ಗುಡಾ ವಸತಿ ಯೋಜನೆ: ಟೆಂಡರ್ ಕಾಯ್ದೆ ಉಲ್ಲಂಘನೆ
ಗುಲ್ಬರ್ಗ: ಗುಲ್ಬರ್ಗ ನಗರಾಭಿವೃದ್ಧಿ ಪ್ರಾಧಿಕಾರ (ಎ್ಖಉಆ-ಗುಡಾ)ದ ಮಹತ್ವಾಕಾಂಕ್ಷಿ ವಾಜಪೇಯಿ ವಸತಿ ಯೋಜನೆಯ ನಿವೇಶನ ರಚನೆ, ನೆಲ ಸಮತಟ್ಟು ಮಾಡುವ ಕಾಮಗಾರಿಯಲ್ಲಿ ಕರ್ನಾಟಕ ಸಾರ್ವಜನಿಕ ಸಂಗ್ರಹಣಿಗಳಲ್ಲಿ ಪಾರದರ್ಶಕತೆ ಕಾಯ್ದೆ ಮತ್ತು ನಿಯಮಗಳ ಉಲ್ಲಂಘನೆಯಾಗಿರುವ ಸಂಗತಿ ಬೆಳಕಿಗೆ ಬಂದಿದೆ.
ಅಷ್ಟೇ ಅಲ್ಲ, ಕಾಮಗಾರಿಗಳ ಟೆಂಡರ್ಗಳನ್ನು ರಾಜ್ಯ ಟೆಂಡರ್ ಬುಲೇಟಿನ್ನಲ್ಲಿ ಪ್ರಕಟಿಸುವ ಕಾಯ್ದೆಗೂ ಇಲ್ಲಿ ಎಳ್ಳುನೀರು ಬಿಡಲಾಗಿದೆ. ಯೋಜನೆಯ ಭೂಮಿ ಸುಧಾರಣೆ, ನಿವೇಶನ ಕಾಮಗಾರಿಗಳನ್ನು ನೇರವಾಗಿಯೇ ನಿರ್ಮಿತಿ ಕೇಂದ್ರಕ್ಕೆ ವಹಿಸಿಕೊಡಲಾಗಿದೆ. ಈ ಬೆಳವಣಿಗೆಗಳಿಂದ ಇಡೀ ಯೋಜನೆ ಸುತ್ತ ಹಗರಣದ ಹುತ್ತವೇ ಇದೆಯೋ ಎಂಬ ಶಂಕೆ ಮೂಡುವಂತೆ ಮಾಡಿದೆ.
ಈ ಹಿನ್ನೆಲೆಯಲ್ಲಿ ಅಟಲ್ ಬಿಹಾರಿ ವಾಜಪೇಯಿ ವಸತಿ ಯೋಜನೆಯಿಂದ ಹಗರಣದ ವಾಸನೆ ಎದ್ದಿದೆ. ಟೆಂಡರ್ ಪಾರದರ್ಶಕತೆ ನಿಯಮಗಳನ್ನು ಇಲ್ಲಿ ಉಲ್ಲಂಘಿಸಿರುವ ಸದರಿ ಯೋಜನೆಯ ಸುತ್ತಲಿನ ಹಲವು ಮಹತ್ವದ ಸಂಗತಿಗಳನ್ನು ದಾಖಲೆ ಸಮೇತ ಲೋಕಾಯುಕ್ತಕ್ಕೆ ಸಲ್ಲಿಸಿ ವಿಚಾರಣೆ ನಡೆಸಬೇಕೆಂದು ಪ್ರಾರ್ಥಿಸಲು ಸ್ಥಳೀಯ ಹೈ- ಕ ಯುವ ಹೋರಾಟ ಸಮೀತಿ ಮುಖಂಡ ಡಾ. ರಾಜು ಕುಳಗೇರಿ ನಿರ್ಧರಿಸಿದ್ದಾರೆ.
ನಿರ್ಮಿತಿ ಕೇಂದ್ರವೇ ಬೇಕಿತ್ತೆ?: ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ವಸತಿ ಯೋಜನೆ ಕುರಿತಾದ ಹಲವು ದಾಖಲೆಗಳನ್ನು ಬಿಡುಗಡೆ ಮಾಡಿದರು. ರು. 5 ಲಕ್ಷದಷ್ಟು ಕಾಮಗಾರಿ ಮಾಡುವ ಸಾಮರ್ಥ್ಯ, ಸಿಬ್ಬಂದಿ ಇಲ್ಲದ ನಿರ್ಮಿತಿ ಕೇಂದ್ರಕ್ಕೆ ಯಾಕೆ ವಸತಿ ಯೋಜನೆಯ ನೆಲ ಸಮತಟ್ಟು ಮಾಡುವ, ನಿವೇಶನ ರಚನೆಯಂತಹ 1. 35 ಕೋಟಿ ರುಪಾಯಿ ಮೊತ್ತದ ಮಹತ್ವದ ಕಾಮಗಾರಿ ವಹಿಸಿಕೊಡಲಾಯ್ತು? ಈ ಕಾಮಗಾರಿ ಟೆಂಡರ್ ಕರೆದು ಗುಣಮಟ್ಟದ ಕೆಲಸ ಮಾಡಿಸುವ ಅವಕಾಶಗಳಿದ್ದರೂ ಪ್ರಾಧಿಕಾರ ಅದ್ಯಾಕೆ ಈ ಕೆಲಸಕ್ಕೆ ಮುಂದಾಯ್ತು? ಎಂದು ಪ್ರಶ್ನಿಸಿದ್ದಾರೆ.
ಔಚಿತ್ಯವೇನು?: ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿನ ನಿರ್ಮಿತಿ ಕೇಂದ್ರದಲ್ಲಿ ಅರ್ಹ ಸಿಬ್ಬಂದಿಗಳೇ ಇಲ್ಲ. ಅದಾಗಲೇ ಪಾಲಿಕೆ ಕಾಮಗಾರಿಗಳಿಗೆ ಸಂಬಂಧಪಟ್ಟಂತೆ ಈ ಕೇಂದ್ರದ ಮೇಲೆ ಆರೋಪಗಳು ಇದ್ದು ಲೋಕಾಯುಕ್ತ ವಿಚಾರಣೆ ಸಹ ಪೂರ್ಣಗೊಂಡಿದೆ. ಇಂತಹ ಸಂದರ್ಭದಲ್ಲಿ ಮತ್ತೆ ಇದೇ ಕೇಂದ್ರಕ್ಕೆ ಕೋಟಿಗಟ್ಟಲೇ ಮೊತ್ತದ ಕಾಮಗಾರಿ ನೀಡುವುದರ ಹಿಂದಿನ ಔಚಿತ್ಯವೇನು? ಎಂದು ಡಾ. ಕುಳಗೇರಿ ಪ್ರಶ್ನಿಸಿದರು.
ಜಿಲ್ಲಾಧಿಕಾರಿಗಳೇ ಅಧ್ಯಕ್ಷರಾಗಿರುವ ಈ ಕೇಂದ್ರ ನಿರ್ವಹಿಸುವ ಕಾಮಗಾರಿ ರು. 5 ಲಕ್ಷ ಮೀರಿರಬಾರದು. ಪ್ರಯೋಗಾಲಯದಿಂದ ನೇರವಾಗಿ ಕಾಮಗಾರಿ ಸ್ಥಳಕ್ಕೆ ತನ್ನ ವ್ಯಾಪ್ತಿ ಹೊಂದಿರತಕ್ಕದ್ದು. ಆದರಿಲ್ಲಿ ಪರಿಣಿತರೇ ಇಲ್ಲದ ನಿರ್ಮಿತಿ ಕೇಂದ್ರದಿಂದ ಕೋಟಿಗಟ್ಟಲೆ ಹಣದ ಯೋಜನೆ ಮಾಡಿಸುತ್ತಿರುವ ಪ್ರಾಧಿಕಾರದ ಅಧ್ಯಕ್ಷರು, ಆಯುಕ್ತರು, ಜಿಲ್ಲಾಧಿಕಾರಿಗಳೇ ಈ ಪ್ರಶ್ನೆಗೆ ಉತ್ತರಿಸಬೇಕು. ನಿಯಮಗಳನ್ನೆಲ್ಲ ಗಾಳಿಗೆ ತೂರಿ ನಿರ್ಮಿತಿ ಕೇಂದ್ರಕ್ಕೆ ಬೆಂಬಲಿಸುತ್ತಿರುವುದು ಅನೇಕ ಶಂಕೆಗಳಿಗೆ ಎಡೆ ಮಾಡಿಕೊಟ್ಟಿದೆ ಎಂದು ಡಾ. ಕುಳಗೇರಿ ದೂರಿದರು.
ಗಪ್ಚುಪ್ ಕೆಲಸ: ನಿರ್ಮಿತಿ ಕೇಂದ್ರಕ್ಕೆ ಕಾಮಗಾರಿ ವಹಿಸಿಕೊಡುವ ನಿರ್ಣಯ ಜಿಡಿಎ ಸಭೆಯಲ್ಲಿ ಕೈಗೊಳ್ಳಲಾಗಿದೆ ಎಂಬ ಪ್ರಾಧಿಕಾರದ ನಿಲುವಿಗೆ ಸದಸ್ಯರೊಬ್ಬರೂ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಅವರೇ ಖುದ್ದು ಪತ್ರ ಬರೆದು ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ಇಡೀ ಬೆಳವಣಿಗೆಯ ವಿಚಾರಣೆಗೂ ಆಗ್ರಹಿಸಿದ್ದಾರೆ. ನಿರ್ಮಿತಿ ಕೇಂದ್ರಕ್ಕೆ ಕಾಮಗಾರಿ ವಹಿಸಿಕೊಡುವ ವಿಚಾರ ಸದಸ್ಯರಿಗೂ ಗೊತ್ತಿಲ್ಲ. ಯಾಕೆ ಇಂತಹ ಪ್ರಮುಖ ಬೆಳವಣಿಗೆಗಳಲ್ಲೂ ರಹಸ್ಯ ಕಾಪಾಡಲಾಯ್ತು? ಇದು ಹಣದ ದುರುಪಯೋಗದ ಹುನ್ನಾರದಿಂದ ಮಾಡಿದ ಕೆಲಸ ಎಂದು ಡಾ. ಕುಳಗೇರಿ ದೂರಿದರು.
ಜಿಡಿಎ ನಡಾವಳಿಗಳಲ್ಲಿ ಇಲ್ಲದ ಸಂಗತಿ ನಂತರ ಕೈಯಿಂದ ಬರೆದು ಸೇರ್ಪಡೆ ಮಾಡಲಾಗುತ್ತದೆ ಎಂದು ಸಭೆ ನಡಾವಳಿಗಳ ಪ್ರತಿಗಳನ್ನು ಒದಗಿಸಿದರು. ಸದಸ್ಯರ ಹೆಸರು ಪ್ರಸ್ತಾಪಿಸದೆ ಸದರಿ ಹಗರಣದ ವಿಚಾರಣೆಯಾಗಲಿ ಎಂದು ಆಗ್ರಹಿಸಿದ ಪತ್ರವನ್ನೂ ಮಾಧ್ಯಮಗಳಿಗೆ ನೀಡಿದ ಡಾ. ಕುಳಗೇರಿ ಜಿಡಿಎ ಸರ್ಕಾರದ ಸೂಚನೆಗಳನ್ನೆಲ್ಲ ಈ ವಸತಿ ಯೋಜನೆ ಅಭಿವೃದ್ಧಿಯಲ್ಲಿ ಗಾಳಿಗೆ ತೂರಿದೆ ಎಂದರು.
ವಿವೇಕ ಪುತ್ಥಳಿ ಕಾಮಾಗರಿಯಲ್ಲೂ ನಿಯಮ ಉಲ್ಲಂಘನೆ: ಜಿಡಿಎ ನಿಯಮಗಳಂತೆಯೇ ರು. 5 ಲಕ್ಷದಿಂದ 25 ಲಕ್ಷ ಒಳಗಿನ ಮೊತ್ತದ ಕಾಮಗಾರಿಗಳನ್ನು ಮಾತ್ರ, ಅದು ಸಭೆಯ ಅನುಮೋದನೆಯೊಂದಿಗೆ ನೇರ ಗುತ್ತಿಗೆ ನೀಡಲು ಅವಕಾಶವಿದೆ. ಆದರಿಲ್ಲಿ ರು. 1.35 ಕೋಟಿ, ರು. 10 ರಿಂದ 15 ಲಕ್ಷ ನಂತರ ಕಾಮಗಾರಿಗಳನ್ನು ನೇರವಾಗಿ ವಹಿಸಿಕೊಡಲಾಗಿದೆ. ಇದೆಲ್ಲವೂ ಹಣಕಾಸಿನ ದುರುಪಯೋಗ, ಅಧಿಕಾರ ದುರುಪಯೋಗ, ಸ್ವಾರ್ಥ ಸಾಧನೆ ಉದ್ದೇಶದಿಂದ ನಡೆದ ಗಪಚುಪ್ ಕೆಲಸಗಳು ಎಂದು ಬಣ್ಣಿಸಿದರು.
ವಿವೇಕಾನಂದ ಮೂರ್ತಿ ಸಿದ್ಧಪಡಿಸಲು ಜಿಡಿಎ ಸ್ಥಳೀಯ ಕಲಾವಿದರಿಗೆ ರು. 13 ಲಕ್ಷ ಕಾಮಗಾರಿ ನೇರವಾಗಿಯೇ ವಹಿಸಿಕೊಟ್ಟಿದೆ. ಇದಕ್ಕೂ ಟೆಂಡರ್ ಕರೆಯದೆ ನಿಯಮ ಉಲ್ಲಂಘಿಸಲಾಗಿದೆ. ಯಾಕೆ ಪ್ರಾಧಿಕಾರದಲ್ಲಿ ಇಂತಹ ಕೆಟ್ಟ ಚಾಳಿ ಕಂಡಿದೆಯೋ ಇವೆಲ್ಲ ಸಂಗತಿಗಳ ವಿಚಾರಣೆಯಾಗಬೇಕು.
ಸ್ಥಳೀಯವಾಗಿ ಕೋರ್ಟ್ಗೆ ಮೊರೆ ಹೋಗುವೆ, ದಾಖಲೆ ಸಮೇತ ಲೋಕಾಯುಕ್ತ ಕೋರ್ಟ್ನಲ್ಲಿಯೂ ಖಾಸಗಿ ಮೊಕದ್ದಮೆ ಹೂಡುವೆ ಎಂದಿರುವ ಡಾ. ಕುಳಗೇರಿ ವಸತಿ ಯೋಜನೆಯಲ್ಲಿನ ನಿವೇಶನ ಹಂಚಿಕೆ ವಿಚಾರದಲ್ಲೂ ಆಡಳಿತ ಮಂಡಳಿ ಅನೇಕ ಲೋಪಗಳನ್ನು ಮಾಡುವ ಸಾಧ್ಯತೆಗಳಿವೆ. ನಿವೇಶನ ಬಯಸಿ ಅರ್ಜಿ ಹಾಕಿದವರು ಎಚ್ಚರವಾಗಿರಬೇಕು ಎಂದು ಮನವಿ ಮಾಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

