ಗುಲ್ಬರ್ಗಾ

ಅರಣ್ಯ ಪ್ರದೇಶದಲ್ಲಿ ಜಮೀನು ಒತ್ತುವರಿ

Published On :

ಕನ್ನಡಪ್ರಭ ವಾರ್ತೆ, ಚಿಂಚೋಳಿ, ಜು.2
ತಾಲೂಕಿನ ಕುಂಚಾವರಂ ಗಡಿಭಾಗಕ್ಕೆ ಹೊಂದಿಕೊಂಡಿರುವ ಕಾಯ್ದಿಟ್ಟ ಅರಣ್ಯಪ್ರದೇಶದ ಸಂಗಾಪುರ ಮತ್ತು ಕಾಟನಗಿಡ್ಡಾ ಪ್ರದೇಶದಲ್ಲಿ ಆಂಧ್ರದ ಜಹೀರಾಬಾದ್ ತಾಲೂಕಿನ ಆಂಧ್ರದ ವಿಟ್ಟು ನಾಯಕ ತಾಂಡಾದ ರೈತರು ಅಕ್ರಮವಾಗಿ ಅರಣ್ಯಪ್ರದೇಶದಲ್ಲಿ ಜಮೀನು ಒತ್ತುವರಿ ಸಾಗುವಳಿ ನಡೆಸಿ ನೈಸರ್ಗಿಕವಾಗಿ ಬೆಳೆದಿರುವ ಗಿಡಮರಗಳನ್ನು ಕಡಿದು ಹಾಕಿ ಅರಣ್ಯಪ್ರದೇಶ ಹಾಳು ಮಾಡುತ್ತಿರುವುದು ನಿರಂತರವಾಗಿ ನಡೆಯುತ್ತಿದೆ.
ತಾಲೂಕಿನ ಕುಂಚಾವರಂ ಗಡಿಯ ಸಂಗಾಪುರ ತಾಂಡಾದ ಹತ್ತಿರ ಆಂಧ್ರದ ವಿಟ್ಟು ನಾಯಕ ತಾಂಡಾದ ರೈತರು ಕಾಯ್ದಿಟ್ಟ ಅರಣ್ಯಪ್ರದೇಶದಲ್ಲಿ ಬೆಳೆದಿರುವ ಗಿಡ ಮರಗಳನ್ನು ಜೆಸಿಬಿ ಯಂತ್ರದಿಂದ ಕಡಿದು ಹಾಕಿ ಜಮೀನು ಸಾಗುವಳಿ ಮಾಡುತ್ತಿದ್ದಾರೆ.
ಜಮೀನು ಒತ್ತುವರಿ: ಸಂಗಾಪುರ ತಾಂಡಾದ ಹತ್ತಿರ ಸರ್ವೆ ನಂಬರ 3, 2, ಹಾಗೂ 8 ರಲ್ಲಿ ವಿಟ್ಟು ನಾಯಕ ತಾಂಡಾದ 50ಕ್ಕಿಂತ ಹೆಚ್ಚು ರೈತರು ಪ್ರತಿ ವರ್ಷ ಸಾಗುವಳಿ ನೆಪದಲ್ಲಿ ಅರಣ್ಯಪ್ರದೇಶಕ್ಕೆ ಸೇರಿರುವ ಜಮೀನು ಒತ್ತುವರಿ ಮಾಡಿ  ಪ್ರಸಕ್ತ ಸಾಲಿನಲ್ಲಿ ತೊಗರಿ ಮತ್ತು  ಹೆಸರು, ಉದ್ದು ಬಿತ್ತನೆ ಮಾಡುತ್ತಿದ್ದಾರೆ ಎಂದು ಸಂಗಾಪುರ ತಾಂಡಾದ ಶಂಕರ ಜಾಧವ, ದೇವದಾಸ ಚವ್ಹಾಣ, ಚಂದ್ರು ಪವಾರ ಕನ್ನಡಪ್ರಭಕ್ಕೆ  ತಿಳಿಸಿದ್ದಾರೆ.
ಸರ್ವೆ ಕಾರ್ಯ ನಡೆಸಿಲ್ಲ: ಕರ್ನಾಟಕ ಮತ್ತು ಆಂಧ್ರಪ್ರದೇಶದ ಅಂತರ ರಾಜ್ಯ ಗಡಿ ತಂಟೆ ಸುಮಾರು ವರ್ಷಗಳಿಂದ ಹಾಗೇ ಉಳಿದಿದೆ. ಸರ್ವೆ ಕಾರ್ಯ ನಡೆಸಿಲ್ಲ. ನಮ್ಮ ರಾಜ್ಯಕ್ಕೆ ಸೇರಿರುವ ಅರಣ್ಯ ಪ್ರದೇಶದಲ್ಲಿ ಆಂಧ್ರದ ರೈತರ ದಬ್ಬಾಳಿಕೆ ಹೆಚ್ಚಾಗಿದೆ. ವರ್ಷದಿಂದ ವರ್ಷಕ್ಕೆ ಅರಣ್ಯ ನಾಶ ಆಗುತ್ತಲೇ ನಡೆದಿದೆ.
ಕಾಟನಗಿಡ್ಡಾ ಮತ್ತು ಸಂಗಾಪುರ ತಾಂಡಾದ ಅರಣ್ಯಪ್ರದೇಶದಲ್ಲಿ ವಿಟ್ಟು ನಾಯಕ ತಾಂಡಾದ ಜನರ ಮತ್ತು ರೈತರ ಹಾವಳಿಯಿಂದಾಗಿ  ನೈಸರ್ಗಿಕ ಸಂಪತ್ತು ಅರಣ್ಯ  ಹಾಳಾಗುತ್ತಿದೆ. ಇಲಾಖೆ ಉಳಿಸಿಕೊಳ್ಳಲು ಹರ ಸಾಹಸ ನಡೆಸುತ್ತಿದೆ ಆದರೂ ಅರಣ್ಯ ಇಲಾಖೆಗೆ ಸಿಬ್ಬಂದಿಗಳ ಮತ್ತು ಆಯುಧಗಳ ಕೊರತೆಯಿದೆ ಎಂದು ಹೇಳಲಾಗುತ್ತಿದೆ.
ಅಕ್ರಮ ಸಾಗುವಳಿದಾರರು ಪರಾರಿ: ಸಂಗಾಪುರ ತಾಂಡಾದ ಹತ್ತಿರ ವಿಟ್ಟು ನಾಯಕ ತಾಂಡಾದ ರೈತರು ಜೆಸಿಬಿ ಯಂತ್ರಗಳಿಂದ ಗಿಡ ಮರಗಳನ್ನು ಕಡಿದು ಹಾಕುತ್ತಿರುವ ವಿಷಯ ತಿಳಿದ ತಕ್ಷಣ ಕುಂಚಾವರಂ ಪೊಲೀಸರೊಂದಿಗೆ ಸ್ಥಳಕ್ಕೆ ಭೇಟಿ ನೀಡಿದಾಗ ಅಲ್ಲಿ ಯಾರೂ ಇರಲಿಲ್ಲ. ಇಬ್ಬರ ಮೇಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ತಾಲೂಕು ವಲಯ ಅರಣ್ಯಾಧಿಕಾರಿ ಎಂ.ಎಲ್. ಭಾವಿಕಟ್ಟಿ ತಿಳಿಸಿದರು.
ಇನ್ನು ಹಲವು ರೈತರ ಹೆಸರು ಮತ್ತು ವಿಳಾಸ ಪತ್ತೆಯಾಗಿಲ್ಲ. ಅಕ್ರಮ ಸಾಗುವಳಿದಾರರ ಪತ್ತೆ ಕಾರ್ಯ ಪ್ರಗತಿಯಲ್ಲಿದೆ. ಯಾವುದೇ ಅಕ್ರಮ ಸಾಗುವಳಿಗೆ ಅವಕಾಶ ನೀಡುವುದಿಲ್ಲ. ಅಂತಹ ಜಮೀನು ತೆರವುಗೊಳಿಸಲಾಗುವುದು ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.