ಗುಲ್ಬರ್ಗಾ

ಶೆಟ್ಟರ್ ಬಜೆಟ್‌ಗೆ ಮಿಶ್ರ ಪ್ರತಿಕ್ರಿಯೆ

Published On :

ಗುಲ್ಬರ್ಗ: ಮುಖ್ಯಮಂತ್ರಿ ಶೆಟ್ಟರ್ ತಮ್ಮ ಚೊಚ್ಚಲ ಬಜೆಟ್‌ನಲ್ಲಿ ಹೈ-ಕ ಭಾಗಕ್ಕೆ ಹೆಚ್ಚಿನ ಆದ್ಯತೆ ನೀಡಿರುವುದನ್ನು ಹೈದ್ರಾಬಾದ್ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಅಧ್ಯಕ್ಷ ಉಮಾಕಾಂತ ನಿಗ್ಗುಡಗಿ, ಗೌರವ ಕಾರ್ಯದರ್ಶಿ ಬಸವರಾಜ ಹಡಗಲಿ, ಗುರುದೇಸಾಯಿ ಮತ್ತು ಆಡಳಿತ ಮಂಡಳಿಯ ಸದಸ್ಯರು ಮುಖ್ಯಮಂತ್ರಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಪ್ರಮುಖವಾಗಿ ಹೈ.ಕ ಅಭಿವೃದ್ಧಿಗೆ 3114 ಕೋಟಿ ಹಣ ಒದಗಿಸಿದ್ದಾರೆ. ಪ್ರಾದೇಶಿಕ ಅಸಮಾನತೆಯ ಹೋಗಲಾಡಿಸಲು ಡಾ. ನಂಜುಂಡಪ್ಪ ಸಮಿತಿಯ ಶಿಫಾರಸ್ಸು ಅನುಷ್ಠಾನ ತರಲು 2924 ಕೋಟಿ ಮಂಡಿಸಿದ್ದಾರೆ. ಗುಲ್ಬರ್ಗ ಮತ್ತು ಶಿವಮೊಗ್ಗ ವಿಮಾನ ಕೇಂದ್ರಗಳನ್ನು ಬರುವ ಮೇ ಹಾಗೂ ಸೆಪ್ಟೆಂಬರ್‌ನಲ್ಲಿ ಪ್ರಾರಂಭಿಸಲು ಆದೇಶ ಮಾಡಿದ್ದಾರೆ.
ಬೀದರ್ ಗುಲ್ಬರ್ಗ ರೇಲ್ವೆ ಹಳಿ ಅಭವೃದ್ಧಿಗೆ 133 ಕೋಟಿ ಒದಗಿಸಿದ್ದಾರೆ. ಮಹಬೂಬನಗರ- ಗದ್ವಾಲ್ -ರಾಯಚೂರು ಮಾರ್ಗವಾಗಿ ಹೊಸ ರೇಲ್ವೆ ಪ್ರಾರಂಭಿಸಲು ಘೋಷಿಸಿದ್ದಾರೆ. 43 ಹೊಸ ತಾಲೂಕು ಘೋಷಣೆ ಮಾಡಿರುವುದರಲ್ಲಿ ಬಹುತೇಕ ಹೆಚ್ಚಿನ ತಾಲೂಕುಗಳು ಹೈದ್ರಾಬಾದ್ ಕರ್ನಾಟಕದಲ್ಲಿವೆ. ಹೈದ್ರಬಾದ್ ಕರ್ನಾಟಕದ ತೊಗರಿ, ಮೈದಾ, ಗೋದಿ ಬೆಳೆಗಳಿಗೆ 0 ತೆರಿಗೆ ಬರುವ ಒಂದು ವರ್ಷ ಮುಂದುವರಿಸಿದ್ದಾರೆ. ಬಿಪಿಎಲ್ ಕಾರ್ಡ್‌ದಾರರಿಗೆ 2 ಗೆ ಕಿಲೋ ಅಕ್ಕಿ ವಿತರಣೆ ಮಾಡಲು ಪ್ರಸ್ತಾಪಸಿದ್ದಾರೆ. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಒಂದೊಂದು ಎಂಜಿನಿಯರಿಂಗ್ ಕಾಲೇಜು ಸ್ಧಾಪನೆ ಮಾಡಲು ಬಜೆಟ್‌ನಲ್ಲಿ ಮಂಡಿಸಿರುವುದು ಸ್ವಾಗತಾರ್ಹ ಎಂದು ಹೈ.ಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಹರ್ಷ ವ್ಯಕ್ತಪಡಿಸಿದೆ. ಇದೇ ಬಜೆಟ್‌ನಲ್ಲಿ ತೊಗರಿ ಬೋರ್ಡ್ ವಿಚಾರವಾಗಿಯಾಗಲಿ, ಬಿ ದರ್ಜೆ ಸಿಟಿಯನ್ನಾಗಿ ಗುಲ್ಬರ್ಗ ಘೋಷಿಸುವ ಬಗ್ಗೆಯಾಗಲಿ, ಸ್ಮಾರ್ಟ್ ಸಿಟಿ ಬಗ್ಗೆಯಾಗಲಿ ಯಾವುದೇ ಪ್ರಸ್ತಾವನೆ ಇಲ್ಲದಿರುವುದಕ್ಕೆ ಚೆಂಬರ್ ವಿಷಾದಿಸಿದೆ.
ಬಜೆಟ್‌ನಲ್ಲಿ ಆಶಾ ಕಾರ್ಯಕರ್ತೆಯರ ಕಡೆಗಣನೆ- ಸಂಘದ ವಿಷಾದ:  ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನದ ಅನುಷ್ಠಾನಕ್ಕಾಗಿ ರಾಜ್ಯದ ಆರೋಗ್ಯ ಇಲಾಖೆಯಲ್ಲಿ ಸೇವೆಸಲ್ಲಿಸುತ್ತಿರುವ ಸುಮಾರು 33 ಸಾವಿರಕ್ಕೂ ಹೆಚ್ಚು ಆಶಾ ಕಾರ್ಯಕರ್ತೆಯರು ತಮ್ಮ ಸೇವಾ ಮನೋಭಾವದಿಂದಲೇ ಗ್ರಾಮದ ಜನರಿಂದ, ಇಲಾಖೆಯಿಂದ ಮತ್ತು ಸರ್ಕಾರದಿಂದ ಮೆಚ್ಚುಗೆಯನ್ನು ಗಳಿಸಿರುವುದು ನಿಜಕ್ಕೂ ಸಂತಸದ ವಿಷಯವಾಗಿದ್ದರೂ ಈ ಬಜೆಟ್‌ನಲ್ಲಿ ಇವರ ಅನುಕೂಲಕ್ಕೆಂದು ಯಾವುದೇ ವಿಷಯಗಳು ಪ್ರಸ್ತಾಪವಾಗದೆ ಹೋಗಿದ್ದು ವಿಷಾದಕರ ಎಂದು ಸಂಘದ ಜಿಲ್ಲಾಧ್ಯಕ್ಷ ರಾಮಣ್ಣ ಇಬ್‌ರಂಪೂರ ಹೇಳಿದ್ದಾರೆ.
ಆಶಾ ಕಾರ್ಯಕರ್ತೆಯರಿಂದ ನೇರ ಸೇವೆ ಪಡೆಯುತ್ತಿರುವ ರಾಜ್ಯ ಸರ್ಕಾರ ಇದೇ ಬಜೆಟ್‌ನಲ್ಲಿ ತಡ ಮಾಡದೇ ಈ ಕೂಡಲೇ ಮಾಸಿಕ ವೇತನವನ್ನು ನಿಗದಿಪಡಿಸಿ ಘೋಷಿಸಬೇಕೆಂದು ಸಮಸ್ತ ಆಶಾ ಕಾರ್ಯಕರ್ತೆಯವರ ಪರ ರಾಜ್ಯ ಸಂಯುಕ್ತ ಆಶಾ ಸಂಘದ ಗುಲ್ಬರ್ಗ ಜಿಲ್ಲಾ ಸಮಿತಿ ಮನವಿ ಮಾಡಿದೆ.
ಜನಪರ ಬಜೆಟ್- ಶಶಿಲ್ ನಮೋಶಿ: ರಾಜ್ಯದಲ್ಲಿ ಹೊಸತಾಗಿ 43 ತಾಲೂಕುಗಳ ರಚನೆ ಮಾಡಿರುವ ಶೆಟ್ಟರ್ ಬಜೆಟ್ ಜನಪರವಾಗಿದೆ. 272 ನಾಡ ಕಚೇರಿಗಳನ್ನು ಆರಂಭಿಸುವ ನಿರ್ಧಾರ ಮಾಡಲಾಗಿದೆ. ರಸ್ತೆಗಳ ಪ್ರಗತಿಗೆ 1,330 ಕೋಟಿ ಹಣ ಮೀಸಲಿಡಲಾಗಿದೆ. ಎಲ್ಲರ ಅನುಕೂಲ ಲೆಕ್ಕ ಹಾಕಿ ಶೆಟ್ಟರ್ ಮಂಡಿಸಿರುವ ಬಜೆಟ್ ಹೆಚ್ಚು ಜನಪರವಾಗಿದೆ ಎಂದು ಎಂಎಲ್ಸಿ ಶಶಿಲ್ ನಮೋಶಿ ಹೇಳಿದ್ದಾರೆ.
ಅಭಿವೃದ್ಧಿ ಪರ- ಮಹಾಂತಗೌಡ: ಶೆಟ್ಟರ್ ಮಂಡಿಸಿರುವ ಬಜೆಟ್ ಹಿಂದೆಂದಿಗಿಂತಲೂ ಅಭಿವೃದ್ಧಿ ಪರವಾಗಿದೆ. ಎಲ್ಲ ಜನಾಂಗದವರಿಗೆ, ರೈತರಿಗೆ  ಬಜೆಟ್  ಅನುಕೂಲಎಂದು ಎಚ್ಕೆಡಿಬಿ ಅಧ್ಯಕ್ಷ ಮಹಾಂತ ಗೌಡ ಪಾಟೀಲ್ ಹೇಳಿದ್ದಾರೆ.
ವಡಿಗೇರಿಗೆ ತಾಲೂಕು ಸ್ಥಾನಮಾನ- ಡಾ. ಗುಬ್ಬಿ ಸಂತಸ: ಯಾದಗಿರಿ ಜಿಲ್ಲೆಯ ವಡಗೇರಿಗೆ ತಾಲೂಕು ಸ್ಥಾನಮಾನ ದೊರಕಿದ್ದಕ್ಕೆ ಖ್ಯಾತ ಮೂಳೆತಜ್ಞ ಡಾ. ಎಸ್.ಎಸ್. ಗುಬ್ಬಿ ಸಂತಸಪಟ್ಟಿದ್ದಾರೆ. ಈ ಕುರಿತು ಹೇಳಿಕೆ ನೀಡಿರುವ ಅವರು ತಾಲೂಕು ರಚನೆಯ ಹಿಂದಿನ ಉದ್ದೇಶ ಸುತ್ತಲಿನ ಹಳ್ಳಿಗಾಡಿನ ಪ್ರಗತಿ ಆಗಿರಬೇಕು. ಹಳ್ಳಿಗಳ ಉದ್ಧಾರಕ್ಕೆ ಹೊಸ ತಾಲೂಕುಗಳು ಕೊಡುಗೆ ನೀಡಬೇಕು. ಅಧಿಕಾರ ವಿಕೇಂದ್ರೀಕರಣ ಹೆಚ್ಚಿಗೆ ನಡೆಯಬೇಕು. ನಗರ ಸೌಲಭ್ಯಗಳನ್ನೇ ಹಳ್ಳಿಗಳಲ್ಲಿ ಕಲ್ಪಿಸುವಂತಹ ಕಲಾಂ ಕನಸಾಗಿರುವ ಪುರಾ ಯೋಜನೆಯ ಪ್ರತಿರೂಪವಾಗಿ ರಾಜ್ಯದಲ್ಲಿ ಹೊಸ ತಾಲೂಕುಗಳು ಬೆಳೆದಲ್ಲಿ ಇದರ ಹಿಂದಿನ ಗುರಿ ಸಾರ್ಥಕವಾಗುತ್ತದೆ ಎಂದು ಡಾ. ಗುಬ್ಬಿ ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.