ಗುಲ್ಬರ್ಗಾ

ಕೋಮಟಿಗಲ್ಲಿ ಕೊಳವೆಬಾವಿ ದುರಸ್ತಿಗೆ ಆಗ್ರಹ

Published On :

ಕನ್ನಡಪ್ರಭ ವಾರ್ತೆ  ಸುರಪುರ  ಜು.4
ಸಮೀಪದ ರಂಗಂಪೇಟೆಯ ವಾರ್ಡ್ ನಂ. 18ರ ಕೋಮಟಿಗಲ್ಲಿನ ಬೋರ್‌ವೆಲ್ ಕಳೆದ 15 ದಿನಗಳಿಂದ ದುರಸ್ತಿಗೀಡಾಗಿದ್ದು, ಪುರಸಭೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ವಾರ್ಡಿನ ನಾಗರಿಕರು ನೀರಿಗಾಗಿ ತೀವ್ರ ಸಮಸ್ಯೆ ಎದುರಿಸುಂತಾಗಿದೆ ಎಂದು ಬಡಾವಣೆಯ ನಾಗರಿಕರು ಆರೋಪಿಸಿದ್ದಾರೆ.
  ಕೋಮಟಿಗಲ್ಲಿಗೆ ಕೃಷ್ಣಾ ನದಿ ಹಾಗೂ ರತ್ತಾಳ ಕಿರುನೀರು ಸರಬರಾಜು ಯೋಜನೆಯೂ ಇದೆ. ಆದರೆ ವಾರಕ್ಕೆ ಅಥವಾ 15 ದಿನಕ್ಕೊಮ್ಮೆ ನದಿ ನೀರು ಬಿಟ್ಟರೆ ನಾಲ್ಕು ದಿನಕ್ಕೊಮ್ಮೆ ರತ್ತಾಳ ನೀರು ಸರಬರಾಜು ಆಗುತ್ತದೆ. ಹೀಗಾಗಿ ವಾರ್ಡಿನ ಜನರು ಬೋರ್‌ವೆಲ್ ನೀರನ್ನೇ ಅವಲಂಬಿಸಿದ್ದರು. ಆದರೆ ಕಳೆದ 15 ದಿನಗಳಿಂದ ಬೋರ್‌ವೆಲ್ ಕೂಡಾ ಕೆಟ್ಟು ಹೋಗಿದೆ. ಇದರಿಂದ ನಾಗರಿಕರು ನಿತ್ಯ ನೀರಿಗಾಗಿ ಪರಿತಪಿಸುತ್ತಿದ್ದಾರೆ. ಕೆಟ್ಟು ಹೋದ ಬೋರ್‌ವೆಲ್ ದುರಸ್ತಿ ಮಾಡುವಂತೆ ಪುರಸಭೆ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದರೂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು ದೂರಿದ್ದಾರೆ.
ದುರಸ್ತಿ ಮಾಡದೇ ಬಿಲ್ ಸೃಷ್ಟಿ: ಜನರ ಒತ್ತಾಯಕ್ಕೆ ಮಣಿದು ಸಿಬ್ಬಂದಿ ನಾಲ್ಕಾರು ದಿನಗಳ ಹಿಂದೆ ಕೆಟ್ಟು ಹೋಗಿರುವ ಬೋರ್‌ವೆಲ್‌ನ್ನು ಪರಿಶೀಲಿಸಿದ್ದರು. ಆದರೆ ದುರಸ್ತಿ ಮಾಡಿರಲಿಲ್ಲ. ದುರಸ್ತಿ ಮಾಡಿದ್ದೇವೆಂದು ಸಿಬ್ಬಂದಿ ಕಾರ್ಯಾಲಯಕ್ಕೆ ವರದಿ ಸಲ್ಲಿಸಿ ಖೊಟ್ಟಿ ಬಿಲ್ ಲಗತ್ತಿಸಿ ಹಣ ಎತ್ತಿ ಹಾಕಿದ್ದಾರೆ. ಅಧಿಕಾರಿ ಮತ್ತು ಸಿಬ್ಬಂದಿ ನಿರ್ಲಕ್ಷ್ಯದಿಂದ ನಾಗರಿಕರಿಗೆ ಮಾತ್ರ ನೀರಿನ ಬವಣೆ ತಪ್ಪುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
  ವಾರ್ಡಿನಲ್ಲಿ ಸಿಹಿ ನೀರಿನ ಪುರಾತನ ಗಂಗಮ್ಮನ ಭಾವಿ ಇದೆ. ಆದರೆ ಈಗ ಬಳಕೆ ಇಲ್ಲದೆ ನೀರು ಕಲುಷಿತವಾಗಿದೆ. ಅದನ್ನು ಸ್ವಚ್ಛಗೊಳಿಸಿ ಪೈಪ್ ಜೋಡಣೆ ಮಾಡಿ ಗಲ್ಲಿಯ ನಾಗರಿಕರಿಕರಿಗೆ ಅನುಕೂಲ ಕಲ್ಪಿಸಲು ಸಾಕಷ್ಟು ಮನವಿ ಮಾಡದ್ದೇವೆ. ಈ ಬಗ್ಗೆ ಹಿಂದಿನ ಸಾಮಾನ್ಯ ಸಭೆಯಲ್ಲಿ ಪ್ರಸ್ತಾವನೆಯಾಗಿ ಸಭೆ ಅನುಮೋದನೆ ನೀಡಿದೆ.
ನಾಗರಿಕರ ಗೋಳು ಕೇಳೋರಿಲ್ಲ: ಆದರೆ ಇದುವರೆಗೂ ಅಧಿಕಾರಿಗಳು ಅನುಷ್ಠಾನಗೊಳಿಸುತ್ತಿಲ್ಲ. ಚುನಾವಣೆ ಸಂದರ್ಭದಲ್ಲಿ ಭರವಸೆ ನೀಡಿದ್ದ ಜನ ಪ್ರತಿನಿಧಿಗಳು ಈಗ ಈ ಬಗ್ಗೆ ಚಕಾರವೆತ್ತುತ್ತಿಲ್ಲ. ಇಲ್ಲಿಯ ನಾಗರಿಕರ ಗೋಳು ಕೇಳುವವರೇ ಇಲ್ಲ ಎಂದು ಕಿಡಿಕಾರಿದ್ದಾರೆ.
 ಇಲ್ಲಿಯ ಜನರಿಗೆ ಆಶ್ರಯವಾಗಿದ್ದ ಬೋರ್ ಕೆಟ್ಟು ಹೋಗಿರುವುದರಿಂದ ವಿವೇಕಾನಂದ ಶಾಲೆಯ ಮಕ್ಕಳಿಗೂ ಮತ್ತು ಗಲ್ಲಿಯ ನಾಗರಿಕರಿಗೆ ನೀರಿನ ಅಡಚಣೆ ಉಂಟಾಗಿದೆ. ಕಾರಣ ವಾರದೊಳಗಾಗಿ ಬೋರವೆಲ್ ದುರಸ್ತಿ ಮಾಡಬೇಕು. 2 ದಿನಕ್ಕೊಮ್ಮೆ ನದಿ ನೀರು ಬಿಡಬೇಕು. ಗಂಗಮ್ಮನ ಬಾವಿಯ ಪೈಪ್ ಜೋಡಣೆ ಮಾಡಿ ಅನೂಕೂಲ ಕಲ್ಪಿಸಬೇಕೆಂದು ಗಲ್ಲಿಯ ಮುಖಂಡರಾದ ಸಿದ್ದಪ್ಪ ಚೆಟ್ಟಿ, ಬಾಬುಮಿಯಾ ಅಗ್ರಹಾರ, ಶ್ರೀವಲ್ಲಭ ಕಡಬೂರ, ಯಂಕಣ್ಣ ನಾಯಕ, ತಿಪ್ಪಯ್ಯ ಪೋಲಂಪಲ್ಲಿ, ಶಿವು ಗುಳಗಿ, ಶ್ರೀರಂಗ ಮಿರಿಯಾಲ ಇತರರು ಜಿಲ್ಲಾಧಿಕಾರಿಗಳಿಗೆ ಬರೆದ ಮನವಿಯಲ್ಲಿ ಆಗ್ರಹಿಸಿದಾರೆ. ವಿಳಂಬವಾದಲ್ಲಿ ಪುರಸಭೆ ಎದುರು ಖಾಲಿ ಕೊಡಗಳೊಂದಿಗೆ ಪ್ರತಿಭಟನೆ ಮಾಡುವುದಾಗಿ ಎಚ್ಚರಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.