ಹುಣಸಗಿ; ನೀರಿಗಾಗಿ ಬಂದ್‌ಗೆ ನೀರಸ ಪ್ರತಿಕ್ರಿಯೆ
ಹುಣಸಗಿ: ಕೃಷ್ಣಾ ಎಡದಂಡೆ ಕಾಲುವೆಯಲ್ಲಿ ಮಾರ್ಚ್ ಅಂತ್ಯದವರೆಗೆ ನೀರು ಹರಿಸಬೇಕೆಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ನೇತೃತ್ವದಲ್ಲಿ ಸೋಮವಾರ ಕರೆ ನೀಡಿದ್ದ ಬಂದ್‌ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಆದರೆ ಕರವೇ ಕಾರ್ಯಕರ್ತರು, ರೈತರು ಸೇರಿ ಪ್ರತಿಭಟನಾ ಮೆರವಣಿಗೆ ನಡೆಸಿದರು.
ಕಾಲುವೆಯಲ್ಲಿ ಮಾ. 30ರತನಕ ನೀರು ಹರಿಸಿದರೆ ಮಾತ್ರ ಬೆಳೆದು ನಿಂತ ಹಿಂಗಾರಿ ಶೇಂಗಾ, ಸೆಜ್ಜೆ ಫಸಲು ಉಳಿಸಬಹುದು ಎಂದು ಒತ್ತಾಯಿಸಿ ಸೋಮವಾರ ಕರವೇ ಹುಣಸಗಿ ಬಂದ್‌ಗೆ ಕರೆ ನೀಡಿತ್ತು.
ಪ್ರತಿಭಟನಾಕಾರರು ಮಹಾಂತಸ್ವಾಮಿ ವೃತ್ತದಿಂದ ಹೊರಟು ಅಂಗಡಿಗಳನ್ನು ಬಂದ್ ಮಾಡಿಸುತ್ತಾ ಮುನ್ನಡೆದರು. ಆದರೆ ಈಗಾಗಲೇ ಸಂಕಷ್ಟದಲ್ಲಿರುವ ವ್ಯಾಪಾರಸ್ಥರು ಅಂಗಡಿ ಬಂದ್ ಮಾಡಲಿಲ್ಲ. ಆದರೆ ಹೋರಾಟಕ್ಕೆ ತಮ್ಮ ಬೆಂಬಲವಿದ್ದು, ಮುಂದುವರಿಸುವಂತೆ ತಿಳಿಸಿದರು.
ಮಾತಿನ ಚಕಮಕಿ: ಮೆರವಣಿಗೆಯಲ್ಲಿ ತಹಸೀಲ್ದಾರ್ ಕಚೇರಿಗೆ ತಲುಪಿದ ಪ್ರತಿಭಟನಾಕಾರರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ತಹಸೀಲ್ದಾರ್ ಅವರೊಂದಿಗೆ ಕರವೇ ಕಾರ್ಯಕರ್ತರು ಹಾಗೂ ರೈತ ಮುಖಂಡರ ಮಾತಿನ ಚಕಮಕಿ ನಡೆಯಿತು.
ಮತ್ತಷ್ಟು ಸಂಕಷ್ಟದ ಭೀತಿ: ನಂತರ ಮಾತನಾಡಿದ ಕರವೇ ರಾಜ್ಯ ಸಂಚಾಲಕ ಬಸವರಾಜ ಪಡುಕೋಟೆ, ರೈತರ ಕಣ್ಣೀರು ಒರೆಸಲು ಕರವೇ ಸದಾ ಸಿದ್ಧವಾಗಿದೆ. ಪ್ರತಿಯೊಂದು ಸರ್ಕಾರಗಳು ರೈತರನ್ನು ದಾರಿ ತಪ್ಪಿಸುತ್ತಿವೆ. ಕಳೆದ ಎರಡು ವರ್ಷಗಳಿಂದಲೂ ರೈತರಿಗೆ ನೀರು ನೀಡದೆ ಅವರ ಸಾಲ-ಸೋಲ ಹೆಚ್ಚಾಗಿ ರೈತನ ಆತ್ಮಹತ್ಯೆಗೆ ಸರ್ಕಾರವೇ ಪರೋಕ್ಷ ಕಾರಣವಾಗುತ್ತಿದೆ. ಮಾರ್ಚ್ ಅಂತ್ಯದವರೆಗೆ ನೀರು ಹರಿಸದಿದ್ದರೆ ಈ ಭಾಗದ ರೈತರು ಮತ್ತಷ್ಟು ಸಂಕಷ್ಟ ಎದುರಿಸುವಂತಾಗುತ್ತದೆ. ಆದ್ದರಿಂದ ಅಧಿಕಾರಿಗಳು ನೀರು ಹರಿಸಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಮನವಿ ಸ್ವೀಕರಿಸಲು ಸಂಬಂಧಪಟ್ಟ ಅಧಿಕಾರಿಗಳೇ ಬರಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು. ನಂತರ ನಾರಾಯಣಪುರ ಕೆಬಿಜೆಎನ್ನೆಲ್ ಅಧೀಕ್ಷಕ ಅಭಿಯಂತರ ಭೋಜಾನಾಯಕ ಕಟ್ಟಿಮನಿ ಸ್ಥಳಕ್ಕೆ ಬಂದರು. ಮನವಿಯನ್ನು ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ ತಲುಪಿಸುವುದಾಗಿ ಹೇಳಿ ವಾತಾವರಣ ತಿಳಿಗೊಳಿಸಿದರು.
ಕರವೇ ರವಿರಾಜ ನಗನೂರು, ವೆಂಕಟೇಶ ಭೈರಮಡ್ಡಿ, ನಂದಣ್ಣ ದೊರಿ, ಆದಯ್ಯಾ ಗುರಿಕಾರ, ವೆಂಕಟೇಶ ಪ್ಯಾಪ್ಲಿ, ಗೋವಿಂದ, ಪ್ರಕಾಶ ಕುಪ್ಪಿ, ಶಿವಲಿಂಗ, ಮಂಜುನಾಥ, ಶ್ರೀನಿವಾಸ ಭೈರಿಮಡ್ಡಿ, ರೈತ ಸಂಘದ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಸತ್ಯಂಪೇಟೆ, ಅಯ್ಯಣ್ಣ ಹಾಲಬಾವಿ, ಶರಣಪ್ಪ ಅಮ್ಮಾಪುರ ಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

