ಆನೆಕಾಲು ನಿರ್ಮೂಲನೆಗೆ ಎಲ್ಲರ ಸಹಕಾರ ಅಗತ್ಯ: ಜಡಿಮರಳ್
ಸುರಪುರ: ಆನೆಕಾಲು ರೋಗ ನಿರ್ಮೂಲನೆಗೆ ಸಾರ್ವಜನಿಕರ ಸಹಕಾರ ಅಗತ್ಯ. ಎಲ್ಲರೂ ಕಡ್ಡಾಯವಾಗಿ ಡಿಇಸಿ ಮಾತ್ರೆಗಳನ್ನು ತೆಗೆದುಕೊಳ್ಳಬೇಕು ಎಂದು ಪುರಸಭೆ ಅಧ್ಯಕ್ಷ ಚಂದ್ರಶೇಖರ ಜಡಿಮರಳ್ ಕರೆ ನೀಡಿದರು.
ಸಮೀಪದ ಹಸನಾಪುರದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಅನೇಕಾಲು ರೋಗ ತಡೆಯುವ ಔಷಧ ನುಂಗಿಸುವ ಕುರಿತು ಹಮ್ಮಿಕೊಂಡಿದ್ದ ತರಬೇತಿ ಶಿಬಿರದಲ್ಲಿ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಆನೆಕಾಲು ರೋಗ ನಿರ್ಮೂಲನೆಗೆ ಅನೇಕ ವರ್ಷಗಳಿಂದ ಪ್ರಯತ್ನಿಸುತ್ತಿವೆ. ಈ ರೋಗದಿಂದ ಮುಕ್ತಿ ಹೊಂದಲು ಸಾರ್ವಜನಿಕರು ಡಿಇಸಿ ಮಾತ್ರೆಗಳನ್ನು ಸೇವಿಸುವಲ್ಲಿ ಆಸಕ್ತಿ ತೋರಿಸಬೇಕೆಂದು ನುಡಿದರು.
11,10,724 ಜನರಿಗೆ ಮಾತ್ರೆ ವಿತರಿಸುವ ಗುರಿ: ಮಲೇರಿಯಾ ನಿಯಂತ್ರಣಾಧಿಕಾರಿ ಸೂರ್ಯಪ್ರಕಾಶ ಕಂದಕೂರು ಮಾತನಾಡಿ, ಜಿಲ್ಲೆಯ 12,08,030 ಜನರ ಪೈಕಿ 11,10,724 ಜನರಿಗೆ ಮಾತ್ರೆ ವಿತರಿಸುವ ಗುರಿ ಹೊಂದಲಾಗಿದೆ. ಇದಕ್ಕಾಗಿ ಔಷಧಿ ನೀಡಲು 4,400 ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ತಿಳಿಸಿದರು.
ಎರಡು ವರ್ಷದ ಮಗುವಿಗೆ, ಗರ್ಭಿಣಿಯರಿಗೆ, 60 ವರ್ಷ ವಯಸ್ಸಿನ, ದೀರ್ಘ ರೋಗಸ್ಥರಿಗೆ ಯಾವುದೇ ಕಾರಣಕ್ಕೂ ಮಾತ್ರೆ ನೀಡಬಾರದು. 8 ವರ್ಷಗಳಿಂದ ಮಾತ್ರೆಗಳು ನೀಡಲಾಗುತ್ತಿತ್ತು. ಆದರೆ ಈ ಬಾರಿ ಮನೆ ಮನೆಗೆ ತೆರಳಿ ಮಾತ್ರೆ ನುಂಗಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಫೆ.12ರಿಂದ ಇದು ಆರಂಭವಾಗಲಿದೆ ಎಂದು ಹೇಳಿದರು.
ಅಡ್ಡಪರಿಣಾಮವಿಲ್ಲ: ಡಿಇಸಿ ಮಾತ್ರೆಗಳಿಂದ ಯಾವುದೇ ಅಡ್‌ಡ ಪರಿಣಾಮವಿಲ್ಲ. ಸಾರ್ವಜನಿಕರು ಭಯಪಡಬಾರದು. ಊಟದ ನಂತರವಷ್ಟೇ ಮಾತ್ರೆಗಳನ್ನು ಸೇವಿಸಬೇಕು ಎಂದು ತಿಳಿಸಿದರು. ತಾಲೂಕು ಆರೋಗ್ಯಾಧಿಕಾರಿ ಡಾ.ಆರ್.ವಿ.ನಾಯಕ, ಡಾ.ಶಫೀ ಉಜ್ಜಮಾ, ಕಾಲೇಜಿನ ಉಪ ಪ್ರಾಚಾರ್ಯ ಮಲ್ಲಪ್ಪ ಬಿಲ್ಲವ್, ಪುರಸಭೆ ಸದಸ್ಯ ಅಬ್ದುಲ್ ಅಲಿಂ ಗೋಗಿ ಮಾತನಾಡಿದರು. ಜಿಪಂ ಸದಸ್ಯೆ ಶಾಮಲಾ ಕಮತಗಿ, ಮುಖಂಡರಾದ ಶಿವಶರಣಪ್ಪ ಹೆಡಗಿನಾಳ, ನಾಗಪ್ಪ ಕಟ್ಟಿಮನಿ ವೇದಿಕೆಯಲ್ಲಿದ್ದರು.
ಆರೋಗ್ಯ ಇಲಾಖೆಯ ಸಿಬ್ಬಂದಿ ನಾಗವೇಣಿ, ವಸುಮತಿ, ಹುಲಗಮ್ಮ, ವಾಣಿಶ್ರೀ, ಬಸೀರಾ ಬೇಗಂ, ರಫೀಕ್, ಮಾನಯ್ಯ, ರಶೀದ, ಶರಮ್ಮ ತಾಳ, ಪ್ರಾಣೇಶ ಜೋಷಿ, ಸೂಗಪ್ಪ ಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

