ಗುಲ್ಬರ್ಗಾ

ಡಿಸೆಂಬರ್ ಅಂತ್ಯದವರೆಗೆ ಸಬಲೀಕರಣ ಯೋಜನೆ

Published On :

ಚಿಂಚೋಳಿ: ಅಧಿಕಾರ ವಿಕೇಂದ್ರಿಕರಣ ಪ್ರಕ್ರಿಯೆಗೆ ಒತ್ತು ನೀಡಿ, ಸ್ಥಳೀಯ ಸಂಸ್ಥೆಗಳ ಬಲವರ್ಧನೆ ಹಾಗೂ ಸಾರ್ವಜನಿಕ ಸೇವೆಗಳ ಪೂರೈಕೆಯಲ್ಲಿ ಸುಧಾರಣೆ ತರುವ ಉದ್ದೇಶದಿಂದ ವಿಶ್ವಬ್ಯಾಂಕ್ ನೆರವಿನೊಂದಿಗೆ 2006-07 ರಿಂದ ಐದು ವರ್ಷ ಅವಧಿಗೆ ಜಾರಿಯಾದ ಗ್ರಾಮ ಸ್ವರಾಜ್ ಪಂಚಾಯತ್ ಸಬಲೀಕರಣ ಯೋಜನೆ 2013ರ ಡಿಸೆಂಬರ್ ಅಂತ್ಯದವರೆಗೆ ವಿಸ್ತರಿಸಲಾಗಿದೆ ಎಂದು ಬೆಂಗಳೂರು ಕೇಂದ್ರ ಕಚೇರಿಯ (ಪರಿಸರ ವಿಭಾಗದ) ಯೋಜನಾಧಿಕಾರಿ ಹೊನ್ನೂರಪ್ಪ ತಿಳಿಸಿದರು.
ಇಲ್ಲಿನ ತಾಲೂಕು ಪಂಚಾಯಿತಿಯ ಸಾಮರ್ಥ್ಯ ಸೌಧದಲ್ಲಿ ಮಂಗಳವಾರ ನಡೆದ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳ ಹಾಗೂ ಪಂಚಾಯತ್ ರಾಜ್ ತಾಂತ್ರಿಕ ಉಪ ವಿಭಾಗದ ಶಾಖಾಧಿಕಾರಿಗಳ ಸಭೆಯಲ್ಲಿ 32 ಗ್ರಾಪಂಗಳ ಪ್ರಗತಿ ಪರಿಶೀಲಿಸಿ ಮಾತನಾಡಿದರು.
ಪ್ರಮಾಣ ಪತ್ರ: ರಾಜ್ಯದ ಅತ್ಯಂತ ಹಿಂದುಳಿದ 39 ತಾಲೂಕುಗಳ 1341 ಗ್ರಾಪಂಗಳಲ್ಲಿ ಅನುಷ್ಠಾನಗೊಳ್ಳುತ್ತಿರುವ ಯೋಜನೆ ಅಡಿಯಲ್ಲಿ ಇಲ್ಲಿಯವರೆಗೆ ಚಿಂಚೋಳಿ ತಾಲೂಕಿನ 32 ಗ್ರಾಪಂಗಳಿಗೆ 12.41 ಕೋಟಿ ಬಿಡುಗಡೆಯಾಗಿದ್ದು, 11.58 ಕೋಟಿ ಖರ್ಚಾಗಿದೆ. ಇನ್ನೂ 87.54 ಲಕ್ಷ ಖರ್ಚಾಗಬೇಕಿದೆ. ಈ ಹಣವನ್ನು ಫೆಬ್ರವರಿ 15ಒಳಗಾಗಿ ಖರ್ಚು ಮಾಡಿ ಹಣ ಬಳಕೆ ಪ್ರಮಾಣ ಪತ್ರ ಕಳುಹಿಸಲು ಅವರು ಸೂಚಿಸಿದರು. ಬಿಡುಗಡೆಯಾದ ಅನುದಾನ ಪೂರ್ಣ ಪ್ರಮಾಣದಲ್ಲಿ ಬಳಸಿಕೊಂಡು ಹಣ ಬಳಕೆ ಪ್ರಮಾಣ ಪತ್ರ ಸಲ್ಲಿಸಿದವರಿಗೆ ಮಾತ್ರ ಮುಂದಿನ ಕಂತಿನ ಅನುದಾನ ಬಿಡುಗಡೆಯಾಗುತ್ತದೆ. ಹೀಗಾಗಿ ಯೋಜನೆ ಅನುಷ್ಠಾನದಲ್ಲಿ ಉದಾಸೀನ ತೋರದಿರಲು ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಗೆ ಕಿವಿಮಾತು ಹೇಳಿದರು.
ಸೂಚನೆ: 32 ಗ್ರಾಪಂಗಳಲ್ಲಿ 22 ಗ್ರಾಪಂಗಳು ಹಣ ಬಳಕೆ ಪತ್ರ ಕಳುಹಿಸಿವೆ. ಉಳಿದ ಪಂಚಾಯತಿಗಳು ಈ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಬೇಕು. ಈ ಕುರಿತು ಮೇಲ್ವಿಚಾರಣೆ ನಡೆಸುವಂತೆ ಕಾರ್ಯನಿರ್ವಹಣಾಧಿಕಾರಿ ಜಗದೇವಪ್ಪ ಬೈಗೊಂಡ ಅವರಿಗೆ ಸೂಚಿಸಿದರು.
ಗ್ರಾಮ ಸ್ವರಾಜ್ ಯೋಜನೆ ತಾಲೂಕಿನಲ್ಲಿ ಸಮಪರ್ಕವಾಗಿ ಅನುಷ್ಠಾನಗೊಳ್ಳುತ್ತಿರುವ ಕುರಿತು ತೃಪ್ತಿ ವ್ಯಕ್ತಪಡಿಸಿದ ಅವರು, ತಾಲೂಕಿನಲ್ಲಿ ಒಂದು ಪ್ರಕರಣವೂ ಹಣ ದುರುಪಯೋಗ ಕಂಡು ಬಂದಿಲ್ಲ ಎಂದರು.
ಕಡ್ಡಾಯ: ಪಂಚಾಯತಿಯ ಶಾಖಾಧಿಕಾರಿಗಳು ಯೋಜನೆಯ ಕಾಮಗಾರಿ ಅನುಷ್ಠಾನಗೊಳಿಸುವಾಗ ಕಡ್ಡಾಯವಾಗಿ ಪರಿಸರ ಸಂರಕ್ಷಣೆಯ ಓಕೆ ಕಾರ್ಡ್ ತಯಾರಿಸಿ ಜಾರಿಗೊಳಿಸಬೇಕು. ಕಾಮಗಾರಿ ಅನುಷ್ಠಾನದಿಂದ ಗಿಡಮರ ಹಾಗೂ ಪರಿಸರಕ್ಕೆ ಧಕ್ಕೆಯಾಗದಂತೆ ಎಚ್ಚರಿಕೆ ವಹಿಸಬೇಕೆಂದ ಅವರು, ತಾಲೂಕಿನ 32 ಗ್ರಾಮ ಪಂಚಾಯತಿಗಳ ಲೆಕ್ಕ ವಿವರ (ಡಬಲ್ ಎಂಟ್ರಿ) ಪದ್ಧತಿ ಅನುಷ್ಠಾನ ಮತ್ತು ವಾರ್ಷಿಕ ಲೆಕ್ಕ ಪರಿಶೋಧನೆ ಶೇ.100 ರಷ್ಟು ಆಗಿದ್ದು ಪಾರದರ್ಶಕ ಆಡಳಿತ ಸೂಚಿಸುತ್ತದೆ ಎಂದರು.
ಅವಕಾಶ: ಸಾಮರ್ಥ್ಯ ಸೌಧ ಕಟ್ಟಡ ನಿರ್ಮಾಣಕ್ಕೆ ಬಿಡುಗಡೆಯಾದ ಅನುದಾನ ಬಳಸಿಕೊಂಡು ವಿವಿಧ ತರಬೇತಿ, ಸಭೆಗಳು ನಡೆಸಲು ಅವಕಾಶ ಮಾಡಿಕೊಡಬೇಕೆಂದು ಪಂಚಾಯತಿ ಸೌಲಭ್ಯ ತಜ್ಞರಾದ ಶಶಿಧರ ಟೆಂಗಿನಕಾಯಿ ತಿಳಿಸಿದರು.
ಕಾರ್ಯನಿರ್ವಹಣಾಧಿಕಾರಿ ಜಗದೇವ ಬೈಗೊಂಡ ಮಾತನಾಡಿ, ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಪಂಚಾಯಿತಿಗೆ ನಿರಂತರ ಭೇಟಿ ನೀಡಬೇಕು. ಇದರಿಂದ ಆಡಳಿತದಲ್ಲಿ ಸುಧಾರಣೆ ಬರುತ್ತದೆ. ಈ ಮೂಲಕ ಸಾರ್ವಜನಿಕ ಸೇವೆಯಲ್ಲೂ ಬದಲಾವಣೆ ತರಬಹುದಾಗಿದೆ ಎಂದರು.
ಸಮುದಾಯ ಸಂಘಟನಾ ಸಮಾಲೋಚಕ ಜಗನ್ನಾಥ ಶೇರಿಕಾರ್ ಸ್ವಾಗತಿಸಿದರು. ಸಹಾಯಕ ನಿರ್ದೇಶಕ ವಿಜಯಕುಮಾರ್ ಕುಲ್ಕರ್ಣಿ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.