ಗುಲ್ಬರ್ಗಾ

ನಂಜುಂಡಪ್ಪ ವರದಿ ಅನುಷ್ಠಾನ ಅವಲೋಕನ

Published On :

ಗುಲ್ಬರ್ಗ: ರಾಜ್ಯದ ಹಿಂದುಳಿದ ಪ್ರದೇಶಗಳ ಪ್ರಗತಿಯ ಉದ್ದೇಶದಿಂದ ಸರ್ಕಾರ ಜಾರಿಗೆ ತಂದಿರುವ ಡಾ. ನಂಜುಂಡಪ್ಪ ವರದಿ ಅನುಷ್ಠಾನ ಉನ್ನತಾಧಿಕಾರ ಸಮಿತಿಯ ಅಡಿಯಲ್ಲಿ ವೆಚ್ಚ ಮಾಡಲ್ಪಟ್ಟ ಹಣ, ಕೈಗೊಂಡ ಕಾಮಗಾರಿಗಳು, ವರದಿಯನ್ವಯ ಗುರುತಿಸಲಾಗಿರುವ ತಾಲೂಕುಗಳ ಹಿಂದುಳಿದಿರುವಿಕೆ ಹೀಗೆ ಹಲವು ದೃಷ್ಟಿಕೋನಗಳಲ್ಲಿ ವರದಿಯ ಸಂಪೂರ್ಣ ಅವಲೋಕನ ಹಾಗೂ ಕಾಮಗಾರಿಗಳ ಮೌಲ್ಯಮಾಪನ ಕೈಗೆತ್ತಿಕೊಳ್ಳಲಾಗುತ್ತದೆ ಎಂದು ಸಮಿತಿಯ ಅಧ್ಯಕ್ಷ ತ್ರಿವಿಕ್ರಮ ಜೋಷಿ ಹೇಳಿದ್ದಾರೆ.
11 ವರ್ಷ ಉರುಳಿವೆ: ನಂಜುಂಡಪ್ಪ 2001- 02ರ ಸಂದರ್ಭವನ್ನು ಹಿನ್ನೆಲೆಯಾಗಿಟ್ಟುಕೊಂಡು ವರದಿ ಸಲ್ಲಿಸಿದ್ದರು. ಈಗ ವರದಿ ಸಲ್ಲಿಕೆಯಾಗಿ 1 1 ವರ್ಷ ಉರುಳಿವೆ. ಅದು ಅನುಷ್ಠಾನಗೊಂಡು ವರ್ಷ 6 ತುಂಬುತ್ತಿರುವ ಈ ಸಂದರ್ಭದಲ್ಲಿ ಅವಲೋಕನ ಅತ್ಯಗತ್ಯ ಎಂಬುದು ತಮ್ಮ ಅಭಿಪ್ರಾಯ ಎಂದು ಗುಲ್ಬರ್ಗದಲ್ಲಿ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ. ಸಮಿತಿ ಅಧ್ಯಕ್ಷರಾದ ನಂತರ ಇದೇ ಮೊದಲ ಬಾರಿಗೆ ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಅಧಿಕಾರಿಗಳ ಸಮ್ಮುಖದಲ್ಲಿ ವಿಶೇಷ ಅಭಿವೃದ್ಧಿ ಯೋಜನೆಯ ಪ್ರಗತಿ ಪರಿಶೀಲನೆ ನಡೆಸಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತ ನಂಜುಂಡಪ್ಪ ವರದಿಯಲ್ಲಿ ದಶಕದ ಹಿಂದೆ ಹಿಂದುಳಿದ ತಾಲೂಕುಗಳು ಎಂದು 114 ಗುರುತಿಸಿ ಪ್ರಗತಿಗೆ 8 ವರ್ಷಗಳಲ್ಲಿ 16 ಸಾವಿರ ಕೋಟಿ ವೆಚ್ಚಕ್ಕೆ ಸೂಚಿಸಲಾಗಿತ್ತು ಎಂದರು.
ಮಾಹಿತಿ: ವರದಿ ಅನುಷ್ಠಾನಗೊಂಡು ಇದೀಗ 5 ವರ್ಷ 9 ತಿಂಗಳಾಗಿದೆ. ಈ ಅವಧಿಯಲ್ಲಿ ಸರ್ಕಾರ 10, 421, 43 ಕೋಟಿ ಹಣ ವೆಚ್ಚ ಮಾಡಿದೆ. ಉನ್ನತಾಧಿಕಾರ ಸಮಿತಿಗೆ ಬಜೆಟ್‌ನಲ್ಲಿ ಹಂಚಿಕೆಯಾಗಿರುವ ಹಣ 14, 945 ಕೋಟಿ, ಬಿಡುಗಡೆಯಾಗಿದ್ದು 10, 995 ಕೋಟಿ ಎಂದು ಜೋಷಿ  ಸಮಿತಿ ರೂಪಿಸಿರುವ ವಿಶೇಷ ಅಭಿವೃದ್ಧಿ ಯೋಜನೆಯಡಿಯಲ್ಲಿನ ಖರ್ಚು- ವೆಚ್ಚಗಳ ಮಾಹಿತಿ ನೀಡಿದರು. 2001- 02ರಲ್ಲಿ ಅಸ್ತಿತ್ವದಲ್ಲಿದ್ದ ರಾಜ್ಯದ 27 ಜಿಲ್ಲೆಗಳಲ್ಲಿ ಹರಡಿದ್ದ 114 ತಾಲೂಕುಗಳು ಹಿಂದುಳಿದವು ಎಂದು ಗುರುತಿಸಲಾಗಿತ್ತು. ಈ ಪೈಕಿ 39 ಅತ್ಯಂತ ಹಿಂದುಳಿದ, 40 ಅತಿ ಹಿಂದುಳಿದ ಹಾಗೂ 35 ಹಿಂದುಳಿದ ತಾಲೂಕುಗಳನ್ನಾಗಿ ಸಮಿತಿ ಗುರುತಿಸಿತ್ತು. 31 ಸಾವಿರ ಕೋಟಿ ಕೆಲಸ ಈ ಪ್ರದೇಶಗಳಲ್ಲಿ ಆಗಬೇಕು, ಈ ಪೈಕಿ 15 ಸಾವಿರ ಕೋಟಿ ಸರ್ಕಾರದ ಎಂದಿನ ಬಜೆಟ್ ಅಡಿಯಲ್ಲಿಯೇ ಹರಿದು ಬರಬೇಕು, ಉಳಿದ 16 ಸಾ. ಕೋಟಿ ಹಣ ವಿಶೇಷ ಅನುದಾನವಾಗಿ 8 ವರ್ಷಗಳಲ್ಲಿ ವೆಚ್ಚ ಮಾಡಬೇಕು ಎಂಬುದು ಡಾ. ನಂಜುಂಡಪ್ಪ ಅವರ ಸಲಹೆಯಾಗಿತ್ತು. ಆದರೆ ಅನೇಕ ಕಾರಣಗಳಿಂದ ವರದಿ ಅನುಷ್ಠಾನವೇ ವಿಳಂಬವಾಗಿತ್ತು. ಇದೀಗ ವರದಿ ಅನುಷ್ಠಾನಗೊಂಡಿದ್ದು 6 ನೇ ವರ್ಷದಲ್ಲಿದ್ದೇವೆ. ಅವಲೋಕನಕ್ಕೆ ಇದು ಸಕಾಲ. ಬೆಲೆ ಏರಿಕೆ ಇತ್ಯಾದಿ ಅಂಶಗಳ ಹಿನ್ನೆಲೆಯಲ್ಲಿಯೇ ವರದಿಯಲ್ಲಿ ಸೂಚಿಸಲಾಗಿರುವ ಮೊತ್ತವನ್ನೂ ಪರಿಷ್ಕರಿಸುವ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ತಜ್ಞರಿರುವ ಏಜನ್ಸಿಯೊಂದನ್ನು ಗುರುತಿಸಿ ಅವರಿಗೆ 6 ತಿಂಗಳೋ, ವರ್ಷದ ಅವಧಿ ನಿಗದಿಪಡಿಸಿ ಈ ವರದಿಯ ಅನುಷ್ಠಾನದ ಎಲ್ಲಾ ಹಂತಗಳ ಅವಲೋಕನ, ಮೌಲ್ಯಮಾಪನ ನಡೆಸುವ ಚಿಂತನೆ ಇದೆ ಎಂದು ಜೋಷಿ ಹೇಳಿದರು.
ಅಭಿವೃದ್ಧಿ ಅಗೋಚರ: ಪ್ರಾದೇಶಿಕ ಅಸಮಾನತೆ ನೀಗಿಸುವ ನಿಟ್ಟಿನಲ್ಲಿ ಡಾ. ನಂಜುಂಡಪ್ಪ ನೀಡಿರುವ ವರದಿ ಅನುಷ್ಠಾನಗೊಂಡು 6 ವರ್ಷ ಉರುಳಿದೆ, ಈ ಹಂತದಲ್ಲಿ ನಿರೀಕ್ಷಿತ ಅಭಿವೃದ್ಧಿ ಸಾಧನೆಯಾಗಿದೆಯೆ ಎಂಬ ಪ್ರಶ್ನೆಗೆ ಅಧ್ಯಕ್ಷ ಜೋಷಿ ಯಾವುದೇ ಉತ್ತರ ನೀಡುವ ಗೋಜಿಗೆ ಹೋಗಲಿಲ್ಲ. ಪ್ರಗತಿ ಕೆಲಸಗಳು ಸಾಗಿವೆ. ನಿರೀಕ್ಷೆಯಂತೆ ಆಗಿಲ್ಲ ಎನ್ನಬಹುದಾದರೂ ಕೆಲಸಗಳು ಯಾವುದು ನಿಂತಿಲ್ಲ ಎಂದರಲ್ಲದೆ ಪ್ರಗತಿ ವಿಚಾರದಲ್ಲಿ ಸಾಕಷ್ಟು ಕೆಲಸಗಳು ಆಗಬೇಕಾಗಿದೆ. ಬರುವ ದಿನಗಳಲ್ಲಿ ಸಮಿತಿಯ ವಿಶೇಷ ಅಭಿವೃದ್ಧಿ ಯೋಜನೆಗೆ ಹೆಚ್ಚಿನ ಒತ್ತು ನೀಡಿ ಪರಿಶೀಲನೆ ನಡೆಸಲಾಗುತ್ತದೆ. ಬಜೆಟ್ ಹಣ ಸಂಪೂರ್ಣ ಬಿಡುಗಡೆಯಾಗುವಂತೆಯೂ ನೋಡಿಕೊಳ್ಳಲಾಗುತ್ತದೆ ಎಂದರು.
2,900 ಕೋಟಿ ಪ್ರಸ್ತಾವನೆ: ಈ ಸಾರಿಯ ಬಜೆಟ್‌ಗೆ ಡಾ. ನಂಜುಂಡಪ್ಪ ವರದಿ ಅನುಷ್ಠಾನ ಸಮಿತಿಯಿಂದ 2,900 ಕೋಟಿ ಪ್ರಸ್ತಾವನೆ ಸಲ್ಲಿಕೆಯಾಗಿದೆ. ಮುಖ್ಯಮಂತ್ರಿಗಳು ಈ ಪ್ರಸ್ತಾವನೆಯನ್ನು ಆದ್ಯತೆ ಮೇರೆಗೆ ಪರಿಶೀಲಿಸಿ ಒಪ್ಪಿಗೆ ನೀಡುತ್ತಾರೆ. ಬಜೆಟ್‌ನಲ್ಲಿಯೂ ಅಗತ್ಯ ಅನುದಾನ ಮೀಸಲಿಡುತ್ತಾರೆ ಎಂಬುದು ತಮ್ಮ ನಂಬಿಕೆ ಎಂದು ಜೋಷಿ ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.