ಗುಲ್ಬರ್ಗಾ

ತಹಸೀಲ್ದಾರ್‌ಗೆ ಘೇರಾವ್, ರಸ್ತೆ ತಡೆ

Published On :

ಕನ್ನಡಪ್ರಭ ವಾರ್ತೆ, ಗುಲ್ಬರ್ಗ, ಜು.2
ಜಪ್ತಿ ಮಾಡಿರುವ ಮರಳನ್ನು ಅಕ್ರಮವಾಗಿ, ಕದ್ದುಮುಚ್ಚಿ ಸಾಗಿಸಲಾಗುತ್ತಿದೆ ಎಂದು ತಹಸೀಲ್ದಾರರನ್ನೇ ತಡೆದು, ಮರಳು ತುಂಬಿದ ವಾಹನ ಸಾಗಲು ಬಿಡದ ಮರಳು ಸಾಗಣೆ ಲಾರಿಗಳ ಸಂಘಟನೆಯ ಸದಸ್ಯರು ರಾಜಾಪುರ ರಿಂಗ್ ರಸ್ತೆಯಲ್ಲಿ ಧರಣಿ, ರಸ್ತೆ ತಡೆ ಮಾಡಿದ್ದರಿಂದ ಕೆಲ ಗಂಟೆಗಳ ಕಾಲ ಉದ್ವಿಗ್ನ ವಾತಾವರಣ ಉಂಟಾಗಿತ್ತು.
ವಿಶ್ವವಿದ್ಯಾಲಯದ ಮುಂದಿನ ಮೈದಾನದಲ್ಲಿ ದಾಸ್ತಾನಿದ್ದ ಸಾವಿರಾರು ಮೆಟ್ರಿಕ್ ಟನ್ ಮರಳನ್ನು ಕಳೆದೆರಡು ದಿನಗಳ ಹಿಂದಷ್ಟೇ ಜಿಲ್ಲಾಡಳಿತ ಮುಟ್ಟುಗೋಲು ಹಾಕಿಕೊಂಡಿತ್ತು. ಆ ಮರಳನ್ನೆಲ್ಲ ಬುದ್ಧವಿಹಾರ ಹಿಂಭಾಗದಲ್ಲಿರುವ 5 ಎಕರೆ ಯಾರ್ಡ್‌ನಲ್ಲಿ ದಾಸ್ತಾನು ಮಾಡಲಾಗಿತ್ತು.
ಮಂಗಳವಾರ ರಾತ್ರಿ 7ರ ಸುಮಾರಿಗೆ ಈ ಯಾರ್ಡ್‌ನಿಂದ ಮರಳು ಹೊತ್ತು ಬಂದ ಟಿಪ್ಪರ್ ರಿಂಗ್ ರಸ್ತೆ ಮೂಲಕ ರೇಲ್ವೆ ಮೇಲ್ಸೇತುವೆ ಬಳಸಿ ಹೊರಟಿತ್ತು. ಮರಳು ಯಾರ್ಡ್ ಮೇಲೆಯೇ ಕಣ್ಣಿಟ್ಟಿದ್ದ ಲಾರಿ ಮಾಲೀಕರ ಸಂಘದವರು ತಕ್ಷಣ ಈ ವಾಹನ ಬೆನ್ನಟ್ಟಿದರಲ್ಲದೆ ಅದರಲ್ಲಿರುವವರನ್ನು ವಿಚಾರಿಸಲಾಗಿ ಇದು ತಹಸೀಲ್ದಾರ್ ಅವರ ಮನೆಗೆ ಹೊರಟಿದೆ ಎಂಬ ಮಾಹಿತಿ ದೊರಕಿದ್ದರಿಂದ ಕೆರಳಿ ಸ್ಥಳದಲ್ಲೇ ವಾಹನ ನಿಲ್ಲಿಸಿ ಪ್ರತಿಭಟನೆ ಆರಂಭಿಸಿದ್ದಾರೆ.
ಮಾತಿನ ಚಕಮಕಿ- ಉದ್ವಿಗ್ನ ಸ್ಥಿತಿ: ಈ ಹಂತದಲ್ಲಿ ತಹಸೀಲ್ದಾರ್ ಪ್ರಕಾಶ ಚಿಂಚೋಳಿ ಮತ್ತು ಲಾರಿ ಮಾಲೀಕರ ಸಂಘದ ಸದಸ್ಯರ ಮಧ್ಯೆ ತೀವ್ರ ಮಾತಿನ ಚಕಮಕಿ ನಡೆದಿದೆ. ಈ ಸಂದರ್ಭದಲ್ಲಿ ಕಿಡಿಗೇಡಿಗಳು ಕೆಲವರು ತಹಸೀಲ್ದಾರ್ ಅವರ ಮೇಲೆ ಹಲ್ಲೆ ಮಾಡಿದ್ದಾರೆ. ಧರಣಿ, ಧಿಕ್ಕಾರ ಘೋಷಣೆಗಳನ್ನು ಕೂಗುತ್ತ ಹೆಚ್ಚಿನ ಜನ ಜಮಾಯಿಸಿದಾಗ ಸ್ಥಳದಲ್ಲಿ ಉದ್ವಿಗ್ನ ವಾತಾವರಣ ಮೂಡಿದೆ.
ಹೆಚ್ಚಿನ ಪೊಲೀಸ್ ಬಲ ಸಕಾಲಕ್ಕೆ ಬಂದಿದ್ದರಿಂದ ಆಗಬಹುದಾಗಿದ್ದ ಹೆಚ್ಚಿನ ಅನಾಹುತ ತಪ್ಪಿದೆ. ತಕ್ಷಣ ಎಸ್ಪಿ ಸತೀಶ ಕುಮಾರ್, ಜಿಲ್ಲಾಧಿಕಾರಿ ಪ್ರಸನ್ನಕುಮಾರ್ ಸ್ಥಳಕ್ಕೆ ಧಾವಿಸಿ ಬಂದು ಮಾತುಕತೆಗೆ ಮುಂದಾದರು.
ತಹಸೀಲ್ದಾರ್ ವಿರುದ್ಧ ಆರೋಪ: ಧರಣಿ ನಿರತರೊಂದಿಗೆ ಜಿಲ್ಲಾಧಿಕಾರಿಗಳು ಚರ್ಚಿಸಿದಾಗ ಅಲ್ಲಿದ್ದವರೆಲ್ಲರೂ ನೇರವಾಗಿಯೇ ತಹಸೀಲ್ದಾರ್ ಪ್ರಕಾಶ ಅವರ ಮೇಲೆ ಆರೋಪ ಮಾಡಿದರಲ್ಲದೆ ಮರಳು ದಾಸ್ತಾನಿಂದ ಕದ್ದುಮುಚ್ಚಿ ಮಾರಾಟ ಮಾಡಲಾಗುತ್ತಿದೆ. ಅನ್ಯಾಯವಲ್ಲವೇ ಎಂದು ಪ್ರಶ್ನಿಸಿದ್ದಾರೆ. ಧರಣಿ ಮುಕ್ತಾಯ ಮಾಡಿರಿ, ಬುಧವಾರ ಬೆ.11ಕ್ಕೆ ಕಚೇರಿಗೆ ಬನ್ನಿ, ವಿಸ್ತೃತ ಚರ್ಚೆ ಮಾಡಿ ನಿರ್ಧರಿಸೋಣ ಎಂದು ಹೇಳಿದಾಗ ಲಾರಿ ಮಾಲೀಕರು ಧರಣಿ ಕೈಬಿಟ್ಟಿದ್ದಾರೆ.
ಘಟನೆ ಬಗ್ಗೆ ತಹಸೀಲ್ದಾರ್ ಪ್ರಕಾಶ ಅವರ ವಿರುದ್ಧ ವಿವಿ ಠಾಣೆಯಲ್ಲಿ ಪ್ರಕರಣ ದಾಖಲಿಸಿರುವ ಲಾರಿ ಮಾಲೀಕರು, ಸರ್ಕಾರಿ ಯಾರ್ಡ್‌ನಿಂದ ಮರಳು ಮಾರಾಟ ಮಾಡಿರುವ ಇವರ ವಿರುದ್ಧ ಶಿಸ್ತು ಕ್ರಮಕ್ಕೂ ಆಗ್ರಹಿಸಿದ್ದಾರೆ.
ಇಂದು ಮಹತ್ವದ ಸಭೆ: ಈ ಪ್ರಕರಣದಲ್ಲಿನ ಬೆಳವಣಿಗೆಗಳ ಬಗ್ಗೆ ಮುಖಾಮುಖಿ ಚರ್ಚಿಸುವೆ. ಮರಳು ಸಾಗಾಣಿಕೆ ವಾಹನಗಳ ಮಾಲೀಕರ ಸಂಘದೊಂದಿಗೆ ಜು.3ರಂದು ಸಭೆ ಆಯೋಜಿಸಲಾಗಿದೆ ಎಂದು ಜಿಲ್ಲಾಧಿಕಾರಿ ಪ್ರಸನ್ನಕುಮಾರ್ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.