಿ ಕರ್ನಾಟಕ ಆಡಳಿತ ನ್ಯಾಯ ಮಂಡಳಿ ಕಾಣಿಸಿಕೊಳ್ಳಲಿದೆ.
ಏಕೆಂದರೆ ಹಿರಿಯ ಶ್ರೇಣಿ ಕೆಎಎಸ್ ಅಧಿಕಾರಿ ಡಾ. ಸಿ. ನಾಗಯ್ಯ ಈ ಬೆಳವಣಿಗೆಯಲ್ಲಿ ತಮಗೆ ಅನ್ಯಾಯವಾಗಿದೆ ಎಂದು ಕರ್ನಾಟಕ ಆಡಳಿತಾತ್ಮಕ ನ್ಯಾಯ ಮಂಡಳಿ(ಕೆಎಟಿ) ಮೊರೆ ಹೋಗಿದ್ದಾರೆ.
ಕೆಎಟಿಗೆ ಮೊರೆಹೋದ ನಾಗಯ್ಯ: ತಾವು ಕಳೆದ 15 ತಿಂಗಳಿಂದ ಗುಲ್ಬರ್ಗ ಪಾಲಿಕೆಗೆ ಆಯುಕ್ತರಾಗಿ ಕೆಲಸದಲ್ಲಿದ್ದರೂ ಸರ್ಕಾರ ಅದ್ಹೇಗೆ ಈ ಹುದ್ದೆ 2012ರ ಸೆಪ್ಟೆಂಬರ್ ತಿಂಗಳಿಂದ ಖಾಲಿ ಇದೆ ಎಂದು ಹೇಳಿತ್ತು. ಖಾಲಿ ಹುದ್ದೆಯಲ್ಲಿ ರಾಯ್ಕರ್ ಎಂಬುವವರನ್ನು ವರ್ಗಾವಣೆ ಮಾಡಲಾಗಿದೆ ಎಂದು ವರ್ಗಾವಣೆಯಾಗಿರುವ ಕೆಎಎಂಸಿ ಅಧಿಕಾರಿ ರಾಯ್ಕರ್ ಹೊಂದಿರುವ ಆದೇಶ ಸರಿಯಲ್ಲ. ಇದನ್ನು ತಡೆ ಹಿಡಿಯಿರಿ ಎಂದು ಕೆಎಟಿಗೆ ನಾಗಯ್ಯ ಮನವಿ ಮಾಡಿದ್ದಾರೆ.
ಮೂಲಗಳ ಪ್ರಕಾರ, ಈ ಅರ್ಜಿಯ ವಿಚಾರಣೆ ಫೆ.4ರ ಸೋಮವಾರ ನಡೆಯುವ ಸಂಭವಗಳಿವೆ. ಒಂದು ವೇಳೆ ಕೆಎಟಿ ರಾಯ್ಕರ್ ಹೊಂದಿರುವ ವರ್ಗಾವಣೆ ಆದೇಶಕ್ಕೆ ತಡೆ ನೀಡಿದರೆ ಮಾತ್ರ ಡಾ. ನಾಗಯ್ಯ ಇಲ್ಲಿ ಆಯುಕ್ತರಾಗಿ ಮುಂದುವರಿಯಲು ಅವಕಾಶಗಳಿವೆ. ಇಲ್ಲದೆ ಹೋದಲ್ಲಿ ರಾಯ್ಕರ್ ಅವರೇ ನಾಗಯ್ಯ ಉತ್ತರಾಧಿಕಾರಿಯಾಗಿ ಮುಂದುವರಿಯಲಿದ್ದಾರೆ.
ಇತ್ತ ವರ್ಗಾವಣೆ ಆದೇಶದೊಂದಿಗೆ ಆಗಮಿಸಿರುವ ಕೆಎಎಂಸಿ ಹಿರಿಯ ಅಧಿಕಾರಿ ಎ.ಎಸ್. ರಾಯ್ಕರ್ ಶುಕ್ರವಾರ ಬಲವಂತವಾಗಿ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಆದರೆ ಅವರು ಆ ಹುದ್ದೆಗೆ ಪ್ರದತ್ತವಾಗಿರುವಂತಹ ಅಧಿಕಾರ ಚಲಾಯಿಸದಂತಾಗಿದೆ.
ಹಸ್ತಾಂತರ ಪ್ರಮೇಯವೇ ಇಲ್ಲ: ಏಕೆಂದರೆ ಸರ್ಕಾರಿ ವಾಹನ, ಕಚೇರಿಯ ಮಹತ್ವದ ಕಡತಗಳಿರುವ ಅಲ್ಮೇರಾ ಬೀಗದ ಕೈ, ಚೆಕ್ ಬುಕ್ ಹೀಗೆ ಹಲವು ದಾಖಲೆಗಳೆಲ್ಲವೂ ಡಾ. ನಾಗಯ್ಯ ಬಳಿಯೇ ಇವೆ. ಡಾ. ನಾಗಯ್ಯ ತಾವೇ ಕಮಿಷನರ್ ಎಂದು 15 ತಿಂಗಳಿಂದ ಇರುವಾಗ ಹುದ್ದೆ ಖಾಲಿ ಎಂಬ ಪ್ರಮೇಯವೇ ಬಾರದು. ಹೀಗಿರುವಾಗ ತಾವು ವರ್ಗಾವಣೆಯಾಗಿದ್ದೇನೆ ಎಂದು ಬಂದಿರುವ ರಾಯ್ಕರ್ ಅವರಿಗೆ ಅಧಿಕೃತ ಅಧಿಕಾರ ಹಸ್ತಾಂತರ ಮಾಡುವ ಪ್ರಶ್ನೆಯೇ ಬಾರದು ಎಂದು ಹೇಳುವ ಮೂಲಕ ಬೆಂಗಳೂರು ಸೇರಿದ್ದಾರೆ.
ಇತ್ತ ರಾಯ್ಕರ್ ಕಮಿಷನರ್ ಚೇಂಬರ್ ಪ್ರವೇಶ ಮಾತ್ರ ಪಡೆದಿದ್ದಾರೆ. ಆದರೆ ಅಲ್ಲಿ ಮಾಡಬೇಕಾದಂತಹ ಕೆಲಸಗಳನ್ನು ನಿರ್ವಹಿಸಲು ಅವರಿಗೆ ಕಳೆದ 2 ದಿನಗಳಿಂದಲೂ ಸಾಧ್ಯವಾಗಿಲ್ಲ. ಸರ್ಕಾರಿ ವಾಹನವೂ ರಾಯ್ಕರ್ ಅವರ ಬಳಕೆಗೆ ದೊರಕಿಲ್ಲ ಎಂದ ಮೇಲೆ ಪಾಲಿಕೆಯಲ್ಲಿನ ಈಗಿನ ಗೊಂದಲಮಯ ಸನ್ನಿವೇಶಗಳನ್ನು ಯಾರಾದರೂ ಊಹಿಸಿಕೊಳ್ಳಬಹುದಾಗಿದೆ.
2012ರ ಆದೇಶವೂ ಕೈಸೇರಿಲ್ಲ: 2012ರ ಸೆಪ್ಟೆಂಬರ್ 14ರಂದು ತಮ್ಮನ್ನು ಬಿಬಿಎಂಪಿಗೆ ವರ್ಗಾವಣೆ ಮಾಡಿದ್ದಾಗಿ ಸರ್ಕಾರ ಹೇಳಿತ್ತಾದರೂ ಆ ಆದೇಶವೂ ತಮ್ಮ ಕೈ ಸೇರಿಲ್ಲ ಎಂದು ಡಾ. ನಾಗಯ್ಯ ಹೇಳಿದ್ದಾರೆ. ಇದಾದ ನಂತರ ಮುಂಬೈನ ಸಮಾವೇಶಕ್ಕೆ ಹೋಗಿ ಬನ್ನಿ ಎಂದು ಸರ್ಕಾರವೇ ಆದೇಶ ನೀಡಿತ್ತು. ಪಾಲಿಕೆಯ ಆಯುಕ್ತರ ಅಧಿಕಾರದಲ್ಲಿಯೇ ತಾವು ಮುಂಬೈಗೆ ಹೋಗಿ ಬಂದಿದ್ದಾಗಿಯೂ ಹೇಳುವ ನಾಗಯ್ಯ, ತಾವು ಆಯುಕ್ತರಾಗಿ 15 ತಿಂಗಳಿಂದ ಗುಲ್ಬರ್ಗದ ಪಾಲಿಕೆಯಲ್ಲಿದ್ದರೂ ಯಾಕೆ ಹೀಗೆ ವರ್ಗಾವಣೆ ಆದೇಶ ಹೊರಬಿತ್ತೋ ಎಂದು ಅಚ್ಚರಿಗೊಂಡಿದ್ದಾರೆ.
ಪಾಲಿಕೆಯಲ್ಲಿನ ಈ ಬೆಳವಣಿಗೆಯನ್ನು ಕರ-ಹಣಕಾಸು ಸ್ಥಾಯಿ ಸಮಿತಿ ಅಧ್ಯಕ್ಷ ಭೀಮರೆಡ್ಡಿ ಪಾಟೀಲ್ ಕುರಕುಂದಾ ಖಂಡಿಸುತ್ತಾರೆ. 2012ರ ಸೆಪ್ಟೆಂಬರ್ ವರ್ಗಾವಣೆ ಆದೇಶವೂ ಕಮಿಷನರ್ ಡಾ. ನಾಗಯ್ಯ ಕೈ ಸೇರಿಲ್ಲ. ಕೊನೆಪಕ್ಷ ಪಾಲಿಕೆಗಾದರೂ ಅದು ಬರಬೇಕಿತ್ತು. ಇಲ್ಲಿಗೂ ಬಂದಿಲ್ಲ. ಸರ್ಕಾರದ ಸಂಪರ್ಕವೆಲ್ಲವೂ ಡಾ. ನಾಗಯ್ಯ ಅವರನ್ನು ಆಯುಕ್ತರು ಎಂದೇ ಇರುತ್ತದೆ. ಹೀಗಿದ್ದರೂ ಈ ಹುದ್ದೆ ಖಾಲಿ ಇದೆ ಎಂದು ಹೇಳುತ್ತ ಸರ್ಕಾರ ರಾಯ್ಕರ್ ಎಂಬುವರಿಗೆ ಇಲ್ಲಿ ವರ್ಗಾಯಿಸಿದ್ದು ಯಾಕೆ? ಈ ಬೆಳವಣಿಗೆಯ ಹಿಂದೆ ಕಾಣದ ಕೈಗಳೇ ಇವೆ, ಈ ಆದೇಶ ಸರಿಯಾದಂತಹ ಕ್ರಮದಲ್ಲಿಲ್ಲ ಎಂದು ಭೀಮರೆಡ್ಡಿ ಹೇಳಿದ್ದಾರೆ.
ಸರ್ಕಾರಕ್ಕೆ ಮೇಯರ್ ಖಾರ ಪತ್ರ: ಇವೆಲ್ಲ ಗೊಂದಲಗಳ ಮಧ್ಯೆ ಮೇಯರ್ ಸೋಮಶೇಖರ್ ಮೇಲಿನಮನಿ ಸರ್ಕಾರಕ್ಕೆ ಪತ್ರ ಬರೆದು, ತಮ್ಮ ಪಾಲಿಕೆಯಲ್ಲಿ ಆಯುಕ್ತರಾಗಿ ಡಾ. ನಾಗಯ್ಯ ಇದ್ದಾರೆ. ಈ ಹುದ್ದೆ ಖಾಲಿ ಇಲ್ಲ, ಬೇರೊಬ್ಬರ ನೇಮಕಕ್ಕೆ ಅವಕಾಶವೇ ಇಲ್ಲಿಲ್ಲ. ಯಾಕೆ ಖಾಲಿ ಹುದ್ದೆ ಎಂದು ವರ್ಗಾವರ್ಗಿ ಮಾಡುತ್ತ ಪಾಲಿಕೆಯಲ್ಲಿ ಗೊಂದಲ ಸೃಷ್ಟಿಸಿದ್ದೀರಿ ಎಂಬ ಪ್ರಶ್ನೆ ಕೇಳಿದ ಸಾರಾಂಶದ ಪತ್ರವನ್ನು ನಗರಾಭಿವೃದ್ಧಿ ಇಲಾಖೆಗೆ ರವಾನಿಸಿದ್ದಾರೆ.
ಸರ್ಕಾರದ ನೀತಿ ಸರಿಯಿಲ್ಲ: ಕಮಿಷನರ್ ಆಗಿ ಬಂದವರು ಕನಿಷ್ಠ 2 ವರ್ಷಕ್ಕಾದರೂ ತಮಗೆ ನಿಯೋಜಿಸಿದ ಸ್ಥಳದಲ್ಲಿ ಕೆಲಸದಲ್ಲಿರಬೇಕು ಎಂಬುದು ಕಾಯ್ದೆ ಹೇಳುತ್ತದೆ. ಆದರೆ ಡಾ. ನಾಗಯ್ಯ ಬಂದು 15 ತಿಂಗಳಾಗಿಲ್ಲ, ಈಗಲೇ ವರ್ಗಾವಣೆ ಮಾಡಿರುವ ಸರ್ಕಾರದ ನೀತಿ-ರೀತಿ ಸರಿಯಲ್ಲ ಎಂಬ ಮಾತುಗಳು ಪಾಲಿಕೆಯಂಗಳದಲ್ಲಿ ಕೇಳಿ ಬರುತ್ತಿವೆ.
ಇಡೀ ಪ್ರಕರಣದಲ್ಲಿ ಗಮನಾರ್ಹ ಸಂಗತಿ ಎಂದರೆ ಕೆಎಎಸ್ ಅಧಿಕಾರಿ ಡಾ. ನಾಗಯ್ಯ ನಿವೃತ್ತಿಗೆ ಇನ್ನೂ 1 ವರ್ಷ ಉಳಿದರೆ, ಪೌರಾಡಳಿತ ವೃಂದದ ಅಧಿಕಾರಿ ಎ.ಎಸ್. ರಾಯ್ಕರ್ ಮೂರೇ ತಿಂಗಳಲ್ಲಿ ಸೇವಾ ನಿವೃತ್ತಿ ಹೊಂದಲಿದ್ದಾರೆ. ಈ ಹಂತದಲ್ಲಿ ಈ ಇಬ್ಬರೂ ಅಧಿಕಾರಿಗಳು ಕಮಿಷನರ್ ಹುದ್ದೆ ಮ್ಯೂಸಿಕಲ್ ಚೇರ್ ಆಟದಲ್ಲಿ ಮುಖಾಮುಖಿಯಾಗಿದ್ದು ಪರಿಸ್ಥಿತಿಯ ವ್ಯಂಗ್ಯ ಎಂದು ಪಾಲಿಕೆ ವ್ಯವಹಾರಗಳನ್ನು ಬಲ್ಲವರು ಹೇಳುತ್ತಿದ್ದಾರೆ.
-ಶೇಷಮೂರ್ತಿ ಅವಧಾನಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

